ಕೇಸರಿ ಮಯವಾದ ಕಾವೂರು ರಸ್ತೆ, ಎಲ್ಲೆಡೆ ಹಾರಾಡಿದ ಬಿಜೆಪಿ ಧ್ವಜ. ಕೇಸರಿ ಪೇಟ, ಶಾಲು ಹಾಕಿದ ಕಾರ್ಯಕರ್ತರಿಂದ ಜೈಕಾರ ಘೋಷಣೆ. ರಸ್ತೆಯುದ್ದಕ್ಕೂ ಹುಲಿ ವೇಷ ಕುಣಿತದ ಅಬ್ಬರ. ಇದು ಮಂಗಳವಾರ ಡಾ. ಭರತ್ ಶೆಟ್ಟಿ ವೈ. ಅವರು ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಂಡು ಬಂದ ಉತ್ಸಾಹ. ಡಾ. ಭರತ್ ಶೆಟ್ಟಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆಗೂ ಮುನ್ನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಬಳಿಕ ದೇವಸ್ಥಾನದಿಂದ ಕಾವೂರು ಮೈದಾನದವರೆಗೆ ಬೃಹತ್ ಕಾರ್ಯಕರ್ತರ ಪಾದೆ ಯಾತ್ರೆಯ ಜತೆ ಸಾಗಿ ಬಂದು ಬಳಿಕ ಸುಮಾರು 2.20ಕ್ಕೆ ನಾಮಪತ್ರ ಸಲ್ಲಿಸಿದರು.
ಕ್ಷೇತ್ರದ ವಿವಿಧೆಡೆಯಿಂದ ಆಗಮಿ ಸಿದ ಕಾರ್ಯಕರ್ತರು, ನಾಯಕರು, ದೇವರ ಪ್ರಸಾದ, ಹೂವು ತಂದು ಶಾಸಕರಿಗೆ ನೀಡಿ ವಿಜಯೀಭವ ಎಂದು ಹರಸುತ್ತಾ ಇದ್ದುದು ಕಂಡು ಬಂತು.
ಸಾವಿರಾರು ಕಾರ್ಯಕರ್ತರು ಶಿಸ್ತುಬದ್ಧವಾಗಿ ನಡೆಯುತ್ತಾ ಹುಲಿ ವೇಷದ ಕುಣಿತಕ್ಕೆ ನೃತ್ಯದ ಹೆಜ್ಜೆ ಹಾಕುತ್ತಾ ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ ನಾಯಕನ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮವನ್ನು ಚುನಾವಣ ವಿಜಯೋತ್ಸವದಂತೆ ಆಚರಿಸಿದರು. ಪಾದಯಾತ್ರೆಯುದ್ದಕ್ಕೂ ಬಿಜೆಪಿ ಪಕ್ಷಕ್ಕೆ, ಪ್ರಧಾನಿ ಮೋದಿ, ಅಮಿತ್ ಶಾ, ನಳಿನ್ ಕುಮಾರ್ ಕಟೀಲು ಹಾಗೂ ತಮ್ಮ ನಾಯಕನಿಗೆ ಜೈಕಾರದ ಘೋಷ ಮೊಳಗಿಸಿದರು.
ವಿಜೃಂಭಿಸಿದ ತುಳುನಾಡ ಧ್ವಜ
ತುಳುನಾಡಿನ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ಕಾರ್ಯಕರ್ತರು ಕೇಸರಿ ಧ್ವಜದೊಂದಿಗೆ ತುಳುನಾಡ ಧ್ವಜವನ್ನೂ ಜತೆಗೆ ಬೀಸುತ್ತಾ ಮುಂದೆ ಸಾಗಿದರು. ಶಾಸಕರೂ ಸಹಿತ ನಾಯಕರು, ಕಾರ್ಯಕರ್ತರು ತುಳು ಧ್ವಜಕ್ಕೂ ಗೌರವ ನೀಡಿದರು. ಮೆರವಣಿಗೆಯಲ್ಲಿ ಮೇಯರ್ ಜಯಾನಂದ ಅಂಚನ್, ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ರಾಜ್ ಕೃಷ್ಣಾಪುರ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಭರತ್ ಶೆಟ್ಟಿ ಅವರ ಪತ್ನಿ ಡಾ. ಅಸಾವರಿ ವೈ. ಶೆಟ್ಟಿ, ಜಿಲ್ಲಾ ಮಾಧ್ಯಮ ಪ್ರಮುಖ್ ರಾಜೀವ್ ಕಾಂಚನ್, ಜನಾರ್ದನ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ರಮೇಶ್, ವಿಶ್ವನಾಥ್ ಶೆಟ್ಟಿ, ಉಪಸ್ಥಿತರಿದ್ದರು.