ಪ್ರಕೃತಿಯ ರಮಣೀಯ ಸೌಂದರ್ಯದ ಮಧ್ಯೆ ಮೊಳಹಳ್ಳಿ ಎಂಬ ಪುಟ್ಟ ಊರು. ಸದಾ ಕಾಲ ಒಂದಲ್ಲ ಒಂದು ಕೊಡುಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ನೀವು ಮೊಳಹಳ್ಳಿ ಗ್ರಾಮದಲ್ಲಿ ಗುರುತಿಸಬಹುದು. ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ, ಉದ್ಯಮ ಕ್ಷೇತ್ರ, ಪತ್ರಿಕೋದ್ಯಮ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರವಾರು ಗಣನೀಯ ಸೇವೆ ಸಲ್ಲಿಸಿದವರು ಗ್ರಾಮ ಮಟ್ಟದಲ್ಲಿ ಇದುವರೆಗೂ ಒಂದಲ್ಲ ಒಂದು ಸಾಧನೆಯನ್ನು ಕೈಗೊಂಡಿದ್ದಾರೆ. ಅದೇ ರೀತಿ ಮೊಳಹಳ್ಳಿಯ ಹುಟ್ಟೂರಿನಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಪ್ರತೀ ವರ್ಷ ಕೊಡುವಂತಹ ಉಚಿತ ನೋಟ್ ಬುಕ್ ವಿತರಣಾ ಸಮಾರಂಭ ಇತ್ತೀಚಿಗೆ ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರುಗಿತು.
ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ತಮ್ಮ ತಂದೆಯ ನೆನಪಿಗಾಗಿ ಪಂಚಾಯತ್ ವ್ಯಾಪ್ತಿಗೆ ಬರುವಂತಹ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಕೊಡುವಂತಹ ಕಾರ್ಯಕ್ರಮ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅದೇ ರೀತಿ ಅವರು ಇತ್ತೀಚಿಗೆ ದಿ.ಬಿ.ಜಯರಾಮ ಹೆಗ್ಡೆ ಮೆಮೋರಿಯಲ್ ಟ್ರಸ್ಟ್ (ರಿ.) ಮೊಳಹಳ್ಳಿ ಇದರ ಪ್ರಾಯೋಜಕತ್ವದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಸ.ಹಿ.ಪ್ರಾ.ಶಾಲೆ ಮೊಳಹಳ್ಳಿಯಲ್ಲಿ ಇತ್ತೀಚಿಗೆ ನಡೆಯಿತು. ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಯು. ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನೋಟ್ ಬುಕ್ ಗಳನ್ನು ಉಚಿತವಾಗಿ ಕೊಡುಗೆ ನೀಡಿದ ಟ್ರಸ್ಟ್ ನ ಪ್ರವರ್ತಕರಾದ ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಿ.ಬಿ.ಜಯರಾಮ ಹೆಗ್ಡೆಯವರನ್ನು ಸ್ಮರಿಸಿ, ಮೊಳಹಳ್ಳಿ ಗ್ರಾಮಕ್ಕೆ ಅವರ ಸಾಧನೆ ಹಾಗೂ ಅವರು ಗ್ರಾಮದಲ್ಲಿ ಪ್ರತಿಷ್ಠಾಪಿಸಿಕೊಂಡಿರುವಂತ ಹೆಸರು ಕೊನೆ ತನಕ ಇರುವಂತಹ ಪ್ರಕ್ರಿಯೆ ಹೀಗೆ ಇರಲಿ, ಅದೇ ರೀತಿ ಮಕ್ಕಳ ನಗುವಿನಲ್ಲಿ ಅವರ ನೆನಪನ್ನ ಕಂಡುಕೊಳ್ಳೋಣ. ಹಾಗೆಯೇ ಅವರನ್ನ ನೆನಪು ಮಾಡಿಕೊಳ್ಳಲು ಇದೊಂದು ಪ್ರಸ್ತುತ ವೇದಿಕೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ್ ಶೆಟ್ಟಿ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಮೊಳಹಳ್ಳಿ, ಶ್ರೀಮತಿ ಜಯಂತಿ ಶೆಟ್ಟಿ ಸದಸ್ಯರು , ಗ್ರಾಮ ಪಂಚಾಯತ್ ಮೊಳಹಳ್ಳಿ, ಶ್ರೀಮತಿ ವಾಣಿ ಆರ್ .ಶೆಟ್ಟಿ ಮಾಜಿ ಉಪಾಧ್ಯಕ್ಷರು ಗ್ರಾ ಪಂ. ಮೊಳಹಳ್ಳಿ, ಶ್ರೀಮತಿ ವಿಶಾಲಾಕ್ಷಿ ಶೆಟ್ಟಿ ಅಧ್ಯಕ್ಷರು, ಎಸ್.ಡಿ.ಎಂ.ಸಿ, ಶಿಕ್ಷಕಿ ಶ್ರೀಮತಿ ಶೋಭಾ ಸಿ.ಶೆಟ್ಟಿ ಹಾಗೂ ಶ್ರೀಮತಿ ಕವಿತಾ ಮುಖ್ಯೋಪಾಧ್ಯಾಯರು ಕೆ.ಪಿ.ಎಸ್ ಬಿದ್ಕಲ್ ಕಟ್ಟಿ ಇವರುಗಳು ಭಾಗಹಿಸಿದ್ದರು.ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಜರಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಸಿ. ಶೆಟ್ಟಿ ಸ್ವಾಗತಿಸಿದರು.
ಶಾಲೆಯ ಸಹ ಶಿಕ್ಷಕರಾದ ಶ್ರೀ ಗಣೇಶ್ ಶೆಟ್ಟಿ ನಿರೂಪಿಸಿದರು, ಸಹ ಶಿಕ್ಷಕಿ ಶ್ರೀಮತಿ ಪ್ರೀತಿ ಬಿ ಶೆಟ್ಟಿ ವಂದಿಸಿದರು. ಶಾಲೆಯ ಹಿರಿಯ ಸಹ ಶಿಕ್ಷಕರಾದ ಶ್ರೀ ವೆಂಕಟ ಕುಲಾಲ್ ಹಾಗೂ ಅತಿಥಿ ಶಿಕ್ಷಕಿ ಶ್ರೀಮತಿ ಚೇತನಾ, ಶ್ರೀಮತಿ ಗೀತಾಂಜಲಿ ಸಹಕರಿಸಿದರು. ಕಾರ್ಯಕ್ರಮ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಪೋಷಕರು ಶಾಲಾ ಸಮಸ್ತ ವಿದ್ಯಾರ್ಥಿಗಳು ಹಾಜರಿದ್ದರು.
ಸಂತೋಷ್ ಶೆಟ್ಟಿ ಮೊಳಹಳ್ಳಿ