ಉತ್ತಮ ಅವಕಾಶಗಳ ಹುಡುಕಾಟದಲ್ಲಿ ತವರು ನೆಲವನ್ನು ತೊರೆದು ದೂರದ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಉದ್ಯಮದ ನೆಲೆಗಂಡು ಓರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಗುರುತಿಸಿಕೊಂಡವರು ಈ ಲೇಖನದ ನಾಯಕ, ಸಂಘಟಕ, ಮಯೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಶೆಟ್ಟಿ.
ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಎಂಬಲ್ಲಿ 1967 ಜುಲೈ 6 ರಂದು ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ದಂಪತಿಯರಿಗೆ ಪ್ರೀತಿಯ ಕುಮಾರನಾಗಿ ಹುಟ್ಟಿದ ಪ್ರವೀಣ್ ಹೆಸರಿಗೆ ತಕ್ಕಂತೆ ಪಾಠ ಪಾಠೇತರ ಚಟುವಟಿಕೆಗಳಲ್ಲಿ ಜಾಣನೆಂಬಂತೆ ಗುರುತಿಸಿಕೊಳ್ಳುತ್ತಲೇ ತನ್ನ ಮಾತಾಪಿತರ ಉತ್ತಮ ಸಂಸ್ಕಾರದ ಪಾಠದಿಂದ ಬಾಲ್ಯವನ್ನು ಕಳೆದವರು. ಸರಕಾರಿ ಕಾಲೇಜು ಕೋಟೇಶ್ವರ ಹಾಗೂ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಮುಖಾಂತರ ಬಿ.ಎಸ್ಸಿ ಪದವಿಯನ್ನು ಸಂಪಾದಿಸಿದರು.ತನ್ನ ಕಠಿಣ ಪರಿಶ್ರಮ ದೃಢ ನಿರ್ಧಾರ ಹಾಗೂ ಜೀವನದಲ್ಲಿ ಸ್ಪಷ್ಟ ಗುರಿ ಇರಿಸಿಕೊಂಡ ಈ ಸ್ಫುರದ್ರೂಪಿ ತರುಣ ಕೊಲ್ಲಿ ರಾಷ್ಟ್ರದ ಯುಎಇಯಲ್ಲಿ ಪಾಲುದಾರಿಕೆ ಒಪ್ಪಂದ ಪ್ರಕಾರ ಫಾರ್ಚೂನ್ ಹೊಟೆಲನ್ನು ಆರಂಭಿಸಿದ ನಂತರ ಪ್ರವೀಣ್ ಜೀವನದಲ್ಲಿ ಹೊಸ ತಿರುವು ಕಾಣಿಸಿಕೊಂಡಿತು. ಉದ್ಯಮ ಜೀವನದ ಒಂದು ಹಂತದ ತನ್ನ ಪ್ರಯತ್ನ ಫಲ ನೀಡಿತಾದರೂ ಅದನ್ನೇ ತನ್ನ ಜೀವನದ ಸಾಧನೆಯೆಂದು ಭಾವಿಸದೆ ಮಹತ್ವಾಕಾಂಕ್ಷಿ ಪ್ರವೀಣ್ ಅವರು ಮುಂದೆ ತನ್ನದೇ ಆದ ಗ್ರೂಫ್ ಆಫ್ ಫಾರ್ಚೂನ್ ಹೊಟೇಲನ್ನು ಹುಟ್ಟು ಹಾಕಿ ತನ್ನ ಕಠಿಣ ಪರಿಶ್ರಮದಿಂದ ಕ್ರಮೇಣ ಯಶಸ್ಸನ್ನು ಸಂಪಾದಿಸುತ್ತಾ ಒಂದರ ಮೇಲೊಂದರಂತೆ ಹೊಟೇಲ್ ಗಳನ್ನು ಸ್ಥಾಪಿಸುತ್ತಾ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಗಟ್ಟಿ ನೆಲೆ ಹೊಂದುವಂತೆ ಮಾಡುವಲ್ಲಿ ಯಶಸ್ಸನ್ನು ಸಂಪಾದಿಸಿದರು.
ತಾನು ಒಂದು ಹಂತ ತಲುಪಿದ ಮೇಲೆ ಆರಂಭದಿಂದಲೂ ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿತ್ವ ಹೊಂದಿದ ಪ್ರವೀಣ್ ಶೆಟ್ಟಿ ಅವರು ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ ಸಮಾಜ ಪರ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡರು. ರಕ್ತದಾನ ಶಿಬಿರ, ಆರ್ತರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮುಂತಾದ ಸಮಾಜಪರ ಕೆಲಸಗಳಲ್ಲಿ ಮುತುವರ್ಜಿ ವಹಿಸುತ್ತಾ ಓರ್ವ ಉತ್ಸಾಹಿ ಯುವ ಸಮಾಜ ಸೇವಕನಾಗಿಯೂ ಗುರುತಿಸಿಕೊಂಡರು. ತನ್ನ ಸಮುದಾಯದ ಬಾಂಧವರನ್ನು ಒಂದುಗೂಡಿಸಿಕೊಂಡು ಅವರ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಸಮಾನ ಆಸಕ್ತ ಬಂಧುಗಳನ್ನು ಒಟ್ಟು ಸೇರಿಸಿ ನಮ್ಮ ತವರು ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾಪಾಡುವ ಬಗ್ಗೆ ಶ್ರಮಿಸಿದರು.
ಕರ್ನಾಟಕ ರಾಜ್ಯ ಕೊಲ್ಲಿ ರಾಷ್ಟ್ರಗಳಲ್ಲಿ ಆರಂಭಿಸಿದ ಕರ್ನಾಟಕ ಎನ್ ಆರ್ ಫೋರಮ್ ಯುಎಇ ಇದರ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅತ್ಯಮೂಲ್ಯ ಸೇವೆ ನೀಡಿದರಲ್ಲದೇ ಎನ್.ಆರ್.ಐ ತುಳು ಕನ್ನಡಿಗರು ಸ್ಥಾಪಿಸಿದ ಅನೇಕ ಸಂಘಟನೆಗಳಲ್ಲಿ ಜವಾಬ್ಧಾರಿ ಸ್ಥಾನ ನಿರ್ವಹಿಸುತ್ತಾ ಅದರ ಜೊತೆ ಜೊತೆಗೆ ಹೊಟೇಲ್ ಉದ್ಯಮವನ್ನೂ ಅಭಿವೃದ್ಧಿಗೊಳಿಸುತ್ತಾ ಇಂದು ಪ್ರವೀಣ್ ಶೆಟ್ಟಿ ಅವರು ಓರ್ವ ಉದ್ಯಮಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೊರಹೊಮ್ಮಿದ್ದು ವಿಶ್ವ ಬಂಟರ ಸಂಘಗಳ ಒಕ್ಕೂಟ ಹಾಗೂ ಇತರ ಬಂಟ ಸಂಘಟನೆಗಳಿಗೆ ಉದಾರ ಹಸ್ತದ ಸಹಾಯ ನೀಡುವ ಪೋಷಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇಂದು ಉದಾರ ಹೃದಯಿ ದಾನಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಇದೀಗ ಇವರ ಕೀರ್ತಿ ಕಿರೀಟಕ್ಕೆ ಮುತ್ತಿನ ಮಣಿ ಸೇರಿಕೊಂಡಂತೆ ಯುಎಇ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘಕ್ಕೆ ಭೀಮಬಲ ಬಂದಂತಾಗಿದೆ. ಇತ್ತೀಚೆಗೆ ಬಂಟರ ಸಂಘ ಮುಂಬಯಿ ಕುರ್ಲಾ ಪೂರ್ವ ಇಲ್ಲಿ ಐಕಳ ಹರೀಶ್ ಶೆಟ್ಟಿ ಬಳಗ ಹಾಗೂ ಪ್ರವೀಣ್ ಭೋಜ ಶೆಟ್ಟಿ ಬಳಗದ ನೇತೃತ್ವದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರತಿನಿಧಿಗಳ ಸಮ್ಮಿಲನದಲ್ಲಿ ಉತ್ಸಾಹದಿಂದ ಭಾಗವಹಿಸಿ ತನ್ನ ಪ್ರಭಾವೀ ಭಾಷಣದ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಮುಂದೆ ಯುಎಇಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರತಿನಿಧಿಗಳ ಸಮ್ಮಿಲನವನ್ನು ಆಯೋಜಿಸುವ ಘೋಷಣೆ ಮಾಡುವುದರೊಂದಿಗೆ ವಿಶ್ವದ ಬಂಟ ಸಂಘಟನೆಗಳ ಪ್ರತಿನಿಧಿಗಳನ್ನು ಆತ್ಮೀಯವಾಗಿ ಆಮಂತ್ರಿಸಿರುವುದೇ ಅಲ್ಲದೇ ಎಷ್ಟೇ ಜನರು ಬಂದರೂ ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸುವೆನೆಂಬ ಭರವಸೆಯನ್ನೂ ನೀಡಿದ್ದಾರೆ.ಇಂತಹ ಯಶಸ್ವಿ ಉದ್ಯಮಿ, ಉದಾರ ಹೃದಯಿ ಸಮರ್ಥ ಸಂಘಟಕರು ನಿಜವಾದ ಅರ್ಥದಲ್ಲಿ ನಮ್ಮ ಸಮುದಾಯದ ಸಮಾಜದ ಅಮೂಲ್ಯ ಆಸ್ತಿ. ಭಗವಂತ ಅವರಿಗೆ ಅವರ ಕುಟುಂಬ ಪರಿವಾರಕ್ಕೆ ಅನವರತವೂ ಆಧಾರವಾಗಿದ್ದು ತನ್ಮೂಲಕ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವಾಭಾಗ್ಯ ಒದಗುವಂತೆ ಕರುಣಿಸಲೆಂದು ಬಂಟ ಸಾಧಕರ ಯಶೋಗಾಥೆಯ ಕುರಿತ ಲೇಖನಗಳನ್ನು ಆಗಾಗ ಪ್ರಕಟಿಸುತ್ತಿರುವ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಶುಭಂ ಭದ್ರಂ ಮಂಗಲಂ
ಅರುಣ್ ಶೆಟ್ಟಿ ಎರ್ಮಾಳ್ ಮುಂಬಯಿ
ಗೌರವ ಸಂಪಾದಕರು