ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ದತ್ತಾಂಜನೆಯ ಕ್ಷೇತ್ರ ದಕ್ಷಿಣ ಗಾಣಗಾಪುರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಕಲ್ಪದಂತೆ ತಾಯ್ನಾಡಿನ ಭಾಷೆ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವ ನೀಡುತ್ತಿರುವುದಲ್ಲದೆ ಸಮಾಜಮುಖಿ ಸೇವಾ ಚಿಂತನೆಯೊಂದಿಗೆ ಸೇವೆ ಮಾಡುತ್ತಿದೆ ಎಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹೇಳಿದರು.
ಸ್ವರ್ಗೇಟ್ನ ಚಂದನ್ ಹೊಟೇಲ್ನ ಸಭಾಗೃಹದಲ್ಲಿ ನಡೆದ ಪುಣೆ ಶ್ರೀ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ 19ನೇ ವಾರ್ಷಿಕೋತ್ಸವದ ಪೂರ್ವ ತಯಾರಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರಿಂದ ಸ್ಥಾಪನೆಗೊಂಡ ಸಂಸ್ಥೆ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಸುಮಾರು 22 ವರ್ಷಗಳಿಂದ ಮಹತ್ತರವಾದ ಕೆಲಸಗಳನ್ನು ಮಾಡುತ್ತಿದ್ದು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಪುಣೆಯಲ್ಲಿ ಸ್ಥಾಪನೆಗೊಂಡು ಇದೀಗ 19 ವರ್ಷಗಳು ಕಳೆದಿದೆ. ಸ್ವಾಮೀಜಿಯವರ ಮುಖಾಂತರ ಸಮಾಜಮುಖಿ ಸೇವಾ ಕಾರ್ಯಗಳು ಬಡಜನರ ಅಭಿವೃದ್ಧಿಗೆ ಸಹಕಾರ, ಶಿಕ್ಷಣ, ಆಯುರ್ವೇದ ಔಷಧೋಪಚಾರ, ಧಾರ್ಮಿಕ, ಕಲಾ ಸೇವೆಗಳು ಹಾಗೂ ಹಲವಾರು ಜನೋಪಯೋಗಿ ಸೇವಾ ಕಾರ್ಯಗಳು ನಮ್ಮ ತಯ್ನಾಡಿನಲ್ಲಿ ನಿರಂತರವಾಗಿ ನಡೆಯುತ್ತಿವೆ. ಈ ಕಾರ್ಯಗಳಲ್ಲಿ ಪುಣೆಯ ಬಳಗದ ಮುಖಾಂತರ ಗುರು ಭಕ್ತರು ಹಲವಾರು ವರ್ಷಗಳಿಂದ ಸಹಕಾರ ನೀಡಿದ್ದೇವೆ. ನಮ್ಮ ಗುರುವಿನ ಮೂಲಕ ಸಮಾಜ ಸೇವೆಯನ್ನು ಮನಪೂರ್ವಕವಾಗಿ ಮಾಡಿಕೊಂಡು ಮನತೃಪ್ತಿ ಪಡೆದಿದ್ದೇವೆ. ಇಂತಹ ಕಾರ್ಯಗಳಲ್ಲಿ ಇನ್ನಷ್ಟು ಬಂಧುಗಳು ಪಾಲುದಾರರಾಗಬೇಕು. ಪುಣೆಯ ಎಲ್ಲ ತುಳು – ಕನ್ನಡಿಗರ ಸಹಕಾರ ಇಂತಹ ಕಾರ್ಯಗಳಿಗೆ ಸಿಗಬೇಕು ಎಂಬುವುದೇ ನಮ್ಮ ಆಶಯ ಎಂದು ತಿಳಿಸಿದರು.
ಪ್ರತಿ ವರ್ಷವೂ ಪೂಜ್ಯ ಶ್ರೀ ಗುರುವರ್ಯರು, ಸಾಧ್ವಿ ಮಾತಾನಂದಮಯಿಯವರು ಪುಣೆ ಬಳಗದ ವಾರ್ಷಿಕೋತ್ಸವದಲ್ಲಿ ಪುಣೆಗೆ ಭೇಟಿ ಕೊಟ್ಟು ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡುತ್ತಿದ್ದಾರೆ. ಈ ವರ್ಷದ 19ನೇ ವಾರ್ಷಿಕೋತ್ಸವವು ನ. 6 ರಂದು ಅಪರಾಹ್ನ 2 ರಿಂದ ಪುಣೆಯ ಬಾಣೇರ್ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕೃತಿಕ ಕೇಂದ್ರ ಆಡಿಟೋರಿಯಂನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪುಣೆಯ ಎಲ್ಲ ಭಕ್ತರು ಆಗಮಿಸಿ ಸಹಕಾರ ನೀಡುವಂತೆ ಅವರು ವಿನಂತಿಸಿದರು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವರ ಪೋಟೋಗೆ ಆರತಿ ಬೆಳಗಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಬಳಗದ ಕಾರ್ಯದರ್ಶಿ ಎನ್. ರೋಹಿತ್ ಶೆಟ್ಟಿ ನಗ್ರಿಗುತ್ತು ವೇದಿಕೆಯಲ್ಲಿದ್ದು ಉಪಸ್ಥಿತರಿದ್ದರು. ಬಳಗದ ಗೌರವ ಕಾರ್ಯದರ್ಶಿ ಎನ್. ರೋಹಿತ್ ಶೆಟ್ಟಿ ಸ್ವಾಗತಿಸಿ ಬಳಗದ ವಾರ್ಷಿಕೋತ್ಸವದ ಸಿದ್ದತೆ ಬಗ್ಗೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳು, ಸದಸ್ಯರು ನಿರ್ವಹಿಸಲಿರುವ ಜವಾಬ್ದಾರಿಗಳ ಬಗ್ಗೆ ಸಭೆಗೆ ತಿಳಿಸಿ, ಪುಣೆಯಲ್ಲಿ ಪೂಜ್ಯ ಸ್ವಾಮೀಜಿಯವರ ನಾಲ್ಕು ದಿನಗಳ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭ 19ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಭಾಕರ್ ಶೆಟ್ಟಿ ಶ್ರೀ ವಜ್ರಮಾತೆ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷತೆ ಜಯಲಕ್ಷ್ಮೀ ಪಿ. ಶೆಟ್ಟಿ ಮತ್ತು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ಬಳಗದ ಮಾಜಿ ಅಧ್ಯಕ್ಷ ಸಲಹೆಗಾರರಾದ ಉಷಾ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಪ್ರಮುಖರಾದ ಪದ್ಮನಾಭ ಶೆಟ್ಟಿ, ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಉಪಾಧ್ಯಕ್ಷ ರಂಜಿತ್ ಶೆಟ್ಟಿ, ಸದಾಶಿವ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಮಾಜಿ ಅಧ್ಯಕ್ಷೆಯರಾದ ಪುಷ್ಪಾ ಪೂಜಾರಿ, ಪ್ರೇಮಾ ಎಸ್. ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಯು. ಶೆಟ್ಟಿ ಉಪಸ್ಥಿತರಿದ್ದರು.