ಫ್ರೆಂಚ್ ಓಪನ್ ಸೂಪರ್ 2022 ಬ್ಯಾಡ್ಮಿಂಟನ್ ಟೂರ್ನಮೆಂಟ್ ಪುರುಷರ ಡಬಲ್ಸ್ ಫೈನಲ್ ನಲ್ಲಿ ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ಅವರನ್ನು 21-13, 21-19 ನೇರ ಗೇಮ್ಗಳಿಂದ ಸೋಲಿಸಿದ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ.
ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಮೊದಲ ಸೂಪರ್ 750 ಮತ್ತು ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದರು. ಇದು ಅವರ ನಾಲ್ಕನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಹೈದರಾಬಾದ್ ಓಪನ್ 2018, ಥೈಲ್ಯಾಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ಗಳಲ್ಲಿ ಈ ಜೋಡಿ ಗೆಲುವು ಸಾಧಿಸಿತ್ತು.
ಇವರಿಬ್ಬರು 2019 ರ ಫ್ರೆಂಚ್ ಓಪನ್ ಫೈನಲ್ಗೆ ಪ್ರವೇಶಿಸಿದ್ದರು. ಆದರೆ ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ ಸೋಲನುಭವಿಸಿದ್ದರು.
1983 ರಲ್ಲಿ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಅವರ ವಿಜಯದ ನಂತರ ಭಾರತೀಯ ಪುರುಷರ ಡಬಲ್ಸ್ ಜೋಡಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲು.