ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಬೈ ವಿ.ಕೆ ಸಮೂಹ ಸಂಸ್ಥೆಯ ಛೇರ್ಮನ್ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ರಂಗಚಾವಡಿ ಸಂಸ್ಥೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಂಸ್ಥೆ. ಅನೇಕ ಕಲಾವಿದರನ್ನು ಗುರುತಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ರಂಗಚಾವಡಿ ಸಂಸ್ಥೆಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ರಂಗಚಾವಡಿ ಅಕಾಡೆಮಿಯನ್ನಾಗಿ ರಚಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಮಾತನಾಡಿ, ರಂಗಚಾವಡಿ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಇದರ ಕಾರ್ಯಚಟುವಟಿಕೆ ಇದೇ ರೀತಿ ಮುಂದುವರಿಯಲಿ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ರಂಗಚಾವಡಿ ಸಂಸ್ಥೆ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕೆಲಸ. ನವೀನ್ ಪಡೀಲ್ ರಂತಹ ಮೇರು ನಟನಿಗೆ ರಂಗಚಾವಡಿ ಪ್ರಶಸ್ತಿ ಬಂದಿರುವುದು ಅತೀವ ಸಂತಸ ತಂದಿದೆ ಎಂದರು. ಉದ್ಯಮಿ ಗಿರೀಶ್ ಎಂ ಶೆಟ್ಟಿ ಮಾತನಾಡಿ, ನವೀನ್ ಪಡೀಲ್ ಮುಗ್ದ ಮನಸ್ಸಿನ ಪ್ರತಿಭಾವಂತ ಕಲಾವಿದ. ಸದಾ ಹಸನ್ಮುಖಿಯಾಗಿರುವ ನವೀನ್ ಕಷ್ಟ ಮತ್ತು ಸುಖಗಳನ್ನು ಸಮಾನವಾಗಿ ಸ್ವೀಕರಿಸಿದ್ದಾರೆ. ತುಳು ರಂಗಭೂಮಿಗೆ ಅವರ ಕೊಡುಗೆ ದೊಡ್ಡದಿದೆ ಎಂದರು.
ವೇದಿಕೆಯಲ್ಲಿ ಡಾ. ಸಂಜೀವ ದಂಡೆಕೇರಿ, ಕಿಶೋರ್ ಡಿ ಶೆಟ್ಟಿ, ಕರ್ನೂರು ಮೋಹನ್ ರೈ, ವಸಂತ ಶೆಟ್ಟಿ, ಈಶ್ವರ್ ಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್, ಭವಾನಿ ಶಂಕರ್ ಶೆಟ್ಟಿ ಬಾಳ, ರಮೆಶ್ ಶೆಟ್ಟಿ ಸುಭಾಷಿತನಗರ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಎಂ ದೇವಾನಂದ ಶೆಟ್ಟಿ, ಸುಧಾಕರ ಎಸ್ ಪೂಂಜ, ಉಲ್ಲಾಸ್ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗುರಂಗಿನ ರಂಗೋತ್ಸವ ಹಾಸ್ಯ ಕಾರ್ಯಕ್ರಮ ಜರಗಿತು.







































































































