
ಜೀವನದಲ್ಲಿ ನಿಜವಾದ ಯಶಸ್ಸು ಪದವಿ ಅಥವಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಕಂಡ ಕನಸುಗಳನ್ನು ಸಾಧಿಸುವುದರಲ್ಲಿದೆ ಎಂದು ಕಮೋಡೊರ್ ಬೆನ್ ಹೆಚ್ ಬೆರ್ಸನ್ ನುಡಿದರು. ಅವರು ಮಂಗಳವಾರ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಾರ್ಟಿನ್ ಲೂಥರ್ ಕಿಂಗ್ ಜ್ಯೂರವರ ಮಾತುಗಳನ್ನು ಉಲ್ಲೇಖಿಸಿ, ಭವಿಷ್ಯ ರೂಪಿಸುವಲ್ಲಿ ದೂರದೃಷ್ಟಿ ಮತ್ತು ವ್ಯಕ್ತಿತ್ವದ ಮಹತ್ವವನ್ನು ವಿವರಿಸಿದರು. ವಾಲ್ಟ್ ಡಿಸ್ನಿ ಹಾಗೂ ಡಾ. ಸಾಸ್ರಂತವರು ಅನೇಕ ವಿಫಲತೆಗಳನ್ನು ಮೀರಿ ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿದರು. ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡ ಅವರು, ಬಾಲ್ಯದ ಮಾತಿನ ದೋಷ, ಕಾಲೇಜು ದಿನಗಳ ಹೋರಾಟ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಕಾಲೇಜಿನಿಂದ ಹೊರಹಾಕುವ ಪರಿಸ್ಥಿತಿಯವರೆಗೆ ತಲುಪಿದ ಸನ್ನಿವೇಶವನ್ನು ವಿವರಿಸಿದರು. ಜೀವನದಲ್ಲಿ ದೊರೆತ ಎರಡನೇ ಅವಕಾಶವೇ ಅವರನ್ನು ಪುನಃ ರೂಪಿಸಿ ಭಾರತೀಯ ನೌಕಾಪಡೆಯಲ್ಲಿ ಗಣನೀಯ ಸೇವೆ ಸಲ್ಲಿಸಲು ನೆರವಾಯಿತು ಎಂದು ಹೇಳಿದರು. ಸಶಸ್ತ್ರ ಪಡೆಗಳನ್ನು ವೃತ್ತಿಯಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ಆಳ್ವಾಸ್ ಸಂಸ್ಥೆ ನಾಯಕತ್ವ ಮತ್ತು ದೇಶಭಕ್ತಿಯ ಮೂಲಕ ಹಲವು ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ರೂಪಿಸಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಕೋರ್ಸ್ ಗಳನ್ನು ಬಲಪಡಿಸುವ ಅಗತ್ಯವಿದೆ. ಜಾಗತಿಕ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸಲು ನಾವು ನವೀನತೆ, ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಕಾಪಾಡಿಕೊಳ್ಳಬೇಕು. ಕಾಲದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಶಿಕ್ಷಣವೇ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದು ಎಂದರು. ಆಳ್ವಾಸ್ ಸಂಸ್ಥೆ ಪ್ರತಿ ವರ್ಷ ಸುಮಾರು ರೂ. 60 ಕೋಟಿಯಷ್ಟು ಹಣವನ್ನು ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ವ್ಯಯಿಸುತ್ತಿದೆ. ಮಂಗಳೂರು ವಿವಿಯ ಅಂತರ್ಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ದಾಖಲಾದ ಎಲ್ಲಾ 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ ಎಂದರು. ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ| ನಾರಾಯಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ| ಟಿ.ಕೆ ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರೆಶಲ್ ಡಿ ಆಲ್ಮೇಡಾ ನಿರೂಪಿಸಿ, ಶಿಖಾ ಸ್ವಾಗತಿಸಿ, ಮಿಯಾ ಕೆನಡಿ ವಂದಿಸಿದರು.


























































































































