ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನವು ಅತೀ ಪುರಾತನ ದೇವಾಲಯವಾಗಿದ್ದು, ಪ್ರಕೃತಿಯ ಸೌಂದರ್ಯಮಯವಾದ ದೇವೆಂದಬೆಟ್ಟ ಮೇಲೆ ಶ್ರೀ ಸೋಮನಾಥೇಶ್ವರನ ದೇವಾಲಯವಿದೆ. ನೇತ್ರಾವತಿ ನದಿಯು ದೇವಾಲಯವಿರುವ ಪ್ರದೇಶದ ಮೂರು ಸುತ್ತಾ ಬಳುಕುತ್ತಾ ಹರಿದು ಅರಬ್ಬಿ ಸಮುದ್ರ ಸೇರುವ ದೃಶ್ಯ ಮೈನವಿರೇಳಿಸುತ್ತದೆ. ಹಸಿರು ಪರ್ವತಗಳ ನಡುವೆ ಹರಿಯುವ ನದಿ, ಸೂರ್ಯಾಸ್ತ ಅಥವಾ ಸೂರ್ಯೋದಯದ ವೀಕ್ಷಣೆಯ ದೃಶ್ಯ ನಮ್ಮನ್ನು ಸಮ್ಮೋಹನಗೊಳಿಸುತ್ತದೆ. ಇನೋಳಿ ಅಥವಾ ಇನವಳ್ಳಿ ಎಂಬ ಪುಟ್ಟ ಹಳ್ಳಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೂರು ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿದೆ. ಈ ದೇವಸ್ಥಾನಕ್ಕೆ ಮಂಗಳೂರಿನಿಂದ ತೊಕ್ಕೊಟ್ಟು, ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ಮಾರ್ಗವಾಗಿ ಹೋಗುವುದಾದರೆ ೨೮ಕಿ.ಮೀ ದೂರವಿದೆ ಹಾಗೂ ಬಸ್ ವ್ಯವಸ್ಥೆ ಕೂಡಾ ಇದೆ. ಇತ್ತೀಚೆಗೆ ರಾ. ಹೆ. ೨೭೫ರ ಅಡ್ಯಾರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಹರೇಕಳ ಪಾವೂರು ಎಂಬಲ್ಲಿ ಸೇರುತ್ತದೆ. ಈ ಮೂಲಕ ಮಂಗಳೂರಿನಿಂದ ಬರುವುದಾದರೆ ಕೇವಲ ೧೮ಕಿ.ಮೀ ದೂರದಲ್ಲಿದೆ. ಅಲ್ಲದೇ ಇದೇ ಹೆದ್ದಾರಿಯಲ್ಲಿ ಸಿಗುವ ಫರಂಗಿಪೇಟೆ, ಅರ್ಕುಲ ಎಂಬಲ್ಲಿ ದೋಣಿ ಮೂಲಕ ನದಿ ದಾಟಿ ಇನೋಳಿ ಸೇರಬಹುದು. ಈ ಪ್ರದೇಶ ಐತಿಹಾಸಿಕವಾಗಿ ಮಹತ್ವಕರವಾಗಿದೆ. ಯಾಕೆಂದರೆ ಇಲ್ಲಿ ಸುಮಾರು ಒಂದುವರೆ ಎರಡು ಸಾವಿರ ವರ್ಷ ಹಿನ್ನೆಲೆ ಇರುವ ಒಂದು ಶಿವ ದೇವಸ್ಥಾನದ ಅವಶೇಷಗಳಿದ್ದವು. ಗ್ರಾಮಸ್ಥರು ಕಂಡಿದ್ದ ಪಾಣಿಪೀಠ, ಪಾಳುಬಿದ್ದ ದೇವಾಲಯದ ಅಡಿಪಾಯ, ಕಲ್ಲುಗಳು, ಕೆಲವು ಪುರಾತನ ಮಣ್ಣಿನ ದೀಪಗಳೇ ಸಾಕ್ಷಿಗಳು. ಆದರೆ ಲಿಂಗ ಕಾಣೆಯಾಗಿತ್ತು.

ಇನ್ನು ಇತಿಹಾಸಕ್ಕೆ ಹೋದರೆ ೧೧/೨-೨ ಸಾವಿರ ವರ್ಷದ ಹಿಂದೆ, ಅಂದರೆ ಹತ್ತನೇ ಶತಮಾನದ ಕಾಲದಲ್ಲಿ ದಕ್ಷಿಣ ಕನ್ನಡ ಪ್ರದೇಶವು ಆಳುಪ ರಾಜವಂಶದ ಆಳ್ವಿಕೆಯಲ್ಲಿತ್ತು. ಇವರು ಶೈವ ಧರ್ಮದ ಅನುಯಾಯಿಗಳಾಗಿದ್ದರು. ಈ ಆಳುಪ ರಾಜವಂಶದವರ ಆಳ್ವಿಕೆಯ ಕಾಲದಲ್ಲಿ ಅನೇಕ ಶಿವ ದೇವಸ್ಥಾನಗಳನ್ನು ಕಟ್ಟಿಸಿದ್ದಾರಂತೆ. ಈ ಪ್ರಾಂತ್ಯದಲ್ಲೇ ಐದು ಪ್ರಸಿದ್ಧ ಸೋಮನಾಥನ ದೇವಾಲಯಗಳಿದ್ದವಂತೆ. ಅವು ಯಾವುದೆಂದರೆ ಇನೋಳಿ, ಇರಾ, ಕುರ್ನಾಡು, ಸೋಮೇಶ್ವರದಲ್ಲಿರುವ ಸೋಮನಾಥ ದೇವಸ್ಥಾನ, ಮತ್ತೊಂದು ಕುತ್ತಾರು ಪದವು. ಆದರೆ ಕುತ್ತಾರಿನಲ್ಲಿ ಇನ್ನೂ ಸೋಮನಾಥನ ದೇವಾಲಯ ಸಿಕ್ಕಿಲ್ಲ. ಆದರೆ ಕಳೆದ ವರ್ಷ ಅರ್ಧನಾರೇಶ್ವರ ಎಂಬ ದೇವಸ್ಥಾನದ ಪುನರ್ಪ್ರತಿಷ್ಠೆಯಾಗಿದೆ. ಇದೇ ಆಗಿರಬಹುದು ಎಂಬ ಊಹೆ. ಈ ಎಲ್ಲಾ ದೇವಾಲಯಗಳ ವಾಸ್ತುಶಿಲ್ಪ ಒಂದೇ ರೀತಿಯಾಗಿ ಇದೆ. ಮುಂದೆ ಮಂಗಳೂರು ಪ್ರಾಂತ್ಯವು ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ೧೭ನೇ ಶತಮಾನದ ಕಾಲದಲ್ಲಿ ಇತ್ತ ಹೈದರ್ ಆಲಿ ಮತ್ತು ಟಿಪ್ಪುವಿನ ಆಕ್ರಮಣವಾಯಿತು. ಈ ಎತ್ತರದ ದೇವೆಂದ ಬೆಟ್ಟದಲ್ಲಿರುವ ಇನೋಳಿ ಶ್ರೀ ಸೋಮನಾಥ ದೇವಸ್ಥಾನ ನೇತ್ರಾವತಿ ನದಿಯ ಬಲಭಾಗದಲ್ಲಿರುವ ಪಟ್ಟಣದಿಂದ ನೋಡುವಾಗ ದೊಡ್ಡ ಕೋಟೆಯ ಹಾಗೆ ಕಾಣುತ್ತಿತ್ತು. ಹಾಗಾಗಿ ಪೋರ್ಚುಗೀಸರು ಇದು ಟಿಪ್ಪುವಿನ ಕೋಟೆ ಎಂದು ಭಾವಿಸಿ ಫಿರಂಗಿ ಬಿಟ್ಟು ಇದನ್ನು ನಾಶಗೊಳಿಸಿದರು ಎಂದು ಪ್ರತೀತಿ. ಇಲ್ಲಿಂದ ಫಿರಂಗಿ ಬಿಟ್ಟ ಸ್ಥಳ ಈಗ ಫರಂಗೀಪೇಟೆ ಎಂದು ಹೆಸರಾಗಿದೆ. ಕೆಲವರು ಈ ದೇವಸ್ಥಾನವನ್ನು ಟಿಪ್ಪು ಸುಲ್ತಾನನೇ ನಾಶಗೊಳಿಸಿದ ಎಂದೂ ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲ. ಹೀಗೆ ಇದು ಸುಮಾರು ಎರಡು, ಮೂರು ದಶಕದ ಹಿಂದೆ ಈ ದೇವಾಲಯ ಹೀಗೆ ನಾಶವಾಯಿತು ಎಂದು ನಂಬಿಕೆ.
ಈ ಪಾಳು ಬಿದ್ದ ದೇವಾಲಯದ ಅವಶೇಷಗಳಲ್ಲೇ ಊರವರ ಭಜನೆ, ಪ್ರಾರ್ಥನೆಗಳು ನಡೆಯುತ್ತಿತ್ತು. ಈ ಬೆಟ್ಟದ ಸುಮಾರು ಒಂದು ಕಿ.ಮೀ. ದೂರದ ಕೆಳಗೆ ದುರ್ಗಾಪರಮೇಶ್ವರಿ ಎಂಬ ದೇವಸ್ಥಾನವಿದೆ. ಈ ದೇವಸ್ಥಾನವನ್ನು ೧೯೭೧ರ ನಂತರ ಜೀರ್ಣೋದ್ಧಾರ ಮಾಡಲಿಲ್ಲ. ಹಾಗಾಗಿ ಊರಿನವರು ೧೯೯೭ರಂದು ಅಷ್ಟಮಂಗಲ ಪ್ರಶ್ನೆ ಇಟ್ಟು ನೋಡಿದಾಗ ಅಮ್ಮನ (ದೇವಿ) ಅಪ್ಪಣೆಯಾಯಿತಂತೆ. “ಮೊದಲು ಅಲ್ಲಿ ಬೆಟ್ಟದ ಮೇಲೆ ಸೋಮನಾಥ ನೀರಿಲ್ಲದೆ ಇದ್ದಾನೆ. ಅದರ ಕೆಲಸ ಮೊದಲು ಮಾಡಿ, ನಂತರ ನನ್ನ ಜೀರ್ಣೋದ್ಧಾರ” ಎಂದು. ಹೀಗೆ ೧೯೯೮ರ ಡಿಸೆಂಬರಿನಲ್ಲಿ ಆ ದೇವೆಂದ ಬೆಟ್ಟದಲ್ಲೇ ಅಷ್ಟಮಂಗಲ ಪ್ರಶ್ನೆ ಇಟ್ಟು ನೋಡಿದಾಗ, “ಇದೊಂದು ಶಿವ ದೇವಾಲಯ. ಅಗ್ನಿಯಿಂದ ಸುಮಾರು ೩೦೦-೪೦೦ ವರ್ಷಗಳ ಹಿಂದೆ ನಾಶವಾಗಿದೆ. ಈ ಪ್ರದೇಶ ಒಂದು ಪುಣ್ಯಭೂಮಿ, ಋಷಿಮುನಿಗಳ ತಪೋಭೂಮಿಯಾಗಿತ್ತು. ಅಲ್ಲದೇ ಇದೊಂದು ಬೃಹತ್ ದೇವಾಲಯ, ನೀವೆಲ್ಲಾ ಇದೇ ರೀತಿಯಲ್ಲೇ ಮರು ನಿರ್ಮಾಣ ಮಾಡಬೇಕು. ಯಾವುದೇ ರೀತಿಯಲ್ಲಿ ಇದರ ವಾಸ್ತುಶಿಲ್ಪ ಬದಲಾವಣೆ ಮಾಡುವ ಹಾಗಿಲ್ಲ” ಎಂದು ಕಂಡು ಬಂತು. ಹೀಗೆ ೧೯೯೯ರಲ್ಲಿ ಊರವರು ಈ ಬೆಟ್ಟದ ಮೇಲೆ ಸೋಮನಾಥನಿಗೆ ದೇವಸ್ಥಾನ ಕಟ್ಟಲು ಸಮಿತಿಯನ್ನು ಕಟ್ಟಿ, ಮೊದಲು ಒಂದು ಬಾಲಾಲಯವನ್ನು ನಿರ್ಮಿಸಿದರು. ೨೦೧೫ರ ಮೇ ೨೦ರಂದು ಊರಿನ ಹಾಗೂ ಪರವೂರ ಭಕ್ತರ ಸಹಕಾರದಲ್ಲಿ ಗರ್ಭಗುಡಿಯನ್ನು ಪುನರ್ ನಿರ್ಮಿಸಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಿದ್ದಾರೆ. ೨೦೨೧ರ ಮಾರ್ಚ್ ೧೧ರಂದು ಒಳಗೋಪುರದ ಸುತ್ತು ಪೌಳಿ ಮತ್ತು ಅಂಗಣ ಹಾಗೂ ಗರ್ಭಗುಡಿಯ ಮಾಡಿಗೆ ತಾಮ್ರ ಹೊದಿಸಿ ಅಭಿವೃದ್ಧಿ ಕೆಲಸ ನಡೆಸಿದೆ. ಹೊರಾಂಗಣ, ಹೊರಗೋಪುರದ ಮತ್ತು ದ್ವಾರದ ಕೆಲಸ ಕಾರ್ಯಗಳು ನಡೆಯುತ್ತಿದೆ.
ಶಿವನ ಈ ಪುರಾತನ ಭವ್ಯ ದೇಗುಲದಲ್ಲಿ ಹಲವು ಸೇವೆಗಳು ವೈಭವದಿಂದ ನಡೆದು ಬಂದುದಕ್ಕೆ ಸಾಕ್ಷಿಗಳೇ ಇಲ್ಲಿ ಸುತ್ತಲಿನ ಸ್ಥಳನಾಮಗಳು. ನಾಟ್ರಕೋಡಿ (ನಾಟ್ಯರಕೋಡಿ), ಇದು ದೇವಾಲಯಕ್ಕೆ ನಾಟ್ಯ ಮಾಡುವವರ ವಾಸಸ್ಥಳ (ಕೋಡಿ) ಯಾಗಿ ಇದ್ದಿರಬಹುದು. ಈ ಬೆಟ್ಟದ ಎಡಭಾಗದಲ್ಲಿ ಪೊರ್ಸೋಟ ಎಂಬ ಪ್ರದೇಶವಿದೆ. ಇದು ಪೂತೋಟ ಅಂದರೆ ದೇವಾಲಯಕ್ಕೆ ಬೇಕಾದ ಹೂತೋಟದ ಪ್ರದೇಶವಾಗಿರಬಹುದು. ಗೋದಾನಗುರಿ ಗೋಶಾಲೆ ಇದ್ದ ಸ್ಥಳ ಹಾಗೂ ಇನ್ನೊಂದು ಕಡೆ ಪಾಂಚರಪಾಲು, ಅಂದರೆ ಅರ್ಚಕಾದಿ, ಪರಿಚಾರಕರ ವಾಸಸ್ಥಾನವಾಗಿರಬಹುದು ಎಂದು ಈ ಹೆಸರುಗಳು ಈ ಶೈವ ದೇಗುಲದಲ್ಲಿದ್ದ ವೈಭವವನ್ನು ಬಿಂಬಿಸುತ್ತದೆ. ಅಲ್ಲದೇ ಇಲ್ಲೊಂದು ಗುಹೆ ಇದೆ. ಈಗ ಇದು ಮುಚ್ಚಿ ಹೋಗಿದೆ. ಇದು ಋಷಿ ಮುನಿಗಳು ತಪಸ್ಸು ಮಾಡುವ ಸ್ಥಳವಾಗಿರಬಹುದು. ಈ ಬೆಟ್ಟದ ಪಡುದಿಕ್ಕಿಗೆ ನೇರವಾಗಿ ಒಂದು ಕಿ.ಮೀ. ದೂರದ ಕೆಳಗೆ ಒಂದು ವಿಸ್ತಾರವಾದ ಕೆರೆಯಿದೆ. ಈ ಕೆರೆಗೆ ದೇವರು ಜಳಕಕ್ಕೆ ಬರುತ್ತಿದ್ದಿರಬಹುದು ಎಂದು ಜನರ ನಂಬಿಕೆ.
ಇನೋಳಿ ಸೋಮನಾಥೇಶ್ವರ ದೇವಾಲಯವು ದಕ್ಷಿಣ ಭಾರತದ ದ್ರಾವಿಡ ವಾಸ್ತು ಶೈಲಿಯಲ್ಲಿದೆ. ಮುಖ್ಯವಾಗಿ ಗರ್ಭಗುಡಿ, ಗೋಪುರ ಇದರ ವಿಶಿಷ್ಟತೆ. ಇದು ಗರ್ಭಗುಡಿ, ಒಳಾಂಗಣ, ಗೋಪುರ, ಹೊರಾಂಗಣ ಮತ್ತು ಹೊರಗೋಪುರ ಮತ್ತು ದ್ವಾರಗಳನ್ನು ಹೊಂದಿದೆ. ಗರ್ಭಗುಡಿ – ಇದು ಮಧೂರು ಮಹಾಗಣಪತಿ ದೇಗುಲದಂತೆ ಗಜಪೃಷ್ಠಾಕಾರದಲ್ಲಿದೆ. ಗರ್ಭಗುಡಿಯು ಮೂರು ಅಂತರದಲ್ಲಿದ್ದು ೪೮ ಅಡಿ ಎತ್ತರದಲ್ಲಿದೆ. ಗರ್ಭಗುಡಿಯನ್ನು ಕಪ್ಪುಕಲ್ಲಿನಿಂದ ಕೆತ್ತಲಾಗಿದೆ ಮತ್ತು ಹೊರ ಅಂತರವನ್ನು ಕೆಂಪುಕಲ್ಲಿನಿಂದ ಕೆತ್ತಲಾಗಿದೆ. ಗರ್ಭಗುಡಿಯ ಮೇಲೆ ೫ ಮುಗುಳಿಗಳು ಇದ್ದು, ೨೧/೨ ಅಡಿ ಎತ್ತರ ಸೇರಿ ಇದು ೫೦ ಅಡಿ ಎತ್ತರದಲ್ಲಿದೆ. ಗರ್ಭಗುಡಿಯು ೬೨ ಅಡಿ ಉದ್ದ, ೪೨ ಅಡಿ ಅಗಲದಲ್ಲಿದ್ದ ೨೬೦೪ ಚದರ ಅಡಿ ವಿಸ್ತೀರ್ಣದಲ್ಲಿದೆ. ಇಲ್ಲಿನ ತೀರ್ಥ ಮಂಟಪವು ೪೫೧ ಚದರ ಅಡಿ ವಿಸ್ತೀರ್ಣವಿದೆ. ಒಳಾಂಗಣದ ಆಗ್ನೇಯ ದಿಕ್ಕಿನಲ್ಲಿ ತೀರ್ಥಬಾವಿ, ತುಳಸಿಕಟ್ಟೆ ಇದೆ. ಇಲ್ಲಿ ದೇವಸ್ಥಾನಕ್ಕೆ ಒಳಗೆ ಹೋಗುವ ಒಂದನೇ ದ್ವಾರವೂ ಇದೆ. ಧ್ವಜಸ್ತಂಭದ ಕೆಲಸ ಇನ್ನೂ ಬಾಕಿ ಇದೆ. ಎಲ್ಲಾ ಕಡೆ ಈ ಒಳಾಂಗಣವನ್ನು ಮತ್ತು ಸುತ್ತುಪೌಳಿ ಗೋಪುರ ಆವರಿಸಲ್ಪಟ್ಟಿದೆ. ಒಳಾಂಗಣದ ವಿಸ್ತೀರ್ಣವು ೫೮೦೯ ಅಡಿ ಉದ್ದ ಮತ್ತು ೮೮೨ ಅಡಿ ಅಗಲವಿದ್ದು ಸುತ್ತುಪೌಳಿ ಗೋಪುರ ೧೬೨ ಅಡಿ ಉದ್ದ ಮತ್ತು ೧೫ ಅಡಿ ಅಗಲದೊಂದಿಗೆ ೨,೪೩೦ ಚದರ ಅಡಿ ವಿಸ್ತೀರ್ಣ ಹೊಂದಿದೆ. ಹೊರಾಂಗಣದ ಅಂಗಳ ಮತ್ತು ಎರಡನೇ ಸುತ್ತುಪೌಳಿಯು ೪೫,೮೭೧ ಚದರ ಅಡಿ ವಿಸ್ತಿರ್ಣ ಹೊಂದಿದ್ದು, ಇದರ ಪಂಚಾಂಗ ಆಗಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಈ ಎಲ್ಲಾ ವಿಸ್ತೀರ್ಣಗಳನ್ನು ನೋಡುವಾಗ ಈ ಶಿವ ದೇವಾಲಯ, ಪುರಾತನದಲ್ಲೇ ಬೃಹತ್ ದೇಗುಲವಾಗಿತ್ತು ಎಂದು ಸಾರಿ ಸಾರಿ ತಿಳಿಸುತ್ತದೆ.
ಇನೋಳಿ ಸೋಮನಾಥೇಶ್ವರ ದೇವಾಲಯ ಪಡುದಿಕ್ಕಿಗೆ ಮುಖ ಮಾಡಿ ನಿಂತಿದೆ. ಇದರ ಸರಿಯಾಗಿ ಹಿಂದುಗಡೆ ಪೂರ್ವಾಭಿಮುಖಾಗಿ ದ್ವಿಭುಜ ಪಾರ್ವತಿ ದೇವಿಯ ಸನ್ನಿಧಾನವಿದೆ. ಇದು ಸ್ವಯಂವರ ಪಾರ್ವತಿ, ಅಂದರೆ ಈಶ್ವರನಿಗೆ ವಿವಾಹವಾಗಲು ಸಿದ್ಧವಾಗಿ ನಿಂತಿರುವ ಪಾರ್ವತಿ. ಹಾಗಾಗೀ ಇದು ಒಂದು ವಿಶೇಷವಾಗಿರುವ ಪಾರ್ವತಿಯಾಗಿದೆ. ಇಲ್ಲಿ ಮದುವೆಯಾಗದೆ ಇರುವವರು (ಕನ್ಯಾ) ಇಲ್ಲಿ ಬಂದು ಪ್ರಾರ್ಥಿಸಿ ಸೇವೆ ಮಾಡಿಸಿದರೆ ಅವರಿಗೆ ಶೀಘ್ರವಾಗಿ ಮದುವೆಯಾಗುತ್ತದೆ ಅಂತೆ ಹಾಗೂ ಈ ಹಿಂದೆ ಪಾಳುಬಿದ್ದ ದೇವಾಲಯದ ಆವರಣದಲ್ಲಿ ಹೀಗೆ ಪ್ರಾರ್ಥಿಸಿ, ಶೀಘ್ರವಾಗಿ ಮದುವೆಯಾದ ಕೆಲವು ಘಟನೆಗಳೂ ಇವೆಯಂತೆ. ದಕ್ಷಿಣಾಭಿಮುಖವಾಗಿ ಬಲಮುರಿ ಗಣಪನ ಮೂರ್ತಿ ಇದೆ. ಬಲಮುರಿಗಣಪ ಎಂದರೆ, ಆತನಿಗೆ ಎಷ್ಟೂ ನೈವೇದ್ಯ ಕೊಟ್ಟರೂ ಸಾಕಾಗದಂತೆ. ಹಾಗಾಗೀ ಇಲ್ಲಿ ಅಪ್ಪದ ಸೇವೆ, ನೈವೇದ್ಯ ಮುಂತಾದ ಸೇವೆ ಮಾಡಿಸಬಹುದು. ಇದರಿಂದ ಬಹು ಸಂಕಲ್ಪಗಳು ಈಡೇರುತ್ತವೆ ಅಂತೆ. ಕೈಲಾಸಪತಿ ಈಶ್ವರನ ಕುಟುಂಬವೇ ಇಲ್ಲಿ ಆರಾಧಿಸಲ್ಪಡುತ್ತಿರುವುದರಿಂದ ಇದು ಒಂದು ವಿಶೇಷ ದೇವಸ್ಥಾನವೆಂದೇ ಹೇಳಬಹುದು. ಈ ದೇವಾಲಯ ಪ್ರಾತಃಕಾಲ ೫.೩೦ಕ್ಕೆ ಬಾಗಿಲು ತೆರೆದು, ಬೆಳಗ್ಗೆ ೭.೩೦ಕ್ಕೆ ಬೆಳಗಿನ ಪೂಜೆ ನಡೆಯುತ್ತದೆ. ಅಪರಾಹ್ನ ೧೨.೩೦ಕ್ಕೆ ಪೂಜೆ ಆಗಿ ಒಂದು ಗಂಟೆಗೆ ಬಾಗಿಲು ಮುಚ್ಚುತ್ತೆ. ಸಂಜೆ ೫.೩೦ಕ್ಕೆ ಪುನಃ ಬಾಗಿಲು ತೆರೆದು, ಸಂಜೆ ೭.೦೦ಗಂಟೆಗೆ ರಾತ್ರಿ ಪೂಜೆ ಆಗಿ ೭.೩೦ಕ್ಕೆ ಬಾಗಿಲು ಮುಚ್ಚುತ್ತೆ. ಶಿವರಾತ್ರಿ ಹಿಂದಿನ ದಿನ ಯಕ್ಷಗಾನ, ಭಜನೆ, ಶಿವರಾತ್ರಿ ಜಾಗರಣೆ, ರಾತ್ರಿ ಮಹಾಪೂಜೆ ಇರುತ್ತದೆ. ಶಿವರಾತ್ರಿ ಮರುದಿನ ಜಾತ್ರೆ ಮಹೋತ್ಸವ ನಡೆಯುತ್ತದೆ. ಮೇ ೧೯-೨೦ರಂದು ವಾರ್ಷಿಕ ಪ್ರತಿಷ್ಠಾವರ್ಧಂತಿ ಮಹೋತ್ಸವ ನಡೆಯುತ್ತದೆ. ಪಂಚಪರ್ವಗಳಾದ ನಾಗರಪಂಚಮಿ, ಚೌತಿ, ನವರಾತ್ರಿ, ದೀಪಾವಳಿ, ಶಿವರಾತ್ರಿಯಂದು ವಿಶೇಷ ಸೇವೆಗಳು ನಡೆಯುತ್ತದೆ. ಪ್ರತಿ ತಿಂಗಳ ಮೊದಲ ಸೋಮವಾರ ಸತ್ಯನಾರಾಯಣ ಪೂಜೆ, ಪ್ರತಿ ತಿಂಗಳ ಕೊನೆಯ ಶನಿವಾರ ಶನಿಪೂಜೆ, ತಿಂಗಳಿಗೊಮ್ಮೆ ದುರ್ಗಾಪೂಜೆ, ಪ್ರತಿ ಸಂಕಷ್ಟಿಗೆ ಅಪ್ಪದ ಪೂಜೆವಿರುತ್ತದೆ.
೨೦೧೫ರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯದ ಗರ್ಭಗುಡಿಯನ್ನು ಊರ ಹಾಗೂ ಪರವೂರ ಭಕ್ತರ ಸಹಕಾರದಲ್ಲಿ ಪುನರ್ ನಿರ್ಮಿಸಲಾಗಿದೆ. ಒಳಾಂಗಣದ ಸುತ್ತುಪೌಳಿಯ ಕೆಲಸವೂ ಆಗಿರುತ್ತದೆ. ಇನ್ನೂ ಹೊರಾಂಗಣ ಸುತ್ತುಪೌಳಿಯ ಮತ್ತು ಧ್ವಜಸ್ತಂಭದ ಕೆಲಸವು ಆಗಬೇಕಾಗಿದೆ. ಸುತ್ತುಪೌಳಿಯ ನಿರ್ಮಾಣಕ್ಕೆ ಬೇಕಾದ ಧನಸಹಾಯ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳು, ದಾನಿಗಳು ತನು-ಮನ-ಧನ ಸಹಾಯ ಸಹಕಾರವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ಧನಸಹಾಯವನ್ನು ಚೆಕ್/ಡಿಡಿ ಅಥವಾ ಫೋನ್ ಮೂಲಕ ಕಳುಹಿಸಬಹುದು.
State Bank of India “Inoli Sri Somanatheshwara Durga Parameshwari Temple Managing Trust”
A/c No. : 67334688954
IFSC Code : SBIN0071038
ಹೆಚ್ಚಿನ ಮಾಹಿತಿಗಾಗಿ :
೯೮೮೦೭೬೧೨೭೧, ೯೬೩೨೨೭೫೬೭೫, ೯೧೬೪೧೫೫೮೦೮
ವಿಳಾಸ :
ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನ, ದೇವೆಂದಬೆಟ್ಟ, ಪಾವೂರು, ಮಂಗಳೂರು, ದ.ಕ. – ೫೭೪ ೧೯೯
ಲೇಖನ : ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)
















































































































