


ಬೇಸಿಗೆ ಶಿಬಿರ, ಕೆಲವಷ್ಟು ಕಾರ್ಯಾಗಾರ, ಟ್ರಿಪ್, ಅಪ್ಪ ಅಮ್ಮನ ಜೊತೆ, ಪ್ರೆಂಡ್ಸ್ ಜೊತೆ ತಿರುಗಾಟ, ಆಟ, ಕೂಟ, ಮೋಜು ಮಸ್ತಿ ಎಲ್ಲವೂ ಮುಗಿಸಿ ಮಕ್ಕಳು ಶಾಲೆಗೆ ತಯಾರಾದರು. ಸ್ವಲ್ಪ ದಿವಸ ರಿಲೇಕ್ಸ್ ಆಗಿದ್ದ ಅಪ್ಪ ಅಮ್ಮನೂ ಮತ್ತೆ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಬೇಕಾದ್ದೆಲ್ಲಾ ತಯಾರು ಮಾಡುವ ಬೆಳಿಗ್ಗಿನ ಗಡಿಬಿಡಿ ಮತ್ತೆ ಪ್ರಾರಂಭವಾಯಿತು. ಮೊದಲಾಗಿ ದಾಖಲಾಗಿ ಶಾಲೆಗೆ ಹೊರಟ ಪುಟಾಣಿಗಳಿಗೆ ಏನೇನೆಲ್ಲಾ ಶೃಂಗಾರ ಮಾಡಿ ಅವರ ಜೊತೆ ಫೋಟೋ, ಸೆಲ್ಫಿ ತೆಗೆದು ಬೀಳ್ಕೊಡುವ ಸುಸಮಯ ಮತ್ತೆ ಬಂತು. ಎಲ್ಲಾ ಮುದ್ದು ಪುಟಾಣಿಗಳಿಗೂ ಶಿಕ್ಷಣದ ಹೊಸ ವರ್ಷದ ಶುಭಾಶಯಗಳು. ಯುನಿಫಾರ್ಮ್ ಶೂ ಧರಿಸಿ, ಕೈಯಲ್ಲಿ ಒಂದು ನೀರಿನ ಬಾಟಲ್, ಬೆನ್ನಿಗೆ ಪುಸ್ತಕದ ಮಣ ಭಾರದ ಚೀಲ ಹೊತ್ತು ಧೋ ಎಂದು ಸುರಿವ ಮಳೆಗೆ ಕೊಡೆಯೋ ರೈನ್ ಕೋಟೋ ಧರಿಸಿ ನಡೆದು ಹೋಗುತ್ತಿದ್ದ ಆ ಕಾಲ ಕಳೆಯಿತು. ಈಗ ಎಲ್ಲವೂ ಬದಲಾಗಿದೆ. ಇದೆಲ್ಲವೂ ತಂದೆಯೋ ತಾಯೋ ಹೊತ್ತು ಮಗುವಿನ ಕೈ ಹಿಡಿದು ಮನೆಯೆದುರು ಬರುವ ಶಾಲೆಯ ಬಸ್ಸೋ ವ್ಯಾನೋ ಹತ್ತಿಸುವ ದಿನಗಳು. ಮಳೆಗೆ ತಾಯಿ ತಂದೆ ಒದ್ದೆಯಾದರೂ ಮಕ್ಕಳು ಒದ್ದೆಯಾಗದ ಹಾಗೆ ಜಾಗ್ರತೆ ವಹಿಸುವ ಪುಣ್ಯಾತ್ಮರು. ಈ ಪುಣ್ಯ ನಮಗಿರಲಿಲ್ಲ. ಆಗ ತಂದೆಯೋ ತಾಯೋ ಅವರವರ ಕೆಲಸ ಕೃಷಿ ಕೆಲಸವೊ, ದನದ ಹಟ್ಟಿಯಲ್ಲೋ, ಮನೆ ಕೆಲಸದಲ್ಲೋ, ಗದ್ದೆಯಲ್ಲೋ ಇರುತ್ತಿದ್ದರು. ನಾವು ಮನೆಯಿಂದ ಹೋಗುತ್ತಿದ್ದ ನಮ್ಮ ಅಣ್ಣ ಅಕ್ಕನೋ ಅಥವಾ ನೆರೆಮನೆಯವರ ಜೊತೆಯೋ ಶಾಲೆಗೆ ಹೋಗಬೇಕಿತ್ತು. ಆಗ ಬಸ್ಸು ಬಿಡಿ ಸೈಕಲ್ಲೂ ನೋಡಲು ಸಿಗುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳೂ ಎಲ್ಲಾ ರೀತಿಯ ಪೂರಕ ವಾತಾವರಣದಲ್ಲಿ ಸಿಗುತ್ತಿರುವುದು ಸಂತೋಷದಾಯಕವೇ. ಈಗಿನ ಹೆಚ್ಚಿನ ಮಕ್ಕಳು ಪಾಠದಲ್ಲಿ ಒಳ್ಳೆಯ ಸಾಧನೆ ಮಾಡಿ 650 ಕ್ಕೆ 650 ಅಂಕ ಪಡೆಯುತ್ತಿದ್ದಾರೆ ಅದೂ ಖುಷಿ ಕೊಡುವ ವಿಚಾರವೇ. ಅವರಿಗೆ ಬೇರೇನೂ ಮನೆಗೆಲಸ ಕಾರ್ಯಗಳಿಲ್ಲದೆ ಕೇವಲ ಪಾಠ ಪುಸ್ತಕ ಓದುವುದು ಮಾತ್ರ ಕೆಲಸ. ಹಾಗಾಗಿ ನನಗಂತೂ ಅದು ದೊಡ್ಡ ಸಾಧನೆ ಎಂದೆನಿಸುತ್ತಿಲ್ಲ. ಆದರೂ ಈಗಿನ ಗಮನವನ್ನು ಎಲ್ಲೆಲ್ಲೋ ಕೊಂಡೊಯ್ಯುವ ಮಾಧ್ಯಮಗಳ ಸಾವಿರ ಉಪದ್ರವಗಳ ನಡುವೆ, ಅದನ್ನಾದರೂ ನಿಯತ್ತಿನಿಂದ ಮಾಡುವುದು ಅವರ ಸಾಧನೆ ಎಂದೆನಿಸಬಹುದೇನೋ? !. ಆದರೆ ಅದೇ ಹತ್ತಿಪ್ಪತ್ತು ವರ್ಷಗಳ ಮೊದಲಿನ ಮಕ್ಕಳ ಸಾಮಾನ್ಯ ಜ್ಞಾನ, ಬೌದ್ಧಿಕ ಬೆಳವಣಿಗೆ, ಮಾನಸಿಕ, ದೈಹಿಕ ಬೆಳವಣಿಗೆಗಳನ್ನು ಗಮನಿಸಿ ಇಂದಿನ ಮಕ್ಕಳಿಗೆ ಹೋಲಿಸಿದರೆ ಮಾತ್ರ ತುಂಬಾನೇ ಬೇಸರ ತರುತ್ತಿದೆ. ಹಿಂದಿನ ಬಾಲ್ಯದ ಶಾಲೆಯ ವ್ಯವಸ್ಥೆ ಒಂದೇ ಹಾಲಿನಲ್ಲಿ ಮಧ್ಯ ಮಧ್ಯೆ ವಿಭಾಜಕಗಳನ್ನು (ತಟ್ಟಿ) ಇರಿಸಿ ಮಾಡುತ್ತಿದ್ದ ಬೇರೆ ಬೇರೆ ತರಗತಿಗಳು. ಕೆಲವಾರು ಪೀರಿಯೆಡ್ ಗಳು ಹೊರಗಡೆ ಮರದ ಬುಡದ ನೆರಳಲ್ಲಿ, ಇನ್ನು ಆಟದ ಮೈದಾನದ ಮಣ್ಣಿನಲ್ಲಿ ಬಿದ್ದು ಎದ್ದು ಹೀಗೆಲ್ಲಾ ಸ್ವಚ್ಛಂದವಾದ ವಾತಾವರಣದಲ್ಲಿ ನಡೆಯುತ್ತಿತ್ತು. ಆಗ ಶಿಕ್ಷಕರು ಎಂದರೆ ಗೌರವ ಮಾತ್ರವಲ್ಲದೆ ಹೆದರಿಕೆಯೂ ಇತ್ತು. ಕಾರಣ ಅವರ ವ್ಯಕ್ತಿತ್ವ. ಅವರು ಕೇವಲ ಪಾಠ ಹೇಳಲು ಸೀಮಿತವಾಗಿರದೆ ಬದುಕು ಕಲಿಸುತ್ತಿದ್ದರು. ಅದೇ ರೀತಿ ಮನೆಯಲ್ಲೂ ಅಪ್ಪ ಅಮ್ಮ ತಮ್ಮ ಜೀವನ ಶೈಲಿಯಲ್ಲಿ ಏನೂ ಹೇಳದೆಯೇ ಕಷ್ಟದ ಕಚಗುಳಿಯ ಬದುಕು ಕಲಿಸುತ್ತಿದ್ದರು. ಶಾಲೆಯಲ್ಲಿ ಏನಾದರೂ ತಪ್ಪುಗಳು ನಡೆದು ಮಾಸ್ಟ್ರಿಂದ ಪೆಟ್ಟು ತಿನ್ನುವ ಸಂದರ್ಭ ಬಂದರೂ ಮನೆಯಲ್ಲಿ ಹೇಳುವಂತಿಲ್ಲ. ಯಾಕೆಂದರೆ ಹೇಳಿದರೆ ಮನೆಯಲ್ಲಿ ಇನ್ನೆರಡು ಪೆಟ್ಟು ಬೀಳುವ ಭಯವಿತ್ತು. ಆದರೆ ಈಗ ಶಾಲೆಯಲ್ಲೂ ಶಿಕ್ಷೆಯೇ ಇರದ ಶಿಕ್ಷಣ ಮತ್ತು ಮನೆಯಲ್ಲಿ ಎಂತ ತಪ್ಪಿಗೂ ತಂದೆ ತಾಯಿಯ ಅಭಯ.



ಆ ಕಾಲದಲ್ಲಿ ಶಿಕ್ಷಕರು ಶಿಸ್ತು ಕಲಿಸುವ ಸಿಪಾಯಿಗಳಾಗಿದ್ದರು. ಅವರೂ ಹತ್ತಾರು ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಬರಬೇಕಾಗಿತ್ತು. ಆದರೂ ಸರಿಯಾದ ಸಮಯಕ್ಕೆ ಶಾಲೆ ತಲುಪುತ್ತಿದ್ದರು. ಆದರೆ ಕ್ಷಮಿಸಿ, ಈಗ ಹೆಚ್ಚಿನ ಶಿಕ್ಷಕರು ಸಂಬಳಕ್ಕಾಗಿ ದುಡಿವ ನೌಕರರು ಅಷ್ಟೇ. ಆ ಕಾಲದಲ್ಲಿ ಬೇಗ ಶಾಲೆಗೆ ತಲುಪಿದರೆ ಜಗಲಿಯಲ್ಲಿ ಕುಳಿತೇ ಸ್ಟಡೀ ಪೀರಿಯೆಡ್. ಅದಕ್ಕೆ ಒಬ್ಬ ಲೀಡರ್. ಟೀಚರ್ ಬರದಿದ್ದ ಪಿರಿಯಡ್ ಓದದಿದ್ದರೆ ಮಾತಾಡಿದರೆ ಅವರ ಹೆಸರು ಬರೆದು ಬೇರೆ ಟೀಚರ್ ಅಥವಾ ಮಾಸ್ಟ್ರಿಗೆ ಕೊಡಬೇಕಿತ್ತು. ಮತ್ತೆ ಶಿಕ್ಷಕರಿಂದ ಅದಕ್ಕೆ ಹೊಂದುವ ಶಿಕ್ಷೆ. ಹಾಗೆಯೇ ಆಮೇಲೆ ಶಾಲೆಯ ಜಗಲಿಯಲ್ಲಿ ಎಸೆಂಬ್ಲಿ. ಅದರಲ್ಲಿ ದಿನಪತ್ರಿಕೆಯ ಹೆಡ್ ಲೈನ್ಸ್ ಓದುವುದು, ಹೆಡ್ ಮಾಸ್ಟ್ರ ಮಾತುಗಳು. ಪ್ರಾರ್ಥನೆ ಕೊನೆಗೆ ನಾಡಗೀತೆ ಹೇಳುತ್ತಾ ಸಾಲಲ್ಲಿ ಕ್ಲಾಸ್ ರೂಮ್ಗೆ ಪ್ರವೇಶ. ಇದು ದಿನನಿತ್ಯದ ಕ್ರಮವಾಗಿತ್ತು. ಈಗ ಇದೆಲ್ಲವೂ ಅವರವರ ಕ್ಲಾಸ್ ರೂಮ್ ನ ಒಳಗೆಯೇ ನಡೆಯುತ್ತದೆ. ಇದರಿಂದ ಅದೇ ಶಾಲೆಯ ಇತರ ಕ್ಲಾಸ್ ಗಳ ಮಕ್ಕಳ ಪರಿಚಯವಾಗಲೀ, ಸಂಪರ್ಕವಾಗಲೀ ಇರದು. ಈ ಸಂವಹನ ಎಲ್ಲಿಯವರೆಗೆ ಕಡಿಮೆಯಾಗಿದೆ ಎಂದರೆ ಕೇವಲ ಮಕ್ಕಳ ಪರಿಚಯವಿಲ್ಲದಿರುವುದು ಮಾತ್ರವಲ್ಲದೆ ಅದೇ ಶಾಲೆಯ ಶಿಕ್ಷಕರ ಪರಿಚಯವೂ ಎಲ್ಲಾ ಮಕ್ಕಳಿಗೆ ಇಲ್ಲ!. ಈ ಪರಸ್ಪರ ಸಂವಹನದ ಕೊರತೆ ಇದು ಸರಿಯಲ್ಲ.
ಈಗಿನ ಹೊಸ ತಲೆಮಾರಿನ ಮಕ್ಕಳ ಹೆತ್ತವರು, ಪೋಷಕರು ಮತ್ತು ಶಾಲಾ ಮೇನೇಜ್ಮೆಂಟಿನಲ್ಲಿ ಒಂದು ಮನವಿ : ದಯವಿಟ್ಟು ಮಕ್ಕಳಿಗೆ ಸಾಧ್ಯವಾದಷ್ಟು ಪುಸ್ತಕದ ಪಾಠಕ್ಕಿಂತಲೂ ನಿತ್ಯ ಜೀವನದಲ್ಲಿ ಅಗತ್ಯವಾಗಿ ಉಪಯೋಗವಾಗುವ ಮನುಷ್ಯ ಮನುಷ್ಯನ ಸಂಬಂಧ, ಸಂಸಾರ ಮತ್ತು ಸಂಬಂಧಗಳ ಮಹತ್ವ, ನಿತ್ಯದ ಶಿಸ್ತಿನ ದಿನಚರಿ, ನೀರಿನ ಉಳಿತಾಯದ ಪ್ರಯೋಜನದ ಪಾಠ, ಕೃಷಿಕನ ಮತ್ತು ಕೃಷಿ ಉತ್ಪನ್ನಗಳ ಮಾಹಿತಿ, ಪರಿಸರದ, ಪ್ರಕೃತಿಯ ಆಗು ಹೋಗುಗಳ ಬಗೆಗಿನ ಮಾಹಿತಿ, ಮಾನವೀಯ ಮೌಲ್ಯಗಳ ಮಹತ್ವ ಇತ್ಯಾದಿಗಳನ್ನು ಸಣ್ಣ ಪ್ರಾಯದಲ್ಲೇ ಕೊಡುವ ಪ್ರಯತ್ನ ನಡೆಯಲಿ. ಕಷ್ಟದಲ್ಲಿರುವವರ ಬಗ್ಗೆ ತಾತ್ಸಾರದ ಬದಲು ಕರುಣೆ, ಅನುಕಂಪ, ಹಿರಿಯರ ಬಗ್ಗೆ ಗೌರವ, ಕಿರಿಯರಲ್ಲಿ ಪ್ರೀತಿ ಕಾಳಜಿ ಬರುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದೇ ರೀತಿ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಸಮಾಜದ ಸಮಾಚಾರ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ, ಪಠ್ಯವಲ್ಲದೆ ಜೀವನಕ್ಕೆ ಸಂತೋಷ ನೆಮ್ಮದಿ ಕೊಡುವಂತಹ ಹವ್ಯಾಸ, ಅಭ್ಯಾಸಗಳ ಪರಿಚಯ, ತಮ್ಮ ದೈಹಿಕ ಶುಧ್ದತೆ ಮತ್ತು ಆರೋಗ್ಯದ ಕಾಳಜಿ, ನಮ್ಮಿಂದ ಅತೀತವಾದ ಶಕ್ತಿಗಳ ಮೇಲೆ ವಿಶ್ವಾಸ, ನಂಬಿಕೆ, ಶಿಸ್ತಿನ ದಿನಚರಿಯ ಪಾಠ ಮತ್ತು ಯಾವುದಾದರೂ ಒಂದಾದರೂ ಕಲಾ ನೈಪುಣ್ಯತೆಯನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆಯು ಆಗಲೇಬೇಕಾಗಿದೆ. ಈಗಿನ ಯುವ ಸಮಾಜ ಮುಖ್ಯವಾಗಿ ಕಳೆದುಕೊಂಡಿರುವುದು ಈ ಮೌಲ್ಯಗಳನ್ನೇ!. ಅದನ್ನು ಹೇಳಿಕೊಟ್ಟಲ್ಲಿ ಈ ನಮ್ಮ ಮಕ್ಕಳಿಗೆ ಮುಂದೆ ಅವರ ಜೀವನದಲ್ಲಿ ಬರುವ ಯಾವುದೇ ಒತ್ತಡ, ಸಮಸ್ಯೆ, ಗೊಂದಲ, ಸಂಧಿಗ್ಧತೆಯ ಸಂದರ್ಭದಲ್ಲೂ ಸ್ಥಿರವಾಗಿ ಮತ್ತು ಧೈರ್ಯದಿಂದ ಎದುರಿಸುವ ತಾಕತ್ತು ಬರಲು ಅದು ಸಹಕಾರಿಯಾಗುತ್ತದೆ. ಅದುವೇ ನಿಜವಾದ ಜೀವನದ ತಾಕತ್ತು ಮತ್ತು ಆತ್ಮಸ್ಥೈರ್ಯ ತುಂಬುವ ಶಕ್ತಿ. ಇದಾಗದಿದ್ದರೆ, ಈಗ ದಿನನಿತ್ಯ ನೋಡುತ್ತಿರುವ ಸಣ್ಣ ಕಾರಣಕ್ಕಾಗಿ ಆತ್ಮಹತ್ಯೆ, ಡಿಪ್ರೆಷನ್ ಇಂತಹವುಗಳಿಂದ ಬದುಕನ್ನೇ ಅಂತ್ಯಗೊಳಿಸಲು ಪ್ರಯತ್ನಿಸುವವರ ಸಂಖ್ಯೆ ಮತ್ತೂ ಹೆಚ್ಚಾಗಬಹುದು!. ಇದು ಒಂದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಶಿಕ್ಷಣವೆಂಬುದನ್ನು ಕೇವಲ ಉದ್ಯೋಗ ಸಂಬಳ ಮತ್ತು ಅದರಿಂದ ಆಧುನಿಕ ಜೀವನ ನಿರ್ವಹಣೆ ಎಂಬುದಕ್ಕೆ ಮಾತ್ರ ಸೀಮಿತಗೊಳಿಸದೆ, ಈ ಬಾಲ್ಯದ ಪ್ರಾಥಮಿಕ ಶಿಕ್ಷಣದಲ್ಲೇ ಯಾವ ಪರಿಸ್ಥಿತಿಯಲ್ಲಿಯೂ ಯಾವುದೇ ಒತ್ತಡವನ್ನು ಸಹಿಸುವ ಮತ್ತು ಸುಲಲಿತವಾಗಿ ನಿಭಾಯಿಸುವ ಶಕ್ತಿಯನ್ನು ನಾವು ನಮ್ಮ ಮಕ್ಕಳಿಗೆ ಬರುವಂತೆ ಮಾಡಬೇಕಾಗಿದೆ. ಇದು ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಶಕ್ತಿ ತುಂಬುತ್ತದೆ. ಜೀವನದ ಸರಿಯಾದ ದಾರಿ ಕಲಿಸುತ್ತದೆ. ದಯವಿಟ್ಟು ಸರಕಾರದ ಶಿಕ್ಷಣ ಇಲಾಖೆಗಳೂ ಈ ಬಗ್ಗೆ ಗಮನಹರಿಸಿ ನಮ್ಮ ಭಾರತದ ಭವ್ಯ ಭವಿಷ್ಯದ ಚುಕ್ಕಾಣಿ ಹಿಡಿಯಬೇಕಾದ ನಮ್ಮ ಮುಂದಿನ ಪೀಳಿಗೆಯನ್ನು ಈ ಮೇಲಿನ ಗುಣಗಳಿಂದ ಬಲಿಷ್ಠಗೊಳಿಸಬೇಕಾಗಿದೆ. ಶಿಕ್ಷಣದಿಂದ ಜೀವನಕ್ಕೆ ಶಕ್ತಿ, ಮಕ್ಕಳಿಗೆ ಬರಲಿ ಅದರ ಮೇಲೆ ಭಕ್ತಿ, ಅದರಿಂದ ಮೂಡಲಿ ಹೊಸ ಯುಕ್ತಿ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ





























































































































