” ಅನ್ನ ವನ್ನ ನೋಡಿದ್ದಿರಾ ” ? ಅಂತ ಯಾರಲ್ಲಾದರೂ ಪ್ರಶ್ನೆ ಮಾಡಿದರೆ ಇಲ್ಲ ಅನ್ನುವವರು ಯಾರೂ ಸಿಗಲಾರರು. ಭತ್ತ ನೋಡಿದ್ದಿರಾ ? ಅಂದರೆ ಶೇಖಡಾ ತೊಂಬತ್ತೈದು ಜನ “ಎಸ್ ” ಅನ್ನಬಹುದು. ಗದ್ದೆಯಲ್ಲಿ ಭತ್ತದ ತೆನೆ ನೋಡಿದ್ದೀರಾ ? ಅಂದಾಗ ಶೇಖಡಾ ಎಂಬತ್ತೊಂಬತ್ತು ಜನ ಚಿತ್ರದಲ್ಲಾದರೂ ನೋಡಿದ್ದೇನೆ ಅನ್ನಬಹುದು. ಭತ್ತದ ಹೂ ನೋಡಿದ್ದೀರಾ ಅದು ಎಲ್ಲಿರುತ್ತದೆ, ಹೂ ಎಲ್ಲಿಂದ ಅರಳುತ್ತದೆ, ಹೂವಿಗೆ ಎಷ್ಟು ಎಸಳುಗಳಿರುತ್ತವೆ ಎಷ್ಟು ದಿನ ಅರಳಿರುತ್ತದೆ ಅಂತ ಕೇಳಿದರೆ ಬೆರಳೆಣಿಕೆಯಷ್ಟು ಜನ ಮಾತ್ರ ಉತ್ತರಿಸಿಯಾರೋ ಎನೋ. ಬೇಡುವಿನ ಕಥೆಯನ್ನು ನೀವು ಓದಿರಬಹುದು. ಆತ ಗದ್ದೆ ಬಿತ್ತಿದ್ದು ಜುಲೈ 19 ಮಂಗಳವಾರ ಮಧ್ಯಾಹ್ನ 1.53 ಕ್ಕೆ. ಅಂದರೆ ಬಿತ್ತಿದ ದಿನದಿಂದ ಎಂಭತ್ತೆರಡು ದಿನಗಳಿಂದ ಒಂದು ವಾರ ಈ ಭತ್ತದ ತಳಿ ಹೂ ಬಿಟ್ಟಿದೆ ಅಂದಾಯಿತು. ಭತ್ತ ಹೂಬಿಡುವ ಒಂದೆರಡು ವಾರ ಮೊದಲೇ ಅದರ ಗರ್ಭದಲ್ಲಿ ಎಳೆ ತೆನೆ ಸುಪ್ತಾವಸ್ತೆಯಲ್ಲಿರುತ್ತದೆ.
ಆಡುಭಾಷೆಯಲ್ಲಿ ” ಭತ್ತ ಪೊಟ್ಟೆಯದ್ದೇ ” ಅಂತ ಕೇಳುವ ಪರಿಪಾಠವಿದೆ. ಈ ಸಮಯದಲ್ಲಿ ಗದ್ದೆಯಲ್ಲಿ ನೀರು ಸ್ವಲ್ಪವೂ ಕಡಿಮೆಯಾಗಬಾರದು. ಮಗು ತಾಯಿಯ ಗರ್ಭದಿಂದ ಹೊರಬರುವ ಘಳಿಗೆಗಳು ಹೇಗಿರುತ್ತವೆಯೋ ಹಾಗೆ. ಅದೊಂದು ಅಮೂಲ್ಯ ಕ್ಷಣ. ಸಸ್ಯಗಳೂ ಈ ಸಂದರ್ಭಗಳಲ್ಲಿ ಅಸಾಧ್ಯ ನೋವುಣ್ಣುತ್ತವೆ ಅಂತ ಎಲ್ಲೋ ಓದಿದ ನೆನಪು. ಇವತ್ತು ಭತ್ತದ ಗದ್ದೆಯಲ್ಲಿ ಒಂದೆರಡು ಭತ್ತದ ‘ಕುರಳು'(ತೆನೆ) ಗಳು (ಸೋ ಕಾಲ್ಡ್ ಫಸ್ಟ್ ರಾಂಕ್) ತಲೆಎತ್ತಿ ನಿಂತರೆ ಎರಡು ಮೂರು ದಿನ ಕಳೆದು ನೋಡಿದರೆ ಗದ್ದೆಯ ಚಿತ್ರಣವೇ ಬೇರೆಯದ್ದಾಗಿರುತ್ತದೆ. ಅದೊಂದು ಮಹತ್ತರ ಬದಲಾವಣೆಯ ಸಮಯ. ಸೂಕ್ಷ್ಮಾತಿ ಸೂಕ್ಷ್ಮ ಜೀವರಾಸಾಯನಿಕ ಬದಲಾವಣೆಗಳು ನಡೆಯುವ ಪ್ರಕೃತಿ ವಿಸ್ಮಯ. ನಿಧಾನವಾಗಿ ಕಾಂಡದಿಂದ ನೇರವಾಗಿ ಹೊರಬಂದ ತೆನೆ ಮೊದಲ ಕೆಲ ಘಂಟೆ ಒತ್ತೊತ್ತಾಗಿದ್ದರೆ ಸ್ವಲ್ಪ ಸಮಯದಲ್ಲೇ ಭತ್ತದ ಸಿಪ್ಪೆಯ ಸುತ್ತಲಿರುವ ಗೆರೆಯ ಮಧ್ಯಭಾಗದಿಂದ ಸಣ್ಣ ತಿಳಿ ಹೊಂಬಣ್ಣದ ಎರಡು ಮೂರು ಎಸಳುಗಳುಳ್ಳ ಮೃದು ಬಿಳಿಬಣ್ಣದ ಕೂದಲಿನಷ್ಟು ದಪ್ಪದ ಬಳುಕುವ ಕಾಂಡದೊಂದಿಗೆ ಕೆಲ ಗಂಟೆಗಳ ಆಯಸ್ಸು ಹೊಂದಿರುವ ಹೂ ಬಂದಿರುತ್ತದೆ.
ಈ ಸಮಯದಲ್ಲಿ ಮಳೆಬಂದರೆ ಭತ್ತ ಜಳ್ಳಾಗುತ್ತದೆ ಅಂತ ಹೇಳುತ್ತಾರೆ. ಏಕೆಂದರೆ ಪರಸ್ಪರ ಪರಾಗಸ್ಪರ್ಶ ಕ್ರಿಯೆಯ ಪ್ರಮಾಣ ಕಡಿಮೆಯಾಗುತ್ತದೆ. ಭತ್ತದ ಗದ್ದೆಯ ಪ್ರೀತಿ ಇದ್ದವರು ದಿನಕ್ಕೆ ನಾಲ್ಕಾರು ಸಲವಾದರೂ ಈ ಸುಂದರ ಕ್ಷಣವನ್ನು ಆನಂದಿಸಲು ಗದ್ದೆಪುಣಿಯಲ್ಲಿ ಹೋಗಿಯೇ ಹೋಗುತ್ತಾರೆ. ಹಸಿರು ಬಣ್ಣವಿದ್ದ ತೆನೆ ನಿಧಾನವಾಗಿ ಕಡುಹಸಿರು, ಹೊಂಬಣ್ಣ ಬಣ್ಣ ಬಂದು ಬಾಗಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಭತ್ತದಲ್ಲಿ ಹಾಲು ತುಂಬುವ ಕ್ರಿಯೆ ನಡೆಯುತ್ತಲಿರುತ್ತದೆ. ನೀವುಣ್ಣುವ ಅನ್ನದ ಮೊದಲ ಹಂತವೇ ಹಾಲು. ಕ್ರಮೇಣ ಈ ಹಾಲು ನಿಧಾನವಾಗಿ ಗಟ್ಟಿಯಾಗುತ್ತಾ ಬಂದು ಬಿಳಿಬಣ್ಣದ ಅಕ್ಕಿಯಾಗಿ ಮಾರ್ಪಾಡಾಗಿ ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ಭತ್ತದಲ್ಲಿ ಹಾಲು ತುಂಬಿದಾಗಲೇ ಸುತ್ತಮುತ್ತಲಿನ ಭತ್ತದ ಹಕ್ಕಿನ ‘ ನೇಚರ್ ರೇಷನ್ ಹೋಲ್ಡರ್ಸ್ ‘ ಒಂದೊಂದು ರೌಂಡ್ ಗೆಸ್ಟ್ ವಿಸಿಟ್ ಮಾಡಿಹೋಗುತ್ತಾರೆ. ದರಿದ್ರ ವಾಸನೆಯ ಬಂಬುಚ್ಚಿ ಭತ್ತದ ಹಾಲುಕುಡಿಯಲು ಬರುವುದು ಇದೇ ಸಮಯದಲ್ಲಿ. ಮಾನವನ ಚಲನೆ ಕಡಿಮೆಯಿರುವಲ್ಲಿ ಕೋತಿಗಳ ಗುಂಪು, ಹತ್ತಿರದ ಮರದಲ್ಲಿ ಗಿಳಿಗಳ ದಂಡು, ಸಣ್ಣ ಸಣ್ಣ ಕಪ್ಪು ಬಣ್ಣದ ಎಲ್ಲಿಂದಲೋ ಬರುವ ಗುಬ್ಬಚ್ಚಿಗಳ ಗುಂಪು, ಗದ್ದೆ ಪುಣಿಯಲ್ಲೇ ನಿಂತು ಭತ್ತವನ್ನು ಮೆಲ್ಲುತ್ತಿರುವ ಜೋಡಿ ನವಿಲು, ಕತ್ತಲಾದಾಗ ಬಂದು ಹೊಟ್ಟೆತುಂಬಾ ತಿಂದುಂಡು ಕೆಲ ಪೈರನ್ನೂ ತುಂಡುತುಂಡುಮಾಡುವ ಇಲಿ, ಹೆಗ್ಗಣಗಳ ದಂಡು, ಯಾರದೋ ಗದ್ದೆ ಎಲ್ಲಮ್ಮನ ಜಾತ್ರೆ ಎಂದು ಹೊಟ್ಟೆತುಂಬಾ ತಿಂದು ಗದ್ದೆಯನ್ನು ಕಂಬ್ಲ ಮಾಡುವ ಹಂದಿಗಳ ಕಾಟ. ಒಂದೇ ಎರಡೇ…. ಈ ಎಲ್ಲಾ ಸವಾಲುಗಳನ್ನು ಎದುರಿಸಿಕೊಂಡು ಪಾಪ ನಮ್ಮಂತೆಯೇ ಪ್ರಾಣಿ ಪಕ್ಷಿ ಗಳಿಗೂ ಸಮಾನ ಹಕ್ಕಿಲ್ಲವೇ ಎಂದುಕೊಂಡು ಪ್ರಕೃತಿಯೊಂದಿಗೆ ಬದುಕುತ್ತಿರುವ ಕೃಷಿಕ ನಿಜವಾಗಿಯೂ ಶ್ರೇಷ್ಠನಲ್ಲವೇ.
ಲೇಖನ: ವಿವೇಕ್ ಆಳ್ವ.
ಚಿತ್ರ : ಸ್ಮಿತಾ ವಿವೇಕ್.