
ಮುಂಬಯಿಯ ಪ್ರತಿಷ್ಠಿತ ಬಂಟ ಬಾಂಧವರ ಸಂಸ್ಢೆಗಳಲ್ಲಿ ಒಂದಾದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಮಹಿಳಾ ವಿಭಾಗದ ವತಿಯಿಂದ, ಅಸೋಸಿಯೇಶನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಮಾರ್ಚ್ 21 ರಂದು ಅಪರಾಹ್ನ 2.30 ಕ್ಕೆ ಸರಿಯಾಗಿ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹ ಬಂಟ್ಸ್ ಸೆಂಟರ್ ಜೂಯಿನಗರ ಇಲ್ಲಿ ಬಹಳ ಸಂಭ್ರಮ ಹಾಗೂ ವಿಜೃಂಭಣೆಯಿಂದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಭಾ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಎನ್ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂ ಮುಖ್ಯ ಅತಿಥಿಯಾಗಿ ಶ್ರೀಮತಿ ರೇಖಾ ಗುಣಕರ ಶೆಟ್ಟಿ ಮತ್ತು ಗೌರವ ಅತಿಥಿಗಳಾಗಿ ಶ್ರೀಮತಿ ಮೋಹಿನಿ ರಮೇಶ್ ಶೆಟ್ಟಿ (ಕಾರ್ಯಾಧ್ಯಕ್ಷೆ, ಥಾಣೆ ಬಂಟ್ಸ್), ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ (ಸಮಾಜ ಸೇವಕಿ), ಶ್ರೀಮತಿ ಪ್ರವೀಣ ಪ್ರಕಾಶ್ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ), ರೇಖೀ ತಜ್ಞೆ ಶ್ರೀಮತಿ ನೀನಾ ಕುರ್ಕಾಲ್ ಭಾಗವಹಿಸಿದರು.


ಅಧ್ಯಕ್ಷರು ಮತ್ತು ಗಣ್ಯರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು. ಸಮಿತಿಯ ಸದಸ್ಯರು ಪ್ರಾರ್ಥನೆಗೈದು, ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಎನ್ ಶೆಟ್ಟಿ ಸ್ವಾಗತ ಭಾಷಣಗೈದರು. ಆನಂತರ ಅತಿಥಿಗಳನ್ನು ಪರಿಚಯಿಸಿ, ಶಾಲು ಹೊದಿಸಿ, ಸ್ಮರಣಿಕೆ, ಪುಷ್ಷಗುಚ್ಛಗಳನ್ನು ನೀಡಿ ಗೌರವಿಸಿದರು. ಮಹಿಳಾ ವಿಭಾಗದ ಹಿರಿಯ ಸದಸ್ಯೆ ಹಾಗೂ ಮಾಜಿ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಬಿ ಶೆಟ್ಟಿ ಅವರನ್ನು ಪೇಟ ಧರಿಸಿ, ಶಾಲು ಹೊದಿಸಿ, ಹಾರ, ಸ್ಮರಣಿಕೆ, ಪುಷ್ಷಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳನ್ನೂ ಗೌರವಿಸಲಾಯಿತು. ನಂತರ ಕ್ರಮವಾಗಿ ಅತಿಥಿಗಳು ಸಂಧರ್ಭೋಚಿತವಾಗಿ ತಮ್ಮ ತಮ್ಮ ಭಾಷಣಗಳಲ್ಲಿ ಮಹಿಳೆಯರ ಬಗ್ಗೆ, ಅಂದಿನ ಸ್ದಿತಿ ಮತ್ತು ಇಂದಿನ ಬೆಳವಣಿಗೆ, ಸಮಾಜದಲ್ಲಿ ಗಳಿಸಿದ ಸ್ದಾನಮಾನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಮಹಿಳೆಯರ ಸ್ಥಾನಮಾನಗಳ ಬಗ್ಗೆ ಮಾತನಾಡಿ, ಅಂದಿನ ಕಾಲದಲ್ಲಿ ಮಹಿಳೆಯರಿಗೆ ಅಬಲೆಯರು ಎಂಬ ನಾಮ ಪಟ್ಟಿಯನ್ನು ಕೊಟ್ಟಿದ್ದರೆ ಇಂದು ಅವರು ಸಬಲೆಯರಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಸ್ಥಾನಮಾನಗಳನ್ನು ಗಳಿಸಿಕೊಂಡಿದ್ದಾರೆ ಎಂದರು. 1911 ರಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿ ಈಗ ಭಾರತ ದೇಶದಲ್ಲೂ ಮಾರ್ಚ್ 8 ನೇ ತಾರೀಖಿನಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಅಂದರೆ ವಿದ್ಯಾ, ರಾಜಕೀಯ, ಔದ್ಯೋಗಿಕ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಗಳಿಸಿದ್ದಾರೆ ಎನ್ನಲೂ ಅತೀವ ಸಂತೋಷವಾಗುತ್ತಿದೆ ಎಂದರು. ಅಲ್ಲದೇ ಮಹಿಳೆಯರಿಗೆ ನಾವು ಸದಾ ಗೌರವವನ್ನು ನೀಡಬೇಕು. ಮಹಿಳೆಯನ್ನು ಕೆಣಕಬೇಡಿ; ‘ಅವಳು ಒಲಿದರೆ ನಾರಿ, ಮುನಿದರೆ ಮಾರಿ’ ಎಂಬ ನಾಣ್ಣುಡಿಯನ್ನು ಹಾಸ್ಯಾಸ್ಪದವಾಗಿ ಹೇಳಿ ಸಭಿಕರೆಲ್ಲರನ್ನೂ ನಗುವಂತೆ ಮಾಡಿದರು. ಅಲ್ಲದೇ ಗಂಡ ಹೆಂಡತಿಯರು ಒಬ್ಬರೊಬ್ಬರ ಮಾತು ಕೇಳುವುದು ಹೆದರಿಕೆಯಿಂದಲ್ಲ, ಅದು ಅವರ ಪರಸ್ಪರ ಗೌರವ ಎಂದು ಕಿವಿಮಾತನ್ನು ಆಡಿದರು.



ಕಾರ್ಯಕ್ರಮದಲ್ಲಿ ಶ್ರೀಮತಿ ಹೀರಾ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ) ಸೇರಿ, ವಯೋಮಿತಿಯ ತಾರತಮ್ಯವಿಲ್ಲದೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಕೊನೆಯಲ್ಲಿ ಶ್ರೀಮತಿ ನಾಗವೇಣಿ ಎಸ್ ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ಧನ್ಯವಾದ ಸಮರ್ಪಣೆಗೈದರು. ನಂತರ ‘ಅಪ್ಪೆನ ಕನ’ ಎಂಬ ಕಿರು ನಾಟಕ ಸಮಿತಿ ಸದಸ್ಯರಿಂದ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳ ಸದಸ್ಯರಿಂದ ವಿವಿಧ ನೃತ್ಯಗಳು ನಡೆಯಿತು. ಕಾರ್ಯಕ್ರಮವನ್ನು ಅಸೋಸಿಯೇಶನ್ ನ ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಉಷಾ ಶೆಟ್ಟಿಯವರು ನಿರೂಪಣೆಗೈದರೆ ಕೊನೆಯಲ್ಲಿ ಎಲ್ಲರಿಗೂ ಪ್ರೀತಿ ಬೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


























































































































