ಅಗಣಿತ ಶ್ರಮ,ಅದಕ್ಕೆ ತಕ್ಕುದಾದ ತಯಾರಿ ಮತ್ತು ದೊರೆತ ಸಣ್ಣ ಕಾಯಕವನ್ನು ತನ್ನ ಕಾರ್ಯದಂತೆ ವಿಜೃಂಭಿಸಿ ನಡೆಯುವವನು ಬದುಕಲ್ಲಿ ಎಂದೂ ವಿರಮಿಸಲಾರ.ಅವನ ಹಿಂದಿನ ಶ್ರಮವೇ ಇಂದಿನ ಉತ್ತಮ ವ್ಯಕ್ತಿಯಾಗಿ,ಹಲವರಿಗೆ ಮಾದರಿಯಾಗಿ ಹಲವರಲ್ಲಿ ಒಬ್ಬನನ್ನಾಗಿಸುತ್ತದೆ.
ಇನ್ಯಾರೋ ಬಿಟ್ಟ ಕಾರ್ಯ ನನಗೆ ದೊರೆತಿದೆ ಎಂದು ಅಸಹ್ಯ ಪಡದೆ,ಅದನ್ನೇ ನನ್ನ ಕಾರ್ಯವೆಂದು ಭಾವಿಸಿ ತಲ್ಲೀನನಾದಾಗ ಭದ್ರ ಗೆಲುವನ್ನು ಸಾಧಿಸಲು ಸಾಧ್ಯ..!
ಯಾವತ್ತು ಒಬ್ಬನ ಗೆಲುವು ಅವನು ಮಾತ್ರ ಸಂಭ್ರಮಿಸುವಂತಿರಬಾರದು, ಅದು ಅವನ ಸುತ್ತಲಿನ ಜಗತ್ತು ಸಂಭ್ರಮಿಸುವಂತಿರಬೇಕು.ಆಗ ತನ್ನ ಪೂರ್ಣ ಪರಿಶ್ರಮದ ದಾರಿಗೆ ಒಂದು ರೀತಿಯ ಅರ್ಥ ದೊರೆದಂತಾಗುತ್ತದೆ..!
ದೃಶ್ಯ ಮಾಧ್ಯಮದ ಬೃಹತ್ ವೇದಿಕೆಯಲ್ಲಿ ಹಲವಾರು ವರುಷಗಳ ಕಾಲ,ಸುದೀರ್ಘವಾಗಿ ನೆಲೆಯನ್ನು ಕಂಡುಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ! ಅದಕ್ಕೇ ತನ್ನದೇ ಆದ ವೃತ್ತಿ ಪರತೆ,ಕೆಲಸದ ಮೇಲಿನ ಹಿಡಿತ,ತೀಕ್ಷ್ಣ ಮಾತಿನ ಪ್ರಖರ,ಧ್ವನಿಯ ಗಡಸುತನ ಮತ್ತು ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಹದು ಬಸ್ತಿನಲ್ಲಿ ಇಡುವ ಚಾಕಚಕ್ಯತೆ ಅತೀ ಅಗತ್ಯವಾಗಿದೆ. ತನ್ನದೇ ಆದ ವಿಷಯವನ್ನು ಪ್ರಸ್ತಾಪಿಸುವ ರೀತಿ ಮತ್ತು ಎಲ್ಲರನ್ನು ಆ ವಿಷಯದ ಕುರಿತು ಕೇಂದ್ರಿಕರಿಸುವ ರೀತಿ ಬಹು ಮುಖ್ಯವಾದುದು.!
ಕನ್ನಡ ಮಾಧ್ಯಮ ಲೋಕದಲ್ಲಿ ವಿಶೇಷ ವ್ಯಕ್ತಿತ್ವದಿಂದ ಗುರುತಿಸಲ್ಪಡುವ ಮತ್ತು ಹಲವಾರು ಮೊದಲಿಗ ಕಾರ್ಯಕ್ರಮಗಳನ್ನು,ವಿಶೇಷ ವಿಷಯಗಳಿಂದ ಹೊತ್ತು ತಂದ ಒಬ್ಬ ನೇರ ನಿರೂಪಕರು ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.
ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ.
ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ)
ತುಳು,ಕನ್ನಡ,ಕೊಂಕಣಿ,ಹಿಂದಿ,ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳ ಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.
ಶೆಟ್ಟರ ತಂದೆ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈ ಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು.
“ರಚನಾ ಉಪ್ಪಳ”ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ,ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ,ಭಾರತೀಯತೆಗೆ ಸಂಬಂಧಿಸಿದ ಕಿರು ಪ್ರಹಸನಗಳನ್ನು ಮಾಡುತ್ತಾ,ಉಪ್ಪಳದ ಮಣ್ಣಿನ ಸಾಂಸ್ಕೃತಿಕ ಕಿಡಿಯ ಧಗೆಯನ್ನು ಚಿಕ್ಕಂದಿನಿಂದಲೇ ದೇಹಕ್ಕೆ ಸ್ಪರ್ಶಿಸಿದ್ದರು..!
ಜಯ ಪ್ರಕಾಶ್ ಶೆಟ್ಟಿಯವರು ಅತ್ಯುತ್ತಮ ಕಲಾವಿದನನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ವ್ಯಕ್ತಿ. ಹಲವಾರು ದಿಗ್ಗಜರುಗಳ ಮರು ಧ್ವನಿಯನ್ನು ಮತ್ತು ಅವರ ಮಾತಿನ ಶೈಲಿಯನ್ನು ಅನುಕರಣೆ ಮಾಡುವ ವಿಭಿನ್ನ ಪರಿಣತಿ ಇವರಿಗಿದೆ.ಇದನ್ನು ನಾವು ಇವರ ಹಲವಾರು ಸಂದರ್ಶನಗಳಲ್ಲಿ ಕಾಣಬಹುದಾಗಿದೆ.
ಫಾರ್ಮಾಸ್ಯುಟಿಕಲ್ ಮುಗಿದ ನಂತರ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಎರಡು ವರುಷಗಳ ಕಾಲ ವೃತ್ತಿಯನ್ನು ಮುಂದುವರಿಸಿದರು. ತದನಂತರ 2000ನೇ ಇಸವಿಯಲ್ಲಿ ದೂರದ ಹೈದರಾಬಾದಿಗೆ ಉದ್ಯೋಗದ ನಿಮಿತ್ತ ತೆರಳಿದರು.ರಾಮೋಜಿ ಫಿಲ್ಮ್ ಸಿಟಿಯಲ್ಲಿನ ಈ ಟಿವಿ ಕನ್ನಡ ವಾಹಿನಿಯಲ್ಲಿ ತನ್ನ ಮಾದ್ಯಮಿಕ ಮತ್ತು ನಿರೂಪಕರ ವೃತ್ತಿಗೆ ತನ್ನನ್ನು ತಾನು ಒಪ್ಪಿಸಿದರು.
ಆಗ ತಾನೇ ಈ ಟಿವಿ ತನ್ನ ಪುಟ್ಟ ಹೆಜ್ಜೆಯನ್ನು ಇಡುವ ಸಂದರ್ಭವು ಇದಾಗಿತ್ತು. ಈ ಟಿವಿ ವಾಹಿನಿಯ ಮೊದಲಿನ ಕನ್ನಡ ವಾರ್ತಾ ನಿರೂಪಕರು ನಮ್ಮ ಜಯ ಪ್ರಕಾಶ್ ಶೆಟ್ಟಿಯವರು ಎಂದೇ ಹೇಳಬಹುದು.2000ನೇ ಇಸವಿ ಡಿಸೆಂಬರ್ 10ರ ಮಧ್ಯಾಹ್ನದ 12 ಗಂಟೆಯ ಬುಲೆಟ್ ನ್ಯೂಸ್ ನ್ನು ಓದಿದ ಹೆಗ್ಗಳಿಕೆ ಇವರದು.
2006ರಲ್ಲಿ ಇವರ ಮೊದಲ ಮಾಧ್ಯಮ ಲೋಕದ ಮೊದಲ ಮೈಲಿಗಲ್ಲಾದ ಒಂದು ಘಟನೆ ನಡೆಯಿತು.ಅದು ಏಪ್ರಿಲ್ 12ರ ಆ ದಿನ ಕರುನಾಡಿಗೆ ಆಘಾತಕರವಾದ ವಿಷಯವೊಂದು ಸಂಭವಿಸಿತ್ತು. ಅದು ಡಾ.ರಾಜ್ ಕುಮಾರ್ ರವರು ವಿಧಿವಶರವಾದ ದಿನವಾಗಿತ್ತು.ಅಂದು ಕರ್ನಾಟಕದ ಬೆಂಗಳೂರಿನಿಂದ ನೇರವಾಗಿ ಮಾಹಿತಿಯನ್ನು ವಿವರಿಸುವ ವ್ಯವಸ್ಥೆ ಇಂದಿನಷ್ಟು ಇರಲಿಲ್ಲ.
ಶೆಟ್ಟರು ಅಂದು ಮಧ್ಯಾಹ್ನದ 3 ಗಂಟೆಯ ಬುಲೆಟಿನ್ ಗಾಗಿ ತಯಾರು ನಡೆಸಿದ್ದರು.ರಾಜ್ ರವರು ಸುಮಾರು 2 ಗಂಟೆಗೆ ವಿಧಿವಶರಾದ ಮಾಹಿತಿ ನಾಡಿನಾದ್ಯಂತ ಬೆಳಕಿನ ವೇಗದಲ್ಲಿ ಹಬ್ಬಿದ ದಿನವಾಗಿತ್ತು. ಆಗ ಜಯ ಪ್ರಕಾಶ್ ರವರನ್ನು 2:15 ಕ್ಕೆ ವಾರ್ತಾ ವಾಚನಕ್ಕೇ ಕೇಳಿಕೊಂಡರಂತೆ,ಒಪ್ಪಿಕೊಂಡು ಸಿದ್ಧರಾದರು.2ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿರಾಮ ತೆಗೆದುಕೊಳ್ಳದೆ ವಾರ್ತಾ ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿತ್ತು..! ಅಂದು ಅಂಬರೀಷ್,ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಿ. ಮತ್ತು ಕನ್ನಡದ ಅಂದಿನ ಎಲ್ಲಾ ಕಲಾವಿದರನ್ನು ಮಾತಿಗೆ ಕರೆ ತಂದಿದ್ದರು.ರಾಜ್ ರವರ ಒಡನಾಟದ ಮಾಹಿತಿಯನ್ನು ಬಿತ್ತರಿಸಿದ್ದರು.
ಇದು ಶೆಟ್ಟರವರ ಮೊದಲ ದೀರ್ಘವಾದ ವಾಚನವಾಗಿತ್ತು.ಅಂದಿನ ವಾಹಿನಿಯ ಮುಖ್ಯಸ್ಥರಾದ ಜಿ.ಎನ್.ಮೋಹನ್ ಸಿದ್ದು ಕಾಳಜಿಯವರು ಇವರ ವಾಚನವನ್ನು ವೀಕ್ಷಿಸಿ ಸಂತೋಷದಿಂದ ಇವರನ್ನು ಅಪ್ಪಿಕೊಂಡರಂತೆ.ಇದು ಇವರ ಬದುಕಿಗೆ ವೇಗವನ್ನು ನೀಡಿತ್ತು ಎಂಬುವುದನ್ನು ಹೇಳಲು ಹರ್ಷ ವ್ಯಕ್ತ ಪಡಿಸುತ್ತಾರೆ.
ಈ ಟಿವಿಯಲ್ಲಿ ಇರುವಾಗ ಸರ್ಕಾರ್ ಎಂಬ ವಿನೂತನ ರಾಜಕೀಯ ಹಾಸ್ಯ ವಿಡಂಬನೆ ಕಾರ್ಯಕ್ರಮವನ್ನು ಹುಟ್ಟು ಹಾಕಿದ ಕೀರ್ತಿ ಜಯ ಪ್ರಕಾಶ್ ಶೆಟ್ಟಿಯವರದ್ದು.ಇದು ವಿರಾಮದ ವೇಳೆಯಲ್ಲಿ ಎರಡು ನಿಮಿಷ ಬಂದು ಹೋಗುತ್ತಿತ್ತು, ಇದನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದರು.
ಬಂಗಾರಪ್ಪನವರು,ಎಸ್.ಎಂ.ಕೃಷ್ಣ, ಪಿ.ಜಿ.ಆರ್.ಸಿಂಧ್ಯಾ,ಕುಮಾರಸ್ವಾಮಿ,ಸದಾನಂದ ಗೌಡರು ತಮ್ಮ ಬಗ್ಗೆ ಬರುತ್ತಿದ್ದ ವಿಡಂಬನೆ ಬಗ್ಗೆ ಮೆಚ್ಚುತಿದ್ದರು.ಯಾವ ರೀತಿ ತೀಕ್ಷ್ಣ ವಿಡಂಬನೆ ಇರುತ್ತಿತ್ತು ಅಂದರೆ ವಿಧಾನ ಸೌಧದಲ್ಲಿ ಶಾಸಕ ಮಾಧು ಸ್ವಾಮಿ,ಸಂಸತ್ತುವಿನಲ್ಲಿ ತೇಜಸ್ವಿ ಶ್ರೀ ರಮೇಶ್ ತೀಕ್ಷ್ಣವಾಗಿ ಧ್ವನಿ ಎತ್ತಿದ್ದರು,ಆದರೆ ಜನರಂತೂ ಇದನ್ನು ಬಾಯಿ ಚಪ್ಪರಿಸಿಕೊಂಡು ನೋಡುತಿದ್ದರು.ಇದು ಮಾಧ್ಯಮ ಲೋಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿತ್ತು..!
2000ದಿಂದ 2008ರವರೆಗೆ ಸುದೀರ್ಘವಾದ ನಿರೂಪಕರಾಗಿ ಈ ಟಿವಿಯಲ್ಲಿ ಕಳೆದರು.ತದನಂತರ 2008ರಲ್ಲಿ ಸುವರ್ಣನ್ಯೂಸ್ ನಿರೂಪಕರಾಗಿ ಸೇರಿಕೊಂಡರು.ಆಗ ವಾಹಿನಿಯ ಮುಖ್ಯಸ್ಥರಾದ ಎಚ್.ಆರ್.ರಂಗನಾಥರವರು (ಪಬ್ಲಿಕ್ ಟಿವಿ) ಪೊಲಿಟಿಕಲ್ ರಿಪೋರ್ಟರ್ ಆಗಿ ಕಾರ್ಯ ನಿರ್ವಹಿಸುವಂತೆ ಕೇಳಿಕೊಂಡರು.
2010ರಲ್ಲಿ ಕರ್ನಾಟಕದ ರಾಜಕೀಯ ವಿಷಮಸ್ಥಿತಿಯಲ್ಲಿ ಇತ್ತು.ಅಂದಿನ ಮುಖ್ಯಮಂತ್ರಿಯಾದ ಬಿ.ಎಸ್.ವೈ.ರವರು ದೆಹಲಿಯಲ್ಲಿ ತಂಗಿದ್ದರು.ಅವರನ್ನು ಅಧಿಕಾರದಿಂದ ಕೆಳಗಿಳಿಸುವ ದೊಡ್ಡ ಕಾರ್ಯತಂತ್ರವೇ ರಚಿತವಾಗಿತ್ತು.ಅಂದು ಶೆಟ್ಟರು ದೆಹಲಿಗೆ ತೆರಳಿ ಬಿ.ಎಸ್.ವೈ.ರವರನ್ನು ಭೇಟಿ ಮಾಡಿ ಒಂದು ಸಂದರ್ಶನವನ್ನು ಮಾಡಿದರು. ಆ ಸಂದರ್ಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮನಸ್ಸಿನ ವೇದನೆಯನ್ನು ಹೇಳುತ್ತ ಗಳ ಗಳನೆ ಅತ್ತು ಬಿಟ್ಟರು, ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಾಹಿನಿಯಲ್ಲಿ ಕೂಡ ಮುಖ್ಯ ಪರದೆಯಲ್ಲಿ ಬಿತ್ತರಗೊಂಡಿತ್ತು. ಹೈಕಮಾಂಡ್ ತಂಡ ಹೊಡೆಯಿತು.ಇದು ಬಿ.ಎಸ್.ವೈ.ರವರಿಗೆ ಮರಳಿ ಅಧಿಕಾರ ದೊರೆಯುವಂತೆ ಮಾಡಿತ್ತು ಅನ್ನುತ್ತಾರೆ ಶೆಟ್ಟರು. ಅಂದು ಸುವರ್ಣ ನ್ಯೂಸ್ ನ ಟಿ.ಆರ್.ಪಿ.ಯನ್ನು ಮೊದಲ ಬಾರಿಗೆ 100+ ತೆಗೆಸಿಕೊಟ್ಟ ಸಂದರ್ಶನ ಶೆಟ್ಟರವರದಾಗಿತ್ತು.( ನವೆಂಬರ್ 9 2010)
ಮಾಧ್ಯಮ ಲೋಕದಲ್ಲಿ ವಿಷ್ಣುವರ್ಧನ್ ಸರ್ ರವರ ಕೊನೆಯ ಸಂದರ್ಶನ ಕೂಡ ಜಯಣ್ಣನ ಹೆಸರಲ್ಲಿದೆ ಎನ್ನುವುದು ಕೂಡ ಗಮನಾರ್ಹ ವಿಷಯವಾಗಿದೆ.(ಸೆಪ್ಟೆಂಬರ್ 2010)
ಸುವರ್ಣ ನ್ಯೂಸ್ ವಾಹಿನಿಯಲ್ಲಿ ಇರುವಾಗ ಮೊದಲ ಬಾರಿಗೆ “ಬ್ರೇಕ್ ಫಾಸ್ಟ್” ಎನ್ನುವ ಹೊಸ ಆಯಾಮದ ವಾಚನವನ್ನು ತಂದು ಕೊಟ್ಟರು.ನಾನು ಶೆಟ್ರು ಮತ್ತು ಭಟ್ರು ಎಂಬ ಹೊಸ ಮಾತಿನಿಂದ ಪ್ರಚಲಿತಗೊಂಡಿತು.ಅಂದು ಭಟ್ಟರಾಗಿ ಪ್ರತಿಮಾ ಭಟ್ ಜೊತೆಗೆ ಇದ್ದರು.ಇದು ಕರ್ನಾಟಕದಲ್ಲಿ ಹೊಸ ಪ್ರೇಕ್ಷಕ ವರ್ಗವನ್ನು ಸೃಷ್ಠಿ ಮಾಡಿತ್ತು.
“ಪಂಚ್ ಪ್ರಶ್ನೆ”ಎಂಬ ಮಗದೊಂದು ವಿಷಯದ ಜೊತೆಗೆ,ಪಂಚಕಜ್ಜಾಯ ಎಂಬ ಇನ್ನೊಂದು ಸೂಪರ್ ಹಿಟ್ ಕಾರ್ಯಕ್ರಮವನ್ನು ನಿರೂಪಿಸಿದರು.ವಾರದ ಅಂತ್ಯದಲ್ಲಿ “ಟಾಪ್ ಟೆನ್ ಬುಕ್”, “ಕಟ್ಟೆಚ್ಚರ” ಎಂಬ ಹೊಸ ಯೋಜನೆಯ ನಿರೂಪಣೆಯನ್ನು ನಿರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
2013ರಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಂತಹ ಸಮಯವದು.ಅಂದು ಸುವರ್ಣ ನ್ಯೂಸ್ ನ ಚೀಫ್ ಆಗಿ ವಿಶ್ವೇಶ್ವರ ಭಟ್ಟರಿದ್ದರು.ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ ಅವರ ಮೊದಲ ಬಾರಿಗೆ ಸಂದರ್ಶನ ಮಾಡಿದ ಮಗದೊಂದು ಕೀರ್ತಿ ಇವರ ಹೆಗಲೇರಿದೆ.
2013ರ ಸಮಯ ಭಾರತೀಯ ಸಿನಿಮಾ 100ರ ವರ್ಷಾಚರಣೆಯ ಸಂಭ್ರಮದಲ್ಲಿತ್ತು.ಅಂದು “ಸಿನೆಮಾ ಸೆಂಚುರಿ”ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಿ,ಹಲವಾರು ದಿಗ್ಗಜರುಗಳ ಕಾರ್ಯಕ್ರಮವನ್ನು ಕೂಡ ಮಾಡಿದ್ದರು.ಇದು ಕೂಡ ಹೊಸ ದಾಖಲೆಯನ್ನು ಸೃಷ್ಠಿ ಮಾಡಿತ್ತು ಎಂಬುದನ್ನು ನೆನಪಿಸುತ್ತಾರೆ.
ಪ್ರತೀ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾ,ಪ್ರತೀ ವಿಷಯದಲ್ಲಿ ಪರಿಣತಿ ಹೊಂದುತ್ತಾ ಸಾಗಿದ ಶೆಟ್ಟಿಯವರು 2013ರ ನವೆಂಬರ್ ನಲ್ಲಿ ಸಮಯ ನ್ಯೂಸ್ ಗೆ ಪಾದಾರ್ಪಣೆಗೊಂಡರು.ಅಂದಿನ ವಾಹಿನಿಯ ಮುಖ್ಯಸ್ಥರಾದ ವಿಜಯ ಟಾಟಾರವರು ಪೂರ್ಣವಾದ ಸ್ವಾತಂತ್ರ್ಯವನ್ನು ಕೊಟ್ಟು ವಿನೂತನ ಕಾರ್ಯಕ್ರಮ ಮಾಡುವಂತೆ ಪ್ರೋತ್ಸಾಹಿಸಿದರಂತೆ,ಅದರ ಫಲವಾಗಿ ಮಾಧ್ಯಮ ಲೋಕದ ವಿನೂತನ ಕಾರ್ಯಕ್ರಮವಾದ “ಬಿಗ್ ತ್ರಿ” ಎಂಬ ಕೂಸು ಜನ್ಮ ತಾಳಿತು..!!ವಾರ್ತಾ ವಿಶ್ಲೇಷಣೆಯನ್ನು ವಿನೂತನ ರೀತಿಯಲ್ಲಿ ಹೊತ್ತು ಸಾಗಿದ ವಿಭಿನ್ನ ಕಾರ್ಯಕ್ರಮ ಇದಾಗಿತ್ತು.ಡಿಸೆಂಬರ್ 13- 2013ನೇ ತಾರಿಕಿನಂದು ಮೊದಲಿನ ಕಾರ್ಯಕ್ರಮ ಬಿತ್ತರವಾಗಿತ್ತು.ಬೀದರ್ ಜಿಲ್ಲೆಯ ಗೋಧಿ ಹಿಪ್ಪರಗಿ ಎಂಬ ಪ್ರದೇಶದ ಗ್ರಾಮೀಣ ಸಮಸ್ಯೆಯ ಬಗ್ಗೆ ಮಾಡಿದ ಕಾರ್ಯಕ್ರಮ ಇದಾಗಿತ್ತು.ಶಾಲೆಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ನದಿ ದಾಟಿಕೊಂಡು ಹೋಗುವ ಸನ್ನಿವೇಶ ಅಲ್ಲಿತ್ತು.ಇದು ವಿದ್ಯಾರ್ಥಿನಿಯರಿಗೆ ಒಂದು ರೀತಿಯ ಮುಜುಗರ ಆಗಿತ್ತು.ಇದನ್ನು ಮನಗಂಡ “ಬಿಗ್ ತ್ರಿ” ಟೀಮ್ ಅಲ್ಲಿನ ಆಗಿನ ಶಾಸಕರಾದ ಈಶ್ವರ್ ಖಂಡ್ರೆಯವರನ್ನು ಸಂಪರ್ಕಿಸಿತು.ಜಯ ಪ್ರಕಾಶ್ ಶೆಟ್ಟಿ ಮತ್ತು ಈಶ್ವರ್ ಖಂಡ್ರೆಯವರ ಜೊತೆ ದೀರ್ಘವಾದ ವಾಗ್ವಾದವೇ ನಡೆದಿತ್ತು ಅಂದು.ಮರುದಿನ ಖಂಡ್ರೆಯವರು ಜೀಪನ್ನು ಕೂಡ ಕಳಿಸಿದ್ದರು.ಎರಡು ದಿನ ಬಿಟ್ಟು ಬಸ್ ಕೂಡ ಅನುಮೋದಿಸಿದ್ದರು.ಮೂರು ವರುಷದ ನಂತರ ಕೋಟ್ಯಾಂತರ ವೆಚ್ಚದ ದೊಡ್ಡದಾದ ಅಣೆಕಟ್ಟು ಸ್ಥಾಪನೆಯಾಗಿತ್ತು.ಇದು “ಬಿಗ್ ತ್ರಿ” ಯ ಮೊದಲಿನ ಮೈಲಿಗಲ್ಲು ಮತ್ತು ಶೆಟ್ಟರಿಗೆ ವಿಭಿನ್ನ ಗೌರವವನ್ನು ನೀಡಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದ ಕುರಿತು ಮಾಡಿದ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಸಭೆ ಆಯುಕ್ತರ ಜೊತೆ ಚರ್ಚಿಸಿ,ಆಗ ಶೌಚಾಲಯ ನಿರ್ಮಾಣಕ್ಕೆ ಜಾಗದ ಅನಿವಾರ್ಯತೆ ಎದುರಾದಾಗ ಅಲ್ಲಿಯ ಸ್ಥಳೀಯ ವ್ಯಕ್ತಿ ಸುಮಾರು 20 ಲಕ್ಷ ಮೌಲ್ಯದ ತನ್ನ ಸ್ವಂತ ಜಮೀನನ್ನು ಉಚಿತವಾಗಿ ನೀಡಿದ ಉದಾಹರಣೆಯನ್ನು ಇವತ್ತು ನೆನಪಿಸುತ್ತಾರೆ ಶೆಟ್ಟರು.
ಸುಮಾರು ಏಳು ವರುಷದ ನಡುವೆ 5000ಕ್ಕಿಂತಲೂ ಹೆಚ್ಚಿನ ಕಾರ್ಯಕ್ರಮವನ್ನು ನಡೆಸಿ ಶೇ.90 ಕೆಲಸವನ್ನು ಕಾರ್ಯಗತಗೊಳಿಸಿದ ಹೆಮ್ಮೆ ಇವರದ್ದು.
ಸಮಯ ವಾಹಿನಿಯಲ್ಲಿ ಇರುವಾಗ “ಸಾಲ ಮನ್ನಾ ಯೋಜನೆ”ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಂತಹ ಕೀರ್ತಿ ಇವರು ಮತ್ತು ಇವರ ತಂಡಕ್ಕೆ ಸಲ್ಲುತ್ತದೆ.ಚಿನ್ನದ ಸಾಲ,ಬ್ಯಾಂಕಿಂಗ್ ಸಾಲ,ಜಾನುವಾರು ಸಾಲ ಮುಂತಾದ ಸಾಲದಿಂದ ಹೊರೆಯಾದ ಕುಟುಂಬಗಳಿಗೆ ಅಲ್ಲಿಯೇ 10,000ರೂ.ನೀಡುವ ಕಾರ್ಯವನ್ನು ಜಾರಿಗೆ ತಂದರು.ಸುಮಾರು 71 ಲಕ್ಷ ರೂಪಾಯಿ ಹಣವನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸಿದ ಕಾರ್ಯವನ್ನು ಮೆಚ್ಚಲೇಬೇಕು.
“ಸಮಯ ಸಂಜೀವಿನಿ” ಎಂಬ ಇನ್ನೊಂದು ಕಾರ್ಯಕ್ರಮದಲ್ಲಿ ಜೊತೆಯಾದ ಶೆಟ್ಟರು,ಕಿಡ್ನಿ,ಹೃದಯ ಸಂಬಂಧಿತ ರೋಗಿಗಳಿಗೆ ಹಲವಾರು ಸಹಾಯವನ್ನು ಮಾಡುವ ಕಾರ್ಯವನ್ನು ಕೈಗೊಂಡರು.ಇದು ಒಂದು ರೀತಿಯ ಹೊಸ ಆಯಾಮವನ್ನು ತಂದು ಕೊಡುವಲ್ಲಿ ಯಶಸ್ವಿಯಾಯಿತು.
ತದನಂತರ 2017ರಲ್ಲಿ ಸುವರ್ಣ ನ್ಯೂಸ್ ಮುಖ್ಯಸ್ಥರಾಗಿ ರವಿ ಹೆಗಡೆಯವರು ವಹಿಸಿ ಕೊಂಡರು.ಅವರ ಮಾತಿನಂತೆ ಜಯ ಪ್ರಕಾಶ್ ಶೆಟ್ಟಿಯವರು ಸುವರ್ಣ ನ್ಯೂಸ್ ವಾಹಿನಿಗೆ ಮರು ಸೇರ್ಪಡೆಗೊಂಡರು.ಇಲ್ಲಿಯೂ “ಬಿಗ್ ತ್ರಿ” ಎಂಬ ಕಾರ್ಯಕ್ರಮಕ್ಕೆ ಒಪ್ಪಿಗೆಯನ್ನು ಕೂಡ ಸೂಚಿಸಿದರು.ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ 15 ಕುಟುಂಬಗಳು ವಸತಿ ರಹಿತವಾಗಿತ್ತು.ಇದನ್ನು ಪ್ರತಿಷ್ಠೆಯಂತೆ ತೆಗೆದುಕೊಂಡ ‘ಬಿಗ್ ತ್ರಿ’ ತಂಡ ಅಂದಿನ ಎಂ.ಎಲ್.ಎ.ರಾದ ಚಂದ್ರಪ್ಪರ ಜೊತೆ ಮಾತನಾಡಿ 6 ತಿಂಗಳೊಳಗೆ ಎಲ್ಲರಿಗೂ ವಸತಿ ಒದಗಿಸುವ ಕಾರ್ಯವನ್ನು ಮಾಡಿದರು.ಇದು ಕೂಡ ರಾಜ್ಯದಲ್ಲಿ ಹೊಸ ಅನುಭವವನ್ನು ತೋರಿಸಿತು.
*️⃣ ಕೊಡಗು ವಿಪರೀತ ಮಳೆಯನ್ನು ಎದುರಿಸಿದ ಸಮಯದಲ್ಲಿ ಶೆಟ್ಟರ ನೇತ್ರತ್ವದಲ್ಲಿ ಸುವರ್ಣ ನ್ಯೂಸ್ ತಂಡ 52 ಲಾರಿಯಷ್ಟು ದವಸ ಧಾನ್ಯ,ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ಸಹಕರಿಸಿದರು.
*️⃣ ಒಬ್ಬ ಕಳ್ಳ 6 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕದ್ದು,ತದನಂತರ ಅದು ತನ್ನಿಂದ ತಪ್ಪಾಗಿದೆ ಎಂದು ಅರ್ಥೈಸಿ ಅದನ್ನು ಸಂಬಂಧ ಪಟ್ಟವರಿಗೆ ವಾಪಸ್ ನೀಡಲು ಆತ ಆಯ್ಕೆ ಮಾಡಿಕೊಂಡದ್ದು ಶೆಟ್ಟರನ್ನು. ಇದು ಶೆಟ್ಟರ ವಿಶ್ವಾಸ ಅರ್ಹತೆಗೆ ಸಾಕ್ಷಿ.ಇದನ್ನು ಕೂಡ ಸಮಯೋಚಿತವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*️⃣ ಒಂದು ಮಗುವಿಗೆ ಕೃತಕ ಕೈ ಜೋಡಿಸಲು 15 ಲಕ್ಷದ ಅನಿವಾರ್ಯತೆ ಎದುರಾದಾಗ ‘ಬಿಗ್ ತ್ರಿ’ ಕಾರ್ಯಕ್ರಮದಡಿಯಲ್ಲಿ ದಾನಿಗಳ ನೆರವಿನಿಂದ ಹಣವನ್ನು ಪೂರೈಸಿದರು.ಇದು ಬಿಗ್ ತ್ರಿ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ವೀಕ್ಷಣೆಯನ್ನು ಪಡೆದ ಕಾರ್ಯಕ್ರಮದ ಸಾಲಿನಲ್ಲಿ ಸೇರಿದೆ.
*️⃣ ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ 65 ಲಾರಿ ಸಾಮಗ್ರಿ ಕಳುಹಿಸಿ ಕೊಟ್ಟಿದ್ದರು,ಆ ಸಂದರ್ಭದಲ್ಲಿ ಕೆಲವು ಜಿಲ್ಲಾಧಿಕಾರಿಗಳು,ಎಸ್.ಪಿ.ಗಳು, ಮಂತ್ರಿಗಳು,ಶಾಸಕರು ತಮ್ಮ ಊರಿಗೂ ಸಾಮಗ್ರಿ ಕಳುಹಿಸಿ ಕೊಡುವಂತೆ ಕೇಳಿಕೊಂಡಿದ್ದರು.ಅಷ್ಟು ನಂಬಿಕೆ ಶೆಟ್ಟರ ತಂಡದ ಮೇಲೆ ಇತ್ತು..!
ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ “Enba Award”ನ್ನು ಪಡೆದ ಮೊದಲ ನಿರೂಪಕರು ನಮ್ಮ ಶೆಟ್ಟರು.ಹಾಗೆಯೇ 2020ನೇ ಪ್ರೆಸ್ ಕ್ಲಬ್ ವರುಷದ ವ್ಯಕ್ತಿಯಾಗಿ ಕೂಡ ಆಯ್ಕೆಗೊಂಡಿದ್ದರು.
ಕೊರೋನ ಸಮಯದಲ್ಲಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಬಂದಂತಹ ಎಲ್ಲಾ ರೀತಿಯ ಕರೆಗಳಿಗೆ ಸಮಯಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿದ ಹಿರಿಮೆ ಇವರದ್ದು.ತರಕಾರಿ ಮಾರಾಟ, ಮದುವೆಗೆ ತಾಳಿ,ದುಡ್ಡಿನ ನೆರವು,ಎರಡು ಮದುವೆ ಮಾಡಿಸಿದ ಕೀರ್ತಿ ಸಾಮಾಜಿಕ ಜಾಲತಾಣಕ್ಕೇ ಸಲ್ಲುತ್ತದೆ ಎನ್ನುತ್ತಾರೆ ಶೆಟ್ಟರು.ಇದರಿಂದ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ವಿಘ್ನಗೊಳಿಸಿದ ಕಾರ್ಯ ಪ್ರವೃತ್ತತೆಯನ್ನು ಮೆಚ್ಚಲೇಬೇಕು.ಅದರ ಜೊತೆಗೆ ಅನೇಕ ಬಡತನದ ಕುಟುಂಬಗಳ ಮದುವೆಯ ಕಾರ್ಯಕ್ಕೆ ತನ್ನಿಂದ ಆಗುವ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ.ಲೆಕ್ಕವಿಲ್ಲದಷ್ಟು ಶೈಕ್ಷಣಿಕ ಸಹಾಯವನ್ನು ಮಾಡಿದ ಹಿರಿಮೆ ಇವರದು.
ರಕ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು,ಒಬ್ಬ ಮಗನ ಜೊತೆ ತುಂಬು ಸಂತಸದ ಜೀವನ ನಡೆಸುತ್ತಿದ್ದಾರೆ..!
ನಟನಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದ ಜಯಣ್ಣ, ಸಾಫ್ಟ್ ವೇರ್ ಗಂಡ ಚಲನಚಿತ್ರದಲ್ಲಿ ಕೂಡ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ.ಹಾಗೆಯೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ “ನಿರ್ಭಯ”ಎಂಬ ಧಾರಾವಾಹಿಯಲ್ಲಿ ಡಿ.ಸಿ.ಪಿ.ಯಾಗಿ ತನ್ನ ಅಭಿನಯ ಚತುರತೆಯನ್ನು ತೋರ್ಪಡಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಹಾಗೆಯೇ ಮಜಾ ಟಾಕೀಸ್ ನಲ್ಲಿ ಭಾಗವಹಿಸಿದ್ದಾರೆ.
ತನ್ನದೇ ನೇತೃತ್ವದ ಒಂದು “ಚಾರಿಟೇಬಲ್ ಟ್ರಸ್ಟ್”ತೆರೆಯಬೇಕೆಂಬ ಮಹಾನ್ ಕನಸು ಇವರದ್ದಾಗಿದೆ.ಇದರ ಮುಖಾಂತರ ಸಾಮಾಜಿಕ ಕಾರ್ಯ,ಉಚಿತ ವಿದ್ಯಾಭ್ಯಾಸ,ಮನೆಯ ಕಾರ್ಯಗಳಿಗೆ ತನ್ನಿಂದ ಆಗುವಷ್ಟು ಸಹಾಯ ಮಾಡುವ ಒಂದು ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ಸಾಗುತ್ತಿದ್ದಾರೆ.
ತನ್ನ ಜನ್ಮ ಭೂಮಿಯಾದ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇರುವ ಶೆಟ್ಟರು.ನಮ್ಮಲ್ಲಿನ ಕೆಲವು ತೊಡಕುಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸುತ್ತಾರೆ.ಅತೀ ಹೆಚ್ಚು ವಿದ್ಯಾವಂತರು ಇರುವ ಅವಳಿ ಜಿಲ್ಲೆಗಳಲ್ಲಿ ಕೆ.ಎ.ಎಸ್.ಮತ್ತು ಐ.ಎ.ಎಸ್. ಆದಂತಹ ಅಧಿಕಾರಿಗಳು ಸಿಗುವುದು ಬೆರಳೆಣಿಕೆಯಷ್ಟು ಎಂಬುದನ್ನೂ ಹೇಳುತ್ತಾರೆ. ಇದು ಬದಲಾಗಬೇಕು ಎಂಬುದು ಅವರ ಬಯಕೆ.
ಕರಾವಳಿ ಸಂಸ್ಕೃತಿಯ ಪ್ರತೀಕವಾದ ಹಲವಾರು ನಾಯಕರುಗಳ ಮರು ಸ್ಮರಣೆ ಮಾಡಬೇಕೆಂಬುದನ್ನು ತಿಳಿ ಹೇಳುತ್ತಾರೆ.ನಮ್ಮಲ್ಲಿ ವರುಷಕ್ಕೊಂದು ದೊಡ್ಡ ಕಾರ್ಯಕ್ರಮವನ್ನು ಮಾಡಿ ಹಲವಾರು ಮಹನೀಯರಿಗೆ ನಮ್ಮ ಐತಿಹಾಸಿಕ ವ್ಯಕ್ತಿಗಳ ಸ್ಮರಣಿಕೆಯನ್ನು ನೀಡಬೇಕೆಂಬ ಬಯಕೆ ಇವರದ್ದು.
*️⃣ ಆಡಳಿತಾತ್ಮಕವಾಗಿ – ಅಬ್ಬಕ್ಕ ರಾಣಿ ಪ್ರಶಸ್ತಿ.
*️⃣ ಸಾಂಸ್ಕೃತಿಕವಾಗಿ/ಧಾರ್ಮಿಕವಾಗಿ – ಕೋಟಿ ಚೆನ್ನಯ ಪ್ರಶಸ್ತಿ
*️⃣ ಕ್ರೀಡೆ – ಅಗೋಳಿ ಮಂಜಣ್ಣ ಪ್ರಶಸ್ತಿ
*️⃣ ಸಿನೆಮಾ/ರಂಗ ಭೂಮಿ – ಕೆ.ಎನ್.ಟೇಲರ್ ಪ್ರಶಸ್ತಿಯನ್ನೂ ನೀಡುವ ಕುರಿತು ಇವರ ಸಣ್ಣ ಸಲಹೆಯಾಗಿದೆ.
ಕನ್ನಡ ಚಲನಚಿತ್ರ ರಂಗದ ಹಿರಿಯ ಪೋಷಕ ನಟ ನಟಿಯರನ್ನ ಪರಿಚಯಿಸುವ ಕಾರ್ಯಕ್ರಮಕ್ಕೇ ಅಣಿಯಾಗುತ್ತಿದ್ದಾರೆ..!
ಸಮಾಜದಲ್ಲಿ ಶೂನ್ಯದಿಂದ ಬಂದು ಸಾಧನೆಯ ಸಿಂಹಾಸನ ಏರಿದ ಅಪ್ಪಟ ಕನ್ನಡಿಗರ ಕಾರ್ಯಕ್ರಮವಾದ “ಝೀರೋ ಟು ಹೀರೋ”ನಿರೂಪಣೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.
“ದೊಡ್ಡವರ ಅಖಾಡ” ಕಾರ್ಯಕ್ರಮದ ಮುಖಾಂತರ 30 ಜಿಲ್ಲೆ ಮತ್ತು 150 ವಿಧಾನ ಸಭಾ ಕ್ಷೇತ್ರ ಸುತ್ತಿದ ಕೀರ್ತಿ ಜಯ ಪ್ರಕಾಶ್ ಶೆಟ್ಟಿಯವರಿಗೆ ಸಲ್ಲುತ್ತದೆ.
ಇಷ್ಟು ಸಾಧನೆ ಮಾಡಿದ ವ್ಯಕ್ತಿಯ ಜೊತೆ ನನ್ನಂತಹ ಸಾಮಾನ್ಯ ವ್ಯಕ್ತಿ ಕುಳಿತುಕೊಂಡು ಮಾತನಾಡುವಂತಹ ಇವರ ಹೃದಯವಂತಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ..!
ಎಲ್ಲರ ಜೊತೆ ಬೆರೆಯುವ ಮತ್ತು ಎಲ್ಲರನ್ನು ಗೌರವದಿಂದ ಕಾಣುವ ಇವರ ಈ ಗುಣ ಮುಂದೊಂದು ದಿನ ಇನ್ನೂ ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತೆ ಎನ್ನುವುದರಲ್ಲಿ ಸಂಶಯವಿಲ್ಲ.!!
ಬರೆದಷ್ಟು ಮುಗಿಯದ ಇವರ ಕಾರ್ಯಗಳು,ಮಾಧ್ಯಮ ಲೋಕದಲ್ಲಿ ಇಲ್ಲಿಯ ತನಕದ ಹೆಜ್ಜೆಗಳು ಸ್ಮರಣೀಯ ಘಟನೆಗಳೇ.
ಅನೇಕ ಅಡೆ – ತಡೆಗಳನ್ನು ಎದುರಿಸಿ ಒಂದು ಉತ್ತಮ ವಾರ್ತಾ ನಿರೂಪಕರಾಗುವುದು ಸಾಮಾನ್ಯ ಮಾತು ಅಲ್ಲವೇ ಅಲ್ಲ..!ಅಂತಹ ಪ್ರತೀ ಘಟನೆಯನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಯಾವುದೋ ಸಣ್ಣ ಘಟನೆ,ಅವಮಾನದ ಸನ್ನಿವೇಶಗಳನ್ನು ನೆನೆಸಿ ಕೊರಗುವುದಕ್ಕಿಂತ, ಅವಮಾನಕ್ಕೆ ಅವಮಾನವಾಗುವಂತೆ ಎದ್ದು ನಿಲ್ಲಬೇಕೆಂಬುದನ್ನು ಪ್ರತೀ ಸಾರಿ ನೆನಪಿಸುತ್ತಾರೆ.
ಪ್ರತಿಯೊಂದು ದಿನವು ನಮಗೆ ಒಂದೊಂದು ಪಾಠವನ್ನು ಪ್ರಖರವಾಗಿ ತಿಳಿಸುವತ್ತಾ ಸಾಗುತ್ತದೆ.ನಾವು ಯಾವಾಗಲೂ ವಿದ್ಯಾರ್ಥಿಯಂತೆ ಇರಬೇಕು,ಅದು ನಮ್ಮನ್ನು ಮುಂದೊಂದು ದಿನ ಸಜ್ಜನರಂತೆ ಬೆಳೆಸುತ್ತದೆ ಎಂಬುದು ಸತ್ಯವಾದ ಮಾತು.
ಇದು ಜಯ ಪ್ರಕಾಶ್ ಶೆಟ್ಟಿಯವರ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ,ಇನ್ನುಳಿದವು ಇತಿಹಾಸ..!