ಆಕೆ ಮನೆಯ ಯಜಮಾನಿ. 60ರ ಹರೆಯ. ಬಂದಾಕೆ ತೋರಿಸಿದ್ದು ತನ್ನ ಕೈಯ ಬೆರಳುಗಳನ್ನು. ಬಲದ ಕೈಯ ಮೂರು ಉಗುರುಗಳು ಕಪ್ಪಾಗಿದ್ದವು. ಅದರ ಸುತ್ತ ಬಾತುಕೊಂಡಿತ್ತು. ಒಂದರಲ್ಲಿ ಸ್ವಲ್ಪ ಕೀವು. ತುಂಬಾ ನೋವು ಯಾಕೆ ಹೀಗೆ? ಎಂದು ಕೇಳಿದಳು. ಇದೊಂದು ಸಾಮಾನ್ಯ ತೊಂದರೆ ಮತ್ತು ಸಾಮಾನ್ಯ ಪ್ರಶ್ನೆ. ಪಾತ್ರೆ ತೊಳೆಯುವ ಸಾಬೂನು ಬದಲಾಯಿಸಿದೆ. ವ್ಯತ್ಯಾಸವಿಲ್ಲ. ಈ ಸಂಭಾಷಣೆಯ ಮುಂದುವರಿದ ಭಾಗ ಹೀಗೆಯೇ ಇರುತ್ತದೆ. ಉಗುರು ಸುತ್ತು ಎನ್ನುವ ಹೆಸರಿನಲ್ಲಿ ಹಲವು ಅಂಶಗಳು ಅಡಗಿವೆ. ಉಗುರಿನ ಸುತ್ತ ಬರುವ ಸೋಂಕು ಇದು. ಉಗುರಿನ ಸುತ್ತಲಿನ ಚರ್ಮ ಮತ್ತು ಅಂಗಾಂಶ ದಪ್ಪವಾಗಿ ಕೆಂಪಾಗುತ್ತದೆ. ಕೀವು ತುಂಬಿಕೊಂಡು ಬಹಳ ವೇದನೆ ಇರಬಹುದು. ಉಗುರಿನ ಬಣ್ಣ ಕ್ರಮೇಣ ಬದಲಾಗಿ ಹಳದಿ ಅಥವಾ ಬದಿಗಳಲ್ಲಿ ಆಕಾರವೇ ಬದಲಾಗಿ ಸೊಟ್ಟಗಾಗಿ ಬಿಡಬಹುದು. ಹೆಚ್ಚಾಗಿ ಇದು ಕಂಡುಬರುವುದು ಮಹಿಳೆಯರಲ್ಲಿ ಮತ್ತು ಹೋಟೆಲಿನ ಮಾಣಿಗಳಲ್ಲಿ.

ಕಾರಣ? : ಉಗುರು ಸುತ್ತಿನ ಮುಖ್ಯ ಕಾರಣವೇ ಬೆರಳುಗಳಲ್ಲಿ ಸದಾ ನೀರಿನ ಪಸೆ ಇರುವುದು. ಮನೆಯಲ್ಲಿ ಮಹಿಳೆಯರ ಅತ್ಯಂತ ಪ್ರಾಮುಖ್ಯ ಕೆಲಸವೇ ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು ಮತ್ತು ಇನ್ನಿತರ ನೀರಿನ ಜೊತೆಗಿನ ಕೆಲಸಗಳು. ಇದರಿಂದಾಗಿ ಕೈ ಬೆರಳುಗಳು ಯಾವತ್ತಿಗೂ ಒದ್ದೆ ಆಗಿರುತ್ತದೆ. ಇದೇ ಅತ್ಯಂತ ಪ್ರಮುಖ ಕಾರಣ. ನನ್ನ ಹೆಂಡತಿಗೆ ಸ್ವಚ್ಛವಾಗಿಡುವುದೇ ಒಂದು ಹುಚ್ಚು. ಯಾವತ್ತೂ ತೊಳೆಯುತ್ತಿರುತ್ತಾಳೆ. ಈಗ ಮನೆಯಲ್ಲಿ ಎಲ್ಲವೂ ಸ್ವಚ್ಛ, ಒಪ್ಪ ಓರಣವಾಗಿದೆ. ಆದರೆ ಅವಳ ಬೆರಳು ನೋಡುವಾಗ ಅಸಹ್ಯವಾಗುತ್ತದೆ. ಅದೇ ಆಕೆಗೆ ಬೇಸರ. ಗಂಡಂದಿರ ಸಾಮಾನ್ಯ ಅಳಲು ಹೀಗೆಯೇ.
ಪರಿಹಾರ : ಯಾವುದೇ ಸಾಮಾನ್ಯ ಪರಿಹಾರ ಉಪಾಯಗಳಿಗೆ ಉಗುರು ಸುತ್ತು ಪ್ರತಿಕ್ರಿಯಿಸುವುದಿಲ್ಲ. ಉಗುರಿನ ಸುತ್ತಲಿನ ಉರಿಯೂತ, ಬೀಗು, ಕೆಂಪಾಗುವುದು, ಕೀವು ತುಂಬುವುದು ಮತ್ತು ನೋವು ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಪಾತ್ರೆ ತೊಳೆಯುವ ರೀತಿ, ಉಪಯೋಗಿಸುವ ಸೋಪು ಬದಲಾಯಿಸಿದರೂ ಯಾವುದೇ ಉಪಯೋಗ ಕಾಣುವುದಿಲ್ಲ. ಕೊನೆಗೆ ಆ ಉಗುರನ್ನೇ ತೆಗೆಯಬೇಕೆಂದು ಅಭಿಪ್ರಾಯ ವೈದ್ಯರಿಂದ ಬಂದಾಗ ಈ ಎಲ್ಲಾ ಮಹಿಳೆಯರು ಹೌಹಾರಿ ಬಿಡುತ್ತಾರೆ. ಒಲ್ಲದ ಮನಸ್ಸಿನಿಂದ ಬೇರೆ ದಾರಿ ಇಲ್ಲದೆ ಉಗುರನ್ನು ತೆಗೆದರೂ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಪರಿಹಾರ ಇಲ್ಲವೇ ಎಂದು ಬೇಸರಿಸಿ ಕುಳಿತಾಗ ಕಾಣುವ ಭರವಸೆ ಹೋಮಿಯೋಪಥಿ ಚಿಕಿತ್ಸೆ.
ವಹಿಸಬೇಕಾದ ಮುಂಜಾಗ್ರತೆ : ಉಗುರು ಸುತ್ತುವಿಗೆ ವಹಿಸಬೇಕಾದ ಮುಂಜಾಗ್ರತೆ ಕೇವಲ ಒಂದೇ ಒಂದು. ಬೆರಳುಗಳನ್ನು ಒದ್ದೆಯಾಗಿರದಂತೆ ನೋಡಿಕೊಳ್ಳುವುದು ಇದು ಅಸಾಧ್ಯ ಎಂದು ತಳ್ಳಿ ಹಾಕದಿರಿ. ಮನೆಯ ಹೆಂಗಸರಂತೂ ಅದು ಹೇಗೆ ಸಾಧ್ಯ ಎಂದು ಉದ್ಗರಿಸಬಹುದು. ಕೈಗೆ ಗ್ಲೋವ್ಸ್ ಹಾಕುವುದು ಒಂದು ಪರಿಹಾರವಾದರೂ ಬಹಳ ದಿನ ಇದು ಮುಂದುವರೆಯುವುದಿಲ್ಲ. ಗ್ಲೋವ್ಸ್ ಹಾಕುವುದು ಮತ್ತು ತೆಗೆಯುವುದು ಒಂದು ಕೆಲಸವಾದರೆ, ಪಾತ್ರೆ ತೊಳೆಯುವುದು ಸಲೀಸಾಗುವುದೂ ಇಲ್ಲ ಮತ್ತು ತೊಳೆದಂತೆ ಅನಿಸುವುದೂ ಇಲ್ಲ ಅನ್ನುವುದು ಇವರೆಲ್ಲರ ಅಭಿಪ್ರಾಯ. ಅದಕ್ಕಾಗಿ ಈ ಕೆಳಗಿನ ರೀತಿಯನ್ನು ಅಳವಡಿಸಬಹುದು. ಮನೆಯ ಎಲ್ಲಾ ತೊಳೆಯುವ ನೀರಿನಲ್ಲಿ ಕೆಲಸ ಮಾಡುವ ಚಟುವಟಿಕೆಗಳಲ್ಲಿ ಮೂರು ಪಾಲು ಮಾಡಿಕೊಳ್ಳಬೇಕು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ/ ರಾತ್ರಿ. ಈ ಮೂರು ಸಲ ಮಾತ್ರ ತೊಳೆಯುವ ಚಟುವಟಿಕೆ ಮಾಡಬೇಕು. ಕಂಡಾಗ ಕಂಡಾಗ ತೊಳೆಯುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು. ತೊಳೆದ ಕೂಡಲೇ ಕೈಯನ್ನು ಬಟ್ಟೆಯಲ್ಲಿ ಒರೆಸಿ ಒಣಗಿಸಿಕೊಳ್ಳಬೇಕು. ಇದರ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಹೋಮಿಯೋಪಥಿ ಔಷಧಿಯನ್ನು ತಜ್ಞ ವೈದ್ಯರ ಮೇರೆಗೆ ಸೇವಿಸಿದಲ್ಲಿ ಉಗುರು ಸುತ್ತು ಬಾರದಂತೆ, ಉಗುರು ತೆಗೆಯದೆ ಉಗುರು ಕಪ್ಪಾಗದೆ ಸಂಪೂರ್ಣವಾಗಿ ಗುಣವಾಗಿ ಬಿಡುತ್ತದೆ.
ಬರಹ : ಡಾ. ಪ್ರವೀಣ್ ರಾಜ್ ಆಳ್ವ
9448483214







































































































