ಕರಾವಳಿಯ ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತುಳುರಂಗ ಭೂಮಿ ಕಲಾವಿದ ತುಳುನಾಡಿನ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲಾವಿದರು ಸಮಯ ಪ್ರಜ್ಞೆಯನ್ನು ಮರೆಯಬೇಕು. ಒಬ್ಬ ಕಲಾವಿದನ ಮಾತನ್ನು ಜನರು ಸ್ವೀಕರಿಸುತ್ತಾರೆ ಎಂದರೆ ಆತನಿಗೆ ಅದಕ್ಕಿಂತ ಬೇರೆ ಯಾವ ಭಾಗ್ಯ ಬೇಕು? ಕಲಾ ರಂಗದಲ್ಲಿ ನಾನು ಗರ್ಭಗುಡಿಯ ಮೂರ್ತಿಯಾಗಿಯೇ ಇರಲು ಇಷ್ಟಪಡುತ್ತೇನೆಯೇ ವಿನಃ ಉತ್ಸಹ ಮೂರ್ತಿಯಾಗಿ ಅಲ್ಲ. ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಜೀವನದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನವನ್ನು ತರಲು ಪ್ರಯತ್ನಿಸುತ್ತೇನೆ. ಇದು ಕಲಾವಿದರಿಗೂ ದೊಡ್ಡ ಸವಾಲೇ ಸರಿ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ರಂಗಭೂಮಿ ಕಟ್ಟಲು ಅನೇಕರ ತ್ಯಾಗ, ಪರಿಶ್ರಮ ಇದೆ. ಯಾವುದೇ ಸಿನಿಮಾದ ಡಬ್ಬಿಂಗ್, ಹೊಸ ಸಿನಿಮಾ ಬಿಡುಗಡೆಗೊಳಿಸಬೇಕಾದ ತಾಂತ್ರಿಕತೆ ಈಗ ಕರಾವಳಿಯಲ್ಲಿ ಇದೆ. ತುಳು ರಂಗಭೂಮಿ ಕೂಡಾ ತುಳು ಭಾಷೆಯ ಉಳಿವಿಗೆ ತನ್ನದೇ ಕೊಡುಗೆ ನೀಡಿದೆ ಎಂದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹರೀಶ್ ಮೋಟುಕಾನ ನಿರೂಪಿಸಿದರು. ಛಾಯಾಗ್ರಾಹಕ ಸತೀಶ್ ಇರಾ ಕಾರ್ಯಕ್ರಮ ಸಂಯೋಜಿಸಿದರು.