ದೇಹವೆಂದರೆ ಮೂಳೆ ಮಾಂಸಗಳ ತುಡಿಕೆ, ಮನಸ್ಸಲ್ಲಿ ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ, ನಶ್ವರ ಕಾಯ ನಂಬದಿರಯ್ಯ, ತ್ಯಾಗದಿ ಪಡೆವ ಸುಖ ಶಾಶ್ವತ. ಅನ್ಯರಿಗೆ ಅಹಿತವಾಗದಂತೆ ನಮ್ಮ ಆಸೆಗಳನ್ನು ಪೂರೈಸಿಕೊಂಡರೆ ಅದು ಸಂಸ್ಕಾರ, ತಮ್ಮ ಹಿತವನ್ನು ಸಾಧಿಸುತ್ತಾ ಅನ್ಯರ ಹಿತವನ್ನೂ ಸಾಧಿಸುತ್ತಾ ಬಯಸಿ ಸಾಧಿಸಿದರೆ ಅದು ಸಾಧನೆ, ತಮ್ಮ ಹಿತವನ್ನು ಬದಿಗೊತ್ತಿ ಪರರ ಹಿತವನ್ನೂ ಸಾಧಿಸುವುದು ತ್ಯಾಗ.
ಈ ವಾಣಿ ಉದ್ಗರಿಸಲೋಸುಗ. ಏಕೆಂದರೆ ಕುಡುಂಬೂರು ಎಂದಾಗ ನಮ್ಮೆಲ್ಲರ ಜ್ಞಾನಕ್ಕೆ ನಿಲುಕುವಂತ ತ್ಯಾಗದ ಅಮರ ಚೇತನ ಕೀರ್ತಿಶೇಷ ಪಂಜ ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟರು.
ತುಳುನಾಡಿನ ಕೃಷಿ ಕ್ಷೇತ್ರಗಳಲ್ಲೊಂದು ಹೆಸರುವಾಸಿಯಾದ ಹಚ್ಚಹಸುರಿನ ಪ್ರದೇಶ ಕುಡುಂಬೂರು. 1960 -70ರ ದಶಕದಲ್ಲಿ ಈ ಕುಡುಂಬೂರು ಪ್ರದೇಶವು ಕರ್ನಾಟಕ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಕೈಗಾರಿಕೆಯ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು ಪ್ರದೇಶದ ಜನರಿಗೆ ಪರಿಹಾರ ಬಿಡುಗಡೆಗೊಂಡು ಕೃಷ್ಣಾಪುರ ಕಾಟಿಪಳ್ಳ ಪ್ರದೇಶದಲ್ಲಿ ಪುನರ್ವಸತಿಗೆ ಜಾಗ ಮಂಜೂರಾದರೂ ನಂತರದ ದಿನಗಳಲ್ಲಿ ಸುಮಾರು ಇಪ್ಪತ್ತು ವರುಷಗಳ ಕಾಲ ಕುಡುಂಬೂರು ಪ್ರದೇಶದ ಜನರು ಕೃಷಿ ಕಾರ್ಯವನ್ನು ಮುಂದುವರಿಸಿಕೊಂಡೇ ಇರುವ ಸುಸಂದರ್ಭ. ಸುಮಾರು 1990 ರ ದಶಕದಲ್ಲಿ ತಮ್ಮ ವಾಸಸ್ಥಳವನ್ನು ಕೈಗಾರಿಕೆಗೆ ದೊರೆಯಬೇಕೆಂಬ ಸರ್ಕಾರದ ಕಟು ನಿರ್ಧಾರ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು ಕುಡುಂಬೂರು ಪ್ರದೇಶದ ಜನರಿಗೆ. ಕರಿ ಛಾಯೆಯನ್ನು ಆವರಿಸಿದ ಕುಡುಂಬೂರು ಪ್ರದೇಶದ ಜನರಿಗೆ ಬದುಕು ಕಟ್ಟಿಕೊಳ್ಳುವರೇ ಹೋರಾಟ ಅನಿವಾರ್ಯವಾಯಿತು. ಅದಕ್ಕಾಗಿ ಒಂದು ಸಮರ್ಥ ನಾಯಕತ್ವದ ಅಗತ್ಯವೂ ಇತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕುಡುಂಬೂರು ಪ್ರದೇಶದ ಜನರಿಗೆ ಸಮರ್ಥ ನಾಯಕನಾಗಿ , ದಾರಿದೀಪವಾಗಿ ಪ್ರಜ್ವಲಿಸಿದ್ದು ಕುಡುಂಬೂರು ಭೋಜಶೆಟ್ಟರು.
ಸರ್ಕಾರದ ವಿರುದ್ಧ ಹೋರಾಟವೆಂದರೆ ಅದು ಅಸಾಮಾನ್ಯ. ಜನಬಲ , ಧನಬಲ ಅವಶ್ಯಕ ವಾದಂತಹ ಸಂದರ್ಭದಲ್ಲಿ ಕುಡುಂಬೂರು ಭೋಜ ಶೆಟ್ಟರು ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿ ದರಲ್ಲದೆ, ತನ್ನ ಮನೆಯ ದವಸ-ಧಾನ್ಯಗಳನ್ನು ಮಾರಿ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಂಡು, ಬೆಂಗಳೂರಿಗೆ ತೆರಳಿ ಮಾಸ (ತಿಂಗಳು) ಕಳೆದರೂ ಮನೆಗೆ ಬಾರದೆ ಮಾಸದ (ಮುಗಿಯದ) ಹುರುಪಿನಿಂದ ತೊಡೆತಟ್ಟಿ ಹೋರಾಡಿ ಜನಮಾನಸದಲ್ಲಿ (ಮನಸ್ಸಲ್ಲಿ) ಉಳಿಯುವಂತೆ ನಿರಂತರ ನಾಲ್ಕು ವರುಷಗಳ ವರೆಗೆ ಸರ್ಕಾರದ ವಿರುದ್ಧ ಹೋರಾಡಿ 1994 ನೇ ಇಸವಿಯಲ್ಲಿ ತನ್ನ ಮನೆಯ ಸುತ್ತಣ ಪ್ರದೇಶದಲ್ಲಿಯೇ ಸುಮಾರು 105 ಮನೆಯವರಿಗೆ ತಲಾ 5 ಸೆಂಟ್ಸ್ ಜಾಗದಂತೆ ಮಂಜೂರು ಮಾಡಿಸಿ ಕುಡುಂಬೂರು ಊರನ್ನು ಪುನರಪಿ ಉಳಿಸಿ ಕುಡುಂಬೂರು ಕಾಲನಿಯ ಪುನರ್ ನಿರ್ಮಾಣವನ್ನು ಜನಮಾನಸದಲ್ಲಿ ಮಾಸದಂತೆ (ಮರೆಯದಂತೆ) ಉಳಿದ ಮಹಾನೀಯ ಕುಡುಂಬೂರು ಭೋಜ ಶೆಟ್ಟಿ ಯವರು.
ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದ ಕುಡುಂಬೂರು ಭೋಜ ಶೆಟ್ಟಿ ಅವರು ಕಂಬಳ ಕ್ಷೇತ್ರದಲ್ಲಿಯೂ ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. 1970-85 ಅಂದರೆ ಸುಮಾರು 15 ವರುಷಗಳ ಕಾಲ ತನ್ನದೇ ಆದ ಕಂಬಳ ಕೋಣಗಳನ್ನು ಕಟ್ಟಿ , ಕಂಬಳದಲ್ಲಿ ಜಯ ಗಳಿಸುವುದರ ಮೂಲಕ ಅನೇಕ ಪದಕ, ಸನ್ಮಾನಗಳನ್ನು ಪಡೆದಿದ್ದಾರೆ.
ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡ ಕುಡುಂಬೂರು ಭೋಜ ಶೆಟ್ಟಿ ಅವರ ಧರ್ಮಕಾರ್ಯ ಇಷ್ಟಕ್ಕೇ ನಿಂತಿಲ್ಲ. ಅದು ನಿಂತ ನೀರೂ ಅಲ್ಲ. 1998 ನೇ ಇಸವಿಯಲ್ಲಿ ಮೂಲಿಕೆ (ಮುಲ್ಕಿ) 9 ಮಾಗಣೆಯಲ್ಲೊಂದಾದ ಪಂಜ ನಲ್ಯಗುತ್ತು ಜಾರಂದಾಯನ ಗಡಿ ಪ್ರಧಾನಕರಾಗಿ, ಹರಿಪಾದೆ ಧರ್ಮ ದೈವ ಜಾರಂದಾಯನ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಪರಮ ಹೊಣೆಯನ್ನು ಹೆಗಲೇರಿಸಿಕೊಂಡರು. ಅಲ್ಲದೆ ಜಾರಂದಾಯ ದೈವಸ್ಥಾನದ ಅಭಿವೃದ್ಧಿಗೆ ಮುನ್ನುಡಿಯಾದರು.
ಹರಿಪಾದೆ ಜಾರಂದಾಯ ದೈವಸ್ಥಾನಕ್ಕೆ ರಸ್ತೆ ನಿರ್ಮಾಣ , ಸ್ವಾಗತ ಗೋಪುರದ ನಿರ್ಮಾಣ , ಮಹಾ ಅನ್ನದಾನ, ತುಲಾಭಾರ ಸೇವೆ, ಭಂಡಾರ ಚಾವಡಿಯ ನಿರ್ಮಾಣ, ಪಾಕಶಾಲೆಯ ನಿರ್ಮಾಣ, ಸುಮಾರು 3 ಕೋಟಿ ವೆಚ್ಚದಲ್ಲಿ ಹರಿಪಾದೆ ಜಾರಂದಾಯ ದೈವಸ್ಥಾನ ಸಂಪೂರ್ಣ ಪುನರ್ ನಿರ್ಮಾಣ ಕಾರ್ಯವು ಶಾಸ್ತ್ರೋಕ್ತವಾಗಿ ನಡೆಯಿತಲ್ಲದೆ, ಸುಮಾರು 250 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅತ್ತೂರು ಅರಸು ಕುಂಜಿರಾಯ ದೈವಸ್ಥಾನಕ್ಕೆ ಹರಿಪಾದೆ ಜಾರಂದಾಯ ದೈವದ ಭಂಡಾರ ಪುನಹ ಆರಂಭಗೊಂಡಿದ್ದು ಗುತ್ತಿನಾರ್ ಭೋಜ ಶೆಟ್ಟಿಯವರ ಆಡಳಿತದಲ್ಲಿ ಎಂಬುದು ಅವಿಸ್ಮರಣೀಯ.
ಕುಡುಂಬೂರು ಮತ್ತು ಪಂಜಕ್ಕೆ ಬಂಧುತ್ವದ ಸೇತುವೆಯನ್ನು ನಿರ್ಮಿಸಿದವರು ಗುತ್ತಿನಾರ್ ಭೋಜ ಶೆಟ್ಟರು. ಸುಮಾರು 22 ಸಂವತ್ಸರಗಳ ಕಾಲ ಪಂಜ ನಲ್ಯಗುತ್ತು ಜಾರಂದಾಯನ ಗಡಿ ಪ್ರಧಾನಕರಾಗಿ, ಹರಿಪಾದೆ ಜಾರಂದಾಯ ದೈವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರಾಗಿ ಸೇವೆಗೈಯುತ್ತಾ 92ರ ಇಳಿವಯಸ್ಸಿನವರೆಗೂ ಯುವಕರಂತೆ ಯುವಪೀಳಿಗೆಗೆ ಮಾದರಿಯಾಗಿ, ಕೊಡುಗೈ ದಾನಿಯಾಗಿದ್ದ ಗುತ್ತಿನಾರ್ ಭೋಜ ಶೆಟ್ಟಿ ಇವರು 13-08-2020 ರ ಗುರುವಾರದಂದು ಕೀರ್ತಿಶೇಷರಾದರು.
ಕಾಯ ಅಳಿದರೂ ಕಾಯಕ ಅಳಿಯದು. ಅವರ ಕಾಯಕ ಅಮರ – ಅಜರಾಮರ. ಈ ನಿಟ್ಟಿನಲ್ಲಿ ಕುಡುಂಬೂರು ಹತ್ತು ಸಮಸ್ತರು, ಹಿಂದೂ ಯುವ ಸೇನೆ, ಕುಡುಂಬೂರು ಹಿತರಕ್ಷಣಾ ವೇದಿಕೆ, ಕ್ರೈಸ್ತ ಬಾಂಧವರು ಮತ್ತು ಸ್ಥಳೀಯ ನಾಯಕರ ಸಹಾಯದಿಂದ ಜಾತಿ – ಭೇದ ಮರೆತು ಕುಡುಂಬೂರು ಕಾಲನಿಯ ರಸ್ತೆಗಳಿಗೆ ಕುಡುಂಬೂರು ಭೋಜ ಶೆಟ್ಟಿ ಅವರ ಸ್ಮರಣಾರ್ಥ “ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟಿ ” ಎಂದು ನಾಮಕರಣ ಮಾಡಿರುವುದು ಸ್ತುತ್ಯಾರ್ಹ, ಅಭಿನಂದನೀಯ, ಸ್ಮರಣೀಯ, ಪ್ರಶಂಸನೀಯ, ಪ್ರಾತಃಸ್ಮರಣೀಯ.