ಸ್ವಾತಿ ಪ್ರಕಾಶ್ ಶೆಟ್ಟಿ ಈ ಹೆಸರು ಈಗ ಎಲ್ಲೆಲ್ಲೂ ಮನೆಮಾತಾಗಿದೆ. ಇದಕ್ಕೆ ಪ್ರಮುಖ ಕಾರಣ ಈಚೆಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾ. ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾದಲ್ಲಿ ಇವರದ್ದು ನಾಯಕಿಯ ಪಾತ್ರ. ಈ ಚಿತ್ರದಲ್ಲಿ ಇವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇವರಿಗೆ ಸಿನಿಮಾ ರಂಗದಲ್ಲಿ ಉತ್ತಮ ಭವಿಷ್ಯ ಇದೆ ಎಂಬ ಮಾತು ಪ್ರೇಕ್ಷಕರಿಂದ ಕೇಳಿ ಬರುತ್ತಿದೆ.
ಸಿನಿಮಾದಲ್ಲಿ ಇವರು ತಂದೆಯ ಜಿಪುಣತನವನ್ನು ವಿರೋಧಿಸುವ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕೊನೆಗೆ ತಂದೆ ಯಾಕಾಗಿ ಜಿಪುಣತನ ತೋರುತ್ತಿದ್ದರು ಎಂಬುದು ತಿಳಿದಾಗ ಸ್ವಾತಿ ಶೆಟ್ಟಿ ತೋರಿದ ಅಭಿನಯ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಂ.ಕಾಂ. ಶಿಕ್ಷಣ ಪಡೆದಿರುವ ಈಕೆಗೆ ನಾಯಕಿಗೆ ಬೇಕಾಗುವಂಥ ಎಲ್ಲ ಅರ್ಹತೆಗಳೂ ಇವೆ. ರೂಪ, ಎತ್ತರ ದೇಹ, ಉತ್ತಮ ಸ್ವಭಾವ, ಆಕರ್ಷಕ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಎಲ್ಲವೂ ಇವರಲ್ಲಿದ್ದು, ಇವು ಇವರ ಸಿನಿಮಾ ರಂಗದ ಸಾಧನೆಯ ಪಥಕ್ಕೆ ಮಾರ್ಗಸೂಚಿಯಾಗಲಿದೆ ಎಂಬುದು ಸ್ಪಷ್ಟ. ಇವರು ಅತ್ಯುತ್ತಮ ಡ್ಯಾನ್ಸರ್ ಕೂಡ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್.
ಮಾಡೆಲ್ ಆಗಿ, ಸೌಂದರ್ಯ ಸ್ಪರ್ಧೆಯಲ್ಲಿ ಕೆಲವು ಪ್ರಶಸ್ತಿಗಳನ್ನೂ ಗೆದ್ದಿರುವ ಇವರು ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾದಲ್ಲೂ ಇವರು ಕೆಲಸ ಮಾಡಿದ್ದು, ಅದಿನ್ನೂ ಅಂತಿಮ ರೂಪ ಪಡೆದುಕೊಳ್ಳಬೇಕಿದೆ. ಜತೆಗೆ ಆಲ್ಬಂ ಸಾಂಗ್ನಲ್ಲೂ ಇವರು ಕಾಣಿಸಿಕೊಂಡಿದ್ದು, ಇವೆಲ್ಲವೂ ಇವರ ಬಹುಮುಖದ ಪ್ರತಿಭೆಗೆ ಸಾಕ್ಷಿಯಾಗಿದೆ. ಮಿಸ್ ಮಣಿಪಾಲ್ ಮತ್ತು ಮಿಸ್ ಬಾಡಿ ಬ್ಯೂಟಿಫುಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬೀಗಿರುವ ಅವರು ಇಂಥ ಇನ್ನಷ್ಟು ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಶಾಲಾ, ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿ, ಅತ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದದ್ದೂ ಇದೆ. ತ್ರೋ ಬಾಲ್ ಪಂದ್ಯಾಟದಲ್ಲೂ ಸ್ವಾತಿ ಗಮನಾರ್ಹ ಸಾಧನೆಗೈದಿದ್ದಾರೆ.
ಕರ್ಣಾಟಕ ಬ್ಯಾಂಕ್, ಮಲಬಾರ್ ಗೋಲ್ಡ್, ಜಯಲಕ್ಷ್ಮೀ ಸಿಲ್ಕ್ ಉದ್ಯಾವರ ಸಹಿತ ಹಲವಾರು ಪ್ರಮುಖ ಸಂಸ್ಥೆಗಳ ಜಾಹೀರಾತಿಗೆ ರೂಪದರ್ಶಿಯಾಗಿದ್ದು, ಈ ರಂಗದಲ್ಲೂ ಇವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಉಡುಪಿಯ ಪ್ರಕಾಶ್ ಶೆಟ್ಟಿ ಹಾಗೂ ಬೇಬಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಇವರು ಇನ್ನಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಗೌಜಿ ಗಮ್ಮತ್ತ್ ಸಿನಿಮಾದ ಬಳಿಕ ಕೆಲವು ನಿರ್ದೇಶಕರು ಇವರ ಕಡೆಗೆ ಗಮನ ಹರಿಸುತ್ತಿದ್ದಾರೆ. ಉತ್ತಮ ನಿರ್ದೇಶಕರ ಕೈಗೆ ಇವರು ಸಿಕ್ಕಿದರೆ ಸಿನಿಮಾ ರಂಗಕ್ಕೆ ಓರ್ವ ಅದ್ಭುತ ನಟಿ ಸಿಕ್ಕಿದಂತಾಗಲಿದೆ. ಈಗ ಬೇರೆ ಬೇರೆ ಭಾಷೆಗಳ ಸಿನಿಮಾ ರಂಗದಲ್ಲಿ ತುಳುನಾಡಿನ ಪ್ರತಿಭೆಗಳು ಉತ್ತುಂಗದಲ್ಲಿದ್ದು, ಆ ಸಾಲಿಗೆ ಇವರೂ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಶುಭ ಹಾರೈಕೆಗಳು.
ಬರಹ : ಜಗನ್ನಾಥ ಶೆಟ್ಟಿ ಬಾಳ