ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗ ಮಂಗಳೂರು ಕೇಂದ್ರ ಸ್ಥಳದಲ್ಲಿತ್ತು. ಆದರೆ ಈಗ ಉಡುಪಿ ಪ್ರತ್ಯೇಕ ಜಿಲ್ಲೆಯಾದ ಮೇಲೆ ಮಂಗಳೂರು ಜಿಲ್ಲಾ ಕೇಂದ್ರವಾಗಿಯೇ ಉಳಿದಿದ್ದರೂ ಅದು ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿರದೆ ದಕ್ಷಿಣ ಕನ್ನಡದ ಒಂದು ಮೂಲೆಯಲ್ಲಿದೆ. ಹಾಗಾಗಿ ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳ ಅಂಚಿನಲ್ಲಿರುವ ಹಳ್ಳಿಗಳ ಜನಗಳಿಗೆ ಮಂಗಳೂರಿನ ಜಿಲ್ಲಾ ಸರಕಾರೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವುದು ಕಷ್ಟವಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಆಸ್ಪತ್ರೆಯು ಬಹಳ ದೊಡ್ಡದಾಗಿದ್ದು ಸಾವಿರ ಹಾಸಿಗೆಗಳ ಸೌಲಭ್ಯ ಹೊಂದಿದೆ. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಇದೇ ವೆನ್ಲಾಕ್ ಆಸ್ಪತ್ರೆ ಟೀಚಿಂಗ್ ಹಾಸ್ಪಿಟಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ಸರ್ಕಾರೀ ಸಾರ್ವಜನಿಕ ಆಸ್ಪತ್ರೆಯೆಂದರೆ ಅದು ಪುತ್ತೂರಿನ ಆಸ್ಪತ್ರೆಯೇ..! ಲೆಕ್ಕದಲ್ಲಿ ಇದನ್ನು ಎರಡನೆಯ ಅತೀ ದೊಡ್ಡ ಆಸ್ಪತ್ರೆ ಅಂತ ಕರೆಯಬಹುದೇ ವಿನಃ ಗಾತ್ರದಲ್ಲಾಗಲೀ, ಸೌಲಭ್ಯಗಳಲ್ಲಾಗಲೀ ನಮ್ಮ ಪುತ್ತೂರಿನ ಸರಕಾರೀ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯ ಹತ್ತನೇ ಒಂದು ಭಾಗದಷ್ಟೂ ಇಲ್ಲ. ಪುತ್ತೂರು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗಲಿದೆ ಅಂತ ಸಂಭ್ರಮ ಪಡುವವರಿಗೆ ಪುತ್ತೂರಿಗೊಂದು ಜಿಲ್ಲಾಸ್ಪತ್ರೆಯ ಸ್ಥಾನಮಾನದ ಸರಕಾರೀ ಆಸ್ಪತ್ರೆ ಇಲ್ಲ ಎಂಬ ಅರಿವು ಇಲ್ಲ. ಪುತ್ತೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಮಾತುಗಳು ಹಲವಾರು ವರ್ಷಗಳಿಂದಲೇ ಕೇಳಿ ಬರುತ್ತಿದ್ದರೂ ಈ ದಿಸೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಪುತ್ತೂರಿನಲ್ಲಿ ಸರಕಾರೀ ಮೆಡಿಕಲ್ ಕಾಲೇಜು ಬೇಕೆಂಬ ಬೇಡಿಕೆ ಇವತ್ತು ನಿನ್ನೆಯದಲ್ಲ. ಈ ದಿಸೆಯಲ್ಲಿ ನಿಜವಾಗಿಯೂ ಮೆಚ್ಚತಕ್ಕಂಥಾ ಒಂದಷ್ಟು ಕೆಲಸಗಳೂ ಆಗಿ, ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿರುವ ಸೇಡಿಯಾಪು ಎಂಬಲ್ಲಿ ನಲವತ್ತು ಎಕರೆ ಜಾಗವನ್ನು ಸರಕಾರೀ ವೈದ್ಯಕೀಯ ಕಾಲೇಜಿಗೆ ಮೀಸಲಿಡುವ ಕೆಲಸವೂ ಆಗಿದೆ. ಆದರೆ ದುರಾದೃಷ್ಟವೆಂದರೆ ಈ ಜಾಗದಲ್ಲಿ ಮೆಡಿಕಲ್ ಕಾಲೇಜಿನ ಬದಲಾಗಿ ಈಗ ಸೀ ಫುಡ್ ಪಾರ್ಕ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂಬ ಸುದ್ದಿ ಬಂತು. ಇದನ್ನು ವಿರೋಧಿಸಿ ಹೋರಾಟಗಳೂ ನಡೆದವು. ಸಧ್ಯಕ್ಕೆ ಮೆಡಿಕಲ್ ಕಾಲೇಜ್ ಜಾಗದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣದ ಸುದ್ದಿ ಹಿನ್ನೆಲೆಗೆ ಸರಿಯಿತಾದರೂ ಮೆಡಿಕಲ್ ಕಾಲೇಜ್ ಸ್ಥಾಪನೆಯ ಕೆಲಸವೂ ನೆನೆಗುದಿಗೆ ಬಿದ್ದಿದೆ.
ಒಂದು ವೇಳೆ ಪುತ್ತೂರಲ್ಲಿ ಸರಕಾರೀ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಾದರೆ, ಅದಕ್ಕೆ ಪೂರ್ವದಲ್ಲಿಯೇ ಒಂದು ಸುಸಜ್ಜಿತ ಆಸ್ಪತ್ರೆ ಇರಲೇ ಬೇಕು. ಸೇಡಿಯಾಪು ಪುತ್ತೂರಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಒಂದು ವೇಳೆ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವುದೇ ಆದರೂ ಅಲ್ಲಿ ಹೊಸದಾಗಿ ಆಸ್ಪತ್ರೆ ನಿರ್ಮಾಣ ಮಾಡುವುದು, ಮತ್ತು ಆ ಆಸ್ಪತ್ರೆಗೆ ಜನಗಳು ಬರುವುದು ಕೂಡಾ ಕಷ್ಟವಾಗಬಹುದು. ಆಗ ಪುತ್ತೂರಿನ ಸರಕಾರೀ ಆಸ್ಪತ್ರೆಯನ್ನೇ ಮೇಲ್ದರ್ಜೆಗೆ ಏರಿಸುವುದು ಅತ್ಯಂತ ಸುಲಭದ ಉಪಾಯ. ಒಂದು ಮೆಡಿಕಲ್ ಕಾಲೇಜಿನ ಟೀಚಿಂಗ್ ಹಾಸ್ಪಿಟಲ್ ನಲ್ಲಿ ಕನಿಷ್ಠ ಮುನ್ನೂರು ಬೆಡ್ ಗಳಿರಲೇ ಬೇಕು. ಅದಕ್ಕಿಂತ ಹೆಚ್ಚು ಹಾಸಿಗೆಗಳಿದ್ದರೆ ಒಳ್ಳೆಯದೇ ಆಯಿತು. ಹಾಗಾಗಿ ಪುತ್ತೂರು ಸರಕಾರೀ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ತೀರಾ ಅವಶ್ಯಕ.
ಆದರೆ ಭವಿಷ್ಯದಲ್ಲಿ ಪುತ್ತೂರಿನಲ್ಲಿ ಸರಕಾರೀ ಮೆಡಿಕಲ್ ಕಾಲೇಜು ಆಗಬೇಕಿದ್ದರೆ ಈಗ ಪುತ್ತೂರು ಸರಕಾರೀ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಾಗಲೇ ಅದಕ್ಕೆ ತಕ್ಕ ಹಾಗೆ ಯೋಜನೆ ರೂಪಿಸಬೇಕು. ಮೆಡಿಕಲ್ ಕಾಲೇಜಿನಲ್ಲಿ ಕ್ಲಾಸ್ ರೂಮುಗಳು ಹೇಗಿರಬೇಕು ಎಂಬುದಕ್ಕೆ ಕಾನೂನುಗಳಿವೆ. ಅದೇ ರೀತಿ ಟೀಚಿಂಗ್ ಹಾಸ್ಪಿಟಲ್ ಕಾಲೇಜಿಗಿಂತ ದೂರ ಇದ್ದ ಪಕ್ಷದಲ್ಲಿ, ಹಾಸ್ಪಿಟಲ್ ನಲ್ಲೂ ಕೂಡಾ ಕಾಲೇಜಿನಲ್ಲಿದ್ದಂತೆಯೇ ಕ್ಲಾಸ್ ರೂಮುಗಳು ಬೇಕು. ಇದನ್ನೆಲ್ಲಾ ಮೊದಲೇ ಆಲೋಚಿಸಿ ಯೋಜನೆ ರೂಪಿಸಬೇಕು.
ಪುತ್ತೂರಿನ ಗ್ರಾಮೀಣ ಪ್ರದೇಶದವರಿಗಷ್ಟೇ ಅಲ್ಲದೆ, ಪಕ್ಕದ ಸುಳ್ಯ, ಕಡಬ, ಬೆಳ್ತಂಗಡಿ ಪ್ರದೇಶದವರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ದೊರೆತರೆ ಅದಕ್ಕಿಂತ ದೊಡ್ಡ ಸಂಗತಿ ಬೇರೆಯಿಲ್ಲ. ಪುತ್ತೂರಿನ ಮೂಲಕ ಈಗಾಗಲೇ ಒಂದು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಮೈಸೂರು ಕೊಡಗು ಸುಳ್ಯ ಪುತ್ತೂರು ಮೂಲಕ ಮಾಣಿವರೆಗೆ ಇನ್ನೊಂದು ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಹೊಸ ರಸ್ತೆಯಾದುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚೇ. ಆಗ ಮಂಗಳೂರಿನಲ್ಲಿ ಸರ್ಕಾರೀ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ತುಂಬಾ ಸಮಯ ಹಿಡಿಯುವುದರಿಂದ ಪುತ್ತೂರಿನಲ್ಲೊಂದು ಸುಸಜ್ಜಿತ ಆಕ್ಸಿಡೆಂಟ್ ಮತ್ತು ಟ್ರಾಮಾ ಸೆಂಟರ್ ಅನ್ನು ಕೂಡಾ ತೆರೆಯಬೇಕು. ಆಗ ಅದೆಷ್ಟೋ ಜೀವಗಳನ್ನು ಉಳಿಸಬಹುದು. ಟ್ರಾಮಾ ಸೆಂಟರ್ ತೆರೆಯಬೇಕಾದರೆ ಪುತ್ತೂರು ಆಸ್ಪತ್ರೆಗೆ ಒಂದು ಸಿ.ಟಿ. ಸ್ಕ್ಯಾನ್ ಮತ್ತು ಒಂದು ಎಂ.ಆರ್.ಐ ಸ್ಕ್ಯಾನ್ ನಂಥ ದುಬಾರಿ ಯಂತ್ರಗಳನ್ನೂ ಖರೀದಿಸಬೇಕಾಗುತ್ತದೆ. ಇದರ ಜೊತೆಗೆ ಸುಸಜ್ಜಿತ ಇಂಟೆನ್ಸಿವ್ ಕೇರ್ ಯುನಿಟ್ ಅನ್ನು ಕೂಡಾ ತೆರೆಯಬೇಕಾಗುತ್ತದೆ. ಆಗ ಪುತ್ತೂರು ಆಸ್ಪತ್ರೆಗೆಂದೇ ಒಂದು ಅತ್ಯಾಧುನಿಕ ಉಪಕರಣಗಳುಳ್ಳ ಸುಸಜ್ಜುತ ಆಪರೇಷನ್ ಥಿಯೇಟರುಗಳ ಅವಶ್ಯಕತೆಯೂ ಇದೆ.
ಈಗ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುತ್ತಲೇ ಇದನ್ನೊಂದು ಪರಿಪೂರ್ಣವಾದ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯಾಗಿ ರೂಪಿಸಬೇಕು. ಮೊದಲನೆಯದಾಗಿ ಅತ್ಯುತ್ತಮ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು ತಜ್ಞರ ವಿಭಾಗಗಳನ್ನು ಆಧುನಿಕವಾಗಿ ರೂಪಿಸಬೇಕು. ಆಪರೇಷನ್ ಥಿಯೇಟರುಗಳನ್ನು ರೂಪಿಸುವಾಗಲೂ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮಾಡಬೇಕು. ಅರ್ಥ್ರೊಸ್ಕೋಪಿಯಂಥ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಅನುವಾಗುವಂಥ ರೀತಿಯಲ್ಲಿ ಆಪರೇಶನ್ ಥಿಯೇಟರುಗಳನ್ನು ನಿರ್ಮಿಸಬೇಕು. ಮಕ್ಕಳಿಗೆಂದೇ ವಿಶೇಷವಾಗಿ ನಿಯೋ ನೇಟಲ್ ಇಂಟೆನ್ಸಿವ್ ಕೇರ್ ಯೂನಿಟ್ ಕೂಡಾ ಇರಬೇಕು.
ಇದಲ್ಲದೆ, ಹೃದ್ರೋಗ ವಿಭಾಗ, ಗ್ಯಾಸ್ಟ್ರೋ ಎಂಟೆರಾಲಜಿ ವಿಭಾಗ, ಗಂಟಲು, ಕಿವಿ, ಮೂಗು, ಚಿಕಿತ್ಸಾ ವಿಭಾಗ, ಚರ್ಮ ರೋಗ ವಿಭಾಗ, ಮನಃಶಾಸ್ತ್ರ ವಿಭಾಗ, ಯೂರಾಲಜಿ ವಿಭಾಗ, ಎಂಡೋಕ್ರೈನಾಲಜಿ ವಿಭಾಗ, ದಂತ ಚಿಕಿತ್ಸಾ ವಿಭಾಗ ಇತ್ಯಾದಿಗಳೆಲ್ಲಾ ಇರಬೇಕು. ಒಟ್ಟಿನಲ್ಲಿ ಒಂದು ಮೆಡಿಕಲ್ ಕಾಲೇಜಿನ ಟೀಚಿಂಗ್ ಹಾಸ್ಪಿಟಲ್ ಆಗಿಯೂ ಮತ್ತು ಸಂಪೂರ್ಣ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯಾಗಿಯೂ ಪುತ್ತೂರಿನ ಸರಕಾರೀ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಅವಕಾಶಗಳಿವೆ. ಈಗ ಹೇಗೂ ಆಸ್ಪತ್ರೆಯ ಅಕ್ಕಪಕ್ಕದಲ್ಲಿಯೇ ಇದ್ದ ತಾಲೂಕು ಆಫೀಸು, ಸಬ್ ರಿಜಿಸ್ಟ್ರಾರ್ ಕಚೇರಿಗಳೆಲ್ಲಾ ಸ್ಥಳಾಂತರವಾದುದರಿಂದ, ಅಷ್ಟೂ ಜಾಗವನ್ನು ಆಸ್ಪತ್ರೆಗೆ ವರ್ಗಾಯಿಸಿ ಒಂದು ಅದ್ಭುತವೆನಿಸುವ ಸರಕಾರೀ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಬಹುದು. ಆದರೆ ಎಲ್ಲದಕ್ಕೂ ಇಚ್ಛಾಶಕ್ತಿಯಿರಬೇಕು.
ಈಗಾಗಲೇ ಈ ಬಗ್ಗೆ ಪುತ್ತೂರಿನಿಂದ ವಿವರವಾದ ಯೋಜನಾ ವರದಿಯೊಂದು ರಾಜ್ಯ ಅರೋಗ್ಯ ಇಲಾಖೆಯ ಕೈಸೇರಿದ್ದರೂ ಕೂಡಾ, ಯಾಕೋ ವಿನಾಕಾರಣ ಕುಂಟು ನೆಪಗಳನ್ನೊಡ್ಡಿ ಈ ಯೋಜನೆ ಕಾರ್ಯಗತವಾಗದಂತೆ ಮಾಡಲಾಗುತ್ತಿದೆಯೆಯಾ ಎಂಬ ಅನುಮಾನ ಕೂಡಾ ಪುತ್ತೂರಿನ ನಾಗರಿಕರಿಗೆ ಇದೆ. ಹೀಗಾಗಿ ಪುತ್ತೂರಿನಲ್ಲಿ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಬೃಹತ್ ಸರಕಾರೀ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ನಿರ್ಮಾಣವಾಗಲು ಪುತ್ತೂರಿನ ಎಲ್ಲಾ ನಾಗರಿಕರು ಸಂಘಟಿತರಾಗಿ ಪ್ರಯತ್ನ ಪಡಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ನಾನು ಕೂಡ ವೈಯುಕ್ತಿಕವಾಗಿ ಆಸ್ಥೆ ವಹಿಸಿ ಪುತ್ತೂರಿನ ಸರಕಾರೀ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯ ಯೋಜನೆಯನ್ನು ಸಾಕಾರಗೊಳಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತೇನೆ. ಈಗಾಗಲೇ ನಾನು ಆ ಬಗ್ಗೆ ಯೋಚಿಸಿದ್ದು, ನಾನು ರೂಪಿಸಿರುವ ಕಾರ್ಯಯೋಜನೆಯನ್ನು ಮುಂದಿನ ದಿನಗಳಲ್ಲಿ ಜನರ ಮುಂದಿಡುತ್ತೇನೆ.
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.