ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಎಪ್ರಿಲ್ 14 ರಂದು ರವಿವಾರ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿದ ಬಿಸುಪರ್ಬ, ಬಂಟ ದಿನಾಚರಣೆ ಹಾಗೂ ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾ ವೇದಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮುಖ್ಯ ಅತಿಥಿ, ಮಹಾದಾನಿ, ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಗೌ. ಅತಿಥಿ, ಬಂಟರ ಸಂಘದ ವಿಶ್ವಸ್ಥ ಮಾತೃಭೂಮಿ ಕೋ.ಆಪ್ ಕ್ರೆಡಿಟ್ ಸೊಸೈಟಿ ಲಿ. ಇದರ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಭತ್ತದ ಕಳಸೆಯಲ್ಲಿಟ್ಟಿದ್ದ ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಪುಟಾಣಿ ನಾಯಿರಾ ಪ್ರವೀಣ್ ವರಂಗ ಜೊತೆಗೆ ಭತ್ತದ ಸಸಿಗೆ (ನೇಜಿಗೆ) ಹಾಲುಣಿಸುವ ಮೂಲಕ ‘ಬಿಸು’ ಗೆ ಚಾಲನೆ ನೀಡಿದರು.
ಆರಂಭದಲ್ಲಿ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಸಂಘದ ಅಧ್ಯಕ್ಷರು, ಅತಿಥಿಗಣ್ಯರು, ಪದಾಧಿಕಾರಿಗಳು, ಸದಸ್ಯರು, ಸಂಘದ ಮಹಿಳಾ ವಿಭಾಗದ ಸದಸ್ಯೆಯರು ಬಿಸುಕಣಿ ಕಳಸದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಬಂದು ದೈವದ ಮಂಚದಲ್ಲಿ ದೀಪವಿರಿಸಿ, ಕಣಿ ಇಟ್ಟು ಪ್ರಾರ್ಥಿಸಿದರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ದೈವಕ್ಕೆ ನುಡಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ವಿಶ್ವ ಬಂಟರ ಧ್ವಜವನ್ನು ಹಾರಿಸಿ ಬಂಟ ದಿನಾಚರಣೆಗೆ ಚಾಲನೆ ನೀಡುತ್ತಾ, ಸುಮಾರು 1 ವರ್ಷಗಳ ಹಿಂದೆ ಜರುಗಿದ ವಿಶ್ವ ಬಂಟರ ದಿನಾಚರಣೆಯ ಸಂಕೇತವಾದ ವಿಶ್ವ ಬಂಟರ ಧ್ವಜವನ್ನರಳಿಸಲು ನನಗೆ ಅತ್ಯಂತ ಸಂತಸವಾಗುತ್ತಿದೆ. ತುಳುನಾಡ ನಮ್ಮಬಂಟರಿಗೆ ಇದು ಹೊಸ ವರ್ಷದ ದಿನವಾಗಿದೆ. ಈ ದಿನವನ್ನು ನಾವೆಲ್ಲರೂ ಅತ್ಯಂತ ಖುಷಿ ಮತ್ತು ಉಲ್ಲಾಸದೊಂದಿಗೆ ಆಚರಿಸೋಣ ಎಂದು ನುಡಿದು ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ನೀಡಿದರು.
ಸಂಘದ 9 ಪ್ರಾದೇಶಿಕ ಸಮಿತಿಗಳಿಂದ ನೃತ್ಯ ಕಾರ್ಯಕ್ರಮ, ಮಹಿಳಾ ವಿಭಾಗದವರಿಂದ ಸಮೂಹ ಗೀತೆ, ಶ್ರೀ ಮಹಾವಿಷ್ಣು ಬಂಟ ಯಕ್ಷಕಲಾ ವೇದಿಕೆ ಮತ್ತು ಸಂಘದ ಸದಸ್ಯರಿಂದ ‘ಮುತೈಸಿ ಭಾಗ್ಯ’ ಯಕ್ಷಗಾನ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಂಟರವಾಣಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ನಿರೂಪಿಸಿದರೆ, ಸಭಾ ಕಾರ್ಯಕ್ರಮವನ್ನು ಬಂಟರವಾಣಿಯ ಗೌ.ಪ್ರಧಾನ ಸಂಪಾದಕ ಅಶೋಕ ಪಕ್ಕಳ ನಿರ್ವಹಿಸಿ, ವಂದಿಸಿದರು.
ಆ ಬಳಿಕ ಜರಗಿದ ಸಮಾರಂಭದಲ್ಲಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮುಖ್ಯ ಅತಿಥಿ ಕೃಷ್ಣ ವೈ. ಶೆಟ್ಟಿ, ಗೌ. ಅತಿಥಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಹಾಗೂ ಪದಾಧಿಕಾರಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ್ ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.