“ಕೊಡುವುದನ್ನು ಮುಕ್ತ ಹೃದಯದಿಂದ ಕೊಡುತ್ತಿರೋಣ, ಬರುವುದು ತಾನಾಗಿಯೇ ಬರುತ್ತದೆ. ಅದು ಪ್ರೀತಿಯಾಗಲಿ, ಸಂಪತ್ತಾಗಲಿ, ಗೌರವವಾಗಲಿ”
ಕೆ.ಎಂ. ಶೆಟ್ಟಿ ಎಂದೇ ಖ್ಯಾತರಾಗಿರುವ ಶ್ರೀಯುತ ಕರುಣಾಕರ ಎಂ. ಶೆಟ್ಟಿ ಉದ್ಯಮ ರಂಗದಲ್ಲಿ ದೇಶದಲ್ಲೇ ಚಿರಪರಿಚಿತರಾದವರು. 1975 ರಲ್ಲಿ ‘ವಿ.ಕೆ. ಇಂಜಿನಿಯರ್’ ಎಂಬ ಹೆಸರಿನಿಂದ ಉದ್ಯಮರಂಗಕ್ಕೆ ಪಾದರ್ಪಣೆ ಮಾಡಿದ ಕೆ.ಎಂ. ಶೆಟ್ಟಿಯವರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಗಾರವನ್ನು ಪ್ರಾರಂಭಿಸಿದರು. ಉದ್ಯಮ ರಂಗದಲ್ಲಿ ಉತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ಉದ್ಯಮ ರಂಗದ ಈ ಯಶಸ್ಸು ಅವರು ವಿ.ಕೆ. ಗ್ರೂಪ್ ಆಫ್ ಕಂಪೆನೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದನ್ನು ದೇಶ ವಿದೇಶಗಳಲ್ಲಿ ಈ ಕಾರ್ಯಗಾರಗಳ ಶಾಖೆ ಸ್ಥಾಪನೆ ಮಾಡಿ ವಿಸ್ತರಿಸಲು
ಸಾಧ್ಯವಾಯಿತು. ಕೆ.ಎಂ. ಶೆಟ್ಟಿಯವರು ಈ ಸಂಸ್ಥೆಗಳ ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಈ ಸಂಸ್ಥೆಗಳನ್ನು ಪ್ರಗತಿಯತ್ತ ಮುನ್ನಡೆಸಿದರು.
ಈಗ ಈ ಕಂಪೆನಿಯಲ್ಲಿ ಗೃಹೋಪಯೋಗಿ ಇಲೆಕ್ಟ್ರಿಕಲ್ ವಸ್ತುಗಳಾದ ಮಿಕ್ಸರ್ಸ್, ಗ್ರೈಂಡರ್ಸ್, ಆಹಾರ ಸಂಸ್ಕರಣ ಉಪಕರಣ, ಜ್ಯೂಸರ್, ಏರ್ಕೂಲರ್ಸ್, ಇಂಡಕ್ಷನ್ ಕುಕ್ಕರ್, ಪ್ಲಾಸ್ಟಿಕ್ ಮೌಲ್ಡಿಂಗ್ಸ್, ವಾಟರ್ ಹೀಟರ್ಸ್, ಗ್ಯಾಸ್ ಸ್ಟವ್, ಸೀಲಿಂಗ್ ಮತ್ತು ಪವರ್ ಫ್ಯಾನ್, ಇಸ್ತ್ರಿ ಪೆಟ್ಟಿಗೆ, ಏರ್ ಕಂಡೀಶನರ್ ಹೀಗೆ ಮುನ್ನೂರಕ್ಕೂ ಹೆಚ್ಚು ಉಪಕರಣಗಳ ಉತ್ಪಾದನೆಯಾಗುತ್ತದೆ. ಮೆಕ್ಕಾಯ್, ಸಹರಾ ಎಂಬ ಬ್ರಾಂಡ್ ಹೆಸರಿನಿಂದ ಮಾರ್ಕೆಟಿನಲ್ಲಿ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಈ ಉತ್ಪನ್ನಗಳು ಐ.ಎಸ್.ಒ. 9001 ಪ್ರಮಾಣ ಪತ್ರವನ್ನು ಹೊಂದಿದೆ.
ಕ್ಯಾನ್ಬರಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸುವಿಧಾ ಎಪ್ಲಯನ್ಸೆಸ್, ವಿ.ಕೆ. ಎಪ್ಲಯನ್ಸೆಸ್ ಹೆಸರಿನಲ್ಲಿ ವಿವಿಧ ಪ್ರದೇಶಗಳಾದ ಪಾಲ್ಗರ್, ಸಿಲ್ವಾಸಾ, ಪಾರ್ವನೂ ಎಂಬಲ್ಲಿನ ನಾಲ್ಕು ಘಟಕಗಳಲ್ಲಿ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಉತ್ಪಾದನೆಯಾಗುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಸುವಿಧಾ ಎಪ್ಲಾಯನ್ಸಸ್ ಹೆಸರಿನಲ್ಲಿ ಇನ್ನೆರಡು ಉತ್ಪಾದನಾ ಘಟಕಗಳಿವೆ ಇವು ರಾಜ್ಯದಲ್ಲೆ ಅತ್ಯಂತ ದೊಡ್ಡ ಉತ್ಪಾದನಾ ಘಟಕಗಳು.
ಕೃಷಿ ಕುಟುಂಬದ ಹಿನ್ನೆಲೆಯವರಾದ ಕೆ.ಎಂ. ಶೆಟ್ಟಿಯವರ ಈ ಸಾಧನೆ ಕರಾವಳಿಗೆ ಹೆಮ್ಮೆ ತರುವಂತಹ ಸಂಗತಿ. ಕೇಂದ್ರ ಸರಕಾರವು ಇವರಿಗೆ “ಅತ್ಯುತ್ತಮ ಕೈಗಾರಿಕಾ ಉದ್ಯಮಿ” ಎಂದು ಗುರುತಿಸಿ ಗೌರವಿಸಿರುವುದು ಇವರ ಸಾಧನೆಗೆ ಸಂದ ಶ್ಲಾಘನೀಯ ಸಂಗತಿ.
ಶ್ರೀ ಕೆ.ಎಂ. ಶೆಟ್ಟಿಯವರ ಹೆತ್ತವರು ಕಟಪಾಡಿ ಮೆನ್ನ ಶೆಟ್ಟಿ ಮತ್ತು ತಾಯಿ ಸುರತ್ಕಲ್ ಮಧ್ಯಗುತ್ತು ಗಿರಿಜಾ ಎಂ. ಶೆಟ್ಟಿ,
ಪತ್ನಿ ಶ್ರೀಮತಿ ವಸಂತಿ ಕೆ. ಶೆಟ್ಟಿಯವರು ಮುಂಡ್ಕೂರು ಪೊಸ್ರಾಲ್ ನವರು. ಇವರಿಗೆ ಮೂವರು ಪುತ್ರರು ಆದಿತ್ಯ
ಕೆ ಶೆಟ್ಟಿ, ಬಿ.ಕಾಂ ಪದವೀದರರು ಮತ್ತು ಮೌಲ್ಡಿಂಗ್ ಮತ್ತು ಡೈ ಡಿಪ್ಲೊಮ ಪಡೆದಿದ್ದಾರೆ. ಎರಡನೇಯವರು ಅಖಿಲ್ ಕೆ.
ಶೆಟ್ಟಿ ಇನ್ಸ್ಟ್ಯುಮೆಂಟ್ ನಲ್ಲಿ ಬಿ.ಟೆಕ್ ಪದವೀಧರರು ಕೊನೆಯವರಾದ ಅಂಕಿತ್ ಕೆ. ಶೆಟ್ಟಿ ಮಾರ್ಕೆಟಿಂಗ್ನಲ್ಲಿ ಎಂ.ಬಿ.ಎ.
ಪದವೀದರರು. ಮೂವರು ಮಕ್ಕಳು ಕೂಡಾ ತಮ್ಮ ತಂದೆಯವರ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಕಾಳಜಿಯುಳ್ಳ ಶ್ರೀಯುತ ಕರುಣಾಕರ ಶೆಟ್ಟಿಯವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಾಕಷ್ಟು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಿಗೆ ತಮ್ಮ ಸಂಪಾದನೆಯ ಒಂದು ಪಾಲನ್ನು ದಾನ ಮಾಡುತ್ತಿರುತ್ತಾರೆ. ಇದು ಇವರ ಸರಳತೆ, ಸಜ್ಜನಿಕೆಗೆ ಸಾಕ್ಷಿಯಾಗಿದೆ. ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ರೀಯುತರು ಸುರತ್ಕಲ್ ಮಧ್ಯವನ್ನು ಆದರ್ಶ ಗ್ರಾಮವನ್ನಾಗಿ ಮಾಡುವ ಯೋಜನೆಗೆ ತೊಡಗಿಕೊಳ್ಳಲು ಇವರು ಪತ್ನಿ ಹಾಗೂ ಮಕ್ಕಳ ಒತ್ತಾಸೆ ಕಾರಣವಾದರೂ ಶ್ರೀಯುತರ ಸಮಾಜಮುಖಿ ಚಿಂತನೆಯು ಈ ಕಾರ್ಯದಲ್ಲಿ ಅವರಿಗೆ ಸಹಕರಿಸಿದೆ ಎಂದು ಹೇಳಬಹುದು.
ಕೊಡುಗೈ ದಾನಿಯಾಗಿರುವ ಶ್ರೀ ಕೆ.ಎಂ. ಶೆಟ್ಟಿಯವರು ಮುಂಬಾಯಿಯ ಪ್ರತಿಷ್ಠಿತ ಬಂಟರ ಸಂಘದ ವಿಶ್ವಸ್ತರಾಗಿದ್ದಾರೆ. ಬಾಂಬೆ ಬಂಟ್ಸ್ ಎಸೋಸಿಯೇಶನ್ನ ವಿಶ್ವಸ್ತರಾಗಿಯು ಜಾಗತಿಕ ಬಂಟರ ಸಂಘದ ಒಕ್ಕೂಟದ ನಿರ್ದೇಶಕರಾಗಿಯೂ ಇವರು ಮಾಡಿರುವ ಸೇವೆ ಇಡೀ ಬಂಟ ಸಮುದಾಯಕ್ಕೆ ಶೋಭೆ ತರುವಂತಿದೆ. ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರು ಮಿಕ್ಸರ್ ಎಸೋಸಿಯೇಶನ್ ಮುಂಬಾಯಿ ಇದರ ಉಪಾಧ್ಯಕ್ಷರಾಗಿದ್ದಾರೆ. ಸಾಹಿತ್ಯ ಕಲೆಗಳಲ್ಲಿ ಅಭಿರುಚಿಯುಳ್ಳ ಶ್ರೀ ಕೆ.ಎಂ. ಶೆಟ್ಟಿ ಕಲಾಪೋಷಕರಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹೊರನಾಡಿನ ಮುಂಬಾಯಿಯಲ್ಲಿ ಸುಗಮ ಸಂಗೀತ ಸಮ್ಮೇಳನ 2020 ಮತ್ತು ಗೀತೋತ್ಸವವನ್ನು ವಿಜೃಂಭಣೆಯಿಂದ ನಡೆಸಿದ್ದಾರೆ.
ದೈವಭಕ್ತರೂ ಆಗಿರುವ ಶ್ರೀಯುತರು ಮಂಗಳೂರು ತಾಲೂಕು ಮಧ್ಯ ಗ್ರಾಮದ ಶ್ರೀ ಖಡ್ಗೇಶ್ವರ-ಖಡ್ಗೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಸಮುದಾಯದ ಪ್ರಗತಿಯೆಂದರೆ ಶೈಕ್ಷಣಿಕ ಸಾಧನೆ. ಇದು ಗ್ರಾಮದ ಎಲ್ಲಾ ಜನರಿಗೂ ಸುಲಭವಾಗಿ ಲಭ್ಯವಾಗಬೇಕು ಎಂಬ ಇವರ ಆಶಯಕ್ಕೆ ಪೂರಕವಾಗಿ ಒದಗಿ ಬಂದದ್ದು ಸುರತ್ಕಲ್ ಮಧ್ಯದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಮಗುಸ್ನೇಹಿ ಶಾಲೆಯಾಗಿ ರೂಪಿಸುವ ಉದ್ದೇಶದಿಂದ ಆ ಶಾಲೆಯ ಅಭಿವೃದ್ಧಿಗೆ ದೊಡ್ಡ ದೇಣಿಗೆ ನೀಡಿ ಯೋಜನೆಯ ರೂಪುರೇಷೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ.
ಶ್ರೀ ಕೆ.ಎಂ. ಶೆಟ್ಟಿ ಯವರು ಸಮುದಾಯದ ಸಾಕ್ಷಿ ಪ್ರಜ್ಞೆಯಾಗಿದ್ದು ನಮ್ಮೊಡನಿರುವುದು ನಮಗೆಲ್ಲ ಹೆಮ್ಮೆ ತರುವ ವಿಚಾರ. ಅವರ ಕರ್ತವ್ಯ ಶಕ್ತಿಗೆ ಪ್ರೇರಕ ಎಂಬಂತೆ ಅವರ ಕುಟುಂಬವೂ ಅವರ ಜೊತೆಗಿರುವುದು ಹೆಮ್ಮೆಯ ಸಂಗತಿ. ಸದಭಿರುಚಿಯ ಕ್ರಿಯಾ ಶಕ್ತಿಯ ಸಂಪನ್ಮೂಲವಾದ ಶ್ರೀ ಕೆ. ಎಂ. ಶೆಟ್ಟಿ ಯವರು ಹಾಗೂ ಅವರ ಕುಟುಂಬವು ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ಸಮಾಜದ ಅಭಿವೃದ್ಧಿಯ ಆಶಯದ ಜೊತೆಗೆ ಅವರ ಶ್ರೇಯಸ್ಸು ಆರೋಗ್ಯ ಆಯಸ್ಸು ವೃದ್ಧಿಯಾಗಲಿ
ಎಂಬ ಆಶಯ ನಮ್ಮದು.