ಕಲಾವಿದರು ಅಕಾಲವಾಗಿ ಕಾಲನ ಹೊಡೆತಕ್ಕೆ ಸಿಲುಕಿ ಅಪಮೃತ್ಯುವಿಗೆ ಈಡಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪುತ್ರಶೋಕಂ ನಿರಂತರಂ ಎಂಬಂತೆ ಕಲಾವಿದರು ರಂಗದಿಂದ ಅಗಲಿದಾಗ ಕಲಾಮಾತೆಗೆ ಮಕ್ಕಳನ್ನು ಕಳಕೊಂಡ ಅನುಭವವಾಗುತ್ತದೆ. ಕಲಾಭಿಮಾನಿಗಳಿಗೂ, ಕಲಾಪೋಷಕರಿಗೂ ಇದೇ ಸೂತಕ ಭಾವ.
ಹಾಗಂತ ಕಲಾವಿದರ ಮರಣಕ್ಕೆಲ್ಲಾ ಮೇಳದ ಯಜಮಾನರೇ ಕಾರಣ, ಕಾಲಮಿತಿಯೇ ಕಾರಣ ಎನ್ನುವುದು ಮೂರ್ಖತನದ ಹೇಳಿಕೆಯಾದೀತು. ಸ್ವಲ್ಪ ಕಟುವಾದರೂ ಕೆಲವು ವಾಸ್ತವಗಳನ್ನು ಅರಿಯಬೇಕು.
ಎಲ್ಲೇ ಯಕ್ಷಗಾನ ಇರಲಿ ಅಲ್ಲಿ ಕಲಾವಿದರ ವಿಶ್ರಾಂತಿಗೆ ಬಿಡಾರದ, ವಸತಿ, ಊಟೋಪಹಾರದ ವ್ಯವಸ್ಥೆ ಮೊದಲಿನಿಂದಲೂ ನಡೆದುಬಂದಿದೆ. ಈಗ ಅದೇ ಮಾದರಿಯಲ್ಲಿ ವ್ಯವಸ್ಥೆ ಮಾಡಿದರೆ ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಊಟಕ್ಕೆ, ರಾತ್ರಿ ಮಲಗಲು ಇರುವವರು ಎಷ್ಟು ಮಂದಿ ಎಂಬ ಲೆಕ್ಕ ಮಾಡಲು ಕೈ ಬೆರಳುಗಳೂ ಬೇಡ. ಕಲಾವಿದರ ಓಡಾಟಕ್ಕೆ ಬಹುತೇಕ ಎಲ್ಲ ಮೇಳಗಳಲ್ಲೂ ಬಸ್, ವಾಹನ ಇದೆ. ಹೋಗುವವರು ಎಷ್ಟು ಮಂದಿ?
ಹಾಗಾದರೆ ಅಂತಹ ಕಲಾವಿದರ ಪೂರಕ ವ್ಯವಸ್ಥೆ ಕ್ರಮೇಣ ಮರೆಯಾಗಲು ಕಾರಣ ಯಾರು? ರಾತ್ರಿಯಿಂದ ಬೆಳಗಿನವರೆಗೆ ಚೌಕಿಯಲ್ಲಿದ್ದು, ಅಗತ್ಯ ಇದ್ದ ವೇಷಗಳನ್ನು ಮಾಡಿ ಬಟವಾಡೆ ಪಡೆಯುವ ವ್ಯವಸ್ಥೆ ಇತ್ತು. ಈಗ ನಿಶ್ಚಿತ ವೇಷದ ಬಳಿಕ ಯಾವುದಾದರೂ ಕಲಾವಿದನ ರಜೆಗೆ ಬದಲಿ ವೇಷ ಮಾಡುವುದಾದರೆ (ಡಬಲ್ ಸಂಬಳ) ದುಪ್ಪಟ್ಟು ವೇತನ ಪಡೆಯುವವರ ಸಂಖ್ಯೆ ಹೆಚ್ಚಾಗಲಿಲ್ಲವೇ? ಕಲಾವಿದರಿಗೆ ಮೇಳದ ಯಜಮಾನ ಎಷ್ಟೇ ವೇತನ ಪಾವತಿಸಲಿ, ಮೇಳಕ್ಕೆ ಸೇರುವ ಮುನ್ನ ಮಾತುಕತೆಯಾಗಿ, ಬಟವಾಡೆ ಎಷ್ಟು ಎಂದು ನಿಗದಿಯಾಗಿಯೇ ಸೇರುವುದು ತಾನೇ?
ಯಾವುದೇ ಉದ್ಯೋಗದಲ್ಲಾದರೂ ಇದೇ ಮಾದರಿ. ಹಾಗೆ ಸೇರಿದ ಬಳಿಕ ಮೇಳದ ಯಜಮಾನರು ಕಡಿಮೆ ಸಂಬಳ ಕೊಡುತ್ತಿದ್ದಾರೆ ಎಂದು ಊರೆಲ್ಲ ಹೇಳಿಕೊಂಡು, ಗುರುತು ಪರಿಚಯ ಇರುವವರ ಬಳಿ ಸಾಮಾಜಿಕ ಜಾಲತಾಣದಲ್ಲಿ ಬರೆಸಿಕೊಳ್ಳುತ್ತಿದ್ದರೆ ಅದಕ್ಕೆ ಮೇಳದ ಯಜಮಾನ ಜವಾಬ್ದಾರರೇ? ಕಡಿಮೆ ಸಂಬಳದ ಕೆಲಸಕ್ಕೆ ಸೇರಲು ಒತ್ತಾಯ ಮಾಡಿದವರು ಯಾರು? ಹೆಚ್ಚಿನ ಸಂಬಳ ಪಡೆಯುವ ಕಲಾವಿದರೂ ದೂರುವುದರಲ್ಲಿ ಹಿಂದುಳಿದಿಲ್ಲ.
ಈ ಹಿಂದಿನ ವರ್ಷಗಳಲ್ಲಿ ಕಲಾವಿದರಿಗೂ ಮೇಳದ ಯಜಮಾನರಿಗೂ ಒಪ್ಪಂದ ಇರುತ್ತಿತ್ತು. ಮೇಳ ತಿರುಗಾಟ ಆರಂಭವಾಗಿ ಮೇಳ ತಿರುಗಾಟ ಮುಗಿಯುವವರೆಗೆ ಅವರು ಮೇಳದ ರಂಗಸ್ಥಳದ ಹೊರತಾಗಿ ಬೇರೆ ರಂಗಸ್ಥಳ ಏರುವಂತಿರಲಿಲ್ಲ. ಬೇರೆ ಮೇಳದ ರಂಗಸ್ಥಳದ ಸನಿಹಕ್ಕೂ ಹೋಗುತ್ತಿರಲಿಲ್ಲ. ಈಗ ಹಾಗೇನಿಲ್ಲ. ಎರಡು ಮೇಳಗಳಲ್ಲಿ ಒಪ್ಪಿಯೇ ವೇಷ ಮಾಡುವವರು ಇಲ್ಲವೇ? ಒಂದು ಕಡೆ ಆಟ ಮುಗಿಸಿ ಇನ್ನೂ ಮೂರು ಆಟದಲ್ಲಿ ವೇಷ ಹಾಕುವವರು ಇಲ್ಲವೇ? ಹಗಲಿಡೀ ಗಾನವೈಭವ, ನಾಟ್ಯವೈಭವ ಎಂದು ಹೋಗುವುದಿಲ್ಲವೇ? ಹಾಗೆಲ್ಲ ಮಾಡಿ ಆರೋಗ್ಯದಲ್ಲಿ ಏರುಪೇರಾಗಿ ಹೆಚ್ಚುಕಡಿಮೆ ಆದರೆ ಅದಕ್ಕೆ ಮೇಳದ ಯಜಮಾನನೋ, ಕಾಲಮಿತಿಯೋ ಹೇಗೆ ಹೊಣೆಯಾಗುತ್ತದೆ.
ಕಾಲಮಿತಿಯ ಯಕ್ಷಗಾನ ಪರಂಪರೆ ಆರಂಭವಾಗಿ ಎರಡು ದಶಕಗಳು ಕಳೆದವು. ಆಗಿಲ್ಲದ ಅಪಶ್ರುತಿ ಈಗ ಯಾಕೆ? ತನ್ನ ಮಿತಿಯನ್ನೇ ಅರಿಯದವ ಕಾಲಮಿತಿ ಕುರಿತು ವಿಶ್ಲೇಷಿಸುತ್ತಾನೆ.
ಪಡೆಯುವ ವೇತನ ಇಷ್ಟು ಎಂದು ತಿಳಿದ ಬಳಿಕ ಅದರಲ್ಲಿ ಆರೋಗ್ಯ ತಪಾಸಣೆ, ವಿಮೆ ಮೊದಲಾದವನ್ನು ಮಾಡಿಸಲು ಯಜಮಾನರು ಮಾತ್ರ ಹೊಣೆ ಹೇಗಾಗುತ್ತಾರೆ? ಯಜಮಾನರು ಹೊಣೆಯೇ ಅಲ್ಲ ಎಂದು ಜಾರಿಕೊಳ್ಳುವಂತಿಲ್ಲ. ಅವರಿಗೂ ಹೊಣೆಗಾರಿಕೆ ಇದೆ. ಆದರೆ, ಕಲಾರಂಗ, ಯಕ್ಷಗಾನ ಫೌಂಡೇಶನ್, ಸಂಘ ಸಂಸ್ಥೆಗಳು ಯಕ್ಷಗಾನ ಕಲಾವಿದರಿಗಾಗಿ ವಿಮೆ, ಕಾರ್ಮಿಕ ಕಾರ್ಡ್, ಬಸ್ ಪಾಸ್, ಆರೋಗ್ಯ ತಪಾಸಣೆ ಮೊದಲಾದ ಸೌಲಭ್ಯ ಕೊಡುತ್ತೇವೆ ಎಂದಾಗ ಹೋಗಿ ಪಡೆದವರು ಎಷ್ಟು ಮಂದಿ? ಇದ್ಯಾವುದನ್ನೂ ಮಾಡದೇ, ಇರುವ ಸೌಕರ್ಯ ಬಳಸಿಕೊಳ್ಳದೇ ಯಜಮಾನರನ್ನು ದೂರುತ್ತಾ ಕಾಲಹರಣ ಮಾಡಿದ ಕೂಡಲೇ ಯಾರೂ ಬೃಹಸ್ಪತಿಗಳಾಗುವುದಿಲ್ಲ.
ರಾತ್ರಿ ವಸತಿ ವ್ಯವಸ್ಥೆ ಇದ್ದರೂ ಅಲ್ಲಿ ಉಳಿಯಗೊಡದೇ, ಮೇಳದ ಬಸ್ ಇದ್ದರೂ ಅದರಲ್ಲಿ ಹೋಗದೇ ನಿದ್ದೆಗಣ್ಣಲ್ಲಿ ಅಪರಾತ್ರಿ ಸಂಚಾರ ಮಾಡುವುದು ಎಷ್ಟು ಸರಿ?
ಯಕ್ಷಗಾನಕ್ಕೆ ಪೂರ್ಣಪ್ರಮಾಣದ ವೇತನ (ಎಷ್ಟೇ ಇರಲಿ) ಪಡೆದರೂ ಹಗಲು ಬೇರೆ ಉದ್ಯೋಗ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೇಳದ ರಂಗಸ್ಥಳದಲ್ಲಿ ಉತ್ತಮ ಪ್ರದರ್ಶನ ಕೊಡಲು ವಿಫಲರಾಗುವ ಕಲಾವಿದರಿಗೆ ಏನೆನ್ನೋಣ? ಹಾಗೆ ದಣಿವರಿಯದೇ ದುಡಿದು ಆರೋಗ್ಯ ಹಾಳು ಮಾಡಿಕೊಳ್ಳುವವರಿಗೆ ಕಿವಿಮಾತು ಹೇಳುವವರು ಯಾರು?
ಹಾಗಾದರೆ ಏನು ಮಾಡಬಹುದು?
ಇಷ್ಟೆಲ್ಲ ಓದುವಾಗ ಖಂಡಿತ ಕೋಪವೋ, ಪಿತ್ಥವೋ ನೆತ್ತಿಗೇರಿರುತ್ತದೆ. ಕಲಾವಿದರ ಕುರಿತು ನಿಷ್ಕರುಣೆಯಿಂದ ಬರೆದ ಬರವಣಿಗೆ ಎಂದು. ಖಂಡಿತ ಹಾಗಲ್ಲ. ಕಲಾವಿದರೂ ತಮ್ಮ ಜವಾಬ್ದಾರಿ ಅರಿಯಬೇಕು ಎನ್ನುವುದೇ ಈ ಕಹಿಮಾತುಗಳ ಉದ್ದೇಶ. ಯಾಕೆಂದರೆ ಯಜಮಾನ ಇಂತಹ ಸೌಕರ್ಯ ಕೊಡದೇ ಇದ್ದರೆ ಕಲಾವಿದರಾದರೂ ಮಾಡಿಕೊಳ್ಳಬಹುದು ತಾನೇ?
ವಾರ್ಷಿಕ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ದೊಡ್ಡ ಮೊತ್ತದ ಅಗತ್ಯವಿಲ್ಲ. ಬರುವ ಆರು ತಿಂಗಳ ಸಂಬಳದಲ್ಲೇ ದಿನಕ್ಕೆ 50 ರೂ.ಗಳನ್ನಾದರೂ ತೆಗೆದಿರಿಸಿದರೆ ಇಡೀ ಕುಟುಂಬಕ್ಕೆ ಆರೋಗ್ಯ ವಿಮೆ/ ಜೀವವಿಮೆ ಮಾಡಿಸಬಹುದು. 30-40 ವರ್ಷದ ದುಡಿಮೆಯಲ್ಲಿ ವಾರ್ಷಿಕ ಯಾವುದೇ ಮಾದರಿಯಲ್ಲಾದರೂ ಉಳಿತಾಯ ಮಾಡಿ ವಿಶ್ರಾಂತ ಜೀವನ ಕಳೆಯಲು ವ್ಯವಸ್ಥೆ ಇರಬೇಕು. ಯಕ್ಷಗಾನ ಕಲಾವಿದರು ಪೂರ್ಣಕಾಲಿಕ ಕಾರ್ಮಿಕರಲ್ಲ, ( ಮೂರೋ ನಾಲ್ಕೋ ಗಂಟೆಗಳ ದುಡಿಮೆ ಎಂದು ಭಾವಿಸಿದರೆ) ಕಾರ್ಮಿಕ ಕಾಯ್ದೆಗಳ ನಿಜ ಅರ್ಥದ ವ್ಯಾಪ್ತಿಯಲ್ಲಿ ಬರದೇ ಇದ್ದರೂ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶ ಇದೆ.
ಅದು ಆಘಾತ, ಅಪಘಾತ, ಅನಾರೋಗ್ಯ ಸಂದರ್ಭ ಬಳಕೆಗೆ ಬರುತ್ತದೆ. ಉಚಿತವಾಗಿ ಆಗುವ ಸೌಲಭ್ಯ ಇದು. ಅದನ್ನೂ ಮಾಡಿಸಬೇಕು.
ಕನಿಷ್ಟ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿದ್ದೆಗಣ್ಣಿನ ದೂರ ಪ್ರಯಾಣ ಆದಷ್ಟೂ ಕಡಿಮೆ ಮಾಡಬೇಕು.
ನಿದ್ದೆ ಬರುತ್ತದೆ ಎಂಬ ಅಂದಾಜಾದಾಗಲೂ ಮತ್ತೂ ಚಾಲನೆ ಒಳ್ಳೆಯದಲ್ಲ. ದಿನಕ್ಕೆ ಇಷ್ಟೇ ಕಾರ್ಯಕ್ರಮ ಎಂದು ತಮಗೇ ಕಾಲಮಿತಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು.
ದೇಹಕ್ಕೆ ಕಸುವಿದ್ದಾಗ, ಕಂಠಕ್ಕೆ ತ್ರಾಣ ಇದ್ದಾಗಲಷ್ಟೇ ಕಲಾವಿದರಿಗೆ ಬೆಲೆ.
ಆ ಬಳಿಕ ಅವರನ್ನು ಪರಿಗಣಿಸುವವರು ಇಲ್ಲ ಎಂಬುದನ್ನು ಕಲಾವಿದರು ಅರ್ಥ ಮಾಡಿಕೊಳ್ಳಬೇಕು.
ಸಂಪಾದನೆಯಲ್ಲಿ ಉಳಿತಾಯ ಮಾಡಿಕೊಳ್ಳಬೇಕು.
ಹಗಲು ಉದ್ಯೋಗ, ರಾತ್ರಿ ಆಟ ಎಂದಾಗ ನಿದ್ದೆ ಕಡಿಮೆಯಾಗಿಯೂ ಆರೋಗ್ಯ ಹದಗೆಡಬಹುದು. ಆಹಾರದ ಮೇಲೂ ಗಮನ ಇಡಬೇಕು.
ಮೇಳದ ಯಜಮಾನರು ಇರುವುದು ಬೆರಳೆಣಿಕೆ ಮಂದಿ. ಮೇಳದ ಸಹವಾಸ ಬೇಡ ಎಂದು ನಿರ್ಧರಿಸುವುದು ಅವರಿಗೆ ಕ್ಷಣದ ತೀರ್ಮಾನ. ಮೇಳದಿಂದ ಪ್ರತಿಷ್ಠೆಯ ಹೊರತಾಗಿ ಅವರಿಗೆ ಭಾರೀ ದೊಡ್ಡ ಮೊತ್ತವೇನೂ ಗಿಟ್ಟುವುದಿಲ್ಲ. ಮೇಳಗಳಲ್ಲಿ ಇರುವ 45-50 ಮಂದಿಯ ಬಟವಾಡೆ, ಸಾಗಾಟ, ಡೇರೆ, ಡೀಸೆಲ್ ಇತ್ಯಾದಿ ಖರ್ಚು ಲೆಕ್ಕಾಚಾರ ಹಾಕುತ್ತಾರೆ. ಏನೂ ಗೀಟುವುದಿಲ್ಲ ಎಂದು ನಮ್ಮ ಮುಂದೆ ಲೆಕ್ಕ ಮಡಗುತ್ತಾರೆ. ಕೇಳಿದರೆ ಪಡೆಯುವ ವೀಳ್ಯ ಅಲ್ಲಿಂದಲ್ಲಿಗೇ ಸಾಕಾಗುತ್ತದೆ ಎನ್ನುತ್ತಾರೆ. ಹಾಗಾಗಿ ಮೇಳದ ಯಜಮಾನರನ್ನು ದೂಷಿಸಿ ಫಲವಿಲ್ಲ. ಯಜಮಾನರೂ ಇದನ್ನೆಲ್ಲಾ ಮಾಡಬಹುದಾದರೂ ಹೇಳುವವರು ಯಾರು, ಮಾಡುವವರು ಯಾರು? ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಕಲಾವಿದರ ಅಭ್ಯುದಯಕ್ಕೆ ಬೇಕಾದ ವ್ಯವಸ್ಥೆಗಳಿದ್ದರೂ ಹೆಚ್ಚಿನ ಮೇಳಗಳಲ್ಲಿ ಮೇಳದ ಯಜಮಾನರು ಹಾಗೂ ಕಲಾವಿದರ ನಡುವೆ ಕೇವಲ ಹಣಕಾಸಿನ ವ್ಯವಹಾರ ಮಾತ್ರ. ಉಳಿದಂತೆ ಎಲ್ಲವೂ ಕಲಾವಿದರ ತಲೆಗೇ ಜವಾಬ್ದಾರಿ. ಆದ್ದರಿಂದ ಕಲಾವಿದರೇ ತಮ್ಮ ಹೊಟ್ಟಹದಗೆಡಬಹುದು
ಟ್ಟಿಮಾಡಿಕೊಳ್ಳಬೇಕು.
ಮೇಳಗಳು ಉಳಿಯುವಂತೆ ಮಾಡಬೇಕು.
ಕಲಾ ಭವಿಷ್ಯ ಮಸುಕಾಗದಂತೆ ಮಾಡಬೇಕು. ಕಲಾಮಾತೆ ಬಡವಿಯಲ್ಲ. ಮೇಳದೊಳಗಿದ್ದು ಮೇಳದ ವ್ಯವಸ್ಥೆಯ ಲೋಪಗಳನ್ನು ಅಲ್ಲಲ್ಲಿ ದೂರಿದರೆ ಏನೂ ಪ್ರಯೋಜನ ಇಲ್ಲ. ಅದು ಸರಿಯಾಗುವುದೂ ಇಲ್ಲ. ಹಾಗಾಗಿ ಆರೋಗ್ಯದ ಕಾಳಜಿ ಮಾಡಬೇಕು. ಬದುಕಿನ ಭದ್ರತೆ ಕಡೆಗೆ ಗಮನ ಹರಿಸಬೇಕು. 60 ವರ್ಷ ಕಳೆದಾಗ ಬಹುತೇಕ ಎಲ್ಲ ವೃತ್ತಿಗಳಲ್ಲಿ ನಿವೃತ್ತಿ ಇದೆ. ಆದರೆ ಯಕ್ಷಗಾನದಲ್ಲಿ 70-80 ಕಳೆದರೂ ನಿವೃತ್ತಿಯಿಲ್ಲ. ಅಂತಹ ಸಂದರ್ಭದಲ್ಲಿ ತನ್ನ ಸಾಮರ್ಥ್ಯ ಎಷ್ಟು ಅಷ್ಟನ್ನೇ ಪ್ರದರ್ಶನ ಮಾಡಬೇಕು.
ಅಭಿಮಾನಿ ಬಯಸುತ್ತಾನೆ ಎಂದು ವಿಪರೀತಕ್ಕೆ ಹೋಗಬಾರದು. ಕಲಾವಿದನ ಬದುಕು ದೀರ್ಘವಾಗಬೇಕು. ಕಲಾಭಿಮಾನಿಗಳಿಗೆ ನಿರಾಸೆಯಾಗಬಾರದು. ಕಲಾಮಾತೆಯ ಆಭರಣದ ಮಣಿಗಳು ಕಳಚಬಾರದು.