ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟರ ಸಮ್ಮೇಳನ ಹಾಗೂ ಬಂಟರ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಅಜ್ಜರಕಾಡು ಮೈದಾನದಲ್ಲಿನ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಮಧ್ಯಾಹ್ನ ಜರುಗಿತು. ಕಾರ್ಯಕ್ರಮವನ್ನು ಸಿ.ಎಂ. ಸಿದ್ದರಾಮಯ್ಯ ಅವರು ಅತಿಥಿಗಳ ಜೊತೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಬಂಟರು ಜಾತ್ಯತೀತರು. ಎಲ್ಲ ಜಾತಿ, ಸಮುದಾಯದ ಜನರನ್ನು ತಮ್ಮವರೆಂದು ಕಾಣುವ ಮೂಲಕ ಮನುಷ್ಯತ್ವವನ್ನು ಗೌರವಿಸುವ ಬಂಟರು ನಾಡಿಗೆ ಮಾದರಿಯಾಗಿದ್ದಾರೆ. ಇಡೀ ವಿಶ್ವದೆಲ್ಲೆಡೆಯಿಂದ ಇಂದು ಬಂಟ ಸಮಾಜದ ಜನರು ಒಗ್ಗಟ್ಟಾಗಿ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು. ಬಹಳ ಸಂತೋಷವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಬಂಟರು ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ಪ್ರದೇಶಗಳಿಗೆ ಉದ್ಯೋಗ, ವ್ಯವಹಾರ ನಿಮಿತ್ತ ವಲಸೆ ಹೋಗಿದ್ದಾರೆ. ಬಂಟರೆಂದರೆ ಸಾಹಸ ಪ್ರವೃತ್ತಿ ಉಳ್ಳವರು. ಉದ್ಯೋಗ ಗಳಿಸಲು, ಜೀವನ ನಿರ್ವಹಣೆ ಉದ್ದೇಶದಿಂದ ಪ್ರಪಂಚದ ಎಲ್ಲ ಕಡೆಗಳಲ್ಲಿ ಬಂಟರನ್ನು ಇವತ್ತು ಕಾಣಬಹುದಾಗಿದೆ. ಕರ್ನಾಟಕ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಶಿಕ್ಷಣ, ಕ್ರೀಡೆ, ಹೋಟೆಲ್ ಉದ್ಯಮ, ಸಿನಿಮಾ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟರು ತಮ್ಮದೇ ಛಾಪು ಮೂಡಿಸಿದವರು. ಬಂಟರು ಎಲ್ಲಾದರೂ ಸಿಕ್ಕಿದರೆ ಅವರು ತುಳು ಭಾಷೆಯಲ್ಲೇ ಮಾತಾಡುತ್ತಾರೆ. ಅಷ್ಟರಮಟ್ಟಿಗೆ ಅವರು ಭಾಷೆಯನ್ನು ಗೌರವಿಸುತ್ತಾರೆ. ಬಂಟರಿಂದ ಕನ್ನಡ ಸಂಸ್ಕೃತಿ, ಪರಂಪರೆ, ಭಾಷೆಗೂ ಗೌರವ ಸಿಗುತ್ತಿದೆ. ಇದು ಶ್ಲಾಘನೀಯ ವಿಚಾರ” ಎಂದರು.
“ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾನೆ. ಬೆಳೆಯುತ್ತ ಅವರು ಅಲ್ಪಮಾನವರಾಗುತ್ತಾನೆ. ಇದಕ್ಕೆ ಆಸ್ಪದ ನೀಡದೆ ನಾವೆಲ್ಲರೂ ವಿಶ್ವಮಾನವರಾಗಿಯೇ ಉಳಿಯಬೇಕು. ಎರಡು ದಿನಗಳ ಕಾಲ ನಡೆಯಲಿರುವ ಬಂಟ ಸಮ್ಮೇಳನ ಯಶಸ್ವಿಯಾಗಲಿ. ಈ ಮೂಲಕ ಬಂಟರ ಸಂಸ್ಕೃತಿಯನ್ನು ಬೇರೆಯವರು ಕೂಡ ಅನುಕರಣೆ ಮಾಡುವಂತಾಗಲಿ” ಎಂದರು.
ಸಭೆಯನ್ನು ಉದ್ದೇಶಿಸಿ ಮಾತಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ಬಂಟರ ಸಂಸ್ಕೃತಿ, ಕಲೆ, ಆಸಕ್ತಿಯನ್ನು ನೋಡಿ ಮಂತ್ರಮುಗ್ಧಳಾಗಿದ್ದೇನೆ, ಈ ದೇಶಕ್ಕೆ ರಾಜ್ಯಕ್ಕೆ ಬಂಟರು ಕೊಟ್ಟಿರುವ ಕೊಡುಗೆ ಅಪಾರ. ಇಡೀ ವಿಶ್ವದಲ್ಲಿನ ಬಂಟರನ್ನು ಒಗ್ಗೂಡಿಸುವ ಈ ಸಮ್ಮೇಳನದ ಆಶಯ ಶ್ಲಾಘನೀಯ. ಬೆಳಗಾವಿಯಲ್ಲಿ ಅನೇಕ ಬಂಟರು ಹೋಟೆಲ್ ಉದ್ಯಮವನ್ನು ನಡೆಸಿಕೊಂಡಿದ್ದಾರೆ. ಅತಿಥಿಗಳನ್ನು ಹೃದಯ ಶ್ರೀಮಂತಿಕೆಯಿಂದ ಸತ್ಕರಿಸುವುದು ಬಂಟರಿಂದ ಮಾತ್ರ ಸಾಧ್ಯ” ಎಂದರು.
ಆಶಯ ಮಾತನ್ನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, “ಬಂಟರ ಮೇಲಿನ ಪ್ರೀತಿಯಿಂದ ಒಬ್ಬ ಸೋದರನಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ವಿಶ್ವ ಬಂಟರ ಸಮ್ಮೇಳನ, ಕ್ರೀಡಾಕೂಟ ಯಶಸ್ವಿಯಾಗಿ ಜರುಗಲಿ. ಒಳ್ಳೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ದೇವರ ದಯೆ ಇರಲಿ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾರ್ಕೂರು ಸಂಸ್ಥಾನದ ಡಾ. ವಿಶ್ವ ಸಂತೋಷ್ ಭಾರತಿ ಸ್ವಾಮೀಜಿ, ಉಡುಪಿ ಮಠಾಧೀಶ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಪೀಕರ್ ಯು.ಟಿ. ಖಾದರ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಬಂಟರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಡಾ.ಎನ್. ವಿನಯ ಹೆಗ್ಡೆ, ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ, ಬಂಜಾರ ಗ್ರೂಪ್ ನ ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ, ಬೆಳಪು ದೇವಿಪ್ರಸಾದ್ ಶೆಟ್ಟಿ, ಪುಣೆ ಸಂತೋಷ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಅರವಿಂದ್ ಶೆಟ್ಟಿ ಮಿರಾರೋಡ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಡಾ.ಪಿ.ವಿ. ಶೆಟ್ಟಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್, ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ , ಸಹ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ, ಸಂಯೋಜಕರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ಮೋಹನ್ ಶೆಟ್ಟಿ ಉಡುಪಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಕೆ.ಪಿ. ಸುಚರಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
“ಮುಂದಿನ ಬಜೆಟ್ ನಲ್ಲಿ ಬಂಟ ಅಭಿವೃದ್ಧಿ ನಿಗಮ ಘೋಷಣೆ”
“ಬಂಟರ ಅಭಿವೃದ್ಧಿಗೆ ಅಭಿವೃದ್ಧಿ ನಿಗಮ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ ಎಂದು ನೀವಿಲ್ಲಿ ಜ್ಞಾಪಿಸಿದ್ದೀರಿ. ಮುಂದಿನ ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡುತ್ತೇನೆ”
ಕ್ರೀಡಾಕೂಟ ಉದ್ಘಾಟನೆಗೂ ಮುನ್ನ ಉಡುಪಿಯ ಬೋರ್ಡ್ ಹೈಸ್ಕೂಲ್ ನಿಂದ ಮೈದಾನದವರೆಗೆ ಆಕರ್ಷಕ ಸ್ಥಬ್ಧಚಿತ್ರಗಳ ಮೆರವಣಿಗೆ, 62 ಬಂಟರ ಸಂಘಗಳ ಪಥ ಸಂಚಲನ ನಡೆಯಿತು. ಉಳ್ತೂರು ಮೋಹನ್ ದಾಸ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು.