ಮಣಿಪುರ ಗ್ರಾಮದಲ್ಲಿರುವ ಕುಂತಳ ನಗರದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ವತಿಯಿಂದ ಎಂ ಆರ್ ಜಿ ಗ್ರೂಪ್ನ ಪ್ರಾಯೋಜಕತ್ವದಲ್ಲಿ 3 ನೇ ಬಾರಿಗೆ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 (ಶನಿವಾರ) ಮತ್ತು 17 (ಭಾನುವಾರ) ರಂದು ನಡೆಯಲಿದೆ ಎಂದು ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿಯವರು ತಿಳಿಸಿದರು. ಅವರು ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಬಾರಿ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮವನ್ನು ನವೆಂಬರ್ 16 ರಂದು ಶನಿವಾರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ ಮಣಿಪುರ ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಎಂ ಆರ್ ಜಿ ಗ್ರೂಪ್ ಇದರ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರು, ಮಂತ್ರಿಗಳು ಶಾಸಕರು, ಮಾಜಿ ಶಾಸಕರು ಮತ್ತು ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಅನೇಕ ಬೃಹತ್ ಕಂಪನಿಯವರು ಉದ್ಯೋಗ ಮೇಳಕ್ಕೆ ಆಗಮಿಸಲು ರಿಜಿಸ್ಟರ್ ಮಾಡಿದ್ದಾರೆ. ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುತ್ತಿದ್ದಾರೆ.
ಐಟಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಮತ್ತು ಐಟಿಐ ಮಾಡಿದ ಮತ್ತು ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶಗಳಿವೆ. ಈಗ ನೋಂದಣಿ ಮಾಡಿದ ಕಂಪನಿಗಳ ಪ್ರಕಾರ ಸುಮಾರು 1000 ಹುದ್ದೆಗಳಿಗೆ ಇಂಜಿನಿಯರಿಂಗ್ ವಲಯದಲ್ಲಿ ಅವಕಾಶಗಳಿವೆ. ಬಿ.ಎ, ಬಿ.ಕಾಮ್, ಬಿ.ಎಸ್ಸಿ, ಬಿ.ಬಿಎಂ, ಬಿ.ಸಿ.ಎ ಮತ್ತು ಇನ್ನಿತರ ಡಿಗ್ರಿ ಮಾಡಿದವರಿಗೆ ಮತ್ತು ಎಂ.ಸಿ.ಎ, ಎಂ.ಬಿ.ಎ, ಎಂ.ಎಸ್ಸಿ ಮಾಡಿದ ಅಭ್ಯರ್ಥಿಗಳಿಗೆ ಸುಮಾರು 500 ಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ಅವಕಾಶಗಳಿವೆ.
ನಮ್ಮ ಗ್ರಾಮೀಣ ಬಂಟರ ಸ್ಕಿಲ್ ಡೆವಲಪ್ಮೆಂಟ್ ನ ಮುಖ್ಯ ಉದ್ದೇಶ ಸ್ಥಳೀಯ ಯುವಕರಿಗೆ ಮತ್ತು ಮಹಿಳೆಯವರಿಗೆ ಸ್ವಉದ್ಯೋಗ ಅಥವಾ ಉದ್ಯೋಗ ಸಿಗುವಂತೆ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಉತ್ತಮ ಕಂಪನಿಗಳನ್ನು ಕರೆಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜಾಬ್ ಫೇರ್ ನಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ.
ಉದ್ಯೋಗ ಮೇಳದ ಪ್ರಯೋಜನವನ್ನು ಎಲ್ಲರೂ ಪಡೆದು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದೇ ನಮ್ಮ ಟ್ರಸ್ಟ್ನ ಮತ್ತು ಎಂಆರ್ ಜಿ ಗ್ರೂಪ್ ನ ಉದ್ದೇಶವಾಗಿದ್ದು, ಈ ಬಾರಿ ಸುಮಾರು 1200 ರಿಂದ 1500 ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗಬಹುದೆಂದು ನೀರೀಕ್ಷೆ ಇದೆ. ಯಾವುದೇ ಜಾತಿ, ಮತ, ಬೇಧ ಇಲ್ಲದೆ ಎಲ್ಲಾ ಸಮುದಾಯದ ಯುವಕರಿಗೆ ಮತ್ತು ಮಹಿಳೆಯವರಿಗೆ ಅವಕಾಶ ಇದ್ದು, ರಿಜಿಸ್ಟ್ರೇಷನ್ಗಾಗಿ ಹಣ ಇಲ್ಲ ಎಂದೂ ಅಶೋಕ ಕುಮಾರ ಶೆಟ್ಟಿಯವರು ತಿಳಿಸಿದ್ದಾರೆ.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಕಾರ್ಯಕ್ರಮ ನಿರ್ದೇಶಕಿ ಪ್ರೊ. ದಿವ್ಯ ರಾಣಿ ಪ್ರದೀಪ್ ಮಾತನಾಡಿ, ಬೃಹತ್ ಕಂಪನಿಗಳು ಇಲ್ಲಿಗೆ ಬರುವುದಾಗಿ ನೋಂದಣಿ ಮಾಡಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 5 ಕಂಪನಿಗಳಲ್ಲಿ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶಗಳಿವೆ. ಪ್ರತಿಯೊಬ್ಬರೂ 5 ಸೆಟ್ ಬಯೋ ಡಾಟಾ ತರಬೇಕಿದೆ. ಈ ಬಾರಿ ಸ್ಥಳೀಯ, ಕರ್ನಾಟಕ, ಬೇರೆ ರಾಜ್ಯ ಮಾತ್ರವಲ್ಲದೇ ಅಂತರಾಷ್ಟ್ರೀಯ ಕಂಪನಿಗಳು ನೋಂದಣಿ ಮಾಡಿವೆ. ಆದ ಕಾರಣ ಎಲ್ಲಾ ಫೀಲ್ಡ್ ಗಳಲ್ಲಿ ಉದ್ಯೋಗ ಅವಕಾಶಗಳಿವೆ ಎಂದು ತಿಳಿಸಿದರು. ಸಂದರ್ಶನ ಸಮಿತಿಯ ಛೇರ್ಮನ್ ಗುರುಪ್ರಶಾಂತ್ ಮಾತನಾಡಿ, ಸಂದರ್ಶನವು ಬಹಳ ನೂತನ ರೀತಿಯಲ್ಲಿ ನಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಮಾತ್ರವಲ್ಲದೆ ಸುಮಾರು 200 ಉದ್ಯೋಗಗಳು ವಿದೇಶಗಳಲ್ಲಿ ಮುಖ್ಯವಾಗಿ ಗಲ್ಫ್ ರಾಷ್ಟ್ರದಲ್ಲಿ ಅವಕಾಶ ಗಳಿವೆ. ಸುಮಾರು 1500 ರಿಂದ 2000 ಉದ್ಯೋಗ ಅವಕಾಶ ಬೇರೆ ಬೇರೆ ಕಂಪನಿಗಳಲ್ಲಿ ಇವೆ. ಅಭ್ಯರ್ಥಿಗಳ ನೋಂದಣಿಯು ಈಗಾಗಲೇ ಆನ್ಲೈನ್ನಲ್ಲಿ ಪ್ರಾರಂಭಗೊಂಡಿದ್ದು, ಉದ್ಯೋಗ ಮೇಳದ ದಿನದಂದು ಬೆಳ್ಳಿಗ್ಗೆ 9 ಗಂಟೆಗೆ ನೋಂದಣಿ ಪ್ರಾರಂಭ ಆಗಲಿದೆ. ಉದ್ಯೋಗ ಮೇಳದ ಸಮಾರೋಪ ಸಮಾರಂಭ ತಾ.17.11.2024 ಭಾನುವಾರ ಬೆಳಿಗ್ಗೆ 11. 45ಕ್ಕೆ ನಡೆಯಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕರು ಮತ್ತು ಮಹಿಳೆಯರು ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಪ್ರಯೋಜನ ಪಡೆಯಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಎಚ್ಬಿ ಶೆಟ್ಟಿ, ವಿಶ್ವಸ್ಥರುಗಳಾದ ಹರೀಶ್ ಶೆಟ್ಟಿ ಬೆಳ್ಳೆ, ಹರೀದ್ರ ಹೆಗ್ಡೆ ಕೊರಂಗ್ರಪಾಡಿ, ಸತೀಶ್ ಶೆಟ್ಟಿ ಮಣಿಪುರ ದಯಾನಂದ ಶೆಟ್ಟಿ ಕಲ್ಮಂಜೆ ಉಪಸ್ಥಿತರಿದ್ದರು. ಟ್ರಸ್ಟ್ ನ ಕೋಶಾಧಿಕಾರಿ ವಿಜಿತ್ ಶೆಟ್ಟಿಯವರು ಸ್ವಾಗತಿಸಿದರು. ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ ವಂದಿಸಿದರು.