ಎಲ್ಲೂರು ಮಾಣಿರು ದಿವಂಗತ ಬಾಬು ಶೆಟ್ಟಿ ಮತ್ತು ಕಾಪು ಕಲ್ಯ ದೇವಸ್ಯ ಗೋಪಿ ಶೆಟ್ಟಿ ದಂಪತಿಗೆ ಪುತ್ರರಾಗಿ ಜನಿಸಿದ ವಸಂತ ಶೆಟ್ಟಿ ಅವರು ಬಾಲ್ಯದ ದಿನಗಳಿಂದಲೇ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲೂರು ಅದಮಾರು ಮತ್ತು ಮೂಲ್ಕಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಶೆಟ್ಟರು ವಾಣಿಜ್ಯ ಶಾಸ್ತ್ರ ಪದವಿಧರರು. ಮುಂದೆ ಸಮಯ ಸಂಧರ್ಭ ಅನುಕೂಲ ಕೂಡಿ ಬರಲು ತನ್ನ ಶಿಕ್ಷಣ ಮುಂದುವರಿಸಿ ಧಾರವಾಡ ವಿಶ್ವವಿದ್ಯಾಲಯ ಮೂಲಕ ಸ್ನಾತಕೋತ್ತರ ಶಿಕ್ಷಣ ಪಡೆದು ಎಂ.ಕಾಂ. ಪದವಿ ಸಂಪಾದಿಸಿಕೊಂಡರು. ತನ್ನ ವಿದ್ಯಾರ್ಜನೆಯ ದಾಹ ಅಲ್ಲಿಗೆ ಕೊನೆಗೊಳ್ಳದೇ ಮುಂದೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಮೂಲಕ ಮೂರು ವರ್ಷಗಳ ಆರ್ಟಿಕಲ್ಸ್ ಅಧ್ಯಯನ ಮುಗಿಸಿದ ಬಳಿಕ ಎರ್ಮಾಳು, ಪಡುಬಿದ್ರಿ ಹಾಗೂ ಮೂಲ್ಕಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ವಸಂತ ಶೆಟ್ಟಿಯವರು ನಾಲ್ಕೂವರೆ ದಶಕಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಜೆಪ್ಪು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕು ಬಂಟರ ಸಂಘದ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಮೇಧಾವಿ ಲೆಕ್ಕ ಶಾಸ್ತ್ರಜ್ಞರಾದ ಶೆಟ್ಟರು ಕರ್ನಾಟಕ ಸರಕಾರಾಧೀನ ಹಣಕಾಸು ಸಂಸ್ಥೆಗಳಲ್ಲಿ ವಿವಿಧ ಮಹತ್ವದ ಹುದ್ದೆಗಳಲ್ಲಿ ಸುಮಾರು ಮೂವತ್ತೆರಡು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಪಡುಬಿದ್ರಿ ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ವಸಂತ ಶೆಟ್ಟಿ ಅವರಿಗಿದೆ. ಜೂನಿಯರ್ ಚೇಂಬರ್ ಡಿ ಇದರ ಪ್ರತಿಷ್ಠಿತ ಎಚ್ ಜಿ ಎಫ್ ಪ್ರಶಸ್ತಿ ಪುರಸ್ಕೃತರೂ ಆದ ವಸಂತ ಶೆಟ್ಟಿ ಅವರು ಸಾರ್ವಜನಿಕ ಸೇವೆ ಹಾಗೂ ತನ್ನ ಸಮಾಜ ಬಾಂಧವರಿಗೆ ಸಲ್ಲಿಸಿದ ಅಮೂಲ್ಯ ಸಹಯೋಗ ಸಹಕಾರ ಗೌರವಾದರಗಳಿಂದ ಉಲ್ಲೇಖಿಸಲ್ಪಡುತ್ತದೆ.
ಹಿಂದೂ ರುದ್ರಭೂಮಿ ಸಂರಕ್ಷಣ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಶೆಟ್ಟಿ ಅವರು ತೋರಿಸುವ ಶ್ರದ್ಧೆ ಅಪೂರ್ವವಾದುದು. ಪ್ರತಿಷ್ಠಿತ ಸಾರ್ವಜನಿಕ ಸೇವಾ ಸಂಸ್ಥೆ ಹಾಗೂ ನಾಯಕತ್ವ ತರಬೇತಿ ಸಂಘಟನೆಗಳಲ್ಲಿ ನಿಸ್ವಾರ್ಥ ಭಾವದಿಂದ ದುಡಿದ ವಸಂತ ಶೆಟ್ಟಿ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ. ನಂದಿಗುಡ್ಡೆ ಎಂಬಲ್ಲಿನ ರುದ್ರಭೂಮಿಗೆ ಕಾಯಕಲ್ಪ ನೀಡಿದ ಹೆಗ್ಗಳಿಕೆಯೂ ಶ್ರೀಯುತರಿಗಿದೆ. ಹಿಂದೂ ಜಾಗರಣಾ ವೇದಿಕೆ ಮಂಗಳೂರು ಇದರ ಅಧ್ಯಕ್ಷರೂ ಆಗಿದ್ದು ನಿರಂತರ ಕ್ರಿಯಾಶೀಲರಾಗಿದ್ದಾರೆ. ಬೋಳಾರ ಮತ್ತು ಮಂಗಳಾದೇವಿ ಘಟಕದ ಶನೀಶ್ವರ ಪೂಜಾ ಸಮಿತಿ ಘಟಕಾಧ್ಯಕ್ಷರಾಗಿ ತನ್ನ ಆಸ್ತಿಕತನ ದೈವಭಕ್ತಿಗಳ ಉದಾಹರಣೆ ನೀಡಿದ್ದಾರೆ. ಮಂಗಳೂರು ಬೋಳಾರ ಹಳೆಕೋಟೆ ಮುಖ್ಯಪ್ರಾಣ ದೇವಾಲಯದ ಸಮಿತಿ ಮುಖ್ಯಸ್ಥರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ.
ಧರ್ಮಪತ್ನಿ ಶ್ರೀಮತಿ ಶಾಂತಾ ವಿ ಶೆಟ್ಟಿ, ಮಗಳು ಆಶ್ರಯ ಇಂಟೆಲ್ ಸಾಫ್ಟ್ ವೇರ್ ಕಂಪನಿ ಉದ್ಯೋಗಿ, ಮಗ ಅಕ್ಷಯ್ ಲೆಕ್ಕ ಪರಿಶೋಧಕರಾಗಿ ಕಾಮತ್ ಎಂಡ್ ರಾವ್ ಕಂಪನಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಜಯಾಂಬಿಕ ಚಿಟ್ಸ್ ಪ್ರೈ. ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾಗಿ ವಿತ್ತೀಯ ಕ್ಷೇತ್ರದಲ್ಲಿ ಸೇವಾನಿರತರೂ ಆಗಿರುವ ಶೆಟ್ಟಿ ಅವರು ಸದಾ ವ್ಯಸ್ಥರಾಗಿದ್ದಾರೆ. ಎಲ್ಲೂರು ಯುವಕ ಮಂಡಲ ಮತ್ತು ರಾಮಕೃಷ್ಣ ವಿದ್ಯಾಸಂಸ್ಥೆ ಮೂಲಕವೂ ಸೇವಾವೃತರಾಗಿರುವ ಶೆಟ್ಟಿ ಅವರ ಭವಿಷ್ಯ ಜೀವನ ಸುಖ ಸಮೃದ್ಧಿ ನೆಮ್ಮದಿಯಿಂದ ಕೂಡಿರಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆಗಳು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು