ಸಮಾಜದ ಹಿತಕ್ಕಾಗಿ ಶ್ರಮಿಸುವ ಅನಾಯಾಸ ರಂಗಕಲಾವಿದ, ಕ್ರೀಡಾ ಸ್ಪೂರ್ತಿ, ಸಾಹಿತ್ಯ ಸಾಂಸ್ಕೃತಿಕ ನಿರ್ದೇಶಕ, ಸಮಾಜಮುಖಿ ಬೆಳವಣಿಗೆಯ ಹರಿಕಾರ, ಸಂಘಟನೆ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಟಿಯಿಲ್ಲದ ಹೆಜ್ಜೆಯಿಟ್ಟ ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ಹೆಮ್ಮೆಯ ವ್ಯಕ್ತಿತ್ವ ಮೋಹನದಾಸ್ ರೈ ಎರುಂಬು ಅವರದ್ದು. ಸಿರಿಬಾಗಿಲು ಕಜೆ ಮುತ್ತಣ್ಣ ರೈ ಹಾಗೂ ಯಮುನಾ ರೈ (ಸೂರಂಬೈಲ್ ಬಾರಿಕೆ) ದಂಪತಿಗಳ ಸುಪುತ್ರರಾಗಿ, ಕಾನತಡ್ಕ ಮತ್ತು ಮಾಡತಡ್ಕ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆ ಹಾಗೂ ಜನತಾ ಪ್ರೌಢ ಶಾಲೆ ಅಡ್ಯನಡ್ಕದಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣದ ಹೊತ್ತಲ್ಲೇ ನಾಯಕತ್ವದ ಚುಕ್ಕಾಣಿ ಹಿಡಿದು ವಿದ್ಯಾರ್ಥಿ ನಾಯಕನಾಗಿ ವಿದ್ಯಾರ್ಥಿಗಳಿಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಬಿ.ಕಾಂ ಪದವಿಯನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಮುಗಿಸಿ, ತನ್ನೂರಿಗೆ ಬಸ್ಸಿನ ವ್ಯವಸ್ತೆಯಲ್ಲಿಯ ಅಡಚಣೆಗೆ ನ್ಯಾಯ ಒದಗಿಸಿಕೊಟ್ಟವರು. ಬಾಲ್ಯದಲ್ಲಿಯೇ ಭಜನೆ ಮತ್ತು ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರೈಯವರು 9 ನೇ ತರಗತಿಯಲ್ಲಿರುವಾಗಲೇ ಎರುಂಬಿನಲ್ಲಿ “ದಿವ್ಯಜ್ಯೋತಿ ಮಿತ್ರ ವೃಂದ” ಎಂಬ ಸಂಘವನ್ನು ಸ್ಥಾಪಿಸಿದರು. ಯುವಕರ ಮನ ಸೆಳೆದು ಸಂಘಟಿಸಿ, ಊರು, ಗ್ರಾಮ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕಬಡ್ಡಿ, ಕ್ರಿಕೆಟ್, ವಾಲಿಬಾಲ್ ಪಂದ್ಯಾಟಗಳನ್ನು ಆ ಕಾಲದಲ್ಲೇ ಸಂಘಟಿಸಿ, ಯುವ ಕ್ರೀಡಾ ಪಟುಗಳಿಗೆ ಅವಕಾಶ ಮಾಡಿಕೊಟ್ಟರು. ಯುವಕರ ಕಬಡ್ಡಿ, ವಾಲಿಬಾಲ್ ಪಂದ್ಯಾಟ ಆಯೋಜಿಸಿ ಶಿಸ್ತಿನಿಂದ ನಡೆಸಿದರು. ವಿಟ್ಲ ಕಾಲೇಜಿನಲ್ಲಿ ಕಬಡ್ಡಿ ಆಟಗಾರನಾಗಿ, ಸಂತ ಫಿಲೋಮಿನಾ ಕಾಲೇಜಿನ ಕಬಡ್ಡಿ ಆಟಗಾರನಾಗಿ, 1989 ರಲ್ಲಿ “ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ಕ್ರೀಡಾಪಟು”ವಾಗಿ ಆಯ್ಕೆಯಾದರು. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕಬಡ್ಡಿ ಆಟಗಾರರಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ನಾಟಕ ರಂಗದಲ್ಲಿ ತನ್ನೂರ ಪ್ರತಿಭೆಗಳ ಜೊತೆ ಖಳನಾಯಕ, ಕಥಾನಾಯಕ, ದುರಂತ ನಾಯಕರ ಪಾತ್ರಗಳನ್ನು ಮಾಡುತ್ತಾ, ಯುವ ನಾಟಕ ಕಲಾವಿದರ ಸೃಷ್ಟಿಗೆ ಕಾರಣರಾದರು. ನಾಟಕ ನಿರ್ದೇಶಕನಾಗುವುದಲ್ಲದೆ ಹಲವಾರು ರಂಗ ಕರ್ಮಿಗಳ ಪ್ರಶಂಸೆಗೊಳಗಾದ “ಮಸಣದ ಪೂ, ಕಲ್ಜಿಗದ ಕರ್ಣೆ, ಧರ್ಮ ನೇಮ” ನಾಟಕಗಳನ್ನು ರಚಿಸಿ ಹೆಗ್ಗಳಿಕೆಗೆ ಪಾತ್ರರಾದರು. ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದ ಭಜನಾ ಮಂಡಳಿಯ ನಾಯಕತ್ವವನ್ನು ವಹಿಸಿಕೊಂಡು ಪುಟ್ಟ ಮಕ್ಕಳಿಗೂ ಭಜನಾ ಆಸಕ್ತಿ ಮೂಡಿಸಿದರು. ಕಾಲೇಜು ಅವಧಿಯಿಂದಲೇ ಯಕ್ಷಗಾನದ ಹವ್ಯಾಸಿ ಹಾಸ್ಯ ಕಲಾವಿದನಾಗಿ ಮಿಂಚಿದ ಹೆಮ್ಮೆ ಇವರದ್ದು. ತನ್ನ ಸ್ವಂತ ಹಣದಿಂದ ಎರುಂಬು ಪರಿಸರದ ಮಕ್ಕಳಿಗೆ 2 ವರ್ಷ ಯಕ್ಷಗಾನ ತರಬೇತಿ ನೀಡುವುದಲ್ಲದೆ, ಇಂದು ದಿವ್ಯ ಜ್ಯೋತಿ ಯಕ್ಷ ವೃಂದದ ಹೆಸರಲ್ಲಿ ಆಸಕ್ತ ಯಕ್ಷ ಪಟುಗಳಿಗೆ ನಾಟ್ಯ ಕಲಿಕಾ ಕೇಂದ್ರ ನಡೆಯುತ್ತಿದೆ. ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನ ಹಾಗೂ ಎರುಂಬು ಶ್ರೀ ಶಂಕರ ನಾರಾಯಣ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಮುಂದಾಳತ್ವ ವಹಿಸಿಕೊಂಡು ಅಪರಿಮಿತ ಊರವರ ಒಗ್ಗೂಡಿಸಿ ದೇವಾಲಯದ ಪೂರ್ಣತೆಗೆ ಕಾರಣರಾದರು.
ರಾಜಕೀಯ ಕ್ಷೇತ್ರದಲ್ಲಿ ಪಣ ತೊಟ್ಟು 5 ವರ್ಷಗಳ ಕಾಲ ಅಳಿಕೆ ಗ್ರಾಮ ಪಂಚಾಯತ್ ಸದಸ್ಯರಾಗಿ ಗ್ರಾಮದ ಮೂಲಭೂತ ಸೌಲಭ್ಯ ಮಾಡಿಕೊಟ್ಟು, ಜನಸೇವೆ ಮಾಡಿದ ನಿಷ್ಠಾವಂತ ರಾಜಕಾರಣಿಯೂ ಆಗಿದ್ದಾರೆ. ಬಹರೈನ್ ದೇಶದಲ್ಲಿ ಕಳೆದ 10 ವರ್ಷಗಳಿಂದ ಕನ್ನಡ ಸಂಘದ ಕಾರ್ಯಕರ್ತನಾಗಿ, ತನ್ನದೇ ಆದ “ಅಮ್ಮ ಕಲಾವಿದರು” ಎನ್ನುವ ಸಮೂಹವನ್ನು ಕಟ್ಟಿಕೊಂಡು ಅದರ ಮೂಲಕ ನಾಟಕ, ಯಕ್ಷಗಾನ, ಭಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದವರು. ತನ್ನವರ ಸಂಕಷ್ಟ ನಿವಾರಣೆಗೆ ಹೊರದೇಶದಲ್ಲಿ ಕಾರ್ಯಕ್ರಮ ಮಾಡಿ ಉಳಿದ ಹಣವನ್ನು ಸದ್ವಿನಿಯೋಗ ಮಾಡಿ ಬಡವರ ಗೃಹ ನಿರ್ಮಾಣಕ್ಕೆ, ವಿವಾಹ ಭಾಗ್ಯಕ್ಕೆ ಸಹಕಾರಿಯಾಗಿದ್ದಾರೆ. ತನ್ನ ತಾಯ್ನಾಡಿನ ಅದೆಷ್ಟೋ ಕಲಾವಿದರನ್ನು ಬಹರೈನ್ ದೇಶಕ್ಕೆ ಕರೆತಂದು ಅವರ ಕೀರ್ತಿ ಹೆಚ್ಚಿಸಿದ ಹಿರಿಮೆಯ ಮುತ್ತಾಗಿ, ಬಹರೈನ್ ಪಟ್ಲ ಫೌಂಡೇಶನ್ ನ ಸಂಘಟನಾ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಹರೈನ್ ನ ಬಂಟರ ಸಂಘದ ಅಧ್ಯಕ್ಷರಾಗಿ 2020 ರಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ನಂತಹ ಕಷ್ಟದ ಸಮಯದಲ್ಲೂ ಬಹರೈನ್ ಬಂಟರ ಸಂಘದ ಅಧ್ಯಕ್ಷರಾಗಿ, ಬಡವರಿಗೆ ಆಹಾರ ಒದಗಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರರಾದರು. ಸಮಯೋಚಿತ ಹೊಸ ಕಾರ್ಯಕ್ರಮಗಳ ಕ್ರಿಯಾಶೀಲತೆ, ಹಾಗೇ ಸಾಂಧರ್ಭಿಕ ಧೈರ್ಯದ ನಿರ್ಧಾರಗಳು ಇವರ ವ್ಯಕ್ತಿತ್ವಕ್ಕೆ ಶೋಭೆಯಾಗಿದೆ. ಸಮಾಜ ಸೇವೆಯೇ ಉಸಿರಾಗಿಸಿಕೊಂಡ ಇವರು ಧರ್ಮಪತ್ನಿ ಜಯಲಕ್ಷ್ಮಿ, ಹಾಗೂ ಮಕ್ಕಳಾದ ದಿವ್ಯಧನುಷ್ ಮತ್ತು ದಿವ್ಯನಿಧಿ ರೈ ಜೊತೆಗೆ ಸುಂದರ ಜೀವನ ಪಯಣ ಸಾಗಿಸುತ್ತಿದ್ದಾರೆ. ಮಗ ದಿವ್ಯಧನುಷ್ ಭಾರತ, ಬಹರೈನ್ ಮತ್ತು ಜರ್ಮನಿಯ ಕನ್ನಡ ಸಂಘದಲ್ಲಿಯೂ ಕೊಳಲು ವಾದನ ಮಾಡಿ ಅತ್ಯಂತ ಜನಪ್ರಿಯತೆ ಗಳಿಸಿದ್ದಾರಲ್ಲದೆ, ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಗಳು ದಿವ್ಯನಿಧಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ದೇಶ ವಿದೇಶಗಳಲ್ಲಿ ಹೆಸರು ವಾಸಿಯಾಗಿದ್ದಾಳೆ. ತಂದೆಗೆ ತಕ್ಕ ಮಕ್ಕಳಂತೆ ಕೀರ್ತಿ ತಂದಿರೋದು ಬಹಳಷ್ಟು ಸಂತಸದ ವಿಷಯ. ಪ್ರಸ್ತುತ ಮೋಹನ್ ದಾಸ್ ರೈಯವರು ತನ್ನ ತಾಯ್ನಾಡಿಗೆ ಮರಳಿ ವಿದೇಶಿ ವೃತ್ತಿಯಿಂದ ನಿವೃತ್ತರಾಗಿ ಕೃಷಿಯಲ್ಲಿ ತೊಡಗಿ ಕೊಂಡಿರುವುದು ಮಾದರಿಯೇ ಹೌದು. ಅಳಿಕೆ ಬಂಟರ ಸಂಘದ ಅದ್ಯಕ್ಷರಾಗಿ, ದಿವ್ಯಜ್ಯೋತಿ ಮಿತ್ರ ವೃಂದದ ಗೌರವಾಧ್ಯಕ್ಷರಾಗಿ ವಿವಿಧ ಮಗ್ಗುಲುಗಳಲ್ಲಿ ಕಾರ್ಯೋನ್ಮುಖರಾಗಿದ್ದಾರಲ್ಲದೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಶ್ರಮಿಸುತ್ತಿದ್ದಾರೆ.
ಪ್ರಸ್ತುತ “ಶ್ರೀ ದಿವ್ಯಜ್ಯೋತಿ ಕಲಾವಿದೆರ್” ಹೆಸರಲ್ಲಿ ಮತ್ತೆ ನಾಟಕ ರಂಗದಲ್ಲಿ ಹೆಸರಾಂತ ಕಲಾವಿದರನ್ನು ಸೇರಿಸಿಕೊಂಡು ಈಗಾಗಲೆ ಹತ್ತು ಹಲವು ಕಾರ್ಯಕ್ರಮ ನೀಡುತ್ತಿರುವುದು ಅವರ ಕ್ಷಿಪ್ರ ನಿರ್ದೇಶನಕ್ಕೆ ಸಾಕ್ಷಿಯೇ ಹೌದು. ಅಲ್ಲದೆ ತನ್ನ ಮಗಳು ದಿವ್ಯನಿಧಿ ರೈಯವರ ಸಂಗೀತ ಪ್ರತಿಭೆಯ ಅನಾವರಣಕ್ಕೆ “ಸ್ವರ ಸಮರ್ಪಣೆ” ಎನ್ನುವ ಹೆಸರಿನಲ್ಲಿ ತಂಡಕ್ಕೆ ಸಂಗೀತ ನಿರ್ದೇಶಕನಾಗಿ ಇಂದು ದುಬೈ, ಆಫ್ರಿಕಾ, ಬಹರೈನ್ ಅಲ್ಲದೆ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಅವರು ಕಲೆ, ಕ್ರೀಡೆಗೆ ನೀಡಿದ ಕೊಡುಗೆ ಶ್ಲಾಘನೀಯವೆಂಬಂತೆ ಹಲವು ಪ್ರಶಸ್ತಿಗಳು ಹುಡುಕಿ ಬಂದಿರುವುದು ಸ್ತುತ್ಯರ್ಹ. ರೈಯವರೆ ನಿಮ್ಮ ಮುಂದಿನ ಸುಂದರ ಬದುಕು ಹಸನಾಗಲಿ. ಸಮಾಜ ಸೇವೆಯ ಬಂಡಿ ಹೀಗೆಯೇ ಸಾಗುತ್ತಿರಲಿ. ನಂಬಿದ ದೇವರು ಆಯುಷ್ಯ ಆರೋಗ್ಯ ಕೊಟ್ಟು ಸದಾ ಕಾಪಾಡಲಿ. ನಿಸ್ವಾರ್ಥ ಸೇವೆ, ರಂಗ ಕ್ಷೇತ್ರದ ಮಿಡಿತ, ಪರೋಪಕಾರ, ತನ್ನವರ ನಗುವಲ್ಲಿ ತನ್ನ ಖುಷಿ ಕಾಣೋ ವ್ಯಕ್ತಿತ್ವ ಹೀಗೆಯೇ ಸದಾ ಮಿನುಗುತ್ತಿರಲಿ. ತನ್ಮೂಲಕ ಇನ್ನಷ್ಟು ಬಡವರ ಮುಖದಲ್ಲಿ ಬದುಕುವ ಹೊಸಚಿಗುರಿನ ಕಿರಣ ಮೂಡಲಿ ಎನ್ನುವ ಸುಂದರ ಆಶಯ.
ತಮಗೆ ನಾಟಕ ಅಥವಾ ಉತ್ಕೃಷ್ಟ ಮಟ್ಟದ ಸಂಗೀತ ಕಾರ್ಯಕ್ರಮಕ್ಕೆ ಮೋಹನದಾಸ್ ರೈಯವರ 9606213449 ಸಂಪರ್ಕ ಸಂಖ್ಯೆಗೆ ಸಂದರ್ಶಿಸಬಹುದಾಗಿದೆ.
ಬರಹ : ರಾಧಾಕೃಷ್ಣ ಎರುಂಬು