ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕುಂಭಾಭಿಷೇಕ ಜರಗಲಿದ್ದು, ಈ ಹಿನ್ನೆಲೆಯಲ್ಲಿ ಹೊರಕಾಣಿಕೆ ಸಮರ್ಪಣೆ ಜರಗಿತು. ಶ್ರೀ ಕ್ಷೇತ್ರ ಕಮಲಶಿಲೆಯ ಕೂಡುವಳಿಕೆಯ ವಿವಿಧ ಗ್ರಾಮಗಳಿಂದ ಭಕ್ತರು ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಿದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಅವರು ಕ್ಷೇತ್ರದಲ್ಲಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಹ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರು ಭಟ್, ಅರ್ಚಕರು, ಸಿಬಂದಿ ಉಪಸ್ಥಿತರಿದ್ದರು.
ಮಾ. 17ರ ಶುಕ್ರವಾರ ಬೆಳಗ್ಗೆ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹದಿಂದ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಪೂರ್ವಾಹ್ನ 9.30ಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಗಮನ. ಪೂರ್ಣಕುಂಭ ಸ್ವಾಗತ. 10.30ಕ್ಕೆ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರಿಂದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕುಂಭಾಭಿಷೇಕ. ಮಹಾಪೂಜೆ. 11ಕ್ಕೆ ಸಭಾ ಕಾರ್ಯಕ್ರಮ, ಧೂಳಿಪಾದಪೂಜೆ, ಸಂಘ ಸಂಸ್ಥೆಗಳಿಂದ ಜಗದ್ಗುರುಗಳಿಗೆ ಫಲಪುಷ್ಪ ಸಮರ್ಪಣೆ. 11.30ಕ್ಕೆ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರಿಂದ ಅನುಗ್ರಹ ಭಾಷಣ. ಅನಂತರ ಫಲಮಂತ್ರಾಕ್ಷತೆ. ಮಧ್ಯಾಹ್ನ ಮಹಾಪೂಜೆ. ಅನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.