ಕೊರೊನಾದ ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ಹೊಸ ತಳಿ ಜೆಎನ್.1 ಸೋಂಕು ಕೇರಳದಲ್ಲಿ ಪತ್ತೆಯಾಗಿರುವುದು ಗಾಬರಿ ಪಡಬೇಕಾದ ವಿಷಯ ಅಲ್ಲ; ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾದ, ಸಂಭಾವ್ಯ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.
2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತವಾಗಿದ್ದುದರಿಂದ ಸಾವು ನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರು ವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್ ಫಂಗಸ್ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ.
ನಮ್ಮ ದೇಶದಲ್ಲಿ ದೃಢಪಟ್ಟಿರುವ ಕೊರೊನಾ ಉಪತಳಿ ಜೆಎನ್.1ನಿಂದಾಗಿ ಜೀವಹಾನಿ ಉಂಟಾಗಿಲ್ಲ ಎನ್ನುವುದು ಸದ್ಯಕ್ಕೆ ಸಮಾಧಾನದ ವಿಚಾರ. ಹಾಗೆಂದ ಮಾತ್ರಕ್ಕೆ ನಾವು ಯಾರೂ ನಿರಾಳವಾಗಿ ಇರುವಂತಿಲ್ಲ. ಏಕೆಂದರೆ ಹೊಸ ತಳಿ ಪ್ರತಿ ರಕ್ಷಣೆಗಾಗಿ ನಾವು ಬಳಸುವ ವೈದ್ಯಕೀಯ ವ್ಯವಸ್ಥೆಗೆ ಸವಾಲು ಹಾಕುವಂಥದ್ದು. ಹೀಗಾಗಿ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರೋಗ್ಯ ಮತ್ತು ತಾಂತ್ರಿಕ ಪರಿಣತರ ತಂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮತ್ತೆ ವಿಷಮ ಪರಿಸ್ಥಿತಿ ಬಾರದಂತೆ ಎಲ್ಲರೂ ನೋಡಿಕೊಳ್ಳಬೇಕಾಗಿದೆ.
ಕೊರೊನಾದಂತಹ ಶ್ವಾಸಾಂಗ ಸಂಬಂಧಿ ಸೋಂಕು ರೋಗಗಳು ಚಳಿಗಾಲದಲ್ಲಿ ಹೆಚ್ಚುವುದು ಈ ಹಿಂದಿನ ನಿದರ್ಶನಗಳಿಂದ ಶ್ರುತಪಟ್ಟಿದೆ. ಅಮೆರಿಕ, ಸಿಂಗಾಪುರ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೆಮ್ಮು, ನೆಗಡಿ ಸೇರಿದಂತೆ ಕೊರೊನಾ ಲಕ್ಷಣಗಳನ್ನೇ ಹೊಂದಿರುವ ಆರೋಗ್ಯ ಸಮಸ್ಯೆ ವ್ಯಾಪಕವಾಗಿರುವುದು ಈಗಾಗಲೇ ವರದಿಯಾಗಿದೆ. ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಕೊರೊನಾದ ಹೊಸ ರೂಪಾಂತರಿಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿರುವುದು ನಿಜ. ಅದು ಈ ಹಿಂದಿನ ವರ್ಷಗಳಂತೆ ಹಾಹಾಕಾರ ಉಂಟು ಮಾಡುವುದು ಬೇಡವೇ ಬೇಡ. ಅದಕ್ಕಾಗಿ ನಾವೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜತೆಗೆ ಕೈಜೋಡಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಆತಂಕ ಪಡದೆ ಉತ್ತಮ ಆರೋಗ್ಯಾಭ್ಯಾಸಗಳನ್ನೂ ನಾವು ಹೊಂದುವುದು ಅಗತ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಅಗತ್ಯ. ಕೇಂದ್ರ ಸರಕಾರದ ಮಾಹಿತಿ ಪ್ರಕಾರ 335 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ರೂಪಾಂತರಿ ಜೆಎನ್.1 ಇಲ್ಲದೇ ಇರುವುದು ಸಮಾಧಾನದ ಸಂಗತಿ.
ಕೊರೊನಾದಂತಹ ಅಪರಿಚಿತ ಸೋಂಕು ರೋಗಗಳ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ರೂಪಾಂತರ ಹೊಂದಬಲ್ಲ ಅದರ ಸಾಮರ್ಥ್ಯ ಪ್ರಧಾನ ಕಾರಣ. ಅಲ್ಲದೇ ಇಂತಹ ಕಾಯಿಲೆಗಳನ್ನು ಗುಣಪಡಿಸಲು ಸಿದ್ಧ ಔಷಧಗಳು ಇಲ್ಲ. ಅದರಿಂದ ಉಂಟಾಗುವ ರೋಗ ಲಕ್ಷಣಗಳನ್ನು ಉಪಶಮನಗೊಳಿಸುವ ಔಷಧಗಳು ಮಾತ್ರ ನಮ್ಮಲ್ಲಿ ಲಭ್ಯವಿವೆ. ಹೀಗಾಗಿಯೇ ಪ್ರತೀ ಬಾರಿ ಹೊಸ ತಳಿ, ಹೊಸ ರೂಪಾಂತರಿ ಪತ್ತೆಯಾದಾಗ ಗಾಬರಿಗೊಳ್ಳದೆ ಸನ್ನದ್ಧತೆ ಹೆಚ್ಚಿಸಿಕೊಳ್ಳಬೇಕು, ಮುಂಜಾಗರೂಕತೆಯಿಂದ ಇರಬೇಕು.