ಕಾಲ ಎಷ್ಟು ಬದಲಾಯ್ತು ಎಂದರೆ, ಮಹಾ ಕಾಲನೇ ಬೆಚ್ಚಿಬೀಳುವಂತೆ!. ಯಾರಿಗೂ ಸಾವಿನ ಭಯವಿಲ್ಲ. ಆರೋಗ್ಯದ ಕಾಳಜಿಯೇ ಇಲ್ಲ. ಸಮಾಜದ ಹೆದರಿಕೆ ಇಲ್ಲವೇ ಇಲ್ಲ. ಮನೆಯವರ ಗೌರವ, ಕಾಳಜಿ, ಹೆದರಿಕೆ ಎಲ್ಲವೂ ಮಂಗಮಾಯ. ಎಲ್ಲೆಲ್ಲೂ ದುಡ್ಡು ಅಂತಸ್ತು, ಪ್ರಭಾವ ಇದು ಕೆಲಸ ಮಾಡುವ ಕಲಿಕಾಲವನ್ನು ನಾವೇ ಸೃಷ್ಟಿಸಿಕೊಂಡಾಗಿದೆ!. ಎಲ್ಲರೂ ಎಲ್ಲದಕ್ಕೂ ಸ್ವತಂತ್ರರು. ಇದು ಪ್ರಸ್ತುತ ಸಮಾಜದ ಪರಿಸ್ಥಿತಿ. ಇದರ ಪ್ರಭಾವ ಎಲ್ಲಿಯವರೆಗೆ ಮುಟ್ಟಿದೆ ಅಂದರೆ ಒಂದು ಕಾಲದಲ್ಲಿ ಸಾರ್ವಜನಿಕವಾಗಿ ಮಾಡಬಾರದ ಕೆಲವಷ್ಟು ಸಂಗತಿಗಳು ಈಗ ಲಂಗುಲಗಾಮು ಇಲ್ಲದೆ ನಡೆಯುತ್ತಿದೆ. ಅದನ್ನು ಪ್ರಶ್ನಿಸಿದರೆ ಇಲ್ಲವೇ ಸರಿಯಲ್ಲ ಎಂದು ಆಕ್ಷೇಪ ಮಾಡಿದರೆ ಹಾಗೆ ಮಾಡುವವನೇ ಸಂಸ್ಕಾರ ವಿಹೀನ, ಅನಾಗರಿಕ, ಗಾಂಧೀ ಮೊದಲಾದ ಬಿರುದು ಪಡೆಯುವಂತಾಗಿದೆ!. ಬಾಕಿ ಎಲ್ಲಾ ಬದಿಗಿಟ್ಟು “ಕುಡಿತ”ದ ವಿಚಾರವನ್ನು ಹೇಳುವುದಾದರೆ ಇದರಲ್ಲಿ ಎರಡು ವಿಭಾಗ. ಒಂದು ಸ್ಟ್ಯಾಂಡರ್ಡ್ ಅಂದ್ರೆ “ಸೋಶಿಯಲ್ ಕುಡಿತ” ಇನ್ನೊಂದು ದಿನವೂ ಕುಡಿಯವ “ಕುಡುಕ” ಹೊಸ ಸೇರ್ಪಡೆ “ಕುಡುಕಿ”!!!. ಇದು ಎರಡೂ ಸರಿಯಲ್ಲ. ಆದರೆ ಯಾವತ್ತಾದರೂ ಒಮ್ಮೆ ಯಾರದ್ದೋ ಸಮಾಧಾನಕ್ಕೆ ಒಂದು ಬೀಯರ್ ಅಥವಾ ಒಂದು ಪೆಗ್ ಹಾಕುವವನು ಸ್ವಲ್ಪ ಓಕೆ. ಆದರೆ ದಿನವೂ ಒಂದಾದರೂ ಪೆಗ್ಗೂ ಕುಡಿಯದೆ ಅಥವಾ ಒಂದು ಕ್ಯಾನ್ ಬೀಯರಾದರೂ ಕುಡಿಯದೆ ನಿದ್ರೆಯೇ ಬರದವರು ಮಾತ್ರ ಆಲೋಚಿಸಲೇ ಬೇಕಾಗಿದೆ. ಕುಡಿಯುವುದರಿಂದ ಸಾವು ಬೇಗ ಬರುತ್ತದೆ ಎಂದು ಹೇಳುವುದಿಲ್ಲ ಅಥವಾ ಕುಡಿತ ನಿಧಾನವಾದ ವಿಷ ಎಂದು ಹೇಳುವುದಕ್ಕಿಂತಲೂ ಇದರಿಂದ ದಿನನಿತ್ಯ ಮತ್ತು ಜೀವನದ ಮುಂದಿನ ದಿನಗಳಲ್ಲಿ ಸಂಭವಿಸುವ ಸಮಸ್ಯೆ ಮತ್ತು ಎದುರಿಸುವ ತಾಪತ್ರಯಗಳನ್ನು ಸ್ವಲ್ಪ ತಿಳಿದರೆ ಒಳ್ಳೆಯದು. ಕೆಲವಷ್ಟು ವರ್ಷಗಳ ಹಿಂದೆ ಕುಡಿತದ ಚಟ ಹೆಚ್ಚಾಗಿ ಬರೀ ಗಂಡಸಾದವನಿಗೆ ಮಾತ್ರ ಇತ್ತು. ಹೆಂಗಸರು ಕದ್ದು ಮುಚ್ಚಿ ಕುಡಿಯುತ್ತಿದ್ದರೂ ಸಾರ್ವಜನಿಕವಾಗಿ ಎದುರು ಕಾಣುತ್ತಿರಲಿಲ್ಲ. ಆದರೆ ಈಗ ಅದು ಸಮಾಜದ ಬಾಕಿ ವಿಷಯಗಳಂತೆ ಗಂಡು ಹೆಣ್ಣು ಎಂಬ ಯಾವುದೇ ಭೇದ ಭಾವವಿಲ್ಲದೆ ಭಯ ಖೇದ ನಾಚಿಕೆ ಯಾವುದೂ ಇಲ್ಲದೆ ಎಲ್ಲೆಲ್ಲೂ ವ್ಯಾಪಿಸಿದೆ. ಈ ವಿಚಾರ ಜಗಜ್ಜಾಹೀರು ಆದದ್ದು ಕರೋನಾ ಕಾಲದ ಲಾಕ್ಡೌನ್ ಸಂದರ್ಭದಲ್ಲಿ. ಮಧ್ಯದಲ್ಲಿ ಮದ್ಯದಂಗಡಿಗಳು ತೆರೆದಾಗ ಅಲ್ಲಿ ಸರದಿ ಸಾಲಿನಲ್ಲಿ ಕಂಡು ಬಂದ ಲಲನಾಮಣಿಯರನ್ನು ಕಂಡು ಸಾಕಷ್ಟು ಗಂಡಸರೇ ನಾಚಿದ್ದಿದೆ!.

ಮದ್ಯದ ಮಿತವಿಲ್ಲದ ಸೇವನೆ ಮನುಷ್ಯನ ಆರೋಗ್ಯಕ್ಕೆ ಹಾಳು ಎಂದು ಸಾಕಷ್ಟು ಸಂಶೋಧನೆಗಳು ಸಾಬೀತು ಮಾಡಿದರೂ, ಸರಕಾರವು ಎಲ್ಲದಕ್ಕಿಂತ ಮದ್ಯದ ಮೇಲಿನ ತೆರಿಗೆಯನ್ನು ಎಷ್ಟು ಹೆಚ್ಚು ಮಾಡಿದರೂ, ಮದ್ಯ ಮಾರಾಟ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚೇ ಆಗುತ್ತಿದೆ. ಕಾರಣ ಇದರ ಮಾದಕತೆ!. ಡಿಮ್ಯಾಂಡು!. ಮುಖ್ಯವಾಗಿ ಹೆಣ್ಣು ಮಕ್ಕಳು ಅದರಲ್ಲೂ ಹೊಸದಾಗಿ ಮದುವೆಯಾಗಿ ಗರ್ಭಧರಿಸಬೇಕಾದ ಹೊತ್ತಿನಲ್ಲಿ ಈ ಮದ್ಯವನ್ನು ಸೇವಿಸುತ್ತಿದ್ದರೆ, ಈ ನಿರಂತರ ಕುಡಿತದಿಂದ ದೇಹದಲ್ಲಿ ವ್ಯತ್ಯಾಸವಾಗಿ ಅದು ಮುಂದೆ ಹುಟ್ಟುವ ಮಗುವಿನಲ್ಲಿ “ಫೀಟಲ್ ಅಲ್ಕೋಹಾಲ್ ಸಿಂಡ್ರೋಮ್” ಅಂದ್ರೆ ಬುದ್ಧಿಮಾಂದ್ಯತೆ ತರಿಸುವ ಸಾಧ್ಯತೆ ಶೇಕಡಾ 80ಕ್ಕಿಂತಲೂ ಹೆಚ್ಚಂತೆ. ಇದನ್ನು ನೀವು ಈಗಿನ ಸಣ್ಣ ಮಕ್ಕಳಲ್ಲಿ ಗಮನಿಸಿರಬಹುದು. ಈಗಿನ ರಾತ್ರಿ ಹಗಲು ಎಂಬ ಭೇದವಿಲ್ಲದ ಐಟಿ ಬಿಟಿಗಳ ಹೊಸ ಯುವ ಜನಾಂಗಕ್ಕೆ ಜೆನೆಟಿಕ್ಸ್, ಸೈಯನ್ಸ್ ನ ಬಗ್ಗೆ ಅರಿವು ಬಹಳಾನೇ ಕಡಿಮೆ ಅಥವಾ ಗೊತ್ತಿದ್ದರೂ ಯಾವುದನ್ನೂ ಕ್ಯಾರೇ ಎನ್ನದೆ, ಬೇಕಾಬಿಟ್ಟಿ, ಲಂಗು ಲಗಾಮು ಇಲ್ಲದೆ ಬಿಂದಾಸ್ ಬದುಕು ಸಾಗಿದೆ. ಅದರ ಪರಿಣಾಮವೇ ಈಗ ಹುಟ್ಟುತ್ತಿರುವ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬುದ್ದಿ ಮಾಂದ್ಯತನ. ಒಂದು ವೇಳೆ ನಮಗೆ ಹುಟ್ಟುವ ಮಕ್ಕಳ ಬಗ್ಗೆ ನಮಗೆ ಕಾಳಜಿ ಇದೇ ಎಂದಾದರೆ ಗರ್ಭಧರಿಸುವ ಆರು ತಿಂಗಳ ಮೊದಲೇ ಈ ನಿರ್ಧಾರ ತೆಗೆದುಕೊಂಡು ತಮ್ಮ ಕುಡಿತದ ಚಟಕ್ಕೆ ತಿಲಾಂಜಲಿ ಇಟ್ಟರೆ ನಿಮಗೆ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿ ಹುಟ್ಟಬಹುದು. ಈ ನಿರ್ಧಾರ ಗಂಡ ಹೆಂಡತಿ ಇಬ್ಬರೂ ಪರಸ್ಪರ ತಿಳುವಳಿಕೆಯಿಂದ ತೆಗೆದುಕೊಂಡರೆ ಬಹಳಾನೇ ಒಳಿತು ಇಲ್ಲವಾ ದಯವಿಟ್ಟು ಮಕ್ಕಳನ್ನೇ ಪಡೆಯಬೇಡಿ. ಇದು ಸಾಮಾನ್ಯವಾಗಿ ಆರೋಗ್ಯವಾಗಿರುವ ತಾಯಿಯಾದವಳಿಗೆ ಅಂದ್ರೆ ಗರ್ಭ ಧರಿಸದೆ ಇರುವ ಹೆಣ್ಣೆನ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರದು. ಆದರೆ ಅದೇ ಗರ್ಭ ಧರಿಸಿದ ತಾಯಿಯಾಗಲಿರುವ ಹೆಣ್ಣಿನ ಭ್ರೂಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಕುಡಿದಾಗ ಹೆಣ್ಣಿನ ದೇಹದಲ್ಲಿ ಉಂಟಾಗುವ ಈ ಹಾರ್ಮೋನ್ ಪ್ಲಾಸೆಂಟಾ ಮುಖಾಂತರ ಭ್ರೂಣದಲ್ಲಿನ ಮಗುವನ್ನು ತಲುಪುತ್ತದೆ.
ಪ್ರತೀ ಮಾನವನ ಮೆದುಳಿನ ಬೆಳವಣಿಗೆಯು ಗರ್ಭ ಧರಿಸಿದ 21ನೇ ದಿನದಿಂದ 25 ವರ್ಷದವರೆಗೆ ಸಾಗುತ್ತದೆ. ಹಾಗಾಗಿ ಯಾರೇ ಆಗಲಿ ಮಗುವಿನಿಂದ 25 ವರ್ಷದ ಯುವಕ/ ಯುವತಿಯಾಗುವವರೆಗೆ ಕಡ್ಡಾಯವಾಗಿ ಒಂದು ಚಟವಾಗಿ ಆಲ್ಕೋಹಾಲ್ ನ್ನು ಸೇವಿಸಲೇ ಬಾರದು. ಕಾರಣ ಈ ಆಲ್ಕೋಹಾಲ್ ನಮ್ಮ ಮೆದುಳಿನ ಮುಂಭಾಗವಾದ “ಫ್ರೀ ಫ್ರಾಂಟಲ್ ಕಾಟೆಕ್ಸ್” ನ ಬೆಳವಣಿಗೆಯನ್ನು ತಡೆಯುತ್ತದೆ. ಆದರೆ ನೆನಪಿಡಿ ಅದೇ ನಮ್ಮ ವಿವೇಕದ ಮೆದುಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ, ಮಾತ್ರವಲ್ಲ ಯಾವುದೇ ಸಂಶೋಧನೆ (ಡಿಸ್ಕವರಿ), ಯಾವುದರದ್ದೇ ಬಗೆಗೆ ವಿಮರ್ಶೆ (ಅನಾಲಿಸಿಸ್) ಮುಂತಾದುವನ್ನು ಮಾಡಲು ಮೆದುಳಿನ ಈ ಭಾಗದ ಬೆಳವಣಿಗೆ ತೀರಾ ಅವಶ್ಯಕ. ದಿನಾಲು ಕುಡಿಯುವ ಚಟವಿರುವವರ ಮೆದುಳಿನ ಭಾಗವಾದ “ಹಿಪೋಕ್ಯಾಂಪಸ್” ರೀಜನ್ ಕಂಪ್ಲೀಟ್ “ಡೀಜನರೇಶನ್” ಆಗುತ್ತದೆ, ಕಲಿಯುವ ಶಕ್ತಿ, ನೆನಪಿನ ಶಕ್ತಿ ಕುಂಟಿವಾಗುತ್ತದೆ (ಮೆಮೊರಿ ಲಾಸ್), ಆಲೋಚನಾ ಶಕ್ತಿ (ತಿಂಕಿಂಗ್ ಕ್ಯಪಾಸಿಟಿ) ಕಡಿಮೆಯಾಗುತ್ತದೆ. ಒಂದು ನೆನಪಿಡಿ ನಮ್ಮ ದೇಹದಲ್ಲಿ ಕೆಲವು ಅಂಗಾಂಗಗಳು ಸವಕಳಿಯಾದರೂ ಮತ್ತೆ ಬೆಳೆಯುತ್ತವೆ ಅದರಲ್ಲಿ ಒಂದು ಲಿವರ್. ಲಿವರ್ ಡ್ಯಾಮೇಜ್ ಆದರೂ ಅದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಅದರ ಕೋಶಗಳು ಮತ್ತೆ ಪುನರುತ್ಪತ್ತಿ (ರೀಜನರೇಶನ್) ಆಗುತ್ತಿರುತ್ತದೆ. ಆದರೆ ಮೆದುಳಿನ ಸೆಲ್ ಗಳು ಹಾಗಲ್ಲ. ಅದು ನಶಿಸುತ್ತಾ ಹೋಗುತ್ತದೆ. ಮತ್ತೆ ಖಂಡಿತಾ ಉತ್ಪತ್ತಿ ಆಗುವುದಿಲ್ಲ. ಈ ನಿರಂತರ ಕುಡಿತದ ಚಟ ಅಂಟಿಕೊಳ್ಳಲು ದೇಹದೊಳಗಿನ ವೈಜ್ಞಾನಿಕ ಕಾರಣವೆಂದರೆ “ಅಕ್ಸೈಟೇಟರೀ ಹಾರ್ಮೋನ್” ಅಂದ್ರೆ “ಗ್ಲುಟಾಮೇಟ್” ಹೆಚ್ಚಾಗುತ್ತಾ ಬರುವುದು. ದಿನವೂ ಕುಡಿಯುವುದರಿಂದ ಇದು HPA ಆಕ್ಸಿಸ್ ಎಂದರೆ “ಹೈಪೋತಲಾಮಸ್ ಪಿಟ್ಯೂಟರಿ ಅಡ್ಮಿರಲ್ ಆಕ್ಸಿಸ್” ಇದು ಹೈಪೋತಲಾಮಸ್ ನಿಂದ ಕೆಲವೊಂದು ಹಾರ್ಮೋನ್ಗಳನ್ನು ಬಿಡುಗಡೆಮಾಡುತ್ತದೆ. ಅದು ಪಿಟ್ಯೂಟರಿ ಗ್ಲ್ಯಾಂಡ್ ಮೇಲೆ ಪರಿಣಾಮ ಬೀರಿ, ಅದು ಮತ್ತೆ “ಅಡ್ರಿನಲ್ ಗ್ಲೇಂಡ್” ಮೇಲೆ ಪ್ರಭಾವ ಬೀರುತ್ತದೆ. ಆದರೆ ಹೈಪೋತಲಾಮಸ್ ನಿಂದ ಬಿಡುಗಡೆಯಾದ “ಕಾಟಿಟಾಲ್ ಟ್ರೆಸ್” ಎಂಬ ಹಾರ್ಮೋನ್ ಬಿಡುಗಡೆ ಆಗ್ಬೇಕಾದ್ರೆ ಪಿಟ್ಯೂಟರಿ ಗ್ರಂಥಿಗೆ ಸ್ಟಿಮ್ಯುಲೇಶನ್ ಕೊಡ್ಬೇಕು. ಅದು CRH (ಕಾಟ್ರಿಕೋ ಟ್ರೋಪಿಕ್ ರಿಲೀಸಿಂಗ್) ಹಾರ್ಮೋನ್. ಇದು ಪಿಟ್ಯೂಟರಿ ಮೇಲೆ ರಿಯಾಕ್ಟ್ ಆಗಿ ಮತ್ತೆ ಮತ್ತೆ ಕುಡಿಯಲು ಉದ್ರೇಕ ಮಾಡುತ್ತದೆ. ಆವಾಗ ಭಯ ನಾಚಿಕೆ ಅಂದ್ರೆ “ಟಚ್ ಕರೇಜ್” ಇದು ಯಾವುದೂ ಇರೋದಿಲ್ಲ. ಇನ್ನಷ್ಟು ಮತ್ತಷ್ಟು ಕುಡಿಸುತ್ತಲೇ ಇರುತ್ತದೆ. ಈ ಕುಡಿತದಿಂದ ಆಗುವ ಇನ್ನಷ್ಟು ಸಮಸ್ಯೆಗಳೆಂದರೆ, ಕುಡಿದಾಗ ದೇಹವು “ಸೆರೆಟನೇನ್ ಹಾರ್ಮೋನ್” ನನ್ನು ಶ್ರವಿಸುವಂತೆ ಮಾಡುತ್ತದೆ. ಇದು ಕುಡಿಯುವವನ ಮೂಡನ್ನು ಚೇಂಜ್ ಮಾಡಿಸುತ್ತದೆ. ಅಂದ್ರೆ ಕುಡಿದ ಹೊತ್ತಿಗೆ ಎಷ್ಟೋ ಸೀಕ್ರೇಟ್ಸ್ ಗಳನ್ನು ಹೇಳಿ ಬಿಡುವಂತೆ ಮಾಡುತ್ತದೆ ಮತ್ತು ಎಲ್ಲದಕ್ಕೂ ಸೈ ಎಂದು ಒಪ್ಪಿಕೊಳ್ಳುವಂತ ವಿದ್ಯಮಾನಗಳು ನಡೆಯುತ್ತಿರುತ್ತದೆ. ನೀವು ಹಲವಾರು ಸಿನೆಮಾಗಳಲ್ಲಿ ಇಂತದನ್ನು ಗಮನಿಸಿರಬಹುದು. ಈ ಪ್ರಯೋಗವನ್ನು ಕ್ರಿಮಿನಲ್ಗಳ ಮೇಲೂ ಪ್ರಯೋಗಿಸುತ್ತಾರೆ. ಅವರು ಕುಡಿದ ಅಮಲಿಗೆ ಜೊತೆಗೆ ಇದ್ದವರ ಎಲ್ಲಾ ಹೆಸರನ್ನು ಮತ್ತು ಮನಸ್ಸಿನಲ್ಲಿದ್ದ ಎಲ್ಲಾ ಕ್ರಿಮಿನಲ್ ಐಡಿಯಾಗಳನ್ನು ಹೇಳಿ ಬಿಡುತ್ತಾರೆ. ಈ ದೌರ್ಬಲ್ಯವನ್ನು ಉಪಯೋಗಿಸಿ ಕುಟುಂಬದ ಒಳಗೂ ಸಾಕಷ್ಟು ಪ್ರಯೋಜನ ಪಡೆಯುವವರಿದ್ದಾರೆ. ಇನ್ನು ನಮ್ಮ ಹೊಟ್ಟೆಯಲ್ಲಿ ನಾನಾ ನಮೂನೆಯ ಬ್ಯಾಕ್ಟೀರಿಯಾಗಳು ಇರುತ್ತವೆ. ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಇರುತ್ತವೆ. ನಾವು ದಿನವೂ ಕುಡಿದಾಗ “ಲೀಕೀಗಡ್ ಸಿಂಡ್ರೋಮ್” ಶುರುವಾಗಿ ಹೊಟ್ಟೆಯಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳೆಲ್ಲವೂ ಸಾಯುತ್ತವೆ. ಕೇವಲ ಕೆಟ್ಟ ಬ್ಯಾಕ್ಟೀರಿಯಾಗಳು ಮಾತ್ರ ಉಳಿದುಬಿಡುತ್ತದೆ. ಇದನ್ನು “ಬ್ರೈನ್ ಗಟ್ ಲಿವರ್ ಅ್ಯಕ್ಸಿಸ್” ಎಂದು ಕರೆಯುತ್ತಾರೆ. ಇದು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಇನ್ನೂ ಮುಖ್ಯವಾಗಿ ಗಂಡಸರಲ್ಲಿ ಈ ಚಟದಿಂದ ಸಂತಾನೋತ್ಪತ್ತಿಗೆ ಅತೀ ಅಗತ್ಯವಾದ ಜೀವಧಾತು ವೀರ್ಯಾಣುವಿನ ಶಕ್ತಿಯೇ ಕುಂದುತ್ತದೆ. ಅಂದ್ರೆ “ಇನಫರ್ಟಿಲಿಟಿ” ಅಂದ್ರೆ ಈ ಕೆಟ್ಟ ಕುಡಿತ ನಿಮ್ಮ ವೀರ್ಯಾಣುವಿನ ಫಲವತ್ತತೆಯನ್ನೇ ಕಡಿಮೆ ಮಾಡಿಬಿಡುತ್ತದೆ. ನೆನಪಿಡಿ ಈ ಸಮಸ್ಯೆಯು ನಿಮ್ಮ ಇಡೀ ಕುಟುಂಬವನ್ನು ಜೀವನಮಾನವಿಡೀ ಕಾಡುತ್ತದೆ.
ಈ ಸಮಸ್ಯೆ ರಾಜ್ಯದ, ದೇಶದ ಕೆಲವು ಭಾಗದ ಜನರಲ್ಲಿ ಇರದಿರಲೂಬಹುದು ಕಾರಣ ಅಲ್ಲಿಯ ವಾತಾವರಣವನ್ನು ಹೊಂದಿಕೊಂಡು ನಮ್ಮ ದೇಹದ ಜೀನ್ಸ್ ಗಳು ಪ್ರಭಾವ ಬೀರುತ್ತದೆ. ಉದಾಹರಣೆ ಕೊಡಗಿನ ಮಂದಿ, ಮಲೆನಾಡು ಪ್ರದೇಶದ ಮಂದಿ. ಇವರು ಸ್ವಲ್ಪ ಹೆಚ್ಚು ಕುಡಿದರೂ ಅದು ಅವರ ದೇಹದ ಮೇಲೆ ಅಂತಹ ವಿಕಾರ ಅಡ್ಡ ಪರಿಣಾಮ ಬೀರದೆಯೂ ಇರಬಹುದು. ಹಾಗೆಂದು ಅದು ಎಲ್ಲರಿಗೂ ಅನ್ವಯವಾಗದು. ಕೆಲವೊಂದು ಸನ್ನಿವೇಶ ಸಂದರ್ಭಗಳಲ್ಲಿ ಕುಡಿಯುವುದರಿಂದ ವ್ಯಾಪಾರ ವಹಿವಾಟು ಬೆಳೆಯುತ್ತದೆ, ಗೆಳತನ ಹೆಚ್ಚಾಗುತ್ತದೆ ಎಲ್ಲವೂ ಒಪ್ಪೋಣ. ಅದನ್ನು “ಸೋಶಿಯಲ್ ಡ್ರಿಂಕ್” ಅಂದ್ರೆ “ಮಿತವಾದ ಕುಡಿತ”ಎಂದು ಕರೆಯುತ್ತಾರೆ. ಅನಿವಾರ್ಯವಾಗಿ ಬಹಳ ವಿರಳ ಸಂದರ್ಭಗಳಲ್ಲಿ ಮಿತವಾದ ಕುಡಿತ ಹಾಳಲ್ಲ. ಅದು ಕುಡಿಯುವವನ ವಿವೇಚನೆಗೆ ಬಿಟ್ಟದ್ದು. ಅದೆಷ್ಟೋ ಸಂದರ್ಭ ಈಗಿನ ಹೊಸ ಹೊಸ ಲಘು ಪಾನೀಯ ಅಥವಾ ಪವರ್ ಡ್ರಿಂಕ್, ಎನರ್ಜಿ ಡ್ರಿಂಕ್ಸ್ ಇತ್ಯಾದಿಗಳಿಗಿಂತ ಅದರಿಂದ ಆಗುವ ಮತ್ತೊಂದು ತೊಂದರೆಗಿಂತ ಒಂದು ಗ್ಲಾಸ್ ಬಿಯರ್ ಕುಡಿದರೆ ಎಷ್ಟೋ ವಾಸಿ ಅಥವಾ ನಿಯಮಿತವಾಗಿ ಒಂದೋ ಎರಡೋ ಪೆಗ್ ಗಳಲ್ಲಿ ಎಲ್ಲವೂ ಮುಗಿಯಬೇಕು. ಅದು ಬಿಟ್ಟು ಎಲ್ಲರದ್ದೂ ಮುಗಿದ ಮೇಲೂ, ತರಿಸಿದ ಮಾಲೂ ಮುಗಿದ ಮೇಲೂ ಇನ್ನೂ ಮುಗಿಸದೆ ಮಧ್ಯರಾತ್ರಿಯಲ್ಲಿ ಎಲ್ಲಿ ಮದ್ಯದ ಅಂಗಡಿ ತೆರೆದಿದೆ ಎಂದು ಹುಡುಕುವವರೆಗೆ ಚಟ ಮುಂದುವರಿಸಬಾರದು. ಕೆಲವರು ಕುಡಿಯುವುದರಲ್ಲೂ ಪಂಥಾಹ್ವಾನ ಮಾಡುವುದು ಮತ್ತು ನಾನು ಒಮ್ಮೆ ಎರಡು ಬಾಟಲ್ ಕುಡಿದಿದ್ದೆ ಎಂದು ಜಂಬ ಕೊಚ್ಚಿಕೊಳ್ಳುವುದು. ಏನೂ ತಿನ್ನದೇ ಅಲ್ಲೇ ನಿದ್ರೆಗೆ ಜಾರುವುದು ಇದು ಮೂರ್ಖತನ. ಆದರೆ ಕುಡಿಯುವವರ ಜೊತೆಗೇ ಇದ್ದೂ ಕೇವಲ ಒಂದು ತಂಪು ಪಾನೀಯ ಮಾತ್ರ ಕುಡಿದೂ ವ್ಯಾಪಾರ, ಸಂಬಂಧ, ಗೆಳತನವನ್ನು ಉಳಿಸಲೂ ಬೆಳೆಸಲೂ ಕೂಡಾ ಸಾಧ್ಯವಿದೆ!. ಇದು ಕೇವಲ ನಮ್ಮ ಮನಸ್ಥಿತಿಯನ್ನು ಹೊಂದಿಕೊಂಡಿದೆ. ಕುಡಿಯದೇ ಇದ್ದಲ್ಲಿ ಅದು ನಮ್ಮ ತಾಕತ್ತೇ ಹೊರತು ಅದು ನಮ್ಮ ದೌರ್ಬಲ್ಯ ಖಂಡಿತಾ ಅಲ್ಲ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ














































































































