ಮುಂಬಯಿ ವಿಶ್ವವಿದ್ಯಾಲಯದ ಕಾರ್ಯಕ್ರಮ ಎಂದರೆ ಅದು ಅತ್ಯಂತ ಸರಳ, ಸುಂದರ. ಬುದ್ಧಿಜೀವಿಗಳು, ಅಕ್ಷರಜ್ಞಾನಿಗಳು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಅನ್ಯಗ್ರಹದಿಂದ ಬಂದಂತಾಗಿದೆ. ಇದೊಂದು ವಿಶೇಷ ಸಭೆ. ಮುಂಬೈ ವಿವಿ ಕನ್ನಡ ವಿಭಾಗದ ಮಹನೀಯರು ಕೃತಿರಚನೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೀವನವನ್ನು ಹತ್ತಿರದಿಂದ ನೋಡಿದರೆ ಮಾತ್ರ ಒಳ್ಳೆಯ ಪುಸ್ತಕ ಬರೆಯಬಹುದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಏಪ್ರಿಲ್ 13 ರ ಶನಿವಾರದಂದು, ಕಲೀನಾ ಕ್ಯಾಂಪಸ್ ನ ಜೆ ಪಿ ನಾಯಕ್ ಭವನದಲ್ಲಿ ಮುಂಬೈ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ವಿಭಾಗದ 46ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗ ಪ್ರಮುಖರು ಮತ್ತು ಪ್ರಾಧ್ಯಾಪಕರೂ ಆದ ಪ್ರೊ . ಜಿ ಎನ್
ಉಪಾಧ್ಯ ಅವರು ಮಾತನಾಡಿ, ಕನ್ನಡವು ಕನ್ನಡವ ಕನ್ನಡಿಸುತಿರಲಿ ಎಂಬ ಕವಿವಾಣಿಯ ಆಶಯದಂತೆ ಕನ್ನಡ ವಿಭಾಗವು ನಲ್ವತ್ತಾರು ವರ್ಷಗಳಿಂದ ಅಹರ್ನಿಶಿ ಕೆಲಸ ಮಾಡುತ್ತಿದೆ. ಇತರ ವಿವಿಗಳ ಕನ್ನಡ ವಿಭಾಗಗಳಿಗೆ ಹೋಲಿಸಿದರೆ ಮುಂಬೈ ವಿವಿ ಕನ್ನಡ ವಿಭಾಗ ಅತಿಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ನಮ್ಮ ವಿಭಾಗದ ಕೃತಿಗಳ ಸಂಖ್ಯೆ ನೂರನ್ನು ದಾಟಿದೆ. ಪ್ರತಿಭಾವಂತರಾದ ನಮ್ಮ ವಿದ್ಯಾರ್ಥಿಗಳ ಕೃತಿಗಳು ನೂರ್ಕಾಲ ಉಳಿಯುತ್ತವೆ ಎಂಬ ಭರವಸೆ ಇದೆ. ಅತಿಹೆಚ್ಚು ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವ ಕನ್ನಡ ವಿಭಾಗ ಜ್ಞಾನವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ಮುಂಬೈಯನ್ನು ಸಾಂಸ್ಕೃತಿಕ ನಗರಿಯಾಗಿ ಗುರುತಿಸುವಲ್ಲಿ ತುಳು ಕನ್ನಡಿಗರ ಪಾತ್ರ ದೊಡ್ಡದು. ಇಲ್ಲಿಯ ಸಂಘ ಸಂಸ್ಥೆಗಳು ದೊಡ್ಡ ಶಕ್ತಿ ಕೇಂದ್ರಗಳು. ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಮಸ್ತ ಕನ್ನಡಿಗರ ಮುಖವಾಣಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಅವರು ನುಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಮತ್ತು ಮುಂಬೈ
ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ. ಜಿ ಎನ್ ಉಪಾಧ್ಯ ಅವರ ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ- ಡಾ. ಸುಧಾಮೂರ್ತಿ ರಸಋಷಿ ರಾಷ್ಟ್ರ ಕವಿ ಕುವೆಂಪು, ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರ ಅನುವಾದಿತ ಕೃತಿ ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್- ದ ಇನ್ಪೈರಿಂಗ್ ಟೇಲ್ ಆಫ್ ಡಾ. ಸುಧಾ ಮೂರ್ತಿ ಮತ್ತು ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ಜಾಲಂದರ ಕೃತಿಗಳನ್ನು, ಪ್ರವೀಣ್ ಭೋಜ ಶೆಟ್ಟಿ ಅವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ವಿರಚಿತ ನನ್ನ ಇತ್ತೀಚೆಗಿನ ಓದು ಕೃತಿಯನ್ನು ಮತ್ತು ಡಾ. ಜಿ ಎನ್ ಉಪಾಧ್ಯ ಅವರು ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರ ಬೆಳಕಿಂಡಿ-ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯ ಅವಲೋಕನ ಕೃತಿಗಳನ್ನು ಲೋಕಾರ್ಪಣೆಗೈದರು.
ನನ್ನ ಇತ್ತೀಚೆಗಿನ ಓದು ಕೃತಿಯ ಕರ್ತೃ ಡಾ. ಪೂರ್ಣಿಮಾ ಶೆಟ್ಟಿ ಅವರು ಮಾತನಾಡಿ, ನನ್ನ ಓದಿನ ಹವ್ಯಾಸವೇ ನನ್ನ
ಇತ್ತೀಚೆಗಿನ ಓದು ,ಕೃತಿರಚನೆಗೆ ಕಾರಣ. ಹೆಚ್ಚಿನ ಓದಿಗೆ ಪ್ರೇರಣೆ, ಪ್ರೇರೇಪಣೆ ನೀಡಿದ್ದು ಮುಂಬೈ ವಿವಿ ಕನ್ನಡ ವಿಭಾಗ. ಕೃತಿಗಳನ್ನು ಓದಲು ಕಳುಹಿಸಿಕೊಟ್ಟ ಕೃತಿಕಾರರು ಕೂಡ ಓದಿಗೆ, ಬರೆವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು. ಅವರು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ. ಜಿ ಎನ್ ಉಪಾಧ್ಯ ಅವರ ಪ್ರೋತ್ಸಾಹ, ಬಂಧುಗಳು ಮತ್ತು ಸ್ನೇಹಿತರ ಹಾರೈಕೆಗಳಿಗೆ ಅಭಿವಾದಿಸಿದರು. ಜಾಲಂದರ ಕೃತಿಯ ಲೇಖಕಿ ಕಲಾ ಭಾಗ್ವತ್ ಅವರು ಮಾತನಾಡುತ್ತಾ, ಕನ್ನಡ ವಿಭಾಗವು ಸಮಸ್ತ ಮುಂಬೈ ಕನ್ನಡಿಗರಿಗೆ ನಮ್ಮದು ಎಂಬಂತಹ ನಿಸ್ವಾರ್ಥವಾದ ಭಾವನೆಯನ್ನು ತರುವಂಥದ್ದು. ಅದಕ್ಕೆ ಕಾರಣ, ವಿಭಾಗದ ಆರೋಗ್ಯಪೂರ್ಣವಾದ ವಾತಾವರಣ. ಓದು- ಬರೆವಣಿಗೆಯಲ್ಲಿ ನನಗಿರುವ ಆಸಕ್ತಿ, ಎಲ್ಲರ ಆಶೀರ್ವಾದ, ಹಾರೈಕೆ ಇದ್ದುದರಿಂದ ನಾಲ್ಕು ಕೃತಿಗಳನ್ನು ಬರೆದು ಪ್ರಕಟಿಸಲು ಸಾಧ್ಯವಾಯಿತು ಎಂದರು. ತನ್ನ ಕೃತಿರಚನೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ಬೆಳಕಿಂಡಿ ಕೃತಿಯ ಕೃತಿಕಾರರಾದ ಸವಿತಾ ಅರುಣ್ ಶೆಟ್ಟಿ ಅವರು ತಮ್ಮ ಚೊಚ್ಚಲ ಕೃತಿರಚನೆಯ ಅನುಭವವನ್ನು
ಹಂಚಿಕೊಳ್ಳುತ್ತಾ, ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಸೇರಿಕೊಂಡ ಮೇಲೆ ತಾನು ಕಲಿತದ್ದು ಅಪಾರ. ಓದು ಬರೆಹ ತನ್ನ ಆಸಕ್ತಿ ಆಗಿದ್ದರೂ ವಿಶ್ವವಿದ್ಯಾಲಯ ಕಲಿಸಿದ ಬರೆವಣಿಗೆಯ ಶಿಸ್ತು ಹೆಚ್ಚಿನದು. ಅದಕ್ಕೆ ಕಾರಣ ವಿಭಾಗದ ಪ್ರಾಧ್ಯಾಪಕರ ಅಧ್ಯಾಪನ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ಎಂದು ನುಡಿದು ಮಿತ್ರಾ ವೆಂಕಟ್ರಾಜ್ ಅವರ ಸಹಕಾರವನ್ನು ಸ್ಮರಿಸಿದರು. ಡಾ. ಜಿ. ಎನ್ ಉಪಾಧ್ಯ ಅವರ ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ -ಡಾ. ಸುಧಾ ಮೂರ್ತಿ ಕೃತಿಯ ಅನುವಾದಕರಾದ ವಿದ್ಯಾ ರಾಮಕೃಷ್ಣ ಅವರು ತಮ್ಮ ಮಾತಿನಲ್ಲಿ, ಗುರುಗಳ ಕೃತಿಯನ್ನು ಅನುವಾದ ಮಾಡುವ ಕೆಲಸವು ಬಯಸದೇ ಬಂದ ಭಾಗ್ಯವಾಗಿದೆ. ಕಾನ್ವೆಂಟ್ ಶಾಲೆಯಲ್ಲಿ ಕಲಿತುದುದರಿಂದ ಅಲ್ಲಿಯ ಗುರುಗಳ ಅಧ್ಯಾಪನದಿಂದಾಗಿ ಆಂಗ್ಲಭಾಷೆಯ ತಳಪಾಯ ಗಟ್ಟಿಯಾಗಿತ್ತು ಎಂದರು. ಕೃತಿ ಪ್ರಕಟಣೆಯಲ್ಲಿ ನೆರವಾದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.
ಡಾ. ಜಿ ಎನ್ ಉಪಾಧ್ಯ ಅವರ ರಸಋಷಿ ರಾಷ್ಟ್ರಕವಿ ಕುವೆಂಪು ಕೃತಿಯನ್ನು ಪರಿಚಯಿಸಿದ ವಿಭಾಗದ ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ಕೃತಿಯ ವಿಶೇಷತೆಯ ಕಡೆಗೆ ಗಮನಸೆಳೆಯುತ್ತಾ, ಈ ಕೃತಿಯ ಓದು ಹೊಸ ಓದುಗನಿಗೆ ಕುವೆಂಪು ಸಾಹಿತ್ಯಕ್ಕೆ ಪ್ರವೇಶಿಕೆಯನ್ನು ಒದಗಿಸಿಕೊಟ್ಟರೆ, ವಿದ್ಯಾರ್ಥಿಗಳಿಗೆ ಅಲ್ಪಸ್ವಲ್ಪ ಓದನ್ನು ಸ್ಪಷ್ಟವಾಗಿಸಿಕೊಳ್ಳಲು, ಮತ್ತೊಮ್ಮೆ ಓದಲು ಅನುಕೂಲ ಮಾಡಿಕೊಡುತ್ತದೆ. ಕುವೆಂಪು ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿರುವ ವಿದ್ವಾಂಸರಿಗೆ ಕುವೆಂಪು ಅವರ ಸಾಹಿತ್ಯವನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂದರು. ಸವಿತಾ ಅರುಣ್ ಶೆಟ್ಟಿ ಅವರ ಬೆಳಕಿಂಡಿ ಕೃತಿಯನ್ನು ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಅವರು ಪರಿಚಯಿಸಿದರು. ಸಾಕಷ್ಟು ವಿಪುಲವಾಗಿರುವ ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯವನ್ನು ಚಿಕ್ಕ ಪುಸ್ತಕದಲ್ಲಿ ತುಂಬಾ ಸಶಕ್ತವಾಗಿ, ಅಚ್ಚುಕಟ್ಟಾಗಿ, ಅರ್ಥವತ್ತಾಗಿ, ಸಮರ್ಪಕವಾಗಿ ಸವಿತಾ ಅವರು ಪರಿಚಯಿಸಿದ್ದಾರೆ.
ಕೃತಿಯ ಹೆಸರು ಅನ್ವರ್ಥಕವಾಗಿದೆ ಎಂದು ಅವರು ನುಡಿದರು. ಡಾ. ಜಿ ಎನ್ ಉಪಾಧ್ಯ ಅವರ ಇನ್ನೊಂದು ಕೃತಿ, ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ- ಡಾ. ಸುಧಾ ಮೂರ್ತಿ ಹೊತ್ತಗೆಯನ್ನು ವಿಭಾಗದ ಕನ್ನಡ ಕಲಿಕಾ ತರಗತಿ ಶಿಕ್ಷಕರಾದ ಗೀತಾ ಮಂಜುನಾಥ್ ಅವರು ಪರಿಚಯಿಸುತ್ತಾ, ಲೇಖಕರು ಆರು ವಿಭಾಗಗಳಲ್ಲಿ ಸುಧಾ ಮೂರ್ತಿ ಅವರ ಸಾಹಿತ್ಯ ಮತ್ತು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಅವಲೋಕಿಸಿದ್ದಾರೆ. ಸುಧಾಮೂರ್ತಿ ಅವರ ವೈವಿಧ್ಯಮಯ ವ್ಯಕ್ತಿತ್ವವನ್ನು ಪರಿಚಯಿಸುತ್ತಲೇ ಅವರ ಜೀವನದ ಕಿರುದರ್ಶನವನ್ನು ಕೃತಿಯು ಮಾಡಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾ ರಾಮಕೃಷ್ಣ ಅವರ ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್ – ದ ಇನ್ಪೈರಿಂಗ್ ಟೇಲ್ ಆಫ್ ಡಾ ಸುಧಾ ಮೂರ್ತಿ ಕೃತಿಯಲ್ಲಿ ಎದ್ದು ಕಾಣುವ ಅಂಶ ಕೃತಿಕಾರರ ಭಾಷಾ ಪ್ರಾವೀಣ್ಯತೆ. ಕನ್ನಡ ಶಬ್ದಗಳಿಗೆ ಅಷ್ಟೇ ಸಶಕ್ತವಾದ ಆಂಗ್ಲ ಭಾಷೆಯ ಪದಗಳನ್ನು ಹುಡುಕಿ, ವ್ಯಾಕರಣಬದ್ಧವಾಗಿ, ಅರ್ಥಪೂರ್ಣವಾಗಿ, ವಾಕ್ಯರಚನೆಯನ್ನು ಲೀಲಾಜಾಲವಾಗಿ ಮಾಡಿದ್ದಾರೆ. ಇದೊಂದು ಸಮರ್ಪಕ ಅನುವಾದ ಕೃತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಶೋಧನ ವಿದ್ಯಾರ್ಥಿ ಸುರೇಖಾ ಹರಿಪ್ರಸಾದ್ ಶೆಟ್ಟಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ಅವರ ನನ್ನ ಇತ್ತೀಚಿಗಿನ ಓದು ಕೃತಿಯ ಕುರಿತು ಹೇಳುತ್ತಾ, ಕೃತಿಯು ಓದುಗರ ಸಾಹಿತ್ಯ ಜಗತ್ತಿನ ಅರಿವಿನ ಹಾದಿ ವಿಸ್ತರಿಸಲು ದಾರಿದೀವಿಗೆಯಂತಿದೆ. .ಸರಳ ಸುಂದರ ನಿರೂಪಣೆಯೊಂದಿಗೆ ವರ್ಣನಾತ್ಮಕ ಹಾಗೂ ಗಹನ ವಿಚಾರ ವಿವೇಚನೆಯ ಹೂರಣ ಈ ಕೃತಿಯ ವೈಶಿಷ್ಟ್ಯವಾಗಿದೆ ಎಂದರು.
ಕಲಾ ಭಾಗ್ವತ್ ಅವರ ಜಾಲಂದರ ಕೃತಿಯ ಪರಿಚಯವನ್ನು ಎಂ.ಎ.ವಿದ್ಯಾರ್ಥಿ ವಿಕ್ರಮ್ ಜೋಶಿ ಅವರು ಮಾಡಿದರು.ಜಾಲಂದರ ಕೃತಿಯನ್ನು ನಾಲ್ಕು ವಿಭಾಗಗಳಲ್ಲಿ ಸಾಹಿತ್ಯಾಸಕ್ತರು ಓದಬಹುದು. ಇದರಲ್ಲಿ ಸಾಹಿತ್ಯ ವಿಮರ್ಶೆಯ ಕುರಿತಾದ ಲೇಖನಗಳು, ವಿಮರ್ಶಕರ ಸಂದರ್ಶನ ಮತ್ತು ವಿಚಾರಗಳು, ವ್ಯಕ್ತಿ ಚಿತ್ರಣಗಳು, ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ ಮತ್ತು ಮುಂಬೈ ವಿವಿ ಸುತ್ತ ಬರೆದ ಲೇಖನಗಳಿವೆ. ಮೊದಲ ಬಾರಿಗೆ ಬರೆಯುವ ಬರಹಗಾರರಿಗೆ ಇದು ಮಾದರಿ ಕೃತಿಯಾಗಬಲ್ಲದು ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ವಿಭಾಗದ ನಲ್ವತ್ತಾರರ ಸಂಭ್ರಮದ ಅಂಗವಾಗಿ ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಅವರಿಂದ ಉಪನ್ಯಾಸ, ನಿರಂಜನ ಸಂಸ್ಮರಣೆ, ಮುಂಬೈ ವಿಶ್ವವಿದ್ಯಾಲಯದ ಸಾಧಕರಿಗೆ ಗೌರವ ಕಾರ್ಯಕ್ರಮ, ಶೋಧಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನೆರವೇರಿದವು. ವಿಭಾಗದ ಸಹಪ್ರಾಧ್ಯಾಪಕರಾದ ಡಾ ಪೂರ್ಣಿಮಾ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ನಗರದ ಗಣ್ಯರು, ಸಾಹಿತ್ಯಾಭಿಮಾನಿಗಳು, ವಿದ್ಯಾರ್ಥಿಗಳು ಹಾಜರಿದ್ದರು .