ಮುಂಬಯಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಮಹಾ ಸಮಾವೇಶವು ಎಪ್ರಿಲ್ 7 ರಂದು ರಂದು ಸಂಜೆ 5 ರಿಂದ ಥಾಣೆ ಪಶ್ಚಿಮ ವರ್ತಕ್ ನಗರದ ಪೋಕ್ರಾಣ್ ರೋಡ್, ನಂಬರ್ -1ರ ಕ್ಯಾಡ್ ಬರಿ ಕಂಪೆನಿ ಎದುರಿನ ರೇಮಂಡ್ ಗಾರ್ಡನ್ ನಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ, ಬಿಜೆಪಿ ನಾಯಕ, ಸಮಾಜ ಸೇವಕ, ಸಂಘಟಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಮುಂಬಯಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕಾಸರಗೋಡು ಲೋಕಸಭಾ ಕ್ಷೇತ್ರದ ಬಂಧುಗಳನ್ನು ಒಂದುಗೂಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳ ವಿವಿಧ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು.
ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ನಗರದ ವಿವಿಧ ಕನ್ನಡ, ತುಳು ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರಾದ ಅಶೋಕ್ ಅಡ್ಯಂತಾಯ, ಸಂಜೀವ ಎನ್. ಶೆಟ್ಟಿ, ಸುಕುಮಾರ್ ಎನ್. ಶೆಟ್ಟಿ, ಸುಭಾಶ್ ಶೆಟ್ಟಿ, ಸುದೀಪ್ ಶೆಟ್ಟಿ, ಆದರ್ಶ್ ಶೆಟ್ಟಿ ಮೊದಲಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.