ಮೂಡುಬಿದಿರೆ: ‘ವೈಯಕ್ತಿಕ ಮಾಹಿತಿಯ ರಕ್ಷಣೆಯೇ ಇಂದಿನ ಸವಾಲು’ ಎಂದು ರಾಜ್ಯ ಸರ್ಕಾರದ ಸೈಬರ್ಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ 2023-24 ಶೈಕ್ಷಣಿಕ ವರ್ಷದ ‘ಸೈಬರ್ ಸೆಕ್ಯುರಿಟಿ ಕ್ಲಬ್’ನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ವೈಯುಕ್ತಿಕ ಮಾಹಿತಿಯ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಾಹಿತಿಯ ಭದ್ರತೆ ಹಾಗೂ ಸುರಕ್ಷತೆಯು ನಿಮ್ಮ ಆದ್ಯತೆಯಾಗಬೇಕು’ ಎಂದರು. ‘ತಂತ್ರಜ್ಞಾನಗಳ ಈ ಕಾಲದಲ್ಲಿ ನಮ್ಮ ವ್ಯವಹಾರ ಮತ್ತು ವೈಯಕ್ತಿಕ ವಿವರಗಳ (ಪ್ರೊಫೈಲ್)ಆಧಾರದ ಮೇಲೆ ಸೈಬರ್ಕ್ರೈಂ ಗಳು ನಡೆಯುತ್ತವೆ. ನಮ್ಮ ಭವಿಷ್ಯದ ಒಳಿತಿಗಾಗಿ ಬಹುವಿಧದ ಭದ್ರತೆ ನೀಡಲು, ನಮಗೆ ತಂತ್ರಜ್ಞಾನದ ಹಿಡಿತ ಇರಬೇಕು’ ಎಂದರು. ಲಭ್ಯತೆ, ಸಮಗ್ರತೆ, ಗೌಪ್ಯತೆ ಎಂಬ ಮೂರು ಅಂಶಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಂಡಾಗ ನಮ್ಮ ಮಾಹಿತಿ ಮತ್ತು ಡೇಟಾಗಳನ್ನ ಭದ್ರಪಡಿಸಿಕೊಳ್ಳಲು ಸಾಧ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ ವಿದ್ಯಾರ್ಥಿಗಳು ರೂಪಿಸುವ ಪ್ರಾಜೆಕ್ಟ್ಗಳು ಕೇವಲ ಚಿತ್ರ ಹಾಗೂ ಅಂಕಿ ಅಂಶಗಳಲ್ಲ. ನೀವು ಏನನ್ನು ಕಲಿತಿದ್ದೀರಿ ಎಂಬುದನ್ನು ಪ್ರಸ್ತುತ ಪಡಿಸುವುದು ಎಂದರು.
ಅವುಗಳು ಸಮಾಜದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಾಯ ಮಾಡಬೇಕು ಎಂದರು. ಪ್ರಾಜೆಕ್ಟ್ನಲ್ಲಿ ಕೇಳಲ್ಪಡುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಸಾಮಥ್ರ್ಯಇರಬೇಕು. ಅಂತಹ ಪ್ರಾಜೆಕ್ಟ್ಗಳಿಂದ ಪರಿವರ್ತನೆ ಸಾಧ್ಯ. ಪ್ರಾಯೋಗಿಕ ಅವಲೋಕನಗಳಿಂದ ನಮ್ಮನ್ನು ನಾವು ಬಲ ಪಡಿಸಿಕೊಳ್ಳಲು ಸಾಧ್ಯ ಎಂದರು.
ಶಿಕ್ಷಣವನ್ನು ಬಹುತೇಕ ಎಲ್ಲರೂ ಪಡೆಯುತ್ತಾರೆ. ಆದರೆ ಪ್ರಾಯೋಗಿಕತೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಉತ್ತಮ ಶಿಕ್ಷಣವು ನಮ್ಮ ಬದುಕಿಗೆ ಮಾರ್ಗದರ್ಶನ ನೀಡುವ ಒಂದು ಸಾಧನ ಎಂದರು. ಪ್ರತಿ ದಿನ ಸಂಜೆ 5 ರಿಂದ 7 ಘಂಟೆವರೆಗೆ ಸೈಬರ್ ಸೆಕ್ಯುರಿಟಿ ಕ್ಲಬ್ವತಿಯಿಂದ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ.
ನೆಟೆನ್ರಿಚ್ ಪ್ರೊಡಕ್ಟ್ ಅರ್ಕಿಟೆಕ್ಟ್ ಆಶ್ರಿತ್ ಎನ್. ಶೆಟ್ಟಿ, ಕಾಲೇಜಿನ ಸಿಎಸ್ಇ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ, ಟೈಟೊವ್ರಿಇಂಡಿಯಾ ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಹಾಗೂ ವಿನೀತ್ ಶೆಟ್ಟಿ, ಕ್ಲಬ್ನ ವಿದ್ಯಾರ್ಥಿ ಸಂಯೋಜಕ ಮುತ್ತುರಾಜು ಇದ್ದರು. ಸೈಬರ್ ಸೆಕ್ಯುರಿಟಿ ಕ್ಲಬ್ ಸಂಯೋಜಕಿ ದೀಪಿಕಾ ಕಾಮತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ನಿರೂಪಿಸಿದರು. ಅಂಕಿತಾ ವಂದಿಸಿದರು.