“ಈ ಪ್ರಪಂಚವನ್ನು ತಾನು ಕಂಡದ್ದಕ್ಕಿಂತ ಹೆಚ್ಚು ಸಂತೋಷದಾಯಕವಾಗಿ ಮತ್ತು ಸುಂದರವಾಗಿ ಮಾಡುವವನು ಸುಸಂಸ್ಕೃತ ” ಎಂದು ಖ್ಯಾತ ಪಾಶ್ಚಾತ್ಯ ಚಿಂತಕ ಅಡ್ವಿನ್ ಅರ್ನಾಲ್ಡ್ ಹೇಳುತ್ತಾರೆ.
ಕಳೆದ ಮೂರು ದಶಕಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಕಿರಣ್ ರೈ, ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇಲ್ಲಿ 1986 ರಿಂದ 2015ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯನ್ನು ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿ ಪರಿಣಿತರಾದ ಶ್ರೀಯುತರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ದೇಶದ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಮುಂಬಾಯಿಯಲ್ಲಿದ್ದುಕೊಂಡು ಅವರು ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯಲ್ಲಿ ನೀಡಿದ ಸೇವೆ ಅವರಿಗೆ ಕೀರ್ತಿಯನ್ನು ತಂದಿತು. ಈ ಬ್ಯಾಂಕಿನ ಅತ್ಯುನ್ನತ ಹುದ್ದೆಯಾದ ಜನರಲ್ ಮ್ಯಾನೆಜರ್ ಆಗಿಯೂ ಬಡ್ತಿ ಹೊಂದಿ ಇವರ ಸೇವೆಯನ್ನು ಗಮನಿಸಿ ಸರಕಾರವು ಇವರನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ನ ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿತು. ಇಲ್ಲಿ 1 1/2 ವರ್ಷ (ಜನವರಿ 2016 ರಿಂದ ಜೂನ್ 2017ರವರೆಗೆ) ಅತ್ಯುನ್ನತ ಸೇವೆ ನೀಡಿದ ಶ್ರೀಯುತ ರಾಜ್ಕಿರಣ್ ರೈ ಅಲ್ಲಿ ಸಿ.ಇ.ಓ. ಆಗಿಯೂ ಬ್ಯಾಂಕ್ನ್ನು ಮುನ್ನಡೆಸಿದರು.
ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿರುವ ಶ್ರೀಯುತರು ಭಾರತೀಯ ಬ್ಯಾಂಕಿಂಗ್ ಮತ್ತು ಆರ್ಥಿಕತೆ (IIBF) ಸರ್ಟಿಫಿಕೇಟ್ ಕೋರ್ಸ್ ಮಾಡಿರುತ್ತಾರೆ. ಮಾತ್ರವಲ್ಲದೆ ಐ.ಐ.ಬಿ.ಎಫ್ ನಲ್ಲಿ ಗೌರವ ಫೆಲೋಶಿಪ್ ಇವರಿಗೆ ದೊರೆಯಲು ಇವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಸೇವೆ ಕಾರಣವಾಯಿತು.
ಅಪ್ರತಿಮ ಪ್ರತಿಭಾವಂತರಾದ ಇವರ ಆಸಕ್ತಿಯ ಕ್ಷೇತ್ರಗಳು ವಿಭಿನ್ನವಾದುದು. ಓದು ಇವರ ಹವ್ಯಾಸ. ರಾಜಕೀಯ, ವಿಜ್ಞಾನ, ಸಂಸ್ಕøತಿ ಆರ್ಥಿಕ ಚಟುವಟಿಕೆಗಳ ಕ್ಷೇತ್ರ ಮಾತ್ರವಲ್ಲದೆ ಮಾನವ ಸಂಪನ್ಮೂಲ ಅಭಿವೃದ್ಧಿ ಇವರ ಆಸಕ್ತಿಯಾಗಿದ್ದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಘಟಕರಾಗಿ ಖ್ಯಾತಿಗಳಿಸಲು ಇವರಿಗೆ ಸಾಧ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಯುವ ಜನತೆಯನ್ನು ತೊಡಗಿಸುವುದು ಮುನ್ನಡೆಸುವುದು ಇವರ ಆದ್ಯತೆಯ ವಿಚಾರ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇವರಿಗೆ ಇರುವ ದೂರದೃಷ್ಟಿ ಗುರಿಯ ಬಗೆಗಿನ ಸ್ಪಷ್ಟತೆ ಸಂಘಟಕರಾಗಿ ಕಾರ್ಯ ತಂತ್ರಗಳನ್ನು ರೂಪಿಸುವುದಕ್ಕೆ ವಿಶೇಷ ಸಹಕಾರ ನೀಡಿತು. ಇವರ ಸಂವಹನ ಸಾಮಥ್ರ್ಯವೂ ಬ್ಯಾಂಕ್ಗಳಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಶೇಷ ಪರಿಣಾಮ ಬೀರಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿವಿಧ ಶಾಖೆಗಳಲ್ಲಿ ಗ್ರಾಹಕರನ್ನು ಸೆಳೆಯಲು ಇವರು ರೂಪಿಸಿದ ಕಾರ್ಯ ತಂತ್ರಗಳಲ್ಲಿ ನಾಯಕತ್ವದ ಅಭಿವೃದ್ಧಿಯು ಮುಖ್ಯವಾದುದು. ಕೋವಿಡ್ನಂತಹ ವಿಷಮ ಸ್ಥಿತಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇವರು ತಂದ ತಾಂತ್ರಿಕ ಬದಲಾವಣೆಗಳು ಗ್ರಾಹಕ ಸೇವೆಯಲ್ಲಿ ವಿಶೇಷ ಕಾಳಜಿಯ ಕಾರಣದಿಂದಾಗಿ ಅಪಾಯಗಳನ್ನು ಎದುರಿಸುವುದರಲ್ಲಿ ಯಶಸ್ವಿ ಪರಿಣಾಮ ಬೀರಿತು.
ವೃತ್ತಿ ಜೀವನದುದ್ದ ಇವರು ತೋರಿಸಿದ ನೈತಿಕತೆ ಪಾರದರ್ಶಕತೆ ಇವರಿಗೆ ತಮ್ಮ ಸೇವೆಯಲ್ಲಿ ವಿಶೇಷ ಗೌರವ ಪಡೆಯಲು ಕಾರಣವಾಯಿತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ ಹಾಗೂ ಸಿ.ಇ.ಓ. ಆಗಿ ಜುಲೈ 2017 ರಿಂದ ಮೇ- 30- 2022ರ ವರೆಗೆ ಶ್ರೀಯುತ ರಾಜ್ ಕಿರಣ್ ರೈ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಇವರ ನಾಯಕತ್ವದಲ್ಲಿದ್ದ ಬ್ಯಾಂಕಿಂಗ್ ವ್ಯವಸ್ಥೆಯನು ಕಂಪ್ಯೂಟರೀಕರಣಗೊಳಿಸುವುದರಲ್ಲಿ 3ನೇಯ ಅತೀ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಇದೆ. ಸರದಿಯಂತೆ ಪ್ರಥಮ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ, ದ್ವಿತೀಯ ಬ್ಯಾಂಕ್ ಆಫ್ ಬರೋಡ ಈಗಾಗಲೇ ಕಂಪ್ಯೂಟರೀಕರಣಗೊಂಡ ಬ್ಯಾಂಕ್ಗಳ ಸಾಲಿಗೆ ಸೇರಿದೆ.
ಪ್ರಸ್ತುತ ನ್ಯಾಶನಲ್ ಬ್ಯಾಂಕ್ನ ಮೂಲ ಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತ ರಾಜ್ ಕಿರಣ್ ರೈ ಯವರು ಬ್ಯಾಂಕ್ ವ್ಯವಸ್ಥೆಯೊಳಗೆ ವಿಮಾ ಗ್ರಾಹಕರಿಗೆ ವಿಮಾ ಸೌಲಭ್ಯವನ್ನು ಒದಗಿಸುವಲ್ಲಿ ತಮ್ಮ ನಿಪುಣತೆ, ಪಾಂಡಿತ್ಯಗಳನ್ನು ಬಳಸಿದರು.
2020-21 ರ ಅವಧಿಯಲ್ಲಿ ಭಾರತೀಯ ಬ್ಯಾಂಕ್ ಸಂಘ (IBA)ಗಳ ಅಧ್ಯಕ್ಷರಾಗಿ ವ್ಯವಸ್ಥೆಯೊಳಗೆ ಆಧುನಿಕ ತಂತ್ರಜ್ಞಾನ, ಮಾನವ ಸಂಪನ್ಮೂಲ ಬಳಕೆಗಳಿಗೂ ವಿಶೇಷವಾಗಿ ಶ್ರಮಿಸಿದರು.
“ಸ್ವಾಮಿ ವಿವೇಕಾನಂದರು ಹೇಳುತ್ತಾರೆ” ಹೃದಯ ವಿಶಾಲವಾಗಿ ಇದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ, ಕರ್ತೃತ್ವ ಶಕ್ತಿಯ ಪ್ರತೀಕವಾದ ಶ್ರೀಯುತ ರಾಜ್ ಕಿರಣ್ ರೈ ಯವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸೇವೆಯನ್ನು ಪರಿಗಣಿಸಿ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವುಗಳಲ್ಲಿ ಮುಖ್ಯವಾದ ಕೆಲವು ಈ ಕೆಳಗಿವೆ.
(1) ಮುಂಬಾಯಿ ರತ್ನ (ಮಹಾರಾಷ್ಟ್ರ ಸರಕಾರ ಕೊಡಮಾಡುವ ಈ ಪ್ರಶಸ್ತಿಯನ್ನು 2021 ರಲ್ಲಿ ಮಹಾರಾಷ್ಟ್ರ ರಾಜ್ಯ ಪಾಲರು ಶ್ರೀಯುತ ರಾಜ್ ಕಿರಣ್ ರೈ ಯವರಿಗೆ ನೀಡಿ ಸನ್ಮಾನಿಸಿದರು.
(2) 2020 ನೇ ವರ್ಷದ ಅತ್ಯುತ್ತಮ ಸಿ.ಇ.ಓ. ಆಗಿ ಇವರನ್ನು ಗುರುತಿಸಿ 9ನೇ ಗ್ರೀನ್ಟೆಕ್ ಎಚ್.ಆರ್, ಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಲಾಗಿದೆ.
(3) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಇವರ ಸೇವೆಯನ್ನು ಪರಿಗಣಿಸಿ ಇವರನ್ನು ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ರಾಂಗೆಸ್ ಇವರನ್ನು 2020ನೇ ವರ್ಷದ ಸಿ.ಇ.ಓ. ಎಂದು ಗುರುತಿಸಿ ಸನ್ಮಾನಿಸಿದೆ.
ಯೂನಿಯನ್ ಬ್ಯಾಂಕ್ನ ಅಧ್ಯಕ್ಷರಾಗಿ ಇವರು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಮುಖ್ಯವಾದುದು. ಮೂರು ಬ್ಯಾಂಕುಗಳ ಸಂಯೋಜನೆ ಮತ್ತು ಶಕ್ತಿ ವರ್ಧನೆ. ದುರ್ಬಲವಾಗಿದ್ದ ಈ ಮೂರು ಬ್ಯಾಂಕುಗಳನ್ನು ಜೊತೆಗೂಡಿಸಿಕೊಂಡು ಮಿತ ಮಾನವ ಸಂಪನ್ಮೂಲವನ್ನು ಬಳಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡು ಬ್ಯಾಂಕ್ ಸದೃಡವಾಗಿ ಎದ್ದು ನಿಲ್ಲುವುದಕ್ಕೆ ಕಾರಣರಾದರು. ಇವರ ಪ್ರೇರಣೆಯಿಂದ ಗ್ರಾಹಕರಿಂದ ಉತ್ತಮ ಪ್ರೋತ್ಸಾಹ ದೊರೆತು ಕೋವಿಡ್ ಸಂದರ್ಭದ ಸಂಕೀರ್ಣ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಯಿತು. ಬ್ಯಾಂಕ್ ಆರ್ಥಿಕವಾಗಿಯೂ ಬಲವರ್ಧನೆಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಯಿತು.
ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಕೆನರಾ ಹೆಚ್.ಎಸ್.ಬಿ.ಸಿ.ಓ.ಬಿ.ಸಿ. ಲೈಫ್ ಇನ್ಶೂರೆನ್ಸ್ ಕೋ. ಲಿಮಿಟೆಡ್ ಈ ಸಂಸ್ಥೆಗಳಲ್ಲೂ ಅಧ್ಯಕ್ಷರಾಗಿದ್ದು ತಮ್ಮ ಸಲಹೆ ಸೂಚನೆಗಳ ಮೂಲಕ ಖಾಸಗಿ ವಿಮಾ ಕಂಪನಿಗಳು ಸದೃಡವಾದ ಉದ್ಯೋಗಾವಕಾಶಗಳು ಲಭ್ಯವಾಗುವ ನೆಲೆಯಲ್ಲಿ ಪ್ರಯತ್ನಿಸಿದರು.
ಬ್ಯಾಂಕ್ಗಳ ಬೋರ್ಡ್ ಬ್ಯೂರೋ (ಬಿಬಿಬಿ)ನ ಮುಖ್ಯಸ್ಥರಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ತರಭೇತಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಜನತೆಯ ಸಶಕ್ತತೆಗೆ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಯಿತು.
ಸಂವಹನ ಕಲೆಯಲ್ಲಿ ನಿಸ್ಸೀಮರಾದ ಶ್ರೀಯುತ ರಾಜ್ಕಿರಣ್ ರೈಯವರು ಎಂತಹ ಸಮಸ್ಯೆಗಳನ್ನು ಲೀಲಾ ಜಾಲವಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ನುರಿತವರು. ಇವರ ಸಂಘಟನಾ ಶಕ್ತಿಯ ಈ ಸಾಮಥ್ರ್ಯವೇ ನಾಯಕತ್ವದ ಮಾದರಿ ವ್ಯಕ್ತಿಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇವರು ಮೂಡಿಬರಲು ಸಾಧ್ಯವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇವರು ತೋರಿಸುವ ಸಾಮಾಜಿಕ ಬದ್ದತೆ ಸೇವಾ ಮನೋಭಾವ ನೈತಿಕತೆ ಯುವಜನತೆಗೆ ಮಾದರಿಯಾಗುವಂತೆ ಇದೆ. ಸಶಕ್ತ ನವಭಾರತದ ನಿರ್ಮಾಣದಲ್ಲಿ ಒಂದಷ್ಟು ಯುವ ಶಕ್ತಿಗಳನ್ನು ಬೆಳೆಸಿ ಮುನ್ನಡೆಸುವಲ್ಲಿ ಶ್ರೀಯುತ ರಾಜ್ಕಿರಣ್ ರೈ ಯವರಿಗೆ ಇನ್ನಷ್ಟು ಶಕ್ತಿ ಶ್ರೇಯಸ್ಸು ಲಭಿಸಲಿ ಎಂಬ ಹಾರೈಕೆ ನಮ್ಮದು.