ಮುಂಬಯಿ, (ಆರ್ಬಿಐ) ಫೆ.28 :ಗುರುಪುರ ಗೋಳಿದಡಿಗುತ್ತಿಗೆ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ಭಾರತದಲ್ಲೇ ಪ್ರಪ್ರಥಮವೆನ್ನಲಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಭಾನುವಾರ(ಫೆ. 26) ಚಾಲನೆ ನೀಡಲಾಯಿತು.
ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ಹಾಗೂ ಮಕ್ಕಳ ಸಮಕ್ಷಮದಲ್ಲಿ, ಪಾವಂಜೆಯ ಶ್ರೀ ನಿರಂಜನ್ ಭಟ್ ಮತ್ತು ಅಮೆರೇಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಬೆಳ್ತಂಗಡಿಯ ಶಿಲ್ಪಿ ವೆಂಕಟೇಶ್ ಆಚಾರ್ಯ ಅವರಿಗೆ ಕಾಲಭೈರವನ ಏಕಶಿಲಾಮೂರ್ತಿ ಕೆತ್ತನೆ ಕೆಲಸ ವಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ(ಎಸಿ) ಗುರುಪ್ರಸಾದ್, ಗುತ್ತು ಮನೆತನದ ಯಜಮಾನರು, ಗಡಿಕಾರರು, ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ಮೂರ್ತಿ ವಿಶೇಷ : ತಳಪಾಯದಿಂದ 5 ಹಂತದಲ್ಲಿ ಒಟ್ಟು 20 ಅಡಿ ಎತ್ತರದಲ್ಲಿ ಶಿಲಾಪೀಠ ನಿರ್ಮಾಣಗೊಳ್ಳಲಿದ್ದು, ಈ ಪೀಠದ ಮೇಲೆ 22 ಅಡಿ ಎತ್ತರದ ಆರು ಕೈಗಳ ಮಹಾಕಾಲೇಶ್ವರನ ಭವ್ಯ ಏಕಶಿಲಾ ಮೂರ್ತಿ ಸ್ಥಾಪನೆಯಾಗಲಿದೆ. ಬಯಲು ಆಲಯದಲ್ಲಿ ತಲೆಎತ್ತಲಿರುವ ಮಹಾಕಾಲೇಶ್ವರ ಮೂರ್ತಿಯು ಒಟ್ಟು 42 ಎತ್ತರದಲ್ಲಿ ರಾರಾಜಿಸಲಿದೆ. ಈ ಸಾನಿಧ್ಯದ ಪಕ್ಕದಲ್ಲಿ ನೂತನ ಸೇತುವೆಯೊಂದಿಗೆ ಮಂಗಳೂರು-ಮೂಡಬಿದ್ರೆ ಹೆದ್ದಾರಿ(169) ವಿಸ್ತರಣೆಯಾಗುತ್ತಿರುವುದು ಸಾನಿಧ್ಯಕ್ಕೆ ಮತ್ತಷ್ಟು ಆಕರ್ಷಣೆಯಾಗಲಿದೆ.