ಪುರಾತನ ಜನಪದ ಕ್ರೀಡೆಯಾದ ಕಂಬಳವು ತುಳುನಾಡಿನಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಕಂಬಳವು ಸಾಂಪ್ರದಾಯಿಕ ಕಂಬಳವಾಗಿದ್ದು ಆಧುನಿಕ ವ್ಯವಸ್ಥೆಗಳನ್ನು ಸಾರಿಸಿಕೊಂಡರೂ ಸಂಪ್ರದಾಯವನ್ನು ಉಳಿಸಿಕೊಂಡೇ ಬರುತ್ತಿದೆ. ಕಹಳೆ, ವಾಲಗದೊಂದಿಗೆ ಓಟಕ್ಕಿಳಿಯುವ ಕೋಣಗಳು, ಅಷ್ಟೇ ವೇಗವಾಗಿ ಹಿಡಿತ ಸಾಧಿಸಿಕೊಂಡು ಓಟಕ್ಕಿಳಿಯುವ ಓಟಗಾರನ ವೇಗ ಎಂತವರನ್ನೂ ಮೈ ರೋಮಾಂಚನಗೊಳಿಸುತ್ತದೆ. ಇಂತಹ ವಿಶಿಷ್ಟ ಜನಪದ ಕ್ರೀಡೆ ಕಂಬಳದಲ್ಲಿ ತಮ್ಮ ಮಿಂಚಿನ ಓಟದಿಂದ ದಾಖಲೆಯ ವೀರನೆಂದೇ ಹೆಸರು ಗಳಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಎಮ್ ಶೆಟ್ಟಿಯವರು.
24-03-1986 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿಗೋಳಿ ಹಕ್ಕೇರಿಯಲ್ಲಿ ಮಧು ಶೆಟ್ಟಿ ಹಾಗೂ ಶಾರದ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಸುರೇಶ್ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಬೋಡಿಯಲ್ಲಿ ಪೂರ್ಣಗೊಳಿಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಸಿದ್ಧಕಟ್ಟೆ ಬಂಟ್ವಾಳದಲ್ಲಿ ಪೂರ್ಣಗೊಳಿಸಿದರು.ಶಾಲಾ ದಿನಗಳಲ್ಲೇ ಆಟೋಟಗಳಲ್ಲಿ ಮುಂಚೂಣಿಯಲ್ಲಿದ್ದ ಸುರೇಶ್ ಓಟದಲ್ಲಿ ಜಿಲ್ಲಾಮಟ್ಟವನ್ನು ಪ್ರತಿನಿಧಿಸಿದ್ದರು.
ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಕಂಬಳದ ಕೋಣಗಳನ್ನು ನೋಡಿ ಕಂಬಳಾಸಕ್ತಿ ಬೆಳೆದು ಇಪ್ಪತ್ತರ ಹರೆಯದಲ್ಲೇ ದೊಡ್ಡಪ್ಪನವರಾದ ರಾಮಣ್ಣ ಶೆಟ್ಟಿಯವರ ಕೋಣಗಳಲ್ಲಿ ಅಭ್ಯಸಿಸತೊಡಗಿದರು.
ನಂತರ 2007ರಲ್ಲಿ ತಮ್ಮ ಗುರುಗಳಾದ ವೇಣೂರು ಗುಂಡೂರಿ ಓಬಯ್ಯ ಪೂಜಾರಿಯವರ ಕೋಣಗಳನ್ನು ಓಡಿಸುವ ಮೂಲಕ ಕಂಬಳ ಕ್ಷೇತ್ರಕ್ಕೆ ಲಗ್ಗೆಯಿಟ್ಟರು. 2013ರಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿಯವರ ತಂಡಕ್ಕೆ ಓಟಗಾರನಾಗಿ ಸೇರ್ಪಡೆಗೊಂಡು ತಮ್ಮ ಮಿಂಚಿನ ಓಟದಿಂದ ಕಂಬಳ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಾ ಬಂದರು. ನೇಗಿಲಿನ ಹಿರಿಯ, ಕಿರಿಯ ಮತ್ತು ಹಗ್ಗ ಹಿರಿಯ, ಕಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸಿ ಅನುಭವ ಪಡೆದ ಸುರೇಶ್ ಶೆಟ್ಟರು ನೇಗಿಲಿನ ಹಿರಿಯ ವಿಭಾಗದಲ್ಲಿ ಬೋಳದ ಗುತ್ತಿನ ಧೋನಿ, ಬೊಲ್ಲ, ಕಾಳ, ರಾಜ ಎಂಬ ಕೋಣಗಳನ್ನು ಓಡಿಸಿ ಅತೀ ಹೆಚ್ಚು ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಗಳಿಸಿದವರಿಗೆ ನೀಡಲ್ಪಡುವ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಕಳೆದ ಆರು ವರ್ಷಗಳಿಂದ ತಮ್ಮದಾಗಿಸಿಕೊಂಡು ಕಂಬಳ ಕ್ಷೇತ್ರದಲ್ಲೊಂದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ನೇಗಿಲಿನ ಕಿರಿಯ ವಿಭಾಗದಲ್ಲಿ ಎರಡು ವರ್ಷಗಳ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 2013-14ರಿಂದ ಈವರೆಗಿನ ಕಂಬಳ ಕ್ರೀಡೋತ್ಸವದಲ್ಲಿ ಒಟ್ಟು 90 ಚಿನ್ನದ ಪದಕ ಹಾಗೂ 70 ಬೆಳ್ಳಿ ಪದಕವನ್ನು ಪಡೆದುಕೊಂಡಿರುವುದು ಸಂತಸದಾಯಕ ಹಾಗೂ ಹೆಮ್ಮೆಯ ವಿಚಾರ.
ಬಂಗಾಡಿಕೊಳ್ಳಿಯಲ್ಲಿ ನಡೆದ ಸೂರ್ಯ ಚಂದ್ರ ಕಂಬಳ ಸ್ಪರ್ಧೆಯಲ್ಲಿ ನೇಗಿಲಿನ ಸೀನಿಯರ್ ವಿಭಾಗದಲ್ಲಿ ಧೋನಿ ಮತ್ತು ಬೊಲ್ಲ ಜೋಡಿ ಕೋಣಗಳ ಓಟಗಾರನಾಗಿ ಕೇವಲ 11.37 ಸೆಕೆಂಡ್ ನಲ್ಲಿ ಗುರಿ ಮುಟ್ಟುವ ಮೂಲಕ ದಾಖಲೆಯ ವೀರನೆಂದೇ ಹೆಸರುವಾಸಿಯಾಗಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಈವರೆಗೆ ಇವರು ಬೋಳದಗುತ್ತು ಸತೀಶ್ ಶೆಟ್ಟಿ, ವೇಣೂರು ಗುಂಡೂರಿ ಓಬಯ್ಯ ಪೂಜಾರಿ, ಪರಂಗಿಪೇಟೆ ಕಿದೆಬೆಟ್ಟು ಧರ್ಮಣ್ಣ ಮಡಿವಾಳ್, ಚಿತ್ರಾಪು ಬೈಲುಗುತ್ತು ರಾಮ ದೇವಾಡಿಗ, ಸಾಣೂರು ಸುಂದರ.ಕೆ ಆಚಾರ್ಯ, ಉಡುಪಿ ಹಿರೇಬೆಟ್ಟು ಶಿವ ಪಾಣಾರ, ಕೊಳಚ್ಚೂರ್ ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕಾರ್ಕಳ ಜೀವನ್ ದಾಸ್ ಅಡ್ಯಂತಾಯ, ಕರಿಂಜೆ ವಿಶ್ವನಾಥ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ಇರುವೈಲ್ ಕೆಂಪುಗುಡ್ಡೆ ಗುಲಾಬಿ ಚಂದು ಪೂಜಾರಿ,ಕೆರ್ವಾಶೆ ಅರುಣ್ ಕುಮಾರ್ ಜೈನ್, ಕೊಮೊರೊಟ್ಟು ಸೀತರಾಮ ಶೆಟ್ಟಿ, ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ್ ಕಾಮತ್, ಕಾಂತಾವರ ಅಂಬೊಡಿಮಾರ್ ರಘುನಾಥ್ ದೇವಾಡಿಗ, ನೀರೇಭದ್ರಗುತ್ತು ಸುಂದರ ಶೆಟ್ಟಿ, ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ, ಮಾಲ ಆನಂದ ನಿಲಯ ಶೇಖರ್ ಆನಂದ ಶೆಟ್ಟಿ, ಕಾರಿಂಜೆ ಕೊಂಬೆಲ್ ಗುತ್ತು ಪ್ರಶಾಂತ್ ಪೂಜಾರಿ, ಸಿದ್ಧಕಟ್ಟೆ ಪೊಡುಂಬ ಸಂದೀಪ್ ಶೆಟ್ಟಿ ಮುಂತಾದವರ ಕೋಣಗಳನ್ನು ಓಡಿಸಿ ಎಲ್ಲರಿಗೂ ಪ್ರಶಸ್ತಿ ಗೆದ್ದು ಪ್ರಸ್ತುತ ಎರ್ಮಾಳ್ ರೋಹಿತ್ ಹೆಗ್ಡೆಯವರ ಕೋಣಗಳನ್ನು ಓಡಿಸುತ್ತಿದ್ದಾರೆ.
ಇವರ ಈ ಕಂಬಳ ಕ್ಷೇತ್ರದ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ. ಹುಟ್ಟು ಕೃಷಿಕನಾಗಿ, ಕಂಬಳ ಪ್ರೇಮಿಯಾಗಿ ಸಮರ್ಥ ಓಟಗಾರನಾಗಿರುವ ಸುರೇಶ್ ಶೆಟ್ಟಿ ತಮ್ಮ ತಂದೆ ತಾಯಿ ಹಾಗೂ ಪತ್ನಿ ರೇಣುಕಾ ಶೆಟ್ಟಿ ಮಕ್ಕಳಾದ ಆರಾಧ್ಯ ಮತ್ತು ಅನ್ವಿಕಾರ ಜೊತೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ.
ಇವರ ಈ ಕಂಬಳ ಕ್ಷೇತ್ರದ ಸಾಧನೆ ಹೀಗೆ ಮುಂದುವರಿಯಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ. ಇವರ ಸಾಧನೆಯ ಹಾದಿಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲೆನ್ನುವುದೇ ನಮ್ಮೆಲ್ಲರ ಆಶಯ.