ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ತುಳು ಚಿತ್ರ “ಸರ್ಕಸ್” ಇದರ ಮೊದಲ ಹಾಡು ಹೊಸ ರೀತಿಯಲ್ಲಿ ಚಿತ್ರ ಬಿಡುಗಡೆಯ ರೀತಿಯಲ್ಲೇ ಭಾರತ್ ಸಿನಿಮಾಸ್ ಥೀಯೇಟರ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ಮೊದಲ ಬಾರಿಗೆ ತುಳು ಚಿತ್ರದ ಹಾಡೊಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಇಂದು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ರೀತಿಯಲ್ಲೇ ಜೂ.23ರಂದು ಬಿಡುಗಡೆಯಾಗಲಿರುವ ಸಿನಿಮಾವನ್ನು ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ” ಎಂದರು.
ಬಳಿಕ ಮಾತಾಡಿದ ಹಾಸ್ಯನಟ ಅರವಿಂದ್ ಬೋಳಾರ್ ಅವರು, “ಗಿರಿಗಿಟ್ ಚಿತ್ರದ ಬಳಿಕ ಮತ್ತೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಇದಾಗಿದೆ. ಇದರಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಖಂಡಿತಾ ಇಷ್ಟಪಡಲಿದ್ದಾರೆ. ತುಳುವರು ತುಳು ಚಿತ್ರಗಳನ್ನು ಇಷ್ಟಪಟ್ಟು ನೋಡಿದರೆ ಸಿನಿಮಾ ಮಾಡಲು ಧೈರ್ಯ, ಉತ್ಸಾಹ ಬರುತ್ತದೆ” ಎಂದರು.
ಭೋಜರಾಜ್ ವಾಮಂಜೂರ್ ಮಾತನಾಡಿ, “ಸರ್ಕಸ್ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಗಿರಿಗಿಟ್ ಬಳಿಕ ಮತ್ತೊಮ್ಮೆ ಅದೇ ತಂಡದ ಮೂಲಕ ನಾವೆಲ್ಲರೂ ಜೊತೆಯಾಗಿ ನಟಿಸಿದ್ದೇವೆ. ಸಿನಿಮಾ ರಿಲೀಸ್ ಆಗುವಾಗ ಇದೇ ರೀತಿ ಬಂದು ನಮ್ಮನ್ನು ಆಶೀರ್ವದಿಸಿ” ಎಂದರು.
ವೇದಿಕೆಯಲ್ಲಿ ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ನಟಿ ರಚನಾ ರೈ, ಸಂಗೀತ ನಿರ್ದೇಶಕ ಲೋಯ್ ವಾಲೆಂಟೈನ್ ಸಲ್ದಾನ, ಸಂದೀಪ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕ ಮಂಜುನಾಥ್ ಅತ್ತಾವರ, ನವೀನ್ ಶೆಟ್ಟಿ, ಚಂದ್ರಹಾಸ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸರ್ಕಸ್ ನಲ್ಲಿ ದಿಗ್ಗಜರ ದಂಡು!
ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಇಂತಹ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಹಾಡಿಗೆ ಲೋಯ್ ವಾಲೆಂಟೈನ್ ಸಲ್ದಾನ ಇವರ ಸಂಗೀತವಿದೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ತುಳುನಾಡಿನ ಖ್ಯಾತ ಹಾಸ್ಯ ದಿಗ್ಗಜರು ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸರ್ಕಸ್ ಚಿತ್ರ ಜೂನ್ 23ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ತುಳು ಭಾಷೆಯ ಅತೀ ದೊಡ್ಡ ಹಿಟ್ ಚಿತ್ರ ಗಿರಿಗಿಟ್ ತಂಡದ ಮುಂದಿನ ಚಿತ್ರವಾಗಿದೆ ಸರ್ಕಸ್ ಹಾಗೂ ಗಿರಿಗಿಟ್ ನಂತರ ರೂಪೇಶ್ ಶೆಟ್ಟಿ, ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರಕ್ಕೆ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜನಾಥ್ ಅತ್ತಾವರ್ ಬಂಡವಾಳ ಹಾಡಿದ್ದಾರೆ.
ಅರವಿಂದ್ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಬೈಲೂರು, ಸಂದೀಪ್ ಶೆಟ್ಟಿ ಸೇರಿದಂತೆ ತುಳು ಚಿತ್ರರಂಗದ ದಿಗ್ಗಜರ ದಂಡೇ ಈ ಚಿತ್ರದಲ್ಲಿದೆ. ಕನ್ನಡ ಚಿತ್ರ “ಸಲಗ” ಖ್ಯಾತಿಯ ಯಶ್ ಶೆಟ್ಟಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ. ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ. ಗಿರಿಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ, ನಿರಂಜನ್ ದಾಸ್ ಕ್ಯಾಮರಾ, ರಾಹುಲ್ ವಸಿಷ್ಠ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.