ಮುಂಬಯಿ, (RBI) ಮೇ.26: ಗುಜರಾತ್ ರಾಜ್ಯದ ದಾದ್ರಾ ಮತ್ತು ನಗರ ಹವೇಲಿ ವ್ಯಾಪ್ತಿಯ ಸಿಲ್ವಾಸ ನಗರಪಾಲಿಕೆಯ ಅಧ್ಯಕ್ಷೆ (ಮೇಯರ್) ಆಗಿ ತುಳು ಕನ್ನಡತಿ ರಜನಿ ಗೋವಿಂದ ಶೆಟ್ಟಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ. ಚುನಾವಣಧಿಕಾರಿ ಕಲೆಕ್ಟರ್ ಭಾನುಪ್ರಭ, ಬಿಜೆಪಿ ಅಧ್ಯಕ್ಷ ದೀಪೇಶ್ ತಂದೆಲ್, ಮಾಜಿ ಮೇಯರ್ ರಾಕೇಶ್ ಚವಾಣ್, ಮಾಜಿ ಉಪ ಮೇಯರ್ ಅಜಯ್ ದೇಸಾಯಿ ಇವರ ಸಮ್ಮಖದಲ್ಲಿ ಆಯ್ಕೆ ಪ್ರಕ್ರಿಯೆ ನೇರವೇರಿತು.
ದಕ್ಷಿಣ ಕನ್ನಡ ಮಂಗಳೂರು ಮಣ್ಣುಗುಡ್ಡೆ ಮೂಲತಃ ದಿ| ನಾರಾಯಣ ತಿಮ್ಮಪ್ಪ ಶೆಟ್ಟಿ ಅವರ ಸುಪುತ್ರಿ, ಕಾರ್ಕಳ ತಾಲೂಕಿನ ಕಾಂತವರ ಹೊಸಮನೆ ಹಾಗೂ ನಾಮಾಂಕಿತ ಸಮಾಜ ಸೇವಕ ಗೋವಿಂದ ಶೆಟ್ಟಿ ಅವರ ಪತ್ನಿ, ಮಕ್ಕಳಾದ ತರುಣ್ ಮತ್ತು ಪುಣ್ಯ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿರುವ ಇವರು ಸುಮಾರು ಕಳೆದ ಐದು ವರ್ಷಗಳಿಂದ ಇಲ್ಲಿನ ಕಾನ್ವೆಲ್ ಪಂಚಾಯತ್ನಲ್ಲಿ ಪಂಚಾಯತಿ ಅಧ್ಯಕ್ಷೆ (ಸರ್ಪಂಚ್) ಆಗಿದ್ದು, ಕಳೆದ ಎರಡುವರೆ ವರ್ಷಗಳಿಂದ ದಾದ್ರಾ ನಗರ ಹವೇಲಿ ಮಹಾ ನಗರ ಪಾಲಿಕೆಯ ಮೇಲ್ವಿಚಾರಕಿಯಾಗಿ ಆಗಿ ಕಾರ್ಯನಿರ್ವಾಹಿಸುತ್ತಿದ್ದರು. ತನ್ನ ಕಾರ್ಯಾವದಿಯಲ್ಲಿ ದಾದ್ರ ಹವೇಲಿ ಮತ್ತು ಸಿಲ್ವಾಸ ಪರಿಸರದ ಅಭಿವೃದ್ಧಿಯಲ್ಲಿ ತಮ್ಮ ಮಹತ್ತರ ಸೇವೆಯನ್ನು ಸಲ್ಲಿಸಿದ ಹಿರಿತನ ರಜನಿ ಅವರಿಗೆ ಸಲ್ಲುತ್ತದೆ. ಸಿಲ್ವಾಸ ಮತ್ತು ವಾಪಿ ಕನ್ನಡ ಸಂಘ, ತುಳು ಐಸಿರಿ ಹಾಗೂ ಅನೇಕ ತುಳು ಕನ್ನಡ ಸಂಘಗಳಲ್ಲಿ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ರಜನಿ ಸ್ಥಾನಿಯವಾಗಿ ಗುರುತಿಸಿಕೊಂಡು, ತುಳು-ಕನ್ನಡಿಗರ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಎಲ್ಲರ ಅಭಿಮಾನಕ್ಕೆ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇದೀಗ ಮೇಯರ್ ಸ್ಥಾನವನ್ನು ಅಲಂಕರಿಸಿದ ಇವರಿಗೆ ತುಳು ಕನ್ನಡಿಗರು ಸೇರಿದಂತೆ ಸ್ಥಾನೀಯರಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.