ರಾಷ್ಟ್ರೀಯ ಹೆದ್ದಾರಿ ಮೇಲ್ಪದರವನ್ನು ಅಗೆದು ಮರು ಡಾಮರೀಕರಣಗೊಳಿಸುವ ಕಾಮಗಾರಿ ಹಲವು ತಿಂಗಳುಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿದರೂ ಇಲಾಖೆಯಾಗಲಿ, ಗುತ್ತಿಗೆದಾರರಾಗಲಿ ಎಚ್ಚೆತ್ತುಕೊಂಡಿಲ್ಲ. ಮೂಲ್ಕಿ ಸೇತುವೆ ಬಳಿ ಎರಡು ಜೀವ ಹೋದ ಬಳಿಕವೂ ಯಾರೂ ಎಚ್ಚೆತ್ತುಕೊಂಡಿಲ್ಲ. ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು ಎಂಬಂತೆ ಎಲ್ಲರೂ ನುಣುಚಿಕೊಳ್ಳುತ್ತಿದ್ದಾರೆ. ಹೆಜಮಾಡಿ ಸಮೀಪದಿಂದ ಮೂಲ್ಕಿಯವರೆಗೆ ರಾ.ಹೆ.ಯನ್ನು ದೊರಗುಗೊಳಿಸಿ ಹಾಗೆಯೇ ಬಿಡಲಾಗಿದೆ. ಇದರ ಮೇಲೆಯೇ ವಾಹನ ಸಂಚರಿಸ ಬೇಕಾಗಿದೆ. ಚತುಃಶ್ಚಕ್ರ ವಾಹನಗಳಿಗೆ ಇದರಿಂದ ಹೆಚ್ಚಿನ ಅಪಾಯವಾಗದಿದ್ದರೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದುಕೊಂಡು ಸಾಗಬೇಕಾಗಿದೆ.
ರಸ್ತೆ ಅಭಿವೃದ್ಧಿ ಆಗಬೇಕಿದ್ದರೂ ಈ ಸಂದರ್ಭ ತೆಗೆದುಕೊಳ್ಳಬೇಕಾಗಿರುವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ತೆಗೆದುಕೊಂಡಿಲ್ಲ. ರಸ್ತೆ ದೊರಗುಗೊಳಿಸಿರುವಲ್ಲಿ ನಿಧಾನವಾಗಿ ಸಾಗಬೇಕು. ಆದರೆ ಇಲ್ಲಿ ಎಲ್ಲಿಯೂ ಎಚ್ಚರಿಕೆಯ ಸೂಚನ ಫಲಕ ಹಾಕಿಲ್ಲ. ಆದುದರಿಂದ ಸವಾರರಿಗೆ ತಾವೊಂದು ಇಂತಹ ಅಪಾಯಕ್ಕೆ ಎದುರಾಗುತ್ತಿದ್ದೇವೆ ಎಂಬ ಯಾವ ಸುಳಿವೂ ಇಲ್ಲದೇ ನೇರಾನೇರ ಬೆಂಕಿಗೆ ಬಿದ್ದಂತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ದೊರಗು ಮಾಡಿರುವ ರಸ್ತೆಯಲ್ಲಿ ತೊಳಲಾಡುವ ವಾಹನವನ್ನು ನಿಯಂತ್ರಿಸಿಕೊಳ್ಳಲು ಬ್ರೇಕ್ ಹಾಕುವುದು ಅನಿವಾರ್ಯ. ಈ ಸಂದರ್ಭ ಹಿಂದಿನಿಂದ ಇತರ ವಾಹನಗಳು ಇದ್ದರಂತೂ ಅಪಘಾತ ಕಟ್ಟಿಟ್ಟ ಬುತ್ತಿ.
ತೀರಾ ಎಡಕ್ಕೆ ಹೋದಲ್ಲಿ ಸ್ಕಿಡ್ ಭಯ
ಇದೇ ವೇಳೆ ಮೇಲ್ಪದರ ತೆಗೆಯುವ ವೇಳೆ ತೀರಾ ಸಣ್ಣಗೆ ಹುಡಿಯಾಗಿ ಪರಿಣಮಿಸುವ ಡಾಮರಿನ ಕಣಗಳು ಹೆದ್ದಾರಿಯ ಎಡ ಮಗ್ಗುಲಲ್ಲಿರುತ್ತವೆ. ಅದನ್ನು ಗುತ್ತಿಗೆದಾರ ಕಂಪೆನಿಯು ಮರುಡಾಮರು ಕಾಮಗಾರಿಗೆ ಬಳಸಿಕೊಳ್ಳುತ್ತಿದೆ. ದ್ವಿಚಕ್ರ ಸವಾರರು ಹೆದ್ದಾರಿಯ ತೀರಾ ಎಡಭಾಗಕ್ಕೆ ಚಲಿಸಿದಲ್ಲಿ ಸ್ಕಿಡ್ ಆಗಲಿರುವ ಅಪಾಯವೇ ಹೆಚ್ಚು.
ರಾತ್ರಿ ಸಂಚಾರ ತೀರಾ ಅಪಾಯ
ಮರು ಡಾಮರು ನಡೆಸುತ್ತಿರುವ ಪ್ರದೇಶದಲ್ಲಿ ರಾತ್ರಿಯಂತೂ ದ್ವಿಚಕ್ರ ವಾಹನ ಸವಾರರು ಸಂಚರಿಸುವಂತೆಯೇ ಇಲ್ಲದ ಸ್ಥಿತಿ ಇದೆ. ಒಂದೆಡೆ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲ. ಇನ್ನೊಂದೆಡೆ ಅಪಾಯಕಾರಿಯಾಗಿರುವ ದೊರಗುಗೊಳಿಸಿದ ರಸ್ತೆ. ಇಂತಹ ಅಪಾಯದ ಸ್ಥಿತಿಯಿಂದಾಗಿ ಹಲವಾರು ಮಂದಿ ದ್ವಿಚಕ್ರ ವಾಹನ ಎಲ್ಲೆಲ್ಲೋ ರಸ್ತೆ ಬದಿ ನಿಲ್ಲಿಸಿ ಬಸ್ಗಳಲ್ಲಿಯೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ದಿನನಿತ್ಯ ಅಪಘಾತ
ರಸ್ತೆ ಅಗೆದಿರುವುದರಿಂದ ದಿನನಿತ್ಯ ಎಂಬಂತೆ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಹಲವಾರು ಮಂದಿ ಪೆಟ್ಟು ಮಾಡಿಕೊಂಡಿದ್ದಾರೆ. ಗಂಭೀರ ಗಾಯಗಳಾದ ಅಥವಾ ಜೀವ ಹಾನಿಯಾದ ಸಂದರ್ಭ ಮಾತ್ರ ಪ್ರಕರಣ ದಾಖಲಾಗುತ್ತಿದೆ. ಉಳಿದಂತೆ ಬಿದ್ದು ಎದ್ದು ಹೋದವರ ಲೆಕ್ಕವೇ ಇಲ್ಲ. ಇಷ್ಟಾಗುತ್ತಿದ್ದರೂ ಹೆದ್ದಾರಿ ಇಲಾಖೆಯಾಗಲಿ, ಕಾಮಗಾರಿ ನಿರ್ವಹಿಸುವ ನವಯುಗ ಕಂಪೆನಿಯಾಗಲಿ, ಸ್ಥಳೀಯ ಪೊಲೀಸರಾಗಲಿ ಎಚ್ಚೆತ್ತುಕೊಂಡಿಲ್ಲ.
ಕಿ.ಮೀ.ಗಟ್ಟಲೆ ದೊರಗು
ರಸ್ತೆಯನ್ನು ಅಗೆದ ಕೂಡಲೇ ಅಥವಾ ಕನಿಷ್ಠ ಮರುದಿನವಾದಲೂ ಡಾಮರು ಹಾಕಿದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ಒಮ್ಮೆ ರಸ್ತೆ ದೊರಗು ಗೊಳಿಸಿ ಕಿ.ಮೀ.ಗಟ್ಟಲೆ ಹೋಗುತ್ತಾರೆ. ಅನಂತರ 10-15 ದಿನಗಳ ಅಂತರದಲ್ಲಿ ಡಾಮರು ಹಾಕುತ್ತಾರೆ. ಅಷ್ಟೂ ದಿನ ಸವಾರರು ಅಪಾಯವನ್ನು ಮೈಮೇಲೆ ಎಳೆದುಕೊಂಡು ಸಾಗಬೇಕಷ್ಟೇ. ಡಾಮರು ಹಾಕಲಿ. ಆದರೆ ಈ ಕೆಲಸ ಬೇಗನೆ ನಡೆಸಲಿ ಎಂಬುದೇ ವಾಹನ ಸವಾರರ ಆಗ್ರಹವಾಗಿದೆ.