ಬಂಟ ಸಮುದಾಯದ ಸಹೋದರರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಆಗಬಲ್ಲ ಸಮರ್ಥ ಸಾಧಕ ಶ್ರೀ ಹರೀಶ್ಚಂದ್ರ ಶೆಟ್ಟಿ ಅವರ ಜೀವನ ಪಯಣ ಇಂದಿನ ನವ ಯುವ ಜನಾಂಗಕ್ಕೆ ಮಾದರಿ ಆಗಬಲ್ಲುದು. ಅಗ್ನಿ ಶಾಮಕ ದಳದಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಸೇರಿಕೊಂಡ ಹರೀಶ್ಚಂದ್ರ ಶೆಟ್ಟಿ ಅವರು ಇತರರಿಗಿಂತ ಭಿನ್ನ ರೀತಿಯಲ್ಲಿ ಗುರುತಿಸಿಕೊಂಡು ಅಗ್ನಿ ಶಾಮಕ ದಳದಂತಹ ತುರ್ತು ಸೇವಾ ವಿಭಾಗದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರೆ ಅತಿಶಯದ ಮಾತಲ್ಲ. ಈ ವಿಭಾಗದಲ್ಲಿ ತನ್ನ ಸೇವಾ ತತ್ಪರತೆಯಿಂದ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿ ಹಂತ ಹಂತವಾಗಿ ಪದೋನ್ನತಿ ಹೊಂದುತ್ತಾ, ಗೌರವದ ಹುದ್ದೆಯನ್ನು ಹೊಂದಿದ ಸಾಧಕ ಹರಿಶ್ಚಂದ್ರ ಶೆಟ್ಟಿಯವರು ಬಂಟ ಸಮಾಜಕ್ಕೆ ನಿಜಾರ್ಥದ ಘನತೆ ತಂದ ಸಮಾಜ ಬಾಂಧವ.

1993 ರಿಂದ ಇವರ ಸೇವಾ ಅವಧಿಯಲ್ಲಿ ಅನೇಕ ಜವಾಬ್ದಾರಿ ಸ್ಥಾನವನ್ನು ನಿರ್ವಹಿಸುತ್ತಲೇ ಉನ್ನತ ಹಾಗೂ ಉಚ್ಛ ಸ್ಥಾನವನ್ನು ಅಲಂಕರಿಸಿದ ಕೀರ್ತಿ ಶೆಟ್ಟರದ್ದು. ಡೆಪ್ಯೂಟಿ ಚೀಫ್ ಆಫೀಸರ್ ಸ್ಥಾನವನ್ನು ಅಲಂಕರಿಸಿದ ಅಪರೂಪದ ಏಕಮೇವ ಬಂಟ ಬಾಂಧವ. ಅಗ್ನಿ ಶಾಮಕ ದಳದ ಉನ್ನತ ಸ್ಥಾನ ಜವಾಬ್ದಾರಿ ನಿರ್ವಹಣೆಯ ಜೊತೆ ಜೊತೆಗೆ ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅರ್ಥಪೂರ್ಣ ಸೇವೆ ಸರ್ವಜನ ಶ್ರುತವಾಗಿದ್ದು, ಓರ್ವ ಶಿಕ್ಷಣ ತಜ್ಞನಾಗಿಯೂ ಗಮನ ಸೆಳೆದಿದ್ದಾರೆ. 1993 ರಿಂದಲೇ ಶ್ರೀಯುತರು ಬಹು ಪ್ರತಿಷ್ಠಿತ ಅಭ್ಯುದಯ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸ್ಥಾನ ನಿರ್ವಹಿಸುತ್ತಾ, ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿ ಸಂಖ್ಯೆಯನ್ನು ಹೊಂದಿದ ಇಂಗ್ಲಿಷ್ ಮತ್ತು ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಜೂನಿಯರ್ ಕಾಲೇಜಿನ ಸಮರ್ಥ ನಿರ್ವಹಣೆಯಿಂದ ಕಾಲೇಜಿಗೆ ಪ್ರಸಿದ್ಧಿ ಪ್ರತಿಷ್ಠೆ ತಂದುಕೊಟ್ಟ ತುಳುವ ಬಂಟ ಬಂಧು ಶ್ರೀ ಹರೀಶ್ಚಂದ್ರ ಶೆಟ್ಟಿ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲಾರು ತನ್ನ ಮಾತೃಶ್ರೀ ಅವರ ಊರಾದರೆ ಶ್ರೀ ಜನಾರ್ಧನ ಸ್ವಾಮಿ ನೆಲೆ ನಿಂತ ಎರ್ಮಾಳು ಶ್ರೀಯುತರ ತೀರ್ಥರೂಪರ ಜನ್ಮಭೂಮಿ.
ಮಲ್ಲಾರು ಪಡುಮನೆ ರಾಜೀವಿ ಶೆಟ್ಟಿ ಹಾಗೂ ಎರ್ಮಾಳು ದೇರಪ್ಪ ಶೆಟ್ಟಿ ಮನೆ ರಾಘು ಎಸ್ ಶೆಟ್ಟಿ ದಂಪತಿಯರ ಮುದ್ದಿನ ಮಗ ಹರೀಶ್ಚಂದ್ರ ದಂಪತಿಯ ಯಶೋ ಕೀರ್ತಿ ಬೆಳಗಿದ ಸತ್ಸಂತಾನವೂ ಹೌದು. ಧರ್ಮಪತ್ನಿ ಬ್ಯಾಂಕ್ ಆಫ್ ಬರೋಡ ಉದ್ಯೋಗಿ ನವೀನ ಎಚ್ ಶೆಟ್ಟಿ ಹಾಗೂ ಇಬ್ಬರು ಮುದ್ದು ಹೆಣ್ಣು ಮಕ್ಕಳೊಂದಿಗೆ ಸುಖಿ ಸಂಸಾರ ಹೊಂದಿರುವ ಶ್ರೀಯುತರ ಭವಿಷ್ಯ ಜೀವನ ಆರೋಗ್ಯ, ಸಮೃದ್ಧಿ ಹಾಗೂ ನೆಮ್ಮದಿಯಿಂದ ಕೂಡಿರಲೆಂಬುದೇ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಶುಭ ಹಾರೈಕೆಗಳು.
ಬರಹ : ಅರುಣ್ ಶೆಟ್ಟಿ ಎರ್ಮಾಳ್, ಗೌರವ ಸಂಪಾದಕರು











































































































