2016ರ ಒಂದು ದಿನ ಕನ್ನಡದಲ್ಲಿ ರಿಕ್ಕಿ ಎಂಬ ಸಿನೆಮಾವು ಬಿಡುಗಡೆ ಆಗಿತ್ತು. ಆ ಸಿನೆಮಾದ ನಿರ್ದೇಶಕರಾಗಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದ ಈ ಕುಂದಾಪುರದ ಕೆರಾಡಿ ಗ್ರಾಮದ ಹುಡುಗನು ಆ ಸಿನೆಮಾಕ್ಕೆ ಥಿಯೇಟರ್ ಸಿಗಲಿ ದೇವರೇ ಎಂದು ತನ್ನ ಫೇಸ್ ಬುಕ್ ಪುಟದಲ್ಲಿ ತಾನೇ ಬರೆದುಕೊಂಡಿದ್ದರು!
ಆ ಸಿನೆಮಾಕ್ಕೆ ಥಿಯೇಟರ್ ಸಿಕ್ಕಿತೋ ಗೊತ್ತಿಲ್ಲ! ಆದರೆ ಇಂದು ಅದೇ ಹುಡುಗ ನಿರ್ದೇಶನ ಮಾಡಿ, ಪ್ರಮುಖ ಪಾತ್ರ ವಹಿಸಿರುವ ‘ ಕಾಂತಾರ ‘ ಎಲ್ಲೆಡೆಯೂ ಬಿಡುಗಡೆಯಾಗಿ ಕೆಲವು ದಿನಗಳು ಆಗಿವೆ. ಆದರೆ ಆ ಸಿನೆಮಾ ನೋಡಲು ಬಂದವರು ಟಿಕೆಟ್ ಸಿಗದೆ ಹಿಂದೆ ಹೋಗುವ ಪರಿಸ್ಥಿತಿಯು ಇಡೀ ರಾಜ್ಯದಲ್ಲಿ ಇಂದು ಇದೆ! ಕಾಂತಾರ ಕನ್ನಡ ಸಿನೆಮಾದ ಸುನಾಮಿ ಎಂದು ಇಂದು ಪ್ರೂವ್ ಆಗಿದೆ! ಸೂಪರ್ ಹಿಟ್ ಆಗಿರುವ ಕಾಂತಾರ ಸಿನೆಮಾ ಒಬ್ಬ ಗ್ರಾಮೀಣ ಹುಡುಗನ ಸಿನೆಮಾ ಬದುಕಿನ ಯಶಸ್ಸಿಗೆ ಭಾರೀ ಮುನ್ನುಡಿಯನ್ನು ಬರೆದಾಗಿದೆ!
ಆ ಯುವಕನೆ ರಿಷಭ್ ಶೆಟ್ಟಿ! ನಮ್ಮ ಕುಂದಾಪುರದ ಕೆರಾಡಿ ಗ್ರಾಮದ ಹುಡುಗ! ಬಹುದೊಡ್ಡ ಕನಸಿನ ಸಾಹುಕಾರ!
ರಿಶಭ್ ಶೆಟ್ಟಿ ಸಿನೆಮಾ ಜರ್ನಿಯು ನೀವು ಎಣಿಸಿದ ಹಾಗೆ ಸುಲಭದ್ದು ಖಂಡಿತ ಆಗಿರಲಿಲ್ಲ. ಅವರು ಕುಂದಾಪುರದ ಕೃಷಿಕರ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರು ಬಾಲ್ಯದಿಂದಲೂ ನಾಟಕ, ಯಕ್ಷಗಾನ ಮತ್ತು ಸಿನೆಮಾಗಳ ಹುಚ್ಚುಗಳನ್ನು ಹೃದಯಕ್ಕೆ ಅಂಟಿಸಿಕೊಂಡು ಬೆಳೆದವರು. ಯಕ್ಷಗಾನವನ್ನು ಗುರುಮುಖೇನ ಕಲಿತವರು.
ಮುಂದೆ ಸಿನೆಮಾದ ಸೆಳೆತವು ಹೆಚ್ಚಾದಂತೆ ಊರು ಬಿಡಲೆ ಬೇಕಾಯಿತು. ಅಪ್ಪನ ಆಶೀರ್ವಾದವನ್ನು ಪಡೆದು ಅವರು ಬೆಂಗಳೂರು ಸೇರಿದರು. ಬೆಂಗಳೂರು ಜಯನಗರದ ವಿಜಯಾ ಕಾಲೇಜು ಸೇರಿ ಮಾರ್ಕ್ಸ್ ಪಡೆದದ್ದಕ್ಕಿಂತ ಹೆಚ್ಚು ಲಾಭ ಆದದ್ದು ಸ್ನೇಹಿತರ ಸಂಪಾದನೆ! ಸ್ನೇಹಿತರ ಜತೆ ಸೇರಿ ಸಿನೆಮಾ ಮತ್ತು ಟಿವಿ ಪ್ರೋಗ್ರಾಂ ಸಂಸ್ಥೆಯಿಂದ ಡಿಪ್ಲೊಮಾ ಪೂರ್ತಿ ಮಾಡಿದರು.
ಈ ನಡುವೆ ಅವರಿಗೆ ಗೊತ್ತಾದ ಸಂಗತಿ ಏನೆಂದರೆ ಅವರ ಹಾಗೆ ಸಿನೆಮಾರಂಗದಲ್ಲಿ ಮಿಂಚುವ ದೊಡ್ಡ ಕನಸು ಹೊತ್ತು ಹಲವು ಕರಾವಳಿಯ ಪ್ರತಿಭೆಗಳು ಬೆಂಗಳೂರಿನಲ್ಲಿ ಇದ್ದಾರೆ ಮತ್ತು ಅವರೆಲ್ಲರೂ ಅವಕಾಶಗಳನ್ನು ಕಾಯುತ್ತ ಇದ್ದಾರೆ ಅನ್ನುವುದು! ಅಂತವರ ಜೊತೆ ಸೇರಿಕೊಂಡು ರಿಷಭ್ ಶೆಟ್ಟಿ ತನ್ನದೇ ಗೆಳೆಯರ ತಂಡವನ್ನು ಕಟ್ಟಿಕೊಂಡು ನಿಧಾನವಾಗಿ ಸಿನೆಮಾರಂಗದ ಕಡೆ ಹೆಜ್ಜೆ ಹಾಕಿದರು.
ರಿಷಭ್ ಅವರಿಗೆ ಅಭಿನಯಕ್ಕಿಂತ ಹೆಚ್ಚು ಆಸಕ್ತಿ ಇದ್ದದ್ದು ನಿರ್ದೇಶನ, ಸ್ಕ್ರಿಪ್ಟ್ ರಚನೆಯಲ್ಲಿ. ಆಗ ಖ್ಯಾತ ನಿರ್ದೇಶಕ ಎಎಂಆರ್ ರಮೇಶ್ ಅವರು ಸಯನೈಡ್ ಎಂಬ ಹೆಸರಿನ ರಾಜಕೀಯ ಆಧಾರಿತ ಸಿನೆಮಾ ಮಾಡುತ್ತಿದ್ದರು. ಅದರಲ್ಲಿ ಸಹಾಯಕ ನಿರ್ದೇಶಕನಾಗಿ ದೊರೆತದ್ದು ರಿಷಭ ಅವರಿಗೆ ಮೊದಲ ಅವಕಾಶ!
ಅದೇ ಹೊತ್ತಿಗೆ ಅರವಿಂದ್ ಕೌಶಿಕ್ ಎಂಬ ಇನ್ನೊಬ್ಬ ಸ್ಟಾರ್ ನಿರ್ದೇಶಕ ಮಾಡುತ್ತಿದ್ದ ಟಿವಿ ಕಾರ್ಯಕ್ರಮಗಳ ಮೂಲಕ ಸ್ಕ್ರಿಪ್ಟ್ ರಚನೆಯನ್ನು ಕಲಿತರು. ಅದೇ ಹೊತ್ತಿಗೆ ಅವರಿಗೆ ಅದ್ಭುತ ಗೆಳೆಯರೊಬ್ಬರು ಸಿಕ್ಕಿದ್ದರು.
ಅವರೇ ರಕ್ಷಿತ್ ಶೆಟ್ಟಿ! ಈ ಇಬ್ಬರು ಶೆಟ್ಟರ ಗೆಳೆತನವು ಕನ್ನಡ ಸಿನೆಮಾ ರಂಗವನ್ನು ಇಂದು ಯಾವ ಲೆವೆಲ್ಲಿಗೆ ಕರೆದು ಕೊಂಡು ಹೋಗಿದೆ ಎಂದು ಕನ್ನಡದ ಸಿನೆಮಾ ವೀಕ್ಷಕರಿಗೆ ಈಗ ಚೆನ್ನಾಗಿ ಅರ್ಥ ಆಗಿದೆ.
ಅದೇ ಹೊತ್ತಿಗೆ ರಿಷಭ್ ಶೆಟ್ಟಿ ಅವರಿಗೆ ಲೂಸಿಯಾ, ನಮ್ ಏರಿಯಲ್ ಒಂದ್ ಲವ್ ಸ್ಟೋರಿ ಮೊದಲಾದ ಕನ್ನಡ ಸಿನೆಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳು ದೊರೆತವು. ಆದರೆ ಯಾವ ಗಾಡ್ ಫಾದರ್ ಇಲ್ಲದೆ ಚಂದನವನದಲ್ಲಿ ಹೆಜ್ಜೆ ಊರುವುದು ಸುಲಭ ಅಲ್ಲ! ಆ ದಿನಗಳಲ್ಲಿ ಆದ ನೋವು, ಅಪಮಾನ ಮತ್ತು ಹಸಿವುಗಳು ನನಗೆ ಬಹಳ ದೊಡ್ಡ ಪಾಠ ಕಲಿಸಿದವು ಎಂದು ರಿಶಭ್ ಶೆಟ್ಟಿ ಒಂದು ಕಡೆ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಅವರ ಹತ್ತಿರ ಇಂಗ್ಲಿಷನಲ್ಲಿ ಬರೆದಿಟ್ಟ ಹತ್ತಾರು ಸ್ಕ್ರಿಪ್ಟಗಳು ಇದ್ದವು. ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಸಿನೆಮಾಕ್ಕೆ ಅಳವಡಿಸುವ ಕೆಲಸವನ್ನು ರಿಷಭ್ ಶೆಟ್ಟಿ ಅವರು ತುಂಬಾ ಚೆನ್ನಾಗಿಯೇ ಮಾಡಿದರು.
ಅವರಿಬ್ಬರ ಗೆಳೆತನದ ಮೂಲಕ ಮೂಡಿಬಂದ ಮೊದಲ ಕನ್ನಡ ಸಿನೆಮಾ ತುಘಲಕ್ (2012). ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ ಸಿನೆಮಾ ಅದು. ರಕ್ಷಿತ್ ಶೆಟ್ಟಿ ಅವರು ಅದರಲ್ಲಿ ಹೀರೋ ಆಗಿದ್ದರು. ರಿಷಭಗೆ ಒಂದು ಸಣ್ಣ ಪಾತ್ರ. ಆ ಸಿನೆಮಾದ ಮೊದಲ ಶೋ ನೋಡಲು ಬೈಕ್ನಲ್ಲಿ ಇಬ್ಬರು ಗೆಳೆಯರು ಜೊತೆಯಾಗಿ ಹೋಗುವ ಫೋಟೋ ಫೇಸ್ ಬುಕ್ಕಲ್ಲಿ ಹಾಕಿ ಪ್ರೇಕ್ಷಕರ ಆಶೀರ್ವಾದವನ್ನು ರಿಷಭ ಶೆಟ್ಟಿ ಅಂದು ಕೇಳಿದ್ದರು. ಆದರೆ ಸಿನೆಮಾ ಸೂಪರ್ ಫ್ಲಾಪ್ ಆಯಿತು. ಇಬ್ಬರೂ ಶೆಟ್ಟರು ನಿರಾಸೆ ಅನುಭವಿಸಿದರು.
ಒಮ್ಮೆ ಸಿನೆಮಾ ಕ್ಷೇತ್ರವನ್ನು ಬಿಟ್ಟು ಊರಿಗೆ ಹಿಂದೆ ಬರುವ ಯೋಚನೆ ಕೂಡ ರಿಷಭ್ ಮಾಡಿದ್ದರು. ಆದರೆ ಏನೂ ಸಾಧನೆ ಮಾಡದೆ ಅಪ್ಪನಿಗೆ ಮುಖ ತೋರಿಸಬಾರದು ಎಂದು ಮನಸಿನಲ್ಲಿ ಗಟ್ಟಿಯಾದ ಸಂಕಲ್ಪ ಇತ್ತು! ಗೆಳೆತನದ ಮೇಲೆ ಭರವಸೆ ಇತ್ತು! ಮತ್ತು ತನ್ನ ಪ್ರತಿಭೆಯ ಮೇಲೆ ಅಗಾಧವಾದ ನಂಬಿಕೆ ಇತ್ತು!
ಅದೇ ಹೊತ್ತಿಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನೆಮಾ ಹಿಟ್ ಆಗಿ ರಕ್ಷಿತ್ ಶೆಟ್ಟಿ ಅವರಿಗೆ ಒಂದು ಬ್ರೇಕ್ ತ್ರೂ ಸಿಕ್ಕಿತ್ತು. ಸಿನೆಮಾ ಮಾಡುವ ಧೈರ್ಯ ಇಬ್ಬರಿಗೂ ಬಂದಿತ್ತು. ಆಗ ಇಡೀ ಒಂದು ವರ್ಷ ಇಬ್ಬರೂ ಸೇರಿ ಹೆಣೆದ ಒಂದು ಸ್ಟೋರಿಯು ಇಡೀ ಭಾರತೀಯ ಸಿನಿಮಾ ರಂಗದ ಗಮನವನ್ನು ಥಟ್ಟನೆ ಸೆಳೆಯಿತು.
ಆ ಸಿನೆಮಾವೆ ಉಳಿದವರು ಕಂಡಂತೆ! (2014).
ಹೊಡೆದಾಟ, ಬಡಿದಾಟ ಮತ್ತು ರೋಮಾನ್ಸ್ ಇವಿಷ್ಟೇ ತಂಗಳು ವಿಷಯಗಳಿಂದ ಬೇಸತ್ತು ಹೋಗಿದ್ದ ಕನ್ನಡ ಸಿನೆಮಾರಂಗಕ್ಕೆ ಆ ಸಿನೆಮಾ ಒಂದು ಅದ್ಭುತ ಟಾನಿಕ್ ಕೊಟ್ಟಿತ್ತು. ಕಮರ್ಷಿಯಲ್ ಅವರೆಜ್ ಎಂದು ಎಲ್ಲರಿಂದ ಕರೆಸಿಕೊಂಡರೂ ಆ ಸಿನೆಮಾ ಮೂಡಿಸಿದ ಹೆಜ್ಜೆಗುರುತು ಅದು ಅದ್ಭುತವೇ ಆಗಿತ್ತು.
ಮುಂದೆ ರಿಕ್ಕಿ, ಕಥಾ ಸಂಗಮ ಸಿನೆಮಾಗಳು ಕೈ ಹಿಡಿಯದೆ ಹೋದವು. ಆದರೆ ಅವರಿಬ್ಬರ ಗೆಳೆತನದ ಪ್ರತೀಕವಾದ ಆ ಸಿನೆಮಾ 2016ರಲ್ಲಿ ಸ್ಕ್ರೀನಿಗೆ ಅಪ್ಪಳಿಸಿ ಹೊಸ ದಾಖಲೆ ಬರೆಯಿತು. ಭಾರೀ ಮನರಂಜನೆಯ ರಸಪಾಕ ಆಗಿತ್ತು ಆ ಸಿನೆಮಾ.
ಅದುವೇ ಕಿರಿಕ್ ಪಾರ್ಟಿ!
ಮುಂದೆ ರಕ್ಷಿತ್ ಶೆಟ್ಟಿ ಮಾಡಿದ ಅಷ್ಟೂ ಸಕ್ಸಸ್ ಸಿನೆಮಾಗಳ ಹಿಂದೆ ರಿಶಭ್ ಎಂಬ ಗೆಳೆಯನ ಪ್ರೀತಿ ಮತ್ತು ಕ್ರಿಯೇಟಿವ್ ಸ್ಪರ್ಶ ಇತ್ತು.
ಆಗ ಕರಾವಳಿಯ ಗೆಳೆಯರಾಗಿದ್ದ ರಕ್ಷಿತ್ ಶೆಟ್ಟಿ, ರಿಷಭ ಶೆಟ್ಟಿ, ರಾಜ್ ಬಿ. ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರ ಗೆಳೆತನವು ಹೇಗಿತ್ತು ಅಂದರೆ ಯಾರ ಸಿನೆಮಾ ಸಕ್ಸಸ್ ಆದರೂ ಎಲ್ಲರೂ ಸೇರಿ ಸೆಲೆಬ್ರೇಟ್ ಮಾಡುತ್ತಾ ಇದ್ದರು. ಸೋತಾಗ ನಾಲ್ವರೂ ಸೇರಿ ದುಃಖ ಪಡುತ್ತಿದ್ದರು!
ರಿಶಭ್ ಶೆಟ್ಟಿ ಅವರ ಒಂದು ಕ್ಲಾಸಿಕಲ್ ಸಿನೆಮಾ 2018ರಲ್ಲಿ ಕನ್ನಡದಲ್ಲಿ ಭಾರೀ ಸದ್ದು ಮಾಡಿತು. ಯಾವ ಹೀರೋ ಇಲ್ಲದೆ ಕೇವಲ ಕತೆಯ ಮೂಲಕ ಗೆದ್ದ ಸಿನೆಮಾ ಅದು! ಒಂದು ಮಹೋನ್ನತ ಸೋಷಿಯಲ್ ಕಾಸ್ ಸಿನೆಮಾ ಅದು!
ಅದುವೇ ಸರಕಾರಿ ಪ್ರಾಥಮಿಕ ಶಾಲೆ, ಕಾಸರಗೋಡು!
ನಾವು ಗಮನಿಸಬೇಕಾದದ್ದು ಏನೆಂದರೆ ರಿಷಭ್ ಮಾಡಿದ ಅಷ್ಟೂ ಸಿನೆಮಾಗಳು ಒಂದಲ್ಲ ಒಂದು ಸಾಮಾಜಿಕ CAUSE ಮೇಲೆ ಇದ್ದವು ಅನ್ನುವುದು!
ಅಷ್ಟು ಹೊತ್ತಿಗೆ ರಿಷಭ್ ಶೆಟ್ಟಿ ಪ್ರತಿಭೆಯ ಮೇಲೆ ಕನ್ನಡ ಸಿನೆಮಾರಂಗಕ್ಕೆ ಭರವಸೆ ಬಂದಿತ್ತು. ಮುಂದೆ ಬೆಲ್ ಬಾಟಮ್ ಎಂಬ ಪತ್ತೆದಾರಿ ಸಿನೆಮಾದ ಮೂಲಕ ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಮಿಂಚಿದರು. ಹರಿಕತೆ ಅಲ್ಲ ಗಿರಿಕತೆ ಸಿನೆಮಾ ಸೋತುಹೋಯಿತು. ಆದರೆ ಕಳೆದ ವರ್ಷದ ಸೂಪರ್ ಹಿಟ್ ಸಿನೆಮಾ ‘ಗರುಡ ಗಮನ, ವೃಷಭ ವಾಹನ’ ಅವರ ಒಳಗಿದ್ದ ನೈಜ ಕಲಾವಿದನನ್ನು ದೊಡ್ಡದಾಗಿ ಪರಿಚಯ ಮಾಡಿತು.
ಈ ಏಳು ಬೀಳುಗಳ ನಡುವೆ ಕೂಡ ಯಾವುದೇ ಕಲಾವಿದನ ಜೀವನದಲ್ಲಿ ಒಂದು ಮೇಜರ್ ಟರ್ನಿಂಗ್ ಪಾಯಿಂಟ್ ಕೊಡುವ ಶಕ್ತಿ ಇರುವ ಒಂದು ಮೆಗ್ನಮಾಪಸ್ ಸಿನೆಮಾ ಬಂದೇ ಬರುತ್ತದೆ! ಅದಕ್ಕಾಗಿ ತುಂಬಾನೇ ತಾಳ್ಮೆಯಿಂದ ಕಾಯಬೇಕು ಅಷ್ಟೇ. ಆ ಸಿನೆಮಾ ಈಗ ಬಿಡುಗಡೆ ಆಗಿ ಚಂದನವನವನ್ನು ಅಲ್ಲಾಡಿಸಿ ಬಿಟ್ಟಿದೆ! ಈ ನಟನ ದೈತ್ಯ ಪ್ರತಿಭೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ!
ಆ ಸಿನೆಮಾವೆ ಕಾಂತಾರ! ಅದರಲ್ಲಿ ಹತ್ತಾರು ಅದ್ಭುತವಾದ ಕಲಾವಿದರಿದ್ದಾರೆ. ಆದರೆ ಎಲ್ಲರಿಗಿಂತ ಹೆಚ್ಚು ಮಿಂಚಿದ್ದು ರಿಷಭ್ ಶೆಟ್ಟಿ ಮತ್ತು ರಿಷಭ ಶೆಟ್ಟಿ ಮಾತ್ರ! ಕತೆ ಮತ್ತು ನಿರ್ದೇಶನ ಕೂಡ ಅವರದ್ದೇ! ತನ್ನದೇ ಬಾಲ್ಯದ ಮಣ್ಣಿನ ಕತೆಯನ್ನು ಅವರು ತುಂಬಾ ದೊಡ್ಡದಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಕನ್ನಡನಾಡು ಮೆಚ್ಚಿಕೊಂಡ ಸಿನೆಮಾ ಅದು. ಈ ಸಿನೆಮಾದ ಮೂಲಕ ರಿಷಭ್ ಶೆಟ್ಟಿ ಕನ್ನಡದ ಕ್ಲಾಸ್ ನಟ ಮತ್ತು ನಿರ್ದೇಶಕರಾಗಿ ಮಿಂಚಿದ್ದಾರೆ.
ಅಂತಹ ಸೆನ್ಸಿಟಿವ್ ಆದ ಕತೆಯನ್ನು ದೈವದ ಮೂಲಕ ಹೇಳುವಲ್ಲಿ ತುಂಬಾ ರಿಸ್ಕ್ ಇತ್ತು! ಹಿಂದೆ ಕೂಡ ನಮ್ಮ ತುಳುನಾಡಿನ ದೈವಗಳ ಕತೆಯನ್ನು ಹೊತ್ತ ಕನ್ನಡ ಮತ್ತು ತುಳು ಸಿನೆಮಾಗಳು ಸಾಕಷ್ಟು ಬಂದಿದ್ದವು. ಆದರೆ ಕಾಂತಾರ ಸಿನೆಮಾವು ಹುಟ್ಟುಹಾಕಿದ ಕ್ರೇಜ್ ನಿಜಕ್ಕೂ ಅದ್ಭುತ!
ಅಂತಹ ಮಾಸ್ಟರಪೀಸ್ ಸಿನೆಮಾ ಮಾಡಿ ಗೆದ್ದ ನಮ್ಮ ಹುಡ್ಗ ರಿಷಭ್ ಶೆಟ್ಟರು ಸೋಮವಾರ ತನ್ನ ಊರಾದ ಕೆರಾಡಿಗೆ ಬಂದಿದ್ದಾರೆ ಮತ್ತು ತನ್ನ ಊರವರ ಮುಂದೆ ತಾನು ಗೆದ್ದ ಕತೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ.
ತುಂಬಾ ಸೌಜನ್ಯದ ಈ ಕಲಾವಿದನಿಗೆ ಕನ್ನಡ ಸಿನೆಮಾ ರಂಗದಲ್ಲಿ ಅದ್ಭುತವಾದ ಭವಿಷ್ಯ ಇದೆ ಎನ್ನುವುದೇ ಭರತವಾಕ್ಯ!