ಉಳ್ಳಾಲ ಕೋಟೆಕಾರು ನೆತ್ತಿಲ ಪರಿಸರದ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋಟೆಕಾರು ಪಟ್ಟಣ ಪಂಚಾಯತ್ ಮುಂಬಾಗದಲ್ಲಿ ಕೋಟೆಕಾರು ಪರಿಸರದ ನಾಗರಿಕರು ಮತ್ತು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ನೀರಿನ ಖಾಲಿ ಬಿಂದಿಗೆಗಳನ್ನು ಇಟ್ಟು ವಿನೂತನ ರೀತಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ನೀರು ಪ್ರಕೃತಿಯ ನೈಸರ್ಗಿಕ ಕೊಡುಗೆಗಳಲ್ಲಿ ಪ್ರಮುಖವಾದುದು. ಆದ್ದರಿಂದ ಅದರ ಸದ್ಬಳಕೆ ಇಂದಿನ ಕಾಲಘಟ್ಟದಲ್ಲಿ ಅತಿ ಅವಶ್ಯಕ. ಕೋಟೆಕಾರು ನೆತ್ತಿಲ ಪ್ರದೇಶ ಉಳ್ಳಾಲ ತಾಲೂಕಿನ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲೊಂದು. ಇಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗಿದ್ದು ಹಾಗೂ ಸಣ್ಣಗಾತ್ರದ ಕೈಗಾರಿಕೆಗಳು ಕಾರ್ಯಚರಿಸುತ್ತಿವೆ. ಸಹಜವಾಗಿ ಬೇಸಿಗೆ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿ ನೀರಿಗಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಮನೆಗಳ ಬಾವಿಗಳು ಬೇಸಿಗೆ ಕಾಲದಲ್ಲಿ ಬತ್ತಿ ಹೋಗುತ್ತಿರುವುದು ಆತಂಕದ ವಿಷಯ. ಜನರು ತಮ್ಮ ಮೂಲಭೂತ ಅವಶ್ಯಕತೆಗಳಾದ ಶೌಚಾಲಯ ಹಾಗೂ ಅಡುಗೆ ಕಾರ್ಯಕ್ಕೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯತ್ನಿಂದ 2 ಅಥವಾ 3 ದಿನಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಸಣ್ಣ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಮನೆಗಳಿಗೆ ನೀರು ಪೂರೈಕೆ ಕಷ್ಟವಾಗುತ್ತಿದೆ. ಮಂಗಳೂರು ನಗರಕ್ಕೆ ತುಂಬೆ ವೆಂಟಡ್ಡ್ಯಾಂ ಮೂಲಕ ಬೇಸಿಗೆಯಲ್ಲೂ ನೀರು ಸರಬರಾಜು ಮಾಡಲಾಗುತ್ತಿದ್ದು ಆದರೆ ಹೊರವಲಯದಲ್ಲಿರುವ ನೆತ್ತಿಲ ಕೋಟೆಕಾರು ಪ್ರದೇಶದ ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೋಟೆಕಾರು ನೆತ್ತಿಲ ಪ್ರದೇಶದ ಜನರು ಸಹ ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸ್ಥಳೀಯ ಪಂಚಾಯಿತಿಗೆ ಪಾವತಿಸುತ್ತಿರುವುದರಿಂದ ವರ್ಷವಿಡಿ ನೀರು ಪೂರೈಕೆ ಮಾಡುವುದು ಪಟ್ಟಣ ಪಂಚಾಯತ್ ಕರ್ತವ್ಯವೆಂಬುದು ಹಕ್ಕೊತ್ತಾಯವಾಗಿದೆ. ಕೋಟೆಕಾರು ನೆತ್ತಿಲ ಪ್ರದೇಶದಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಇದಕ್ಕೆ ಅನಧೀಕೃತ ಕೊಳವೆ ಬಾವಿಗಳ ನಿರ್ಮಾಣ ಕಾರಣ. ಕಳೆದ ಮಾರ್ಚ್ನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ನೆತ್ತಿಲ ಪರಿಸರದಲ್ಲಿ ಗಣಿ ಇಲಾಖೆ, ಕೋಟೆಕಾರು ಪಟ್ಟಣ ಪಂಚಾಯತ್ನಿಂದ ಅನುಮತಿ ಪಡೆಯದೆ ಹಾಗೂ ಸ್ಥಳೀಯ ನಿವಾಸಿಗಳ ನಿರಪೇಕ್ಷಣಾ ಪತ್ರ ಇಲ್ಲದೆ ಏಕಾಏಕಿ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾಗಿರುವುದರ ವಿರುದ್ಧ ನಾವು ಉಳ್ಳಾಲ ಪೊಲೀಸ್ಠಾಣೆ, ಪಟ್ಟಣ ಪಂಚಾಯತ್, ಗಣಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರ ಪರಿಣಾಮವಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ನಾವು ತಮ್ಮ ಗಮನಕ್ಕೆ ತರುವುದೇನೆಂದರೆ ಮಗದೊಮ್ಮೆ ಈ ಪ್ರದೇಶದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಬಾರದು.
ಕೋಟೆಕಾರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೀರು ಪೂರೈಕೆ ಯೋಜನೆ ರೂಪಿಸಬೇಕು ಹಾಗೂ ಕೋಟೆಕಾರು ನೆತ್ತಿಲ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು. “ಬೇಕೇ ಬೇಕು ನೀರು ಬೇಕು” ”ಒದಗಿಸಿ ಒದಗಿಸಿ ಮೂಲ ಸೌಕರ್ಯ ಒದಗಿಸಿ” ಘೋಷಣೆಗಳನ್ನು ಕೂಗಿದರು. ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ತುಕರಾಮ್ ರವರು ಮನವಿ ಸ್ವೀಕರಿಸಿದರು