ಪಾಳುಬಿದ್ದ ಮೂಲ ತರವಾಡು ಮನೆಯನ್ನು ಜೀರ್ಣೋದ್ದಾರಗೊಳಿಸುವ ಮೊದಲು ಒಂದು ಜ್ಯೋತಿಷ್ಯ ಪ್ರಶ್ನೆ ಅಗತ್ಯವಿದೆ. ಕಾರಣ ಕುಟುಂಬದ ಧರ್ಮದೈವಗಳು, ನಾಗ ಸಾನಿಧ್ಯ, ಪ್ರೇತಾತ್ಮಗಳ ಸದ್ಗತಿಯ ಬಗ್ಗೆ ತಿಳಿಯಬೇಕಾಗಿದೆ. ಅದಕ್ಕಾಗಿ ಯೋಗ್ಯ ಜ್ಯೋತಿಷ್ಯರನ್ನು ಹುಡುಕಿ ಕುಟುಂಬದ ಹಿನ್ನಲೆಯನ್ನು ತಿಳಿದ ಹಿರಿಯರನ್ನು ಸೇರಿಸಿ, ಚರ್ಚಿಸಿ ದೈವಜ್ಞರು ನೀಡಿದ ಪರಿಹಾರದಂತೆ ಹೊಸ ತರವಾಡು ಮನೆ, ದೈವಸ್ಥಾನ ಭಂಡಾರ ಮತ್ತು ನಾಗ ಪ್ರತಿಷ್ಠೆಗಳನ್ನು ಕರ್ಮಜ್ಞಾನಿಗಳಾದ ಆಚಾರ್ಯ (ತಂತ್ರಿ)ರಿಂದ ಶುದ್ಧ ಕ್ರಿಯಾದಿ ಕರ್ಮಗಳನ್ನು ಮಾಡಿಸುವುದು, ದೈವಗಳಿಗೆ ನೇಮ ಕೊಟ್ಟು ವರ್ಷಂಪ್ರತಿ ಸೂಚಿಸಿದ ಪರ್ವಗಳನ್ನು ತಂಬಿಲಗಳನ್ನು ಮಾಡಿಸಿಕೊಂಡು ಬರುವುದು. ಇದು ನಮ್ಮ ಹಿರಿಯರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿ
ಆದರೆ ಈಗ ಕೆಲವು ಕುಟುಂಬಸ್ಥರು ಮೇಲೆ ಸೂಚಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ತಿಗೊಳಿಸಿ, ಬ್ರಹ್ಮಕಲಶಾದಿಗಳನ್ನು ಮಾಡಿಸಿ, ಮಾಡಿದ್ದು ಸರಿಯಾಗಿದೆಯೇ ಎಂದು ತಿಳಿಯಲು ಮತ್ತೊಬ್ಬ ಜ್ಯೋತಿಷ್ಯರ ಮೊರೆ ಹೋಗಿ ಪ್ರಶ್ನೆ ಇರಿಸುವುದು ಸಾಮಾನ್ಯವಾಗಿದೆ. ಅಲ್ಲಿ ನೀವು ಮಾಡಿದ ಯಾವ ಕಾರ್ಯಗಳೂ ಸರಿಯಾಗಿಲ್ಲ. ದೈವಸ್ಥಾನ, ನಾಗಪ್ರತಿಷ್ಠೆಗಳಲ್ಲೂ ದೋಷವಿದೆ. ಪ್ರೇತಾತ್ಮಗಳಿಗೆ ಮೋಕ್ಷವಾಗಿಲ್ಲ ಕರ್ಮದೋಷವಿದೆ. ಕೂಡಲೇ ಅಷ್ಠಮಂಗಲ ಇರಿಸಿ ಪರಿಹಾರ ಮಾಡಿಕೊಳ್ಳದಿದ್ದರೆ ಕುಟುಂಬದಲ್ಲಿ ಘೋರ ದುರಂತ ಸಂಭವಿಸಲಿದೆ ಎಂದು ಭೀತಿ ಹುಟ್ಟಿಸುವ ಉದಾಹರಣೆಗಳು ಸಾಕಷ್ಟಿವೆ. ಒಮ್ಮೆ ಕಟ್ಟಿದ್ದನ್ನು ಮುರಿಯುವುದು, ಪರಿಹಾರ ಕರ್ಮಗಳನ್ನು ಪುನಃ ಮಾಡಿಸುವುದು, ಮಕ್ಕಳು ಕಟ್ಟಿದ ಆಟದ ಮನೆಯನ್ನು ಮುರಿದಂತೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂಥ ಸ್ಥಿತಿ ಕುಟುಂಬದವರದ್ದು.
ಇದಕ್ಕೆಲ್ಲಾ ಕಾರಣ ಕುಟುಂಬಸ್ಥರ ಒಮ್ಮತದ ವಿಶ್ವಾದ ಕೊರತೆ. ದುಡಿದು ಸಂಪಾದಿಸಿದ ಹಣವನ್ನೆಲ್ಲಾ ಪ್ರಶ್ನೆ, ಹೋಮ, ಪರಿಹಾರ ಎಂದೆಲ್ಲಾ ಖರ್ಚು ಮಾಡಿ, ಕುಟುಂಬದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಅರ್ಧದಲ್ಲಿ ನಿಂತದ್ದನ್ನು ಕಾಣಬಹುದು. ಇದು ಅಂಧ ವಿಶ್ವಾಸವಲ್ಲವೇ? ಇಲ್ಲಿ ನಾವು ಚಿಂತಿಸಬೇಕಾದ ಮುಖ್ಯ ವಿಷಯವೆಂದರೆ ದೈವ ದೇವರು, ಆತ್ಮಗಳು, ಪರೀಕ್ಷಣಕ್ಕೋ, ಪ್ರಯೋಗಕ್ಕೋ ಒಳಪಡದೆ, ಕೇವಲ ನಮ್ಮ ಶ್ರದ್ಧಾಭಕ್ತಿಯ ಶಕ್ತಿ ಸ್ವರೂಪಿಗಳು. ಇಲ್ಲಿ ನಮಗೆ ನಂಬಿಕೆ, ವಿಶ್ವಾಸ ಮುಖ್ಯ. ಕುಟುಂಬಸ್ಥರೆಲ್ಲರೂ ಒಮ್ಮತದಿಂದ ತ್ರಿಕರಣಪೂರ್ವಕವಾಗಿ ನಾವು ಮಾಡಿದ ಸೇವೆಯನ್ನು ಸ್ವೀಕರಿಸಬೇಕು ಎಂದು ಪ್ರಾರ್ಥಿಸಿದಲ್ಲಿ ನಮ್ಮ ಇಷ್ಟಾರ್ಥ ಸಿದ್ಧಿಯಾಗುವುದು ಖಚಿತ ಎಂದು ತಿಳಿಯಬೇಕು. ಪ್ರಶ್ನೆ ಇಟ್ಟ ಜೋತಿಷ್ಯರಲ್ಲಿ, ಕರ್ಮಿಗಳಲ್ಲಿ ಹಾಗೂ ಇತರ ಎಲ್ಲಾ ಪರಿಹಾರ ಕಾರ್ಯದಲ್ಲಿ ನಂಬಿಕೆ ಅಗತ್ಯ.
ಒಂದು ದೇವಸ್ಥಾನದ ಬ್ರಹ್ಮಕಲಶ ಆಗಿ ಪುನಃ ಪ್ರಶ್ನೆ ಇಡಲು 12 ವರ್ಷ ಅಂದರೆ ಎರಡನೇ ಬ್ರಹ್ಮಕಲಶದ ಅವಧಿಯಂತೆ ಒಂದು ತರವಾಡಿನಲ್ಲಿ 22 ವರ್ಷ ಕಳೆಯದೆ ಪುನಃ ಪ್ರಶ್ನೆ ಇಡಬಾರದೆಂದು ಪ್ರತಿಜ್ಞೆ ಮಾಡಿಕೊಳ್ಳಬೇಕು. ಉದಾ : ಪ್ರತಿಷ್ಠಾ ಕರ್ಮ ಆಗಿ ಪುನಃ ಪ್ರಶ್ನೆಯಲ್ಲಿ ಚಿಂತಿಸಿದಾಗ ಮೊದಲು ಮಾಡಿದ್ದು ಸರಿಯಾಗಲಿಲ್ಲ ಎಂದು ಕಂಡು ಬಂದರೆ, ಮೊದಲು ಮಾಡಿದಕ್ಕೆ ಗ್ಯಾರಂಟಿ ಟೈಮ್ ಇಲ್ಲವಲ್ಲ, ಅವರಿಗೆ (ಕರ್ಮಿಗಳಿಗೆ) ಆನೆ ಜೀವಂತ ಇದ್ದರೂ ಲಕ್ಷ ಸತ್ತರೂ ಲಕ್ಷ ಎಂಬಂತೆ ಅಲ್ಲವೇ?
ಹಿಂದೆ ಅಷ್ಟಮಂಗಳಕ್ಕೆ ಎಷ್ಟು ಪಾವಿತ್ರ್ಯ ಇತ್ತೆಂದರೆ ನೆಲದಲ್ಲಿ ಚಾಪೆ ಹಾಕಿ, ಸೂರ್ಯೋದಯಕ್ಕೆ ಪ್ರಾರಂಭಿಸಿ ಸೂರ್ಯಾಸ್ತದ ವರೆಗೆ ಚಿಂತಿಸಿ, ಆ ಮನೆಯಲ್ಲೇ ಮೊಕ್ಕಾಂ ಮಾಡಿ ಪ್ರಶ್ನೆ ಮುಗಿಸಿಯೇ ಚಾಪೆ ಮಡಚಬೇಕು ಎಂಬ ಶಾಸ್ತ್ರವಿತ್ತು. ಈಗ ಅಸಮಯದಲ್ಲಿ ಪ್ರಾರಂಭಿಸಿ ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ಕವಡೆ ತಿರುಗಿಸಿ, ಈಗಿನ ಕೆಲವು ತುಳು ಯಕ್ಷಗಾನದಂತೆ ರಾಗಕ್ಕಿಂತ ಉಗುಳೇ ಹೆಚ್ಚಾಗಿ, ನಮ್ಮ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಮೂರ್ನಾಲ್ಕು ದಿವಸಗಳಲ್ಲಿ ಮುಗಿಸಲು ಸಾಧ್ಯವಿದ್ದ ಪ್ರಶ್ನೆಯನ್ನು ತಿಂಗಳಿಗೊಮ್ಮೆ ಬಂದು, ವರ್ಷ ಪೂರ್ತಿಯಾದರೂ ಮುಗಿಯದ ಉದಾಹರಣೆಗಳಿವೆ. ಕಾರಣ ಇವರು ಕಟ್ಟಡಗಳ ಮೇಸ್ತ್ರಿಗಳಂತೆ ಎಷ್ಟೋ ಪ್ರಶ್ನೆಗಳನ್ನು ಏಕ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ. ಇದನ್ನೆಲ್ಲಾ ನೋಡುವಾಗ ಪರವೂರಿನಲ್ಲಿರುವ ಉದ್ಯಮಿಗಳ, ಉದ್ಯೋಗಿಗಳ ಅವಸ್ಥೆಯನ್ನು ಯಾರಲ್ಲಿ ಹೇಳಬೇಕು.
ಸಮಾಜ ಬಾಂಧವರೇ ದೈವ ದೇವರು, ಗುರು ಹಿರಿಯರೆಂಬ ಅಲೌಕಿಕ ಶಕ್ತಿಯ ಮೇಲೆ ವಿಶ್ವಾಸವಿರಿಸಿ. ಪರವೂರಲ್ಲಿ ದುಡಿದು ಸಂಪಾದಿಸುವ ಯುವ ಜನಾಂಗಕ್ಕೆ ಪದೇ ಪದೆ ಪ್ರಶ್ನೆ ಪರಿಹಾರ ಎಂದು ಹೇಳುತ್ತಾ ಅವರಿಗೆ ಜಿಗುಪ್ಸೆ ಹುಟ್ಟಿಸದಿರಿ. ಬುದ್ಧಿವಂತರಾದ ನಮ್ಮ ಯುವ ಪೀಳಿಗೆ ಇವೆಲ್ಲಾ ಅಂಧ ವಿಶ್ವಾಸ ಎಂದು ಇಂಥವುಗಳಿಗೆ ಬಹಿಷ್ಕಾರ ಹಾಕುವ ಮುನ್ನ ಜಾಗೃತರಾಗೋಣ.
ಕಡಾರು ವಿಶ್ವನಾಥ ರೈ