ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರವನ್ನು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆಗಸ್ಟ್ 20 ರಿಂದ ರಿಂದ 23 ರವರೆಗೆ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯ, ರಂಗನಡೆ, ಪುರಾಣ ಕಥನಗಳ ಬಗ್ಗೆ ವಿಚಾರ ಮಂಥನ ಮಾಡಲಾಗುವುದು.

ಕಾರ್ಯಾಗಾರದ ಮೊದಲ ದಿನ ಅಜಪುರ ವಿಷ್ಣು ಭಾಗವತ ವಿರಚಿತ ಕಿರಾತಾರ್ಜುನ ಪ್ರಸಂಗದ ಆರಂಭದ ಭಾಗದ ಪ್ರಸಂಗ ಪಠ್ಯ ಮತ್ತು ರಂಗನಡೆಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಕಾರ್ಯಾಗಾರ ನಡೆಯಿತು. ಪ್ರಸಂಗ ಸಾಹಿತ್ಯವನ್ನು ಓದುವ ಬಗೆ, ಅರ್ಥವಿಸ್ತರಣೆಗೆ ಬೇಕಾದ ತಂತ್ರ, ರಂಗ ನಡೆಯ ಪ್ರಾಯೋಗಿಕ ತರಗತಿ ಸಹಿತ ಪ್ರಸಂಗಕ್ಕೆ ಪೂರಕವಾದ ಪ್ರಸಾದನ ಮತ್ತು ವೇಷಭೂಷಣದ ಪರಿಚಯಕ್ಕೆ ಇಲ್ಲಿ ಅವಕಾಶ ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಯಕ್ಷಗಾನ ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋಡು, ಉಬರಡ್ಕ ಉಮೇಶ್ ಶೆಟ್ಟಿ ಭಾಗವಹಿಸಿದರು. ಪಾವಂಜೆ ಮೇಳದ ಮ್ಯಾನೇಜರ್ ಮಾಧವ ಕೊಳತ್ತಮಜಲು, ಹಿಮ್ಮೇಳ ಕಲಾವಿದರಾದ ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್ ಪುತ್ತಿಗೆ ಸಹಿತ ಇನ್ನಿತರ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೊದಲ ದಿನದ ಕಾರ್ಯಾಗಾರದಲ್ಲಿ 35 ಶಿಬಿರಾರ್ಥಿಗಳು ಭಾಗವಹಿಸಿದ್ದರು.