



ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಆಯೋಜನೆಯಲ್ಲಿ ಮಹಿಳಾ ವಿಭಾಗದ ವತಿಯಿಂದ ಜೂನ್ 21 ರಂದು ಆದಿತ್ಯವಾರ ಸಂಜೆ 4 ಗಂಟೆಗೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಚಿಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಸೆಂಟರ್ ಮೊದಲನೇ ಮಹಡಿ ಜೂಯಿನಗರ ನವಿ ಮುಂಬಯಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಅತಿಥಿಗಳಿಂದ ದೀಪ ಪ್ರಜ್ವಲನೆಗೊಂಡು ಶಾಲಿನಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯೋಗತಜ್ಞೆಯರಾದ ಸ್ವಾತಿ ಶೆಟ್ಟಿ, ಸವಿತಾ ರತ್ನಾಕರ ಶೆಟ್ಟಿ ಮತ್ತು ಸಮಾಜ ಸೇವಕಿ ರತಿ ಶೆಟ್ಟಿಯವರು ಭಾಗವಹಿಸಿದ್ದರು.



ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿಯವರು ಎಲ್ಲಾ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಮಹಿಳಾ ವಿಭಾಗದ ಪದಾಧಿಕಾರಿಗಳೊಂದಿಗೆ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಮತ್ತು ಅತಿಥಿಗಳನ್ನು ಶಾಲು ಹೊದಿಸಿ, ಹೂಗುಚ್ಛಗಳನ್ನಿತ್ತು ಸನ್ಮಾನಿಸಿದರು. ಅಲ್ಲದೇ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಮತ್ತು ಇತರ ಅತಿಥಿ ಗಣ್ಯರನ್ನು ಹೂಗುಚ್ಛಗಳನ್ನಿತ್ತು ಸನ್ಮಾನಿಸಿದರು. ಮುಖ್ಯ ಅತಿಥಿಗಳಾದ ಯೋಗತಜ್ಞೆ ಸವಿತಾ ರತ್ನಾಕರ ಶೆಟ್ಟಿಯವರು ಮಾತನಾಡಿ, ಪತಂಜಲಿ ಮಹರ್ಷಿಯವರು ವಿವರಿಸಿದ ಯೋಗಗಳ ವಿಧಾನ, ವಿವಿಧ ಆಸನ ಮತ್ತು ಯೋಗ ಜೀವನದಲ್ಲಿ ಯಾಕೆ ಅಗತ್ಯ ಎಂಬಿತ್ಯಾದಿಗಳ ಬಗ್ಗೆ ವಿವರಿಸಿದರು. ಮತ್ತೋರ್ವ ಅತಿಥಿ ಯೋಗತಜ್ಞೆ ಸ್ವಾತಿ ಶೆಟ್ಟಿಯವರು ಸೇರಿದ ಎಲ್ಲಾ ಅತಿಥಿಗಣ್ಯರಿಗೆ ಹಾಗೂ ಸಭಿಕರಿಗೆ ಆರೋಗ್ಯಕ್ಕಾಗಿ ನಿತ್ಯ ಮಾಡಬೇಕಾದ ವಿವಿಧ ರೀತಿಯ ಯೋಗಾಭ್ಯಾಸವನ್ನು ಪ್ರಾಯೋಗಿಕವಾಗಿ ಸ್ವಯಂ ಪ್ರದರ್ಶಿಸಿ ಎಲ್ಲರೂ ಅರಿತುಕೊಳ್ಳುವ ಹಾಗೆ ಸುಲಭ ರೀತಿಯಲ್ಲಿ ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಮಾತನಾಡಿ, ನಿಯಮಿತ ಯೋಗಾಭ್ಯಾಸವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾಸ್ತ್ಯವನ್ನು ಕಾಪಾಡುತ್ತದೆ. ಆದ್ದರಿಂದ ಯೋಗವು ಜೀವನದ ಅವಿಭಾಜ್ಯ ಅಂಗ. ಅಲ್ಲದೇ ಯೋಗಾಭ್ಯಾಸವನ್ನು ಪ್ರತಿನಿತ್ಯ ಮಾಡಲೇಬೇಕು. ವರ್ಷಕ್ಕೊಂದು ಬಾರಿ ಯೋಗ ದಿನದಂದು ಮಾತ್ರ ಮಾಡಿದರೆ ಸಾಲದು. ಹಾಗಾಗಿ ನಿತ್ಯ ಯೋಗ ಮಾಡಿ ಆರೋಗ್ಯ ಉಳಿಸಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾ. ಶೇಖರ್ ಆರ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಕೆ ಶೆಟ್ಟಿ, ಜತೆ ಕೋಶಾಧಿಕಾರಿ ಸಿ.ಎ ದಿವಾಕರ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ ಶೆಟ್ಟಿ ಹಾಗೂ ಉಳಿದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ವಿಶ್ವಸ್ಧರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು ಮತ್ತು ಸಭಿಕರು ಉತ್ತಮ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸಹಾನಿ ಶೆಟ್ಟಿ, ಕಾರ್ಯದರ್ಶಿ ಉಷಾ ಶೆಟ್ಟಿ, ಕೋಶಾಧಿಕಾರಿ ನಾಗವೇಣಿ ಶೆಟ್ಟಿ, ಜತೆ ಕಾರ್ಯದರ್ಶಿ ಮಾಯಾ ಆಳ್ವ, ಜತೆ ಕೋಶಾಧಿಕಾರಿ ಉಮಾ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಷಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಜತೆ ಕಾರ್ಯದರ್ಶಿ ಮಾಯಾ ಆಳ್ವ ಧನ್ಯವಾದಗಳನ್ನು ಸಮರ್ಪಿಸಿದರು.





























































































































