ಜೀರ್ಣೋದ್ದಾರಗೊಳ್ಳಲಿರುವ ಮೂಡಬಿದಿರೆಯ ಶಿರ್ತಾಡಿ ವಾಲ್ಪಾಡಿ ಗ್ರಾಮಗಳ ಅರ್ಜುನಾಪುರದ ಸುಮಾರು 1000 ವರ್ಷಗಳ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಪುಣೆಯ ಉದ್ಯಮಿ, ಸಮಾಜಸೇವಕ ನಾರಾಯಣ ಕೆ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ನಾರಾಯಣ ಶೆಟ್ಟಿಯವರು ಪುಣೆಯಲ್ಲಿ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಓಡಿಯೂರು ಶ್ರೀಗಳ ಷಷ್ಟಬ್ದ ಸಂಭ್ರಮ ಪುಣೆ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಗುರುದೇವಾ ಸೇವಾ ಬಳಗ ಪುಣೆ, ಪುಣೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿಯೂ ಪ್ರಸ್ತುತ ಹಲವಾರು ಸಂಘ ಸಂಸ್ಥೆಗಳಿಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪುರಾತನ ಹಾಗೂ ಕಾರಣೀಕದ ಕ್ಷೇತ್ರವಾಗಿದೆ. ದ್ವಾಪರ ಯುಗದಲ್ಲಿ ಅರ್ಜುನನು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರಿಂದ ಇಲ್ಲಿಗೆ ಅರ್ಜುನಾಪುರ ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿಯಿದೆ.ಜೀರ್ಣಾವಸ್ಥೆಯಲ್ಲಿರುವ ದೇವಾಲಯದೊಳಗೆ ಲಿಂಗರೂಪಿಯಾದ ಶಿವನು ಭಕ್ತರ ಬೇಡಿಕೆಯನ್ನು ಈಡೇರಿಸಿಕೊಂಡು ಬರುತ್ತಿದ್ದು ಸುತ್ತಮುತ್ತಲಿನ ಊರಿನ ಗ್ರಾಮಸ್ಥರಿಗೆ ಈ ದೇವಾಲಯವೇ ಭಕ್ತಿಯ ಆರಾಧನಾ ಕೇಂದ್ರವಾಗಿದೆ. ಇದೀಗ ದೇವಸ್ಥಾನದ ಜೀರ್ಣೋದ್ದಾರಕ್ಕೆ ಊರ ಪರವೂರ ಮಹನೀಯರು ಸೇರಿಕೊಂಡು ಸಂಕಲ್ಪ ಮಾಡಿದ್ದು ವ್ಯವಸ್ಥಾಪನ ಸಮಿತಿ, ಜೀರ್ಣೋದ್ದಾರ ಸಮಿತಿ, ಸೇವಾ ಸಮಿತಿ ಎಂಬ ಮೂರು ಸಮಿತಿಗಳನ್ನು ರಚಿಸಲಾಗಿದೆ.