ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ವಿಧಾನಸಭಾ ಚುನಾವಣೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಬಳಿಕ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದ್ದು ಅವರೊಂದಿಗಿನ ಮಾತುಕತೆ ಬಳಿಕ ಜಂಟಿ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.


ಕಳೆದ ಬಾರಿಯ ಚುನಾವಣೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ನನಗೆ ಪೂರ್ಣ ಸಹಕಾರ ನೀಡಿದ್ದರು. ಈ ಬಾರಿ ನಾನು ಅವರ ಜತೆಗಿದ್ದು ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಇಂದಿನಿಂದಲೇ ಪಕ್ಷ ಸಂಘಟನೆ ನಡೆಸಿ, ಪಕ್ಷದ ಗೆಲುವುಗಾಗಿ ಶ್ರಮಿಸಲಿದ್ದೇವೆ ಎಂದರು.
ಕಾಪು ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿದ್ದೇನೆ. ಮೂರು ಬಾರಿ ಗೆದ್ದು ಹದಿಮೂರುವರೆ ವರ್ಷಗಳ ಕಾಲ ಶಾಸಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪಕ್ಷ ಸುರೇಶ್ ಶೆಟ್ಟಿ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅನುದಾನದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತಯಾಚನೆ ನಡೆಸಿ, ಪಕ್ಷವನ್ನು ಗೆಲ್ಲಿಸಲಿದ್ದೇವೆ ಎಂದರು.
ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಪಿ. ಶೆಟ್ಟಿ ಮಾತನಾಡಿ, ಪಕ್ಷ ಸೋಲುತ್ತಿದ್ದಾಗ ಲಾಲಾಜಿ ಮೆಂಡನ್ ಅವರು ಪಕ್ಷ ಸಂಘಟನೆ ಮಾಡಿರುವ ರೀತಿ ನಮಗೆ ಸ್ಫೂರ್ತಿ. ಶಾಸಕ ಲಾಲಾಜಿ ಮೆಂಡನ್ ಅವರ ಸಾಧನೆ, ತಪಸ್ಸು, ಸಹಕಾರವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಅವರ ನೇತೃತ್ವದಲ್ಲಿ ಮತ್ತೆ ಕಾಪುವಿನಲ್ಲಿ ಗೆಲ್ಲುತ್ತೆವೆ. ಅದಕ್ಕಾಗಿ ಎಲ್ಲರನ್ನು ಜೊತೆಗೂಡಿಸಿಕೊಂಡು ಮುನ್ನಡೆಯುತ್ತೇವೆ ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪಕ್ಷದ ಮುಖಂಡರಾದ ಮಟ್ಟರು ರತ್ನಾಕರ ಹೆಗ್ಡೆ, ಕುತ್ಯಾರು ನವೀನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೋಪಾಲ ಕೃಷ್ಣ ರಾವ್, ಸುಧಾಮ ಶೆಟ್ಟಿ ಶರಣ್ ಮಟ್ಟು, ಸತೀಶ್ ಸಾಲಿಯಾನ್, ಸುನಿತಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.











































































































