ಮನೆಯಿಂದ ವಧು – ವರರು ಹೊರಡುವ ಮುನ್ನ ಮನೆ ದೇವರಿಗೆ, ದೈವಗಳಿಗೆ ಮತ್ತು ನಾಗದೇವರ ಚಾವಡಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಬೇಕು. ಎಲ್ಲಾ ಹಿರಿಯರು ಮುಂಡಾಸು ಕಟ್ಟಿಕೊಳ್ಳುವುದು ಸಂಸ್ಕೃತಿ.
ಮದುವೆ ಸಭಾಭವನದ ಮುಖ್ಯ ದ್ವಾರದಲ್ಲಿ ಸ್ವಾಗತಿಸುವ ಸಂದರ್ಭ ಕಾಲಿಗೆ ನೀರು ಹಾಕುವುದು ಚಿಕ್ಕಮ್ಮ ಅಥವಾ ಸೋದರ ಅತ್ತೆ. ಕೈ ಹಿಡಿಯುವುದು ಗಂಡಿನ ಸಹೋದರಿ ಮತ್ತು ಭಾವ. ಆರತಿ ಬೆಳಗುವುದು ಹೆಣ್ಣಿಗೆ ಮುತೈದೆ ಹೆಂಗಸರಿಂದ. ವೇದಿಕೆಯಲ್ಲಿ ಕಾಲುದೀಪವನ್ನು ವಧು – ವರರ ಮಾತಾ ಪಿತೃಗಳು ಬಂಟ ಗುರಿಕಾರನ ನೇತ್ರತ್ವದಲ್ಲಿ ಎಲ್ಲಾ ದೈವ – ದೇವರುಗಳನ್ನು ಪ್ರಾರ್ಥಿಸಿ ಬೆಳಗಿಸಬೇಕು. ಅಲ್ಲಿಯೇ ಗಣಪತಿಗೆ ಸುತ್ಯೆ ಇಟ್ಟು ಪ್ರಾರ್ಥಸುವುದು. ಹಿರಿಯರು ಮುಂಡಾಸು ಧರಿಸರಬೇಕು. ವಧು – ವರರನ್ನು ಒಟ್ಟಾಗಿಯೂ ಅಥವಾ ಬೇರೆ ಬೇರೆಯಾಗಿಯೂ ವೇದಿಕೆಗೆ ಕರೆದುಕೊಂಡು ಹೋಗಬಹುದು. ಮುಖ್ಯ ದ್ವಾರದಲ್ಲಿ ಆರತಿ ಮಾತ್ರ ಪ್ರತ್ಯೇಕ ಆಗತಕ್ಕದು. ವರನು ವೇದಿಕೆಯ ಬಲಭಾಗದಲ್ಲಿಯೂ, ವಧುವು ಎಡಭಾಗದಲ್ಲಿಯೂ ಕುಳಿತುಕೊಳ್ಳತಕ್ಕದ್ದು. ಅಲ್ಲಿ ವಧುವಿಗೆ ವರನ ಕಡೆಯಿಂದ ಉಡುಗೊರೆ ಕೊಟ್ಟು ಸತ್ಕರಿಸಬಹುದು.
ಆಮೇಲೆ ಎರಡು ಕಡೆಯ ಹಿರಿಯರು ವೇದಿಕೆಯಲ್ಲಿ ಸಭಾಂಗಣಕ್ಕೆ ಮುಖ ಮಾಡಿ ನಿಂತು ಬಂಟ ಗುರಿಕ್ಕಾರನ ನೇತ್ರತ್ವದಲ್ಲಿ ಒಂದು ಶ್ರದ್ಧಾ – ಭಕ್ತಿಪೂರ್ವಕ ಪ್ರಾರ್ಥನೆ ನಡೆಯಬೇಕು.
ಮುಂದಿನ ಕಾರ್ಯಕ್ರಮ ಮೂರು ಪ್ರದಕ್ಷಿಣೆ ಬರುವುದು. ಇಲ್ಲಿ ಮೂರು ಹೆಣ್ಣು ಮಕ್ಕಳನ್ನು ಕರೆದು ಒಬ್ಬರ ಕೈಯಲ್ಲಿ ಹಚ್ಚಿದ ಕಾಲುದೀಪ, ಎರಡನೇಯವಳ ಕೈಯಲ್ಲಿ ಒಂಬತ್ತು ಕುಡ್ತೆ ಕುಚ್ಚಿಲಕ್ಕಿ, ಒಂದು ತೆಂಗಿನಕಾಯಿ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟ ಹರಿವಾಣ ಕೊಡುವುದು. ಮೂರನೆಯವಳ ಕೈಯಲ್ಲಿ ಒಂದು ಹರಿವಾಣದಲ್ಲಿ ನಲುವತ್ತೆಂಟು ವೀಳ್ಯದೆಲೆ ಹಾಗೂ ಐದು ಅಡಿಕೆಯಿಟ್ಟು ಕೊಡುವುದು. ಆ ಮೂರು ಹೆಣ್ಣುಮಕ್ಕಳ ಹಿಂದಿನಿಂದ ಮದುಮಗನ ಭಾವ ಮದು ಮಗನನ್ನು, ಅವನ ಪತ್ನಿ (ಮದುಮಗನ ಸಹೋದರಿ – ಕೈ ಹಿಡಿದ ಬಾವನ ಹೆಂಡತಿ ) ಮದುಮಗಳನ್ನೂ ಬಲಗೈ ಹಿಡಿದುಕೊಂಡು ಮೂರು ಪ್ರದಕ್ಷಿಣೆ ಬರಬೇಕು.
ವಧೂವರರು – ವಧು ವರನ ಬಲಭಾಗದಲ್ಲಿ ಇರುವಂತೆ ನಿಲ್ಲಬೇಕು. ವರನ ಎಡ ಭಾಗದಲ್ಲಿ ಕೈಹಿಡಿದ ಬಾವನೂ, ವಧುವಿನ ಬಲಭಾಗದಲ್ಲಿ ಕೈಹಿಡಿದ ವರನ ಸಹೋದರಿಯೂ ನಿಲ್ಲುವುದು. ಆ ಸಮಯದಲ್ಲಿ ಬಂಟ ಗುರಿಕ್ಕಾರನು ಅವರ ಕೈಯಲ್ಲಿ ( ಕೈ ಹಿಡಿದವರ ಕೈಯಲ್ಲಿ ) ಹೂವಿನ ಹಾರ ಕೊಡುವುದು, ವೇದಿಕೆಯಲ್ಲಿ ಬಂಟ ಗುರಿಕ್ಕಾರ ಉತ್ತರಾಭಿಮುಖವಾಗಿ ನಿಂತು ವಧುವನ್ನು ಮೂಡು ಮುಖವಾಗಿಯೂ, ವರನನ್ನು ಪಡುಮುಖವಾಗಿಯೂ ಅವನ ಎದುರು ನಿಲ್ಲಿಸಿಕೊಳ್ಳುವುದು.
ವೇದಿಕೆಯಲ್ಲಿರುವ ಎಲ್ಲಾ ಹಿರಿಯರ ಕೈಗೂ ಅಕ್ಷತೆ ಕಾಳು ಕೊಡಬೇಕು. ತಕ್ಷಣ ಹೂವಿನ ಹಾರಗಳನ್ನು ವಧು – ವರರ ಕೈಗೆ ಹಾಸ್ತಾಂತರಿಸಬೇಕು. ಬಂಟ ಗುರಿಕ್ಕಾರ ವಧುವಿನ ಕೈಗೆ ಅಕ್ಷತೆಕಾಳು ಕೊಟ್ಟು ವರನ ತಲೆಗೆ ಅಕ್ಷತೆ ಹಾಕಿ ಹಾರಾರ್ಪಣೆ ಮಾಡಿಸುವುದು. ಅದೇ ರೀತಿ ವರನಿಗೆ ಅಕ್ಷತೆ ಕಾಳು ಕೊಟ್ಟು ವಧುವಿನ ತಲೆಗೆ ಅಕ್ಷತೆ ಕಾಳು ಹಾಕಿ ಹಾರಾರ್ಪಣೆ ಮಾಡಿಸುವುದು.
ವಧು – ವರರು ಅಕ್ಷತೆ ಹಾಕುವ ಸಂದರ್ಭದಲ್ಲಿ ಅವರವರ ದೈವ ದೇವರುಗಳಿಗೆ ಮನಸಾ ವಂದಿಸಿ ಪ್ರಾರ್ಥಿಸುವುದು ಬಹಳ ಮುಖ್ಯ. ಆ ಸಮಯದಲ್ಲಿ ಬಂಟ ಗುರಿಕ್ಕಾರನು ಹಿರಿಯರ ಮತ್ತು ಸೇರಿದಂತಹ ಎಲ್ಲ ಬಂಧು ಮಿತ್ರರ ಪರವಾಗಿ ಪ್ರಾರ್ಥಿಸಬೇಕು. ಆಗ ವೇದಿಕೆಯಲ್ಲಿರುವ ಎಲ್ಲಾ ಹಿರಿಯರು ಅಕ್ಷತೆ ಕಾಳನ್ನು ವಧು – ವರರಿಗೆ ಹಾಕಿ ಆಶೀರ್ವದಿಸಬೇಕು.
ಧಾರಾಕಲಶ :
ಧಾರಾಕಲಶದಲ್ಲಿ ಐದು ತೆಂಗಿನ ಹಿಂಗಾರದ ಎಸಳು, ಐದು ಮಾವಿನ ಎಲೆಗಳು ಐದು ಹಲಸಿನ ಎಲೆಗಳು,
ಗಂಗಾಜಲ ತುಂಬಿಸಿ, ಒಂದು ನಾಣ್ಯ ಹಾಕಿ, ಅದರ ಮೇಲಿಂದ ಒಂದು ಮುಗುಡದ ತೆಂಗಿನಕಾಯಿ, ಅದರ ಮೇಲೆ ತುದಿಯಲ್ಲಿ ಮಲ್ಲಿಗೆ ಹೂವು ಇಡಬೇಕು.
ಮುಂದಿನ ನಡೆ, ಧಾರಾಕಲಶವನ್ನು ವಧುವಿನ ಮಾವನ ಕೈಯಲ್ಲಿ ಕೊಟ್ಟು, ಸಭಾಂಗಣದಲ್ಲಿ ಸೇರಿದ ಎಲ್ಲಾ ಬಂಧು – ಮಿತ್ರರ ಒಪ್ಪಿಗೆಯನ್ನು ಪಡೆಯಲು ಸಭೆಗೆ ಹೋಗಿ ಬರುವುದು. ಅವರ ಜೊತೆಯಲ್ಲಿ ಹೆಣ್ಣಿನ ತಂದೆ ತಾಯಿ ಹೋಗಬಹುದು. ವೇದಿಕೆಯಲ್ಲಿ ಬಂಟ ಗುರಿಕ್ಕಾರನು ವಧು – ವರರ ಕೈಯಲ್ಲಿದ ತಾಂಬೂಲವನ್ನು ಕೆಳಗಿಳಿಸಿ, ವಧುವಿನ ಕೈಯಲ್ಲಿರುವ ಒಡ್ಡಿ ಉಂಗಿಲವನ್ನು ತೆಗೆಸಿ, ಐದು ವೀಳ್ಯದೆಲೆ, ಒಂದು ಅಡಿಕೆ, ಒಡ್ಡಿ ಉಂಗಿಲ ಸಹಿತ – ವರನ ಎಡಗೈ ಮೇಲೆ ವಧುವಿನ ಎಡಗೈ ಅದರ ಮೇಲೆ ವರನ ಬಲಗೈ ಅದರ ಮೇಲೆ ವಧುವಿನ ಬಲಗೈ, ಅದರ ಮೇಲೆ ಬಂಟ ಗುರಿಕ್ಕಾರನ ಕೈಯಲ್ಲಿರುವ ವೀಳ್ಯದೆಲೆ, ಅಡಿಕೆ, ಒಡ್ಡಿಂಗಿಲವನ್ನು ಅವರ ಕೈಯ ಮೇಲಿಟ್ಟು ಅದರ ಮೇಲೆ ಧಾರಾಕಲಶ ಇಡಬೇಕು. ತಕ್ಷಣ ವೇದಿಕೆ ಮೇಲಿರುವ ಎಲ್ಲಾ ಹಿರಿಯರಿಗೆ ಅಕ್ಷತೆ ಕಾಳು ಕೊಡಬೇಕು. ಒಂದು ಹರಿವಾಣವನ್ನು ಧಾರಾಕಲಶದ ಕೈಗಳ ಅಡಿಯಲ್ಲಿ ಕೈಹಿಡಿದ ಬಾವನಿಂದ ಹಿಡಿಸುವುದು.
ಎಲ್ಲ ಹಿರಿಯರು ಗಂಡು ಹೆಣ್ಣನ್ನು ಮುಟ್ಟಿಕೊಂಡಿರಬೇಕು. ಆಗ ಬಂಟ ಗುರಿಕ್ಕಾರನು ಭಾರತೀಯ ಸಂಸ್ಕೃತಿಯ ಪಂಚನದಿಗಳನ್ನು ಸಂಕಲ್ಪಿಸಿ, ಪ್ರಾರ್ಥಿಸಿ ಆ ನದಿಗಳ ನೀರು ಈ ಕಲಶದಲ್ಲಿ ತುಂಬಿದೆ ಎಂಬ ಪ್ರಾರ್ಥನೆಯೊಂದಿಗೆ ವಧು – ವರರನ್ನು ಮೂರು ಭಾರಿ ಧಾರಾಕಲಶ ಸಮೇತ ಕುಳಿತುಕೊಳ್ಳಿಸಿ ಎಬ್ಬಿಸುವುದು.
ಹಾಗೆ ಕುಳಿತು ಮೇಲೇರುವಾಗ ಕಳಶದಿಂದ ನೀರು ಅಡಿಕೆ, ಉಂಗುರ, ವೀಳ್ಯದೆಲೆಗಳ ಮೇಲೆ ಧಾರೆಯಾಗಿ ಬೀಳುತ್ತಿರಬೇಕು. ಕೆಳಗೆ ಹೋಗುವಾಗ ಬೀಳಬಾರದು. ಏಳುವಾಗ ಮಾತ್ರ ನೀರು ಬೀಳತಕ್ಕದು. ಕುಳಿತು ಏಳುತ್ತಿರುವಾಗ ಬಾವನ ಕೈಯಲ್ಲಿದ್ದ ಹರಿವಾಣ ಕೈಗಳ ಜೊತೆಯಲ್ಲಿಯೇ ಮೇಲೆ ಕೆಳಗೆ ಹೋಗತಕ್ಕದು.
ಮೂರು ಬಾರಿ ಕುಳಿತು ಎದ್ದಾದ ಮೇಲೆ ಧಾರಾಕಲಶವನ್ನು ತೆಗೆದು ತಂಬೂಲ ಮತ್ತು ಉಂಗುರವನ್ನು ಹರಿವಾಣಕ್ಕೆ ಬಿಡಬೇಕು. ಬಂಟ ಗುರಿಕ್ಕಾರನು ಆ ಉಂಗುರವನ್ನು ತೆಗೆದು ವರನ ಕೈಯಲ್ಲಿ ಕೊಡುವುದು. ವರನು ಆ ಉಂಗುರವನ್ನು ವಧುವಿನ ಒಡ್ಡಿ ಉಂಗಿಲದಬೆರಳಿಗೆ ತೊಡಿಸಬೇಕು. ಆಗ ಎಲ್ಲಾ ಹಿರಿಯರು ಕೈಯಲ್ಲಿದ್ದ ಅಕ್ಷತೆಗಳನ್ನು ವಧು – ವರರ ಮೇಲೆ ಹಾಕುವುದು.
ಕರಿಮಣಿ :
ಬಂಟ ಗುರಿಕ್ಕಾರನು ಎಲ್ಲ ಹಿರಿಯರಿಗೆ ಅಕ್ಷತೆ ಕಾಳು ಕೊಡುವುದು. ವಧುವಿನ ತಾಯಿಯ ಕೈಯಲ್ಲಿ ಕರಿಮಣಿ ಸರವನ್ನು ಕೊಟ್ಟು ಕನಿಷ್ಠ ಒಂಬತ್ತು ಮಂದಿ ಮುತ್ತೈದೆಯರ ಕೈಗೆ ಕೊಟ್ಟು ಪ್ರಾರ್ಥಿಸಿ ತರುವಂತೆ ಹೇಳುವುದು. ತಂದಂತಹ ಕರಿಮಣಿ ಸರವನ್ನು ವಧುವಿನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ತಾಯಿಯ ಕೈಯಲ್ಲಿ ಕೊಡುವುದು. ವರನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ಕೈಯಲ್ಲಿ ಕೊಡುವುದು. ಆಗ ವರ ಅಕ್ಷತೆ ಕಾಳುಗಳನ್ನು ವಧುವಿನ ತಲೆಗೆ ಹಾಕಿ ದೈವ ದೇವರುಗಳನ್ನು ಪ್ರಾರ್ಥಿಸಿ ಕರಿಮಣಿ ಕಟ್ಟುವುದು. ಆ ಸಂದರ್ಭದಲ್ಲಿ ” ಧರ್ಮೇಚ, ಅರ್ಥೈಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ ” ಎಂದು ಹೇಳಿ ತಾಳಿ ಕಟ್ಟಬೇಕು – ಓ ಧರ್ಮಪತ್ನಿ, ಧರ್ಮದಾನಾದಿ ವಿಷಯಗಳಲ್ಲಿ, ಧನ ಧಾನ್ಯಾದಿ ಸಂಪತ್ತುಗಳ ವಿಷಯದಲ್ಲಿ ಶಾರೀರಿಕ ಸುಖ ಸಂತೋಷಗಳಲ್ಲಿ ಇಂದಿನಿಂದ ನೀನು ನನ್ನ ಸಮ ಭಾಜನಳು ಆಗಿರುವೆ. ನಿನ್ನನ್ನು ಅತಿಕ್ರಮಿಸಿ ನಾನು ನಡೆಯಲಾರೆ. ನೀನೂ ಸಹ ನನ್ನಂತೆಯೇ ಇರಬೇಕು ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿ ಮಾಂಗಲ್ಯಧಾರಣೆ ಮಾಡುತ್ತಾನೆ. ” ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ ಕಂಟೇ ಭದ್ನಾಮಿ ಶುಭಗೇ ತ್ವಂ ಜೀವ ಶರದಶ್ಚತಂ. ”
ಓ ಮಾಂಗಲ್ಯವೇ, ನನ್ನ ಜೀವನ ಸೌಭಾಗ್ಯಕ್ಕೆ ಕಾರಣಳಾಗಿರುವ ಈ ನನ್ನ ಧರ್ಮಪತ್ನಿಯ ಕೊರಳಲ್ಲಿ ಅಲಂಕರಿಸುತ್ತಿದ್ದೇನೆ. ನೀನು ಈ ಸೌಭಾಗ್ಯವತಿಗೆ ರಕ್ಷೆಯಾಗಿ ನೂರು ವರ್ಷಗಳ ಕಾಲ ಇರುವಂತಾಗಲಿ. ಸಮಸ್ತ ದೇವತೆಗಳೂ ನಿನ್ನನ್ನು ಆಶೀರ್ವದಿಸಲಿ ಎಂದು ಹೇಳಿ ತಾಳಿ ಕಟ್ಟುತ್ತಾನೆ.
ತಕ್ಷಣ ವಧುವಿನ ಹಣೆಗೆ ತಿಲಕವಿಡುವುದು. ಆಗ ಎಲ್ಲಾ ಹಿರಿಯರು ಅಕ್ಷತೆಕಾಳು ಹಾಕಿ ಹರಸಬೇಕು. ಮುಂದೆ ಅವರವರ ಕೈಯಲ್ಲಿ ತಂದ ತಾಂಬೂಲವನ್ನು ಅವರವರ ಬಲಕೈಗೆ ಕೊಟ್ಟು ವಧು – ವರರ ಬಲಕೈಗಳನ್ನು ಒಟ್ಟುಗೂಡಿಸಿ, ಬಂಟ ಗುರಿಕ್ಕಾರನ್ನು ನವದಂಪತಿಗಳಿಗೆ ಮುಂದಿನ ಜೀವನದ ಬಗ್ಗೆ ಒಂದೆರಡು ಹಿತವಚನಗಳನ್ನು ನೀಡಿ ಹರಸುವುದು. ಆಮೇಲೆ ಅವರೇ ಕೈ ಕೈ ಹಿಡಿದುಕೊಂಡು ಪೀಠಕ್ಕೆ ಮೂರು ಪ್ರದಕ್ಷಿಣೆ ಬರುವುದು. ಆಮೇಲೆ ಸಭಾಸದರಿಗೆ ನಮಸ್ಕರಿಸಿ, ವೇದಿಕೆಯ ಪೀಠದಲ್ಲಿ ಕುಳಿತುಕೊಳ್ಳುವುದು. ವಧುವಿನ ಬಲಭಾಗದಲ್ಲಿ ವರನು ಕುಳಿತುಕೊಳ್ಳತಕ್ಕದು.
ಮುಂದೆ ಐದು ಜನ ಮುತ್ತೈದೆಯರಿಂದ ಆರತಿ ಬೆಳಗಿಸಬೇಕು. ಆ ಸಂದರ್ಭದಲ್ಲಿ ನವದಂಪತಿಗಳು ಲಕ್ಷ್ಮೀನಾರಾಯಣ, ಈಶ್ವರ, ಪಾರ್ವತಿ, ದೇವಸ್ವರೂಪಿಗಳು ಎಂಬ ಭಾವನೆಯಿಂದ ಅವರಿಗೆ ಆರತಿಯೆತ್ತಬೇಕು. ಶುಭಮುಹೂರ್ತದ ಶುಭ ಕಾರ್ಯಗಳು ಮುಗಿದು ನವದಂಪತಿಗಳು ಹೊಸ ಪೀಠದಲ್ಲಿ ಆಸೀನರಾದಾಗ ಅವರನ್ನು ಹೊಸ ಬಾಳಿನ – ಹೊಸ ಬದುಕಿನ ಆಶಾ ಗೋಪುರದ ಮಜಲಿಗೆ ಕಾಲಿಡಲು ಸನ್ನದ್ಧರಾಗಿರುವ ಇವರ ಪಯಣದ ಹಾದಿಗೆ ಈ ‘ಆರತಿ’ ದಾರಿದೀಪ ಮತ್ತು ಶ್ರೀರಕ್ಷೆ. ಹಾಗೂ ದೈವದೇವರುಗಳನ್ನು ಪ್ರಾರ್ಥಿಸಿ ಸಂಕಲ್ಪಿಸಿದ ದಿವ್ಯಜ್ಯೋತಿಯೇ ಆಗಿದೆ.
ಆ ಕ್ಷಣಗಳಲ್ಲಿ ನವದಂಪತಿಗಳು ಪವಿತ್ರರು, ಪಾವನರು, ದೇವ ಸಮಾನರು ಎಂದು ಭಾವಿಸಿ ಆರತಿ ಮಾಡುವುದು. ಆ ಆರತಿ ಮಾಡುವಾಗ ದೈವ ದೇವರುಗಳ ಸಂಕಲ್ಪಿತ ಶುಭದಾಯಕ ಆರತಿ ಆದಾಗಲೆಂದೇ ಆರತಿ ಮಾಡುವವರ ಪ್ರಾರ್ಥನೆಯಾಗಬೇಕು.
ದೇಸೆ :
ಒಂದು ಹರಿವಾಣದಲ್ಲಿ ಒಂಬತ್ತು ಕುಡ್ತೆ ಕುಚ್ಚಲಕ್ಕಿ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟು ವಧು – ವರರ ತಂದೆ ತಾಯಿ ಒಟ್ಟಾಗಿ ಸಭೆಯ ಅಪ್ಪಣೆ ಪಡೆದು ಎದುರು ಭಾಗದ ಟೀಪಾಯಿಯಲ್ಲಿಟ್ಟು ನಾಲ್ಕು ಜನರೂ ಒಟ್ಟಿಗೆ ಸೇಸೆ – ದೇಸೆ ಹಾಕಬೇಕು. ಆಗ ವಧು – ವರರು ತಂದೆ – ತಾಯಿ, ಅತ್ತೆ – ಮಾವನ ಕಾಲು ಮುಟ್ಟಿ ಸಮಸ್ಕರಿಸುವುದು. ಮತ್ತೆ ಸಭಾಸದ ರಿಂದ ದೇಸೆ.
ಮಂಟಪ ಇಳಿಸುವುದು :
ಬಂಧು ಬಾಂಧವರ ಅಕ್ಷತೆ ಹಾಕಿ ಆದ ಮೇಲೆ ನವದಂಪತಿಗಳನ್ನು ಮಂಟಪದಿಂದ ಕೆಳಗಿಳಿಸಿ ಕೈಹಿಡಿದು ಹೊರಗಡೆ ಕರೆದುಕೊಂಡು ಬಂದು ಒಂದು ತೆಂಗಿನಮರ ಅಥವಾ ಹಲಸಿನಮರ ಅಥವಾ ಒಂದು ತುಲಸೀ ಗಿಡಕ್ಕೆ ಪ್ರದಕ್ಷಿಣೆ ಬಂದು ಸೂರ್ಯದೇವರಿಗೆ ಹಾಗೂ ಪಂಚಭೂತಗಳಿಗೆ ವಂದಿಸಿ ವಾಪಾಸು ಒಳಗೆ ಪ್ರವೇಶಿಸಬೇಕು.
ಪ್ರವೇಶದ್ವಾರದಲ್ಲಿ ವಧುವಿನ ತಮ್ಮ ದಂಪತಿಗಳ ಕಾಲಿಗೆ ನೀರು ಹಾಕಿ ಸ್ವಾಗತಿಸುವುದು. ಕಾಲಿಗೆ ನೀರು ಹಾಕಿದವರಿಗೆ ಮದು ಮಗನು ಬಹುಮಾನ ಕೊಡುವ ಪದ್ಧತಿಯಿದೆ. ಆಮೇಲೆ ಒಳಗಡೆ ಬಂದು ಕೆಳಗಿನ ಚಾವಡಿಯಲ್ಲಿ ಕೂರಿಸುವುದು.
ವಧು ಬಿಟ್ಟು ಕೊಡುವುದು :
(ಪೊನ್ನು ಒಚ್ಚಿದ್ ಕೊರ್ಪುನಿ )
ವಧೂವರರ ಹಿರಿಯ ಮುತ್ತೈದೆ ಹೆಂಗಳೆಯರು ಎದುರು – ಬದುರು ನಿಂತು (ವಧುವಿನ ಕಡೆಯವರು ಮೂಡುಮುಖವಾಗಿ) ವಧುವಿನ ಹಿರಿಯರು ವಧುವಿನ ಬಲಕೈಯನ್ನು ವರನ ಕಡೆಯ ಹಿರಿಯರ ಕೈಗಳಿಗಿತ್ತು ಈ ರೀತಿ ಹೇಳಬೇಕು. ” ಓ ನಮ್ಮ ಹೊಸ ಬಂಧುಗಳೇ, ನಮ್ಮ ಈ ಹುಡುಗಿಯನ್ನು ಇಲ್ಲಿ ತನಕ ಬಹಳ ಕಷ್ಟಪಟ್ಟು, ಪ್ರೀತಿಯಿಂದ, ಮಮತೆಯಿಂದ, ವಿದ್ಯೆ ಬುದ್ಧಿ ಕಲಿಸಿ, ಇಷ್ಟು ದೊಡ್ಡವಳನ್ನಾಗಿ ಬೆಳೆಸಿದ್ದೇವೆ. ಈ ಕನ್ಯಾಮಣಿಯನ್ನು ಇಂದು ನಿಮ್ಮ ಕೈಗಳಿಗೆ ಒಪ್ಪಿಸುತ್ತಿದ್ದೇವೆ. ತಿಳಿದೋ ತಿಳಿಯದೆಯೋ ಅವಳಿಂದಾಗುವ ಯಾವುದೇ ತಪ್ಪು ವಿಚಾರಗಳಿಗೆ ಅನ್ಯಥಾ ಭಾವಿಸದೇ ನೀವು ದೊಡ್ಡ ಮನಸ್ಸಿನಿಂದ ಕ್ಷಮಿಸಿ ನಿಮ್ಮ ಮನೆಯ ಕುಡಿಯೆಂದು ಭಾವಿಸಿ, ನಿಮ್ಮಗಳ ಎಲ್ಲಾ ಆಗುಹೋಗುಗಳ ಬೆಳವಣಿಗೆಯಲ್ಲಿ ಅವಳ ಪಾತ್ರತೆಯನ್ನು ತಿಳಿಸಿ, ಇನ್ನು ಮುಂದಿನ ಅವಳ ಜೀವನ ಉತ್ತರೋತ್ತರ ಅಭಿವೃದ್ಧಿಯತ್ತ ಸಾಗುವಂತೆ ತಾವೆಲ್ಲರೂ ಅವಳಿಗೆ ಮಾರ್ಗದರ್ಶನ ಮತ್ತು ಆಶೀರ್ವಾದ ಮಾಡಿ ಬೆಳಗಿಸುವಿರೆಂಬ ವಿಶ್ವಾಸ, ನಂಬಿಕೆಯಿಂದ ಇಂದು ಈ ಕ್ಷಣದಿಂದ ತಮ್ಮ ಸುಪರ್ದಿಗೆ ಒಪ್ಪಿಸುತ್ತಿದ್ದೇವೆ. ತಮಗಿದೋ ನಮ್ಮೆಲ್ಲರ ಅನಂತಾನಂತ ಪ್ರಣಾಮಗಳು” ಎಂದು ಹೇಳಿ ಅವರ ಕೈಗೆ ಕೊಡುವುದು. ಅದೇ ಸಮಯದಲ್ಲಿ ವಧುವಿಗೂ ಒಂದು ಮಾತು ಹೇಳಬೇಕು. ” ಓ ನಮ್ಮ ಕುಲದ ಭಾಗ್ಯದ ಸಿರಿಯೇ. ಇಂದಿನವರೆಗೆ ನೀನು ನಮ್ಮ ಮನೆಗೆ ಸರ್ವ ರೀತಿಯಲ್ಲೂ ಪ್ರಾಮಾಣಿಕವಾಗಿ ದುಡಿದಿರುವೆ. ನಿನಗಿದೋ ನಮ್ಮೆಲ್ಲರ ಕೃತಜ್ಞತೆಗಳು. ಇಂದಿನಿಂದ ನಿನಗೆ ನಿನ್ನ ಗಂಡನ ಮನೆಯೂ ಸಹ ನಿನ್ನ ಮನೆಯೇ ಆಗಿದೆ. ಆ ಮನೆಯಲ್ಲಿ ನೀನು ಗಂಡನಿಗೆ ಆದರ್ಶ ಹೆಂಡತಿಯಾಗಿ, ಅತ್ತೆ ಮಾವಂದಿರಿಗೆ ಪ್ರೀತಿಯ ಸೊಸೆಯಾಗಿ, ಗಂಡನ ಒಡಹುಟ್ಟುಗಳಿಗೆ ಆದರದ ಅತ್ತಿಗೆಯಾಗಿ, ಆ ಮನೆಗೆ ಬಂದು ಹೋಗುವವರಿಗೆ ಆದರ್ಶದ ಗೃಹಿಣಿಯಾಗಿ, ನೆರೆಕರೆಯವರಿಗೆ ಸದ್ಗುಣವಂತೆ ಮಾತೆಯಾಗಿ, ಗಂಡನ ಮನೆಗೂ ಕೀರ್ತಿ ತಂದು ನಮ್ಮ ಕುಟುಂಬದ ಹೆಸರನ್ನು ಮೇಲಕೆತ್ತಿ ಒಳ್ಳೆಯ ಹೆಸರನ್ನು ಸಂಪಾದಿಸಿ ಕೀರ್ತಿವಂತಳಾಗಿ ಬಾಳು ಮಗಳೇ ” ಎಂದು ಹೇಳಿ ಅವಳ ಕೈಯನ್ನು ಬಿಡಬೇಕು.
ಆಗ ವರನ ಹಿರಿಯರು “ನಿಮ್ಮ ಕುಟುಂಬದ ಈ ಪ್ರೀತಿಯ ಕುಡಿಯನ್ನು ಇನ್ನು ಮುಂದೆ ನಮ್ಮ ಮನೆಯ ಮಗಳಾಗಿ, ಮಹಾಲಕ್ಷ್ಮಿಯಾಗಿ ಬೆಳಗುವಂತೆ ನಮ್ಮೆಲ್ಲರ ದೈವ ದೇವರುಗಳು ಅನುಗ್ರಹಿಸಲಿ, ಆಶೀರ್ವದಿಸಲಿ ಮತ್ತು ಶ್ರೀರಕ್ಷೆ ನೀಡಿ ಹರಸಲಿ ಎಂದು ಪ್ರಾರ್ಥಿಸಿ ಇವಳನ್ನು ಸ್ವೀಕರಿಸುತ್ತಿದ್ದೇವೆ. ಎಲ್ಲರಿಗೂ ಶುಭವಾಗಲಿ ” ಎಂದು ಹೇಳಿ ವಧುವನ್ನು ಸ್ವೀಕರಿಸುತ್ತಾರೆ. ಮದುಮಗಳು ಅತ್ತೆಯ ಕಾಲಿಗೆರಗಿ ನಮಸ್ಕರಿಸಬೇಕು.
ಬೊಂಡ :
ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣನ್ನು ವರನ ಮನೆಗೆ ಕರೆದುಕೊಂಡು ಬಂದು ಆರತಿ ಬೆಳಗಿ ಮನೆಯೊಳಗೆ ಕರೆಸಿಕೊಳ್ಳುವುದು. ಅವರಿಬ್ಬರೂ ದೇವರ ಕೋಣೆಯಲ್ಲಿ ಪ್ರಾರ್ಥಿಸಿ ನಮಸ್ಕರಿಸುವುದು. ಆಮೇಲೆ ಇಬ್ಬರಿಗೂ ಒಟ್ಟಿಗೆ ಕೂರಿಸಿ ಹಾಲು ನೀಡುವುದು. ಅದು ವರನ ತಾಯಿಯಿಂದ ನಿರ್ವಹಣೆಯಾಗುತ್ತದೆ.
ರಾತ್ರಿ ಊಟದ ಸಮಯದಲ್ಲಿ ಕೊಡಿ ಬಾಳೆ ಎಲೆ ಹಾಕಿ ವರನಿಗೆ ವಧುವಿನ ಕೈಯಲ್ಲಿ ವರನ ತಾಯಿ ಊಟ ಬಡಿಸಲು ಹೇಳಬೇಕು. ಊಟವಾದ ಮೇಲೆ ಅದೇ ಎಲೆಯಲ್ಲಿ ವರನ ತಾಯಿ ವಧುವಿಗೆ ಊಟ ಬಡಿಸಬೇಕು. ಆಗ ಅತ್ತೆ ಸೊಸೆಗೆ ಬಹುಮಾನ ಕೊಡುವ ಪದ್ಧತಿಯಿದೆ. ಸಟ್ಟುಗದ ಪಣವು. ಆಮೇಲೆ ಅವಳು ಅದೇ ಎಲೆಯಲ್ಲಿ ಊಟ ಮಾಡುವುದು. ಆದರೆ ಈಗೀಗ ಅದು ಬೊಂಡ ಕುಡಿಸುವುದರಲ್ಲಿಯೇ ಮುಕ್ತಾಯವಾಗುತ್ತದೆ. ಮದುವೆ ಮಂಟಪದ ಕೆಳಗಿನ ಚಾವಡಿಯಲ್ಲಿ ವರನ ತಾಯಿ ಬೊಂಡವನ್ನು ವಧುವಿನ ಕೈಗೆ ನೀಡಬೇಕು. ಮದುಮಗನು ಪಡು ಮುಖವಾಗಿ ಕುಳಿತಿರಬೇಕು. ಮದುಮಗಳು ಬೊಂಡವನ್ನು ಮದುಮಗನ ಕೈಗೆ ಕುಳಿತಲ್ಲಿಗೆ ಕೊಡುವುದು. ಆ ಬೊಂಡವನ್ನು ಆತ ಅರ್ಧ ಕುಡಿದು ಅವಳ ಕೈಗೆ ಕೊಟ್ಟು ಆಕೆ ಕುಡಿಯುವುದು. ಆಗ ಅತ್ತೆ ಅವಳಿಗೆ ಬಹುಮಾನ ಕೊಡುವುದು ಇದೆ. ಅದುವೇ ಸಟ್ಟುಗದ ಪಣವು. ಅಂದರೆ, ಈ ಕ್ಷಣದಿಂದ ವರನ ತಾಯಿಯ ಸ್ಥಾನವನ್ನು ವಧು ವಹಿಸಿಕೊಂಡಿದ್ದಾಳೆ ಎನ್ನುವಂತಹ ಭಾವಾರ್ಥದಲ್ಲಿ ಈ ಕಾರ್ಯ ನಡೆಯುತ್ತದೆ. ಇದು ಸತ್ಯ.
ಮದುವೆಯೆಂದರೆ, ಒಂದು ಗಂಡು ಮತ್ತು ಒಂದು ಹೆಣ್ಣಿನ ಬಾಳಿನ ಸಂಗಾತಿಯಾಗುವುದೊಂದೇ ಅಲ್ಲ. ಮದುವೆಯೆಂಬುದು ಒಂದು ಪವಿತ್ರ ಧರ್ಮಕಾರ್ಯ. ಜೀವನದ ಕೊನೆಯ ಘಳಿಗೆಯವರೆಗೂ ಮರೆಯಲಾಗದ ಒಂದು ದಿವ್ಯ ಅನುಬಂಧ! ಈ ಮಧುರ ಬಾಂಧವ್ಯದ ಅರ್ಥವನ್ನು ಹೇಳುವುದಾದರೂ ಹೇಗೆ? ಯಾರಿಗೆ ಸಾಧ್ಯ? ಶಬ್ದ – ಮಾತುಗಳಿಗೆ ನಿಲುಕದ ಋಣಾನುಬಂಧ!!!
ವಿವಾಹ ಎಂಬುದೊಂದು ‘ಧರ್ಮಾವಿಷ್ಕಾರಣ’! ಮಾತಾ ಪಿತೃಗಳು ಹಣ ಲಕ್ಷಾಂತರ ಮಾಡುವುದೇ ಮುಖ್ಯವಲ್ಲ. ಮಕ್ಕಳಿಗೆ ಮದುವೆಯ ಬಗ್ಗೆ ತಿಳುವಳಿಕೆ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಇಂದಿನ ದಿನ ಮಾನಸಗಳಲ್ಲಿ ಇದು ಬಹಳ ಮುಖ್ಯವೆನಿಸುತ್ತದೆ.
ಎಲ್ಲರಿಗೂ ಶುಭವಾಗಲಿ.
ಸತ್ಯ- ನ್ಯಾಯ – ಧರ್ಮಕ್ಕೆ ಜಯವಾಗಲಿ.
ದಂಬೆಕ್ಕಾನ ಸದಾಶಿವ ರೈ