ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ವಿ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ ಅವರಿಗೆ ಹೊಟೇಲ್ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೈಟರ್, ಕ್ಯಾಪ್ಟನ್ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್ನಲ್ಲಿ 12 ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು.
ಮುಂಬೈಗೆ ಬಂದಾಗ ಅವರಿಗೆ 13ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್ಗಳಲ್ಲಿ ದುಡಿದರು. ಅಪಾರ ಅನುಭವ ಗಳಿಸಿದರು. ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬೈಯಲ್ಲಿ ಮನೆ ಮಾಡುತ್ತೇನೆ. ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು. ತಾಯಿ ಲೀಲಾವತಿ ವಿ ಶೆಟ್ಟರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬೈ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು. ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 50 ಸಾವಿರ ರೂಪಾಯಿ ಹಣದಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡರು. ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡದಲ್ಲಿ ‘ಶ್ರೀಪಂಜುರ್ಲಿ ಗ್ರೂಫ್ ಆಫ್ ಹೊಟೇಲ್’ ಮತ್ತು ತಾಯಿ ಲೀಲಾವತಿಯವರ ಹೆಸರಲ್ಲಿ ‘ಹೊಟೇಲ್ ಲೀಲಾವತಿ ಪ್ಯಾಲೇಸ್’ ಸೇರಿದಂತೆ ಒಟ್ಟು 8 ಹೊಟೇಲ್ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು. ಇಂದು ಅದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೇ ಖ್ಯಾತಿಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 20 ವರ್ಷಗಳ ಕಾಲ ವಿವಿಧ ಹೊಟೇಲ್ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲ್ಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು. ಇಂದು ಪಂಜುರ್ಲಿ ಗ್ರೂಫ್ ಆಫ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ, ಉದ್ಯಮದಲ್ಲಿ ಬಂದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನ ಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರು. ಕೊಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ, ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ. ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು. ಹುಬ್ಬಳ್ಳಿ-ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿಂದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಫ್ ಆಫ್ ಹೊಟೇಲ್, ಹೊಟೇಲ್ ಲೀಲಾವತಿ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 38 ವರ್ಷಗಳ ಹೊಟೇಲ್ ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಅವರು ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿದ್ದಾರೆ.
ರಾಜೇಂದ್ರ ಶೆಟ್ಟಿಯವರು ನವೆಂಬರ್ 20,1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರಿನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು. ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು.
2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012 ರಲ್ಲಿ ಧಾರವಾಡ ಕೆ.ಸಿ. ಪಾರ್ಕು ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2018ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೆಲ್ ಲೀಲಾವತಿ ಪ್ಯಾಲೇಸ್, 2020ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022ರಲ್ಲಿ ದಾವಣಗೆರೆ ಹೊಸ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹೊಸ ಬಸ್ ನಿಲ್ದಾಣದ ಹತ್ತಿರ 2022ರಲ್ಲಿ ಲೀಲಾವತಿ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಉದ್ಯಮ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ, ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಇದರ ಪೂಜಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಹುಬ್ಬಳ್ಳಿ ಬಂಟರ ಸಂಘದ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2012ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅರ್ಚಿವರ್ಸ್ಆಫ್ ಕರ್ನಾಟಕ ಪ್ರಶಸ್ತಿ, 2021ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಉದ್ಯೋಗ ರತ್ನ ಪ್ರಶಸ್ತಿ, ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯೂ ಅವರಿಗೆ ಬಂದಿದೆ. ರಾಜೇಂದ್ರ ವಿ ಶೆಟ್ಟರಿಗೆ ಸಮಸ್ತ ಬಂಟ ಸಮಾಜದ ಆಶೀರ್ವಾದ, ಪ್ರೋತ್ಸಾಹ ಸದಾ ಇರಲಿ ಎಂದು ಬಂಟ್ಸ್ ನೌ ತಂಡ ಸದಾ ಆಶಿಸುತ್ತದೆ.