2025-26ನೇ ಸಾಲಿನ ಕರ್ನಾಟಕ ರಣಜಿ ತಂಡದ ಪ್ರಕಟಣೆಯೊಂದಿಗೆ ಕುಂದಾಪುರವು ಇತಿಹಾಸವನ್ನು ನಿರ್ಮಿಸಿದೆ. ಅಭಿಲಾಶ್ ಶೆಟ್ಟಿಯವರ ಜೊತೆಗೆ ಕುಂದಾಪುರದ ಪ್ರತಿಭಾವಂತ ಕ್ರಿಕೆಟಿಗ ಶಿಖರ್ ಶೆಟ್ಟಿ ಈ ಬಾರಿಯ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಶಿಖರ್ ಶೆಟ್ಟಿ, ರಾಜ್ಯ ಕ್ರಿಕೆಟ್ ವಲಯದಲ್ಲಿ ತನ್ನ ನಿರಂತರ ಸಾಧನೆಯಿಂದಲೇ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಕಳೆದ ಕೆಲವು ಸೀಸನ್ಗಳಲ್ಲಿ ಅವರ ಪ್ರದರ್ಶನ ವಿಶಿಷ್ಟವಾಗಿತ್ತು. ಶಿಖರ್ ಶೆಟ್ಟಿ ಅವರು ಕುಂದಾಪುರದ ರಾಜೇಶ್ ಶೆಟ್ಟಿ ಹಾಗೂ ವಚನಾ ಶೆಟ್ಟಿ ಅವರ ಪುತ್ರರು. ಅವರ ತಂದೆ ರಾಜೇಶ್ ಶೆಟ್ಟಿ ಜನ್ನಾಡಿ ಕರಾವಳಿ ಕುಂದಾಪುರ ತಂಡದ ಪರವಾಗಿ ಅತ್ಯುತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ “HOY ಕ್ರಿಕೆಟರ್ಸ್” ತಂಡವನ್ನು ಸ್ಥಾಪಿಸಿ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದರು. ಶಿಖರ್ ಶೆಟ್ಟಿ ಪ್ರಸ್ತುತ ಬೆಂಗಳೂರು ಆಧಾರಿತ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ರಾಜ್ಯದ ವಿವಿಧ ವಯೋಮಾನದ ಪಂದ್ಯಗಳಲ್ಲಿ ತಮ್ಮ ಎಡಗೈ ಸ್ಪಿನ್ ಬೌಲಿಂಗ್ ಕೌಶಲ್ಯದಿಂದ ಹೆಸರು ಮಾಡುತ್ತಿದ್ದಾರೆ.

ನಿಖರ ಲೈನ್ ಮತ್ತು ವೈವಿಧ್ಯಮಯ ಶೈಲಿಯ 20 ವರ್ಷದ ಶಿಖರ್ ಶೆಟ್ಟಿ ಅಂಡರ್–19, ಅಂಡರ್–21 ಹಾಗೂ ಅಂಡರ್–23 ವಿಭಾಗಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಅವರ ನಿಖರ ಲೈನ್ ಮತ್ತು ಲೆಂಗ್ತ್ ಹಾಗೂ ವಿಭಿನ್ನ ಬೌಲಿಂಗ್ ಶೈಲಿ ಅವರಿಗೆ ವಿಶೇಷತೆ ನೀಡಿದೆ. ಶಿಖರ್ ಶೆಟ್ಟಿ ಅವರು ಅಂಡರ್–16 ವಿಜಯ್ ಮರ್ಚೆಂಟ್ ಟ್ರೋಫಿ (2019–2020) ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಬಳಿಕ ಅಂಡರ್–19 ಕೂಚ್ ಬಹಾರ್ ಟ್ರೋಫಿ (2021–22, 2023–24) ಮತ್ತು ವಿನೂ ಮಂಕಡ್ ಟ್ರೋಫಿ (2023–24) ಗಳಲ್ಲಿ ರಾಜ್ಯದ ಪರವಾಗಿ ಆಡಿದ್ದಾರೆ. ಪ್ರಸ್ತುತ ಅವರು ಅಂಡರ್–23 ಕರ್ನಾಟಕ ತಂಡ (2024–2025)ಕ್ಕೂ ಆಯ್ಕೆಯಾಗಿದ್ದಾರೆ. ಅವರ ಪ್ರದರ್ಶನ ಕೇವಲ ಆಯ್ಕೆ ಮಟ್ಟದಲ್ಲಿ ಸೀಮಿತವಾಗದೆ, ಹಲವು ಪ್ರಮುಖ ಟೂರ್ನಮೆಂಟ್ಗಳಲ್ಲಿ ಅಗ್ರ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅಂಡರ್– 19 ಇಂಟರ್ ಝೋನಲ್ ಟೂರ್ನಮೆಂಟ್ (2023–24)ನಲ್ಲಿ ಅವರು ಬೆಂಗಳೂರು ಸಿಟಿ 11 ಪರವಾಗಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಹಾಗೂ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಮೆಂಟ್ ನಲ್ಲಿ KSCA ಸೇಕ್ರೆಟರಿ 11 ಪರವಾಗಿ ಕೇವಲ ನಾಲ್ಕು ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅದೇ ರೀತಿ, ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರವಾಗಿ ಆಡಿದ ಅಂಡರ್–19 ಇಂಟರ್ ಕ್ಲಬ್ ಟೂರ್ನಮೆಂಟ್ನಲ್ಲಿ ಅವರು ತಂಡವನ್ನು ವಿಜೇತರನ್ನಾಗಿ ಮುನ್ನಡೆಸಿ, ತಾವೇ ಅತ್ಯಧಿಕ ವಿಕೆಟ್ ಟೇಕರ್ ಆಗಿ ಗೌರವ ಪಡೆದರು. ಅವರ ಪ್ರಮುಖ ಸಾಧನೆಗಳಲ್ಲಿ ಒಂದಾದ BCCI ಆಯೋಜಿಸಿದ್ದ ಅಂಡರ್–19 ಕೂಚ್ ಬಹಾರ್ ಆಲ್ ಇಂಡಿಯಾ ಟ್ರೋಫಿ (2023–24)ನಲ್ಲಿ ಕರ್ನಾಟಕವನ್ನು ವಿಜಯಶಾಲಿಯಾಗಿ ಮುನ್ನಡೆಸಿದ್ದಾರೆ.
ಡಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಮೆಂಟ್ (2025–26)ನಲ್ಲಿ ಶಿಖರ್ ಶೆಟ್ಟಿ ಕೇವಲ 3 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸುವ ಮೂಲಕ ನಾಲ್ಕನೇ ಅಗ್ರ ವಿಕೆಟ್ ಟೇಕರ್ ಆಗಿ ಹೊರ ಹೊಮ್ಮಿದರು. ವಿಶೇಷವಾಗಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ ಅಪರೂಪದ ಸಾಧನೆ ಅವರದ್ದು. ಇದೇ ವೇಳೆ, ಅಂಡರ್–23 ಇಂಟರ್ ಝೋನಲ್ ಕ್ರಿಕೆಟ್ ಟೂರ್ನಮೆಂಟ್ (2025–26)ನಲ್ಲಿ ಅವರು ಎರಡನೇ ಅಗ್ರ ವಿಕೆಟ್ ಟೇಕರ್ ಆಗಿ ಮೆರೆದಿದ್ದಾರೆ. ಮೈಸೂರು ವಾರಿಯರ್ಸ್ ಪರವಾಗಿ T20 ಲೀಗ್ನಲ್ಲಿ ಮೆರೆದ ಪ್ರತಿಭೆ ಶಿಖರ್ ಶೆಟ್ಟಿ ಈ ವರ್ಷ ಮೈಸೂರು ವಾರಿಯರ್ಸ್ ಪರವಾಗಿ ಮಹಾರಾಜಾ T20 ಕಪ್ (2025–26) ನಲ್ಲಿ ತಮ್ಮ ಪ್ರತಿನಿಧಿಯನ್ನು ನೀಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನದಿಂದ ಮೈಸೂರು ವಾರಿಯರ್ಸ್ ತಂಡಕ್ಕೆ ಪ್ರಮುಖ ಶಕ್ತಿ ದೊರಕಿತು. ತನ್ನ ಶ್ರಮ, ನಿಷ್ಠೆ ಮತ್ತು ನಿರಂತರ ಸಾಧನೆಯಿಂದ ರಾಜ್ಯದ ವಿವಿಧ ಮಟ್ಟದ ಕ್ರಿಕೆಟ್ನಲ್ಲಿ ಶಾಶ್ವತ ಸ್ಥಾನ ನಿರ್ಮಿಸಿಕೊಂಡಿರುವ ಶಿಖರ್ ಶೆಟ್ಟಿ, ಭವಿಷ್ಯದಲ್ಲಿ ಕರ್ನಾಟಕದ ಹಿರಿಯ ತಂಡದ ಪ್ರಮುಖ ಸ್ಪಿನ್ನರ್ ಆಗಿ ರಾಷ್ಟ್ರ ಮಟ್ಟದಲ್ಲಿ ಸ್ಟಾರ್ ಆಗಿ ಮೆರೆಯುವ ಸಾಧ್ಯತೆ ಇದೆ.