ನೋಡಲಿಕ್ಕೆ ನಟಿಸುವರು, ನೀನೇ ಎನ್ನ ಆತ್ಮೀಯ ಬಂಧು, ಆದರೆ ಗೊತ್ತಿಲ್ಲದಂತೆ ನಮ್ಮನ್ನೇ ತಿವಿದು ಕೊಂದು. ತಿಳಿಯಬೇಕಾಗಿದೆ ನಿಜಾರ್ಥದಲ್ಲಿ ನಮಗೆ ನಾವೇ ಬಂಧು!. ಪ್ರಸಿದ್ಧ ಕವಿ ಶ್ರೀಯುತ ನಿಸಾರ್ ಅಹಮದ್ ಅವರ ಒಂದು ಹಾಡಿನ ಸಾಲು ಹೀಗಿದೆ… “ಒಳಗೊಳಗೆ ಬೇರು ಕೊಯ್ದು, ಲೋಕದೆದುರು ನೀರು ಹೊಯ್ದು, ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ, ಪೇಪರ್ ಓದಿ ಹರಟಿ ಬಾಳ ತಳ್ಳುವುದಿದೆ ಅದು ಬಹಳ ಕಷ್ಟದ ಕೆಲಸ…” ಎಂದು. ಇದು ಇಂದಿನ ಹೆಚ್ಚಿನ ಎಲ್ಲರ ಬದುಕಿನ ಸಮಸ್ಯೆ. ಇದು ಮನೆ, ಆಫೀಸು, ಸಹೋದ್ಯೋಗಿ, ಶಾಲೆ, ಕಾಲೇಜು ಎಂದು ಭೇದವೇ ಇಲ್ಲದೆ ನಡೆಯುತ್ತಿದೆ. ಪರಸ್ಪರ ತಿಳಿದು ಮಿತ್ರತ್ವದಲ್ಲಿ ಒಪ್ಪಿ ನಡೆದರೆ ಅದು ಅವರ ವೈಯಕ್ತಿಕ ವಿಚಾರ. ಆದರೆ ಒತ್ತಾಯದಿಂದ, ಬಾಸಿಸಮ್ ತಂತ್ರದಿಂದ, ಬ್ಲ್ಯಾಕ್ ಮೇಲೆ ಮಾಡಿ, ಬೇರೆ ದಾರಿಯೇ ತೋಚದಂತೆ ಮಾಡಿ ಎಲ್ಲವನ್ನೂ ದೋಚಿ ಗೋಳೊಯಿಸಿಕೊಳ್ಳುವ ಕೆಲವಾರು ಮಂದಿ ಇಡೀ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಿ ಸಾಕಷ್ಟು ಹನಿಟ್ರಾಪ್ ಕೇಸ್ ಗಳಿಗೂ ಕಾರಣವಾಗುತ್ತಿದ್ದಾರೆ. ಇಂತವರ ಬಗ್ಗೆ ಎಚ್ಚರವಿರಬೇಕಾಗಿದೆ!. ಅದೆಷ್ಟೋ ಸಂದರ್ಭದಲ್ಲಿ ಇದು ಎದುರು ಕಾಣದ ಮನದೊಳಗಿನ ಕೊಳಕು ಬುದ್ದಿ ಅಥವಾ ಇದು ಕೊಳಕು ಸ್ವಭಾವ. ಇದನ್ನು ತಾನು ತಿಳಿದರೂ ಪ್ರಾರಾಭ್ಧ ಕರ್ಮವೆಂಬಂತೆ ಇದು ಬೆನ್ನು ಬಿಡದ ಪಿಶಾಚಿಯಾಗಿದೆ !. ಇದು ದುಡ್ಡಿದ್ದವ, ಇಲ್ಲದವ, ಸಾಕಷ್ಟು ಓದಿದವ, ಏನೂ ಓದದ ಪಾಮರ, ದೈವ ದೇವರ ಪೂಜಾರಿ, ಶಾಲಾ ಶಿಕ್ಷಕ, ಸಾಮಾಜಿಕ ನೇತಾರ ಇದ್ಯಾವುದೇ ತಾರತಮ್ಯವಿಲ್ಲದೆ ಮುಂದುವರಿದಿರುವ ಮಹಾನ್ ರೋಗ. ನೋಡಲು ಸುಂದರ ಪೋಷಾಕು, ಮುಖದಲ್ಲಿ ಮಾತಿನಲ್ಲಿ ನಯವಿನಯ ಸರಳ ಸಜ್ಜನಿಕೆ ಎಲ್ಲವೂ ಇದ್ದರೂ ಮನದೊಳಗೆ ಕೊಳಕು ತುಂಬಿದ ಹೊರಗೆ ನಾರದೆ ಒಳಗೊಳಗೆ ಕೊಳೆತ ವ್ಯಕ್ತಿಗಳು ನಮ್ಮ ದಿನನಿತ್ಯದ ವ್ಯಾಪಾರ ವಹಿವಾಟು ಇತ್ಯಾದಿಗಳಲ್ಲಿ ಸಿಗುತ್ತಲೇ ಇರುತ್ತಾರೆ. ಅವರ ಬಂಡವಾಳ ಬಯಲಾಗುವುದು ಅಥವಾ ಬಯಲಾಗಿರುವುದು ಅವರೊಡನೆ ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲಿ ಆತ್ಮೀಯರಾಗಿ ಕೆಲಕಾಲ ಕಳೆದಾಗ ಮಾತ್ರ. ಇದು ಸತ್ಯ. ಆದರೆ ಇದನ್ನು ಹೊರಗಡೆ ಹೇಳುವುದು ಮಾತ್ರ ಬಲು ಕಠಿಣ! ಮಾತ್ರವಲ್ಲ ಅಪಾಯ ಕೂಡಾ!.

ಇತ್ತೀಚಿಗಿನ ಎಲ್ಲಾ ಜನರ ಬದುಕೂ ಪ್ರಚಾರದ ಗೀಳಿನಿಂದ ಕೂಡಿದ್ದು. ಇದು ಧನಾತ್ಮಕ ವಿಚಾರದ ಪ್ರಚಾರ ಇರಬಹುದು ಇಲ್ಲವೇ ಋಣಾತ್ಮಕ ವಿಚಾರವಿರಲೂಬಹುದು. ಹೇಗಾದರೂ ಈಗಿನ ಸಾಮಾಜಿಕ ಜಾಲತಾಣದ ಮೂಲಕ ದೇಶವಿದೇಶದ ಜನರಿಗೆ ಕ್ಷಣಮಾತ್ರದಲ್ಲಿ ವೈರಲ್ ಆಗಿ ಕರೋನಾದ ವೈರಸ್ ತರಹ ಎಲ್ಲರ ಬಾಯಲ್ಲೂ ಗುಣುಗುಣಿಸಬೇಕು. ಇದರಲ್ಲಿ ಮಾನ ಮರ್ಯಾದೆಯ ಪ್ರಶ್ನೆಯೇ ಇಲ್ಲ!. ಇದೊಂದು ಕೆಟ್ಟ ಚಟವಾಗಿ ಮುಂದುವರಿದಿದೆ. ಇದು ಕೆಲವೇ ದಿವಸದಲ್ಲಿ ಮರೆತು ಹೋಗುವ ವಿಚಾರವಾದರೂ, ಜನಗಳಿಗೂ ಒಮ್ಮೆಗೆ ಕುರು ಕುರು ತಿಂಡಿ ಚಪ್ಪರಿಸಿ ತಿಂದಂತೆ ಮಾತಿನ ಮಂಡಿಗೆಗೆ ಒಂದು ಹೊಸ ಖಾದ್ಯ ದೊರಕಿದಂತಾಗುತ್ತದೆ. ಇದರ ಸತ್ಯಾ ಸತ್ಯತೆಯನ್ನು ವಿಮರ್ಶಿಸಲು ಯಾರೂ ಸಿಧ್ದರಿಲ್ಲ. ಯಾವುದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗಮನಕ್ಕೆ ಬಂದ ತಕ್ಷಣ ಹಿಂದು ಮುಂದು ಆಲೋಚಿಸದೆ ತಮ್ಮ ವಿವೇಚನೆಗೆ ನಿಲುಕಿದಂತೆ ಅದಕ್ಕೆ ಕಮೆಂಟ್ ಹಾಕಿ ಖುಷಿಪಡುವವರೇ ಹೆಚ್ಚು. ಅದರಲ್ಲೂ ಕೆಲವರಿಗೆ ಬಾಯಿಗೆ ಬಂದ ಹೊಲಸು ಶಬ್ದ ಉಪಯೋಗಿಸಿ ಬರೆದರೆ ಏನೋ ಹಾಲು ಪಾಯಸ ತಿಂದಷ್ಟು ಸಂತೋಷ. ಅದರಿಂದ ಪಡೆಯುವುದು ಏನೂ ಇಲ್ಲ. ಆದರೂ ವಿಷ ಕಾರುವುದರಲ್ಲಿ ಏನೋ ಒಂದು ವಿಕೃತ ಆನಂದ!. ಇದಕ್ಕೆ ಸಂಬಂಧಿಸಿದಂತೆ ಈಗ ಓಡಾಡುವ ಒಂದು ಸುದ್ದಿ ಗಮನಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿರುವ ಯಕ್ಷಗಾನದ ವಿಚಾರದಲ್ಲಿ “ಅದರ ಸ್ತ್ರೀ ಪಾತ್ರಧಾರಿಗಳು ಸಲಿಂಗ ಕಾಮಿಗಳು, ಭಾಗವತರಿಗೆ ಅವರು ಸಹಕರಿಸದೆ ಇದ್ದಲ್ಲಿ ಮುಂದಿನ ದಿವಸ ಅವರಿಗೆ ರಂಗದಲ್ಲಿ ಹೆಚ್ಚು ಮೆರೆಯಲು ಭಾಗವತರು ಅವಕಾಶ ಕೊಡುವುದಿಲ್ಲ” ಎಂಬ ಅಪವಾದ ಮತ್ತು ಅಪಸವ್ಯದ ಮಾತನ್ನು ಒಂದು ಉನ್ನತವಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ವಯೋವೃದ್ದರಾದ ಪ್ರೊ. ಬಿಳಿಮಲೆಯವರು ಹೇಳಿರುವುದು ಇದು ಇಡೀ ಯಕ್ಷಕಲಾ ವಲಯದಲ್ಲೇ ಎಲ್ಲೆಲ್ಲೂ ಚರ್ಚಿಸುವ ವಿಷಯವಾಗಿ ಸುದ್ದಿ ಮಾಡುತ್ತಿದೆ. ಈ ಮಾತುಗಳಿಂದ ಈ ಕಲೆಯಲ್ಲಿನ ಮೇರು ಕಲಾವಿದರು ಮುಖ್ಯವಾಗಿ ಭಾಗವತರು ಮತ್ತು ಎಲ್ಲಾ ಸ್ತ್ರೀ ವೇಷಧಾರಿಗಳು ಬೇಸರಗೊಂಡಿರುವುದು ಸ್ಪಷ್ಟ. ಇದನ್ನು ಹೇಳಿದವರು ಅವರ ಜೀವನದ ಏನೋ ಒಂದು ಘಟನೆಯನ್ನು ಆಧರಿಸಿ ಅಥವಾ ಯಾರೋ ಹೇಳಿದ್ದನ್ನು ಕೇಳಿ ಈ ಹೇಳಿಕೆ ಕೊಟ್ಟಿರಬಹುದು. ಆದರೆ ಯಾರೋ ಒಬ್ಬರು ಹಾಗಿದ್ದ ಮಾತ್ರಕ್ಕೆ ಆ ಅಪವಾದವನ್ನು ಎಲ್ಲರ ತಲೆಗೆ ಕಟ್ಟುವುದು ಯಾವ ನ್ಯಾಯ? ಹಾಗೆಂದು ಇದು ಸಾರ್ವಜನಿಕ ವೇದಿಕೆಯಲ್ಲಿ ಗಂಟಾಘೋಷವಾಗಿ ಹೇಳತಕ್ಕ ವಿಚಾರವೂ ಅಲ್ಲ ಮತ್ತು ಅಷ್ಟು ಔಚಿತ್ಯಪೂರ್ಣ ಸಂಗತಿಯೂ ಆಗಿರಲಿಲ್ಲ. ಆದರೆ ಪ್ರಾಯದೋಷವೂ, ಪ್ರಚಾರದ ಹುಚ್ಚೋ ಅಥವಾ ಜ್ಞಾನದ, ಪದವಿಯ ಅಹಂಕಾರದ ಪರಮಾವಧಿಯೋ ಎಂಬಂತೆ ಆ ಮನುಷ್ಯ ಮಾತಾಡಿರುವುದು ಖಂಡನೀಯ. ಯಾರೋ ಒಬ್ಬರಿಬ್ಬರ ವಿಚಾರ ಅವರು ಹೇಳಿದ ಆ ಗುಣ ಅದು ಕೇವಲ ಯಕ್ಷಗಾನ ಕ್ಷೇತ್ರದ ಮಂದಿಯ ಗುಣವಲ್ಲ. ಅದು ಇಡೀ ಜಗತ್ತಿನಲ್ಲಿರುವ ಮನುಷ್ಯನಲ್ಲಿ ಕೆಲವರಲ್ಲಿ ಇರಬಹುದಾದ ಆಂತರಿಕ ವ್ಯಕ್ತಿತ್ವ ಅಥವಾ ಕಾಣದ ದುರ್ಬಲತೆ. ಅದರಿಂದ ಇನ್ಯಾರಿಗೂ ಸಮಸ್ಯೆ ಇಲ್ಲ ಎಂದಾದರೆ ಅವರಿಂದ ಸಮಾಜಕ್ಕೆ ಯಾವುದೇ ಕೆಡುಕಿಲ್ಲ. ಆದರೆ ಅದನ್ನು ಕೇವಲ ಯಕ್ಷಗಾನದ ಕಲಾವಿದರಿಗೆ ಮಾತ್ರ ಎತ್ತಿ ಕಟ್ಟಿರುವುದು ಅಸಮಂಜಸ ಮತ್ತು ಖಂಡನೀಯ. ಹೀಗೆ ಹೇಳಿದ ವ್ಯಕ್ತಿ ಯಕ್ಷಗಾನ ಮಾಡಿದವರು, ಮಾಡಿಸಿದವರು ಎಲ್ಲವೂ. ಆದರೆ ಮೊನ್ನೆ ಎಲ್ಲವನ್ನೂ ಮರೆತು “ಎಲ್ಲಾ ಬಣ್ಣ ಮಸಿ ನುಂಗಿತು” ಎಂಬ ಹಾಗೇ ಒಟ್ಟಾರೆ ಒದರಿ ಬಿಟ್ಟರು!.
ಮನುಷ್ಯ ಎಂಬವನೇ ಹೀಗೆ ಹೊರಗೆ ಕಾಣುವುದೇ ಬೇರೆ. ಒಳಗೆ ಇರುವುದೇ ಬೇರೆ!. ಹರಿಕಥೆಯ ಮಹಾ ಮೇರು ಭದ್ರಗಿರಿ ಅಚ್ಯುತದಾಸರು ತಮ್ಮ ಕಥಾಕಿರ್ತನೆಯ ಸಂದರ್ಭ ಲೋಕ ನೀತಿಗಾಗಿ ಹೀಗೆ ಹೇಳುತ್ತಿದ್ದರು, ಒಮ್ಮೆ ಒಂದು ಊರಿನಲ್ಲಿನ ಪೋಲೀಸ್ ಅಧಿಕಾರಿಯ ವರ್ಗಾವಣೆಯಾಗಿ ಅವರನ್ನು ಬೀಳ್ಕೊಡುವ ಸಮಾರಂಭ ಊರಿನವರೆಲ್ಲರೂ ಸೇರಿ ಬೀಳ್ಕೊಡುವಾಗ ಅವರಿಗೆ ಸನ್ಮಾನ ಮಾಡಿ ಅಭಿನಂದನಾ ಭಾಷಣದಲ್ಲಿ, ಹಾಡಿ ಹೊಗಳಿ ಜನರ ಮನ ಮುಟ್ಟುವಂತೆ ಮಾತಾಡಿದರು. ಇವರು ಇಡೀ ಊರಿನ ಏಳಿಗೆಗಾಗಿ ದುಡಿದವರು, ಯಾವುದೇ ತಾರತಮ್ಯವಿಲ್ಲದೆ ತಪ್ಪಿ ನಡೆದ ಯಾರಿಗೇ ಆದರೂ ಕಾನೂನಿನಡಿಯಲ್ಲಿ ಶಿಕ್ಷೆ ಕೊಡಿಸಿದ ಜನಮೆಚ್ಚಿದ ನಿಜವಾದ ಹೀರೋ. ಇವರನ್ನು ಇದೇ ಠಾಣೆಯಲ್ಲಿ ಉಳಿಸಿಕೊಳ್ಳಲಾಗದಿದ್ದುದಕ್ಕೆ ಖೇದವಿದೆ ಎಂದರು. ಆಗ ವೇದಿಕೆಯಲ್ಲಿ ಉಪಸ್ಥಿತರಿದ್ದ ಹತ್ತಿರದ ಊರಿನವರು ಹತ್ತಿರದಲ್ಲಿ ಕುಳಿತವರಲ್ಲಿ ಪಿಸುಗುಟ್ಟಿದರಂತೆ, ಅಲ್ಲ ಅಂತಹ ನಿಯತ್ತಿನ ಶಿಸ್ತಿನ ಅಧಿಕಾರಿಯನ್ನು ಎಲ್ಲರೂ ಪ್ರಯತ್ನಿಸಿ ಇಲ್ಲೇ ಉಳಿಸಬಹುದಿತ್ತಲ್ವಾ?. ಮತ್ಯಾಕೆ ಟ್ರಾನ್ಸ್ ಫರ್ ಮಾಡಿಸಿದ್ದು ಎಂದು. ಆಗ ಆ ಹತ್ತಿರವಿದ್ದವರು ಹೇಳಿದರಂತೆ ವಿಷಯ ಹಾಗಲ್ಲ ಸ್ವಾಮಿ ಅದೇ ಅಭಿನಂದನಾ ಭಾಷಣ ಮಾಡಿದರಲ್ಲ ಅವರು ಸಾಕಷ್ಟು ಪ್ರಭಾವೀ ವ್ಯಕ್ತಿ. ಅವರೇ ಇಂಪ್ಲೂಯೆನ್ಸ್ ಮಾಡಿ ಈ ಅಧಿಕಾರಿಯನ್ನು ಬೇರೆಡೆ ಎತ್ತಂಗಡಿ ಮಾಡಿಸಿರುವುದು!. ಎಂದು. ಬಂಧುಗಳೇ ತಿಳಿಯಿರಿ ಇದೇ ನಮ್ಮ ಸಮಾಜ. ಯಾರನ್ನೂ ನಂಬಲು ಸಾಧ್ಯವಿಲ್ಲ. ಎದುರಿನಿಂದ ಕೇವಲ ಲೊಳಲೊಟ್ಟೆ ಒಳಗೊಳಗೆ ಕುತಂತ್ರದ ತಮಟೆ!.
ಬರಹ : ಶರತ್ ಶೆಟ್ಟಿ ಪಡುಪಳ್ಳಿ











































































































