ಮುಂಬಯಿ (ಆರ್ಬಿಐ), ಡಿ.09: ಈಗಾಗಲೇ ಮಂಗಳೂರು, ಮುಂಬಯಿ ಮಹಾನಗರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದ `ಮಿಸ್ಟರ್-ಮಿಸ್-ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್’ ಈ ಬಾರಿ ಕರ್ನಾಟಕ ರಾಜ್ಯದ ಮೈಸೂರು ನಾರ್ತ್ ಅವೆನ್ಯೂ ಸಭಾಗೃಹದಲ್ಲಿ 2022ರ ಸೀಸನ್-3 ಸ್ಪರ್ಧೆಯನ್ನು ಕಳೆದ ಡಿ. 6ರಂದು ಆಯೋಜಿಸಿದ್ದು ಫ್ಯಾಷನ್ ಜಗತ್ತಿನಲ್ಲಿ ಮತ್ತೊಂದು ಸಾರ್ಥಕ ಹೆಜ್ಜೆಯನ್ನಿಟ್ಟಿತು.
`ನಿಜವಾದ ಸೌಂದರ್ಯವು ನಮ್ಮ ಬುದ್ಧಿವಂತಿಕೆಯಲ್ಲಿದೆ ಹಾಗೂ ನೋಡುಗರ ದೃಷ್ಟಿಯಲ್ಲಿದೆ’ ಎಂದು ಸಾಬೀತು ಪಡಿಸುವ ಇಂಥ ಪ್ರದರ್ಶನಗಳು ಹಲವಾರು ಮೌಲ್ಯಯುತ ವಿಚಾರಗಳನ್ನು ತಿಳಿಯಪಡಿಸುತ್ತವೆ.
ಕರ್ನಾಟಕ ಕರಾವಳಿಯ ಮಂಗಳೂರು ಮೂಲತಃ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿ ಅಲ್ಲಿನ ಪ್ರತಿಷ್ಠಿತ ಮತ್ತು ನಾಮಾಂಕಿತ ಫ್ಯಾಷನ್ ಪರಿಣಿತೆ ನಿಶಿತ ಸೂರ್ಯ ಸುವರ್ಣ (ಬಿಲ್ಲವ ಕುಲ ಶಿರೋಮಣಿ ಸ್ವರ್ಗೀಯ ಜಯ ಸಿ. ಸುವರ್ಣ ಅವರ ಹಿರಿಯ ಸೊಸೆ ಹಾಗೂ ಸೂರ್ಯಕಾಂತ್ ಜೆ.ಸುವರ್ಣ ಅವರ ಪತ್ನಿ) ಕರ್ನಾಟಕ ಕರಾವಳಿಯಲ್ಲಿರುವ ಪ್ರತಿಭಾವಂತರನ್ನು ಮುನ್ನೆಲೆಗೆ ತರಬೇಕೆಂದು ನಿಶಿತಾ ಸೂರ್ಯ ಬಯಸಿ ಸಾಧಿಸಿದ ಪ್ರತಿಭಾನ್ವಿತ ಗೃಹಿಣಿ, ಮಹಿಳಾ ಯುವೋದ್ಯಮಿ ಈ ಕಾರ್ಯಕ್ರಮದ ಸಂಘಟಿಸಿ ಸಾಧಕರೆಣಿಸಿದ್ದಾರೆ.
ಫ್ಯಾಷನ್ ಜಗತ್ತನ್ನು ಪ್ರವೇಶಿಸಲು ಆಸಕ್ತಿಯಿದ್ದವರು ಅತಿ ಕಡಿಮೆ ಖರ್ಚಿನಲ್ಲಿ ಹೇಗೆ ತಮ್ಮ ಕನಸನ್ನು ಈಡೇರಿಸಿ ಕೊಳ್ಳಬಹುದು, ಉನ್ನತ ಮಟ್ಟಕ್ಕೆ ಏರಬಹುದು ಎಂಬುದರ ಬಗೆಗೆ ಸಲಹೆ ನೀಡಿ ಯುವ ಜನತೆಯನ್ನು ಸ್ವಯಂಪ್ರೇರಿತರಾಗಿ ಪ್ರೋತ್ಸಾಹಿಸುವ ಸದೃದಯಿಯಾಗಿದ್ದಾರೆ.
ದೀಪಕ್ ಶೆಟ್ಟಿ ಅವರ ನಿರ್ದೇಶನ ಹಾಗೂ ನೃತ್ಯ ಸಂಯೋಜನೆಯಲ್ಲಿ ನಡೆಸಲ್ಪಟ್ಟ `ಮಿಸ್ಟರ್-ಮಿಸ್-ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್-2022’ರ ಸೀಸನ್-3 ಈ ಯಶಸ್ವಿ ಪ್ರದರ್ಶನಕ್ಕೆ ಕಾರ್ತಿಕ್ ಮಹೇಶ್ ಮಹತ್ತರ ಭೂಮಿಕೆ ವಹಿಸಿದ್ದು ತೀರ್ಪುಗಾರರಾಗಿ ಪ್ರತಿಮಾ ಪ್ರಸಾದ್, ರೋನಿ ಅರ್ಜುನ್, ಖುಶಿ ವಿನು, ಗಣೇಶ್ ಮಲ್ಲಪ್ಪ ಮತ್ತು ಹರ್ಷಿಕಾ ಜೈನ್ ಅವರು ಸ್ಪೂರ್ತಿದಾಯಕವಾದ ಹಾಗೂ ನ್ಯಾಯಯುತವಾದ ತೀರ್ಪನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದಾರೆ.
ಮಿಸ್ಟರ್ ವಿಭಾಗದಲ್ಲಿ ಕೃತೇಶ್ ಅಮೀನ್ (ಮುಂಬಯಿ) ಪ್ರಥಮ ಸ್ಥಾನದೊಂದಿಗೆ (ವಿನ್ನರ್) ವಿಜೇತರಾಗಿದ್ದು, ಪ್ರಶಾಂತ್ ಆಚಾರ್ಯ (ಮಂಗಳೂರು) ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್-1 ಹಾಗೂ ವಿನಯ್ ಕುಮಾರ್ (ಮೈಸೂರು) ತೃತೀಯ ಸ್ಥಾನದೊಂದಿಗೆ ರನ್ನರ್ ಅಪ್-2 ಗೌರವಕ್ಕೆ ಪಾತ್ರರಾದರು.
ಮಿಸ್ ವಿಭಾಗದಲ್ಲಿ ರಿನಿ ವಿಶ್ವಾಸ್ (ಮೈಸೂರು) ಪ್ರಥಮ ಸ್ಥಾನದೊಂದಿಗೆ (ವಿನ್ನರ್) ವಿಜೇತರಾಗಿದ್ದು, ಅನುಶ್ರೀ ಪುತ್ತೂರಾಯ (ಮಂಗಳೂರು) ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್-1 ಹಾಗೂ ರುತು ಅಂಚನ್ (ಮುಂಬಯಿ) ತೃತೀಯ ಸ್ಥಾನದೊಂದಿಗೆ ರನ್ನರ್ ಅಪ್-2 ಗೌರವಕ್ಕೆ ಪಾತ್ರರಾದರು.
ಮಿಸೆಸ್ ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ (ಮಂಗಳೂರು) ಪ್ರಥಮ ಸ್ಥಾನದೊಂದಿಗೆ (ವಿನ್ನರ್) ವಿಜೇತರಾಗಿದ್ದು, ಸ್ವಾತಿ ಸುವರ್ಣ (ಮಂಗಳೂರು) ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಮತ್ತು ಪ್ರೇಕ್ಷಾ ಸಾಲಿಯನ್ (ಮಂಗಳೂರು) ತೃತೀಯ ಸ್ಥಾನದೊಂದಿಗೆ ರನ್ನರ್ ಅಪ್-2 ಗೌರವಕ್ಕೆ ಪಾತ್ರರಾದರು.