ವಿದ್ಯಾಗಿರಿ (ಮೂಡುಬಿದಿರೆ): ‘ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಬದ್ಧತೆಯೇ ಆಧಾರ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಸೋಮವಾರ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕ-ಶಿಕ್ಷಕರ ಸಭೆ’ಯಲ್ಲಿ
ಅವರು ಮಾತನಾಡಿದರು.
‘ಎಲ್ಲ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಬದ್ಧರಾಗಿರುತ್ತಾರೆ. ಕನಸು ಕಟ್ಟುತ್ತಾರೆ. ಕಾಲ ಕ್ರಮೇಣ ಹೋದಂತೆ ಸ್ಪಂದನೆ ನೀಡುವುದು ಕಡಿಮೆ ಆಗುತ್ತದೆ. ಅದು ಹಾಗೆ ಆಗಬಾರದು ವಿದ್ಯಾರ್ಥಿಗಳಾಗಲಿ ಪೋಷಕರಾಗಲಿ ಸರಿಯಾದ ರೀತಿಯಲ್ಲಿ ಸ್ಪಂದಿಸುವುದು ಕರ್ತವ್ಯ’ ಎಂದರು. ‘ನೀವು ಯಾವ ಕ್ಷೇತ್ರಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತೀರೋ, ಆ ಕ್ಷೇತ್ರದ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಬೇಕು. ನಮ್ಮಲ್ಲಿ ಸಮಗ್ರ ವ್ಯವಸ್ಥೆ ಇದೆ. ನಮ್ಮ ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕಾ ಅವಧಿಯಲ್ಲಿ ಜೊತೆಯಲ್ಲಿದ್ದು, ಕಲಿಸುತ್ತಾರೆ. ಪಾಠ ಓದಿಸುತ್ತಾರೆ. ಬಳಿಕ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಿಸುತ್ತೇವೆ. ಪದವಿ ಪೂರ್ವ ಮಂಡಳಿಯು ನಿಗದಿ ಪಡಿಸಿದ ಪರೀಕ್ಷಾ ಅವಧಿ, ಪ್ರಶ್ನೆಗಳು, ಪ್ರಶ್ನಾ ಮಾದರಿಗಳನ್ನೇ ಪಾಲಸಿಕೊಂಡು ಅವರಿಗೆಕಲಿಸಲಾಗುತ್ತದೆ’ ಎಂದರು.
‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನುಡಿದಂತೆ ನಡೆದಿದೆ. ದತ್ತು ಯೋಜನೆ, ಶುಲ್ಕ ರಿಯಾಯಿತಿ ಸೇರಿದಂತೆ ನೀಡಿದಂತೆ ಮಾತಿನಂತೆ ವಿದ್ಯಾಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು. ‘ಆಳ್ವಾಸ್ನಲ್ಲಿ ಸಮರ್ಥ ಉಪನ್ಯಾಸಕರು ಇದ್ದಾರೆ. ಅವರು ವಿದ್ಯಾರ್ಥಿಗಳ ಅಭ್ಯುದಯದ ಬಗ್ಗೆ ಹಗಲಿರುಳು ಚಿಂತಿಸುತ್ತಾರೆ. ನಾವು ಅವರ ಜಾತಿ- ಧರ್ಮ ನೋಡಿಕೊಂಡು ಉಪನ್ಯಾಸಕರನ್ನಾಗಿ ಮಾಡುವುದಿಲ್ಲ. ಅರ್ಹತೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ’ ಎಂದರು. ಪೋಷಕರು ಮಕ್ಕಳ ಬದ್ಧತೆಯನ್ನು ಗಮನಿಸಬೇಕು. ರಾತ್ರಿ ವೇಳೆ ವಿದ್ಯಾರ್ಥಿಗಳು ಓದುವುದಕ್ಕಿಂತ ಬೆಳಗ್ಗಿನ ಸಮಯದಲ್ಲಿ ಬೇಗ ಎದ್ದು ಓದಿ. ಬದುಕಿನಲ್ಲಿ ವಿದ್ಯೆ ಎಷ್ಟು ಮುಖ್ಯವೋ ಅದೇ ರೀತಿ ಆರೋಗ್ಯ ಕೂಡ ಮುಖ್ಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಬೇಕು. ಎಂದೂ ಕೂಡ ನಿಮ್ಮ ಮಕ್ಕಳನ್ನು ಮತ್ತೊಬ್ಬರೊಂದಿಗೆ ಹೋಲಿಸಬೇಡಿ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಸದಾಕತ್, ಉಪ ಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕರಾದ ಜ್ಯೋತಿ ಎಂ.ಎನ್, ಎನ್. ಕುಮಾರ್, ಗಿರೀಶ್, ಪ್ರಶಾಂತ್ ಶೆಟ್ಟಿ, ವಿದ್ಯಾ ಕೆ. ಇದ್ದರು. ಉಪನ್ಯಾಸಕರ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.